ಹದಿಹರೆಯದ ಬಾಲಕನ ಕೊಲೆಗೆ ಕಾರಣವಾದ ‘1.2 ಕೋಟಿ ರೂ.ವೃಷಣ’ದ ವದಂತಿ!
ಭೋಪಾಲ(ಮ.ಪ್ರ): 16ರ ಹರೆಯದ ಬಾಲಕನೋರ್ವನ ವೃಷಣಗಳನ್ನು ಕೋಟ್ಯಂತರ ರೂ.ಗಳಿಗೆ ಮಾರಾಟ ಮಾಡಬಹುದು ಎಂದು ನಂಬಿದ್ದ ಗುಂಪೊಂದು ಆತನನ್ನು ಹತ್ಯೆ ಮಾಡಿರುವ ಘಟನೆ ಭೋಪಾಲದಲ್ಲಿ ನಡೆದಿದೆ. ಹತ್ಯೆಯ ರೂವಾರಿ ಸಾಮಾಜಿಕ ಜಾಲತಾಣದ ರೀಲ್ ಒಂದರಲ್ಲಿ ಕೊಲ್ಲಿ ದೇಶಗಳಲ್ಲಿ ಮಾನವ ವೃಷಣಗಳಿಗೆ ಕೋಟ್ಯಂತರ ರೂ.ಬೆಲೆಯಿದೆ ಎಂಬ ಸುಳ್ಳು ಮಾಹಿತಿಯಿಂದ ಪ್ರೇರಿತನಾಗಿದ್ದ ಎಂದು Times of India ವರದಿ ಮಾಡಿದೆ.
ಪೊಲೀಸ್ ಮಾಹಿತಿ ಪ್ರಕಾರ, ಬಿಬಿಎ ವಿದ್ಯಾರ್ಥಿ ಜೋಹೆಬ್ ಖಾನ್(20) ತಾನು ವೈದ್ಯಕೀಯ ವಿದ್ಯಾರ್ಥಿ ಎಂದು ಹೇಳಿಕೊಂಡು, ವೃಷಣ ಒಂದರಿಂದ ಒಂದೂವರೆ ಕೋಟಿ ರೂ.ವರೆಗೆ ಮಾರಾಟವಾಗುತ್ತದೆ ಎಂದು ಇತರ ನಾಲ್ವರನ್ನು ನಂಬಿಸಿದ್ದ. ಹದಿಹರೆಯದ ಬಾಲಕನನ್ನು ಕೊಲ್ಲುವಾಗ ಈತ ಸ್ಥಳದಲ್ಲೇ ಇರಲಿಲ್ಲ, ಆದರೆ ವೀಡಿಯೊ ಕರೆ ಮೂಲಕ ಉಳಿದವರಿಗೆ ಮಾರ್ಗದರ್ಶನ ನೀಡಿದ್ದ ಎನ್ನಲಾಗಿದೆ.
ಗುಂಪು ಹೊಡೆದಾಟವೊಂದರಲ್ಲಿ ಸಹಾಯ ಮಾಡಲು 100 ರೂ.ನೀಡುವ ಆಮಿಷವೊಡ್ಡಿ ಮೊದಲು ಒಬ್ಬ ಬಾಲಕನನ್ನು ಸೆಳೆಯಲು ಯತ್ನಿಸಿತ್ತು, ಆದರೆ ಆತ ಬಂದಿರಲಿಲ್ಲ. ಎರಡನೇ ಯತ್ನದಲ್ಲಿ ಮತ್ತೊಬ್ಬ ಬಾಲಕ ಗುಂಪನ್ನು ಎದುರಿಸಿ ತಪ್ಪಿಸಿಕೊಂಡಿದ್ದ. ಈ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
ಆಗಸ್ಟ್ 6ರಂದು ಇಬ್ಬರು ಅಪ್ರಾಪ್ತ ವಯಸ್ಕ ಬಾಲಕರು ಖತ್ಲಾಪುರ ಬಳಿ ಜಗಳದಲ್ಲಿ ಸಹಾಯ ಮಾಡುವಂತೆ ಇಕ್ಬಾಲ್ ಮೈದಾನದಲ್ಲಿದ್ದ 16ರ ಹರೆಯದ ಬಾಲಕನಿಗೆ ಆಮಿಷವೊಡ್ಡಿ ಧೋಬಿ ಘಾಟ್‌ಗೆ ಕರೆದೊಯ್ದಿದ್ದರು. ಅಲ್ಲಿ ಗುಂಪು ಬಾಲಕನನ್ನು ಚಾಕುವಿನಿಂದ ಇರಿದು ಕೊಂದಿತ್ತು ಮತ್ತು ಬ್ಲೇಡ್‌ನಿಂದ ಅವನ ವೃಷಣಗಳನ್ನು ಹೊರತೆಗೆದಿತ್ತು.
ಹತ ಬಾಲಕ ಇಕ್ಬಾಲ್ ಮೈದಾನ ಮತ್ತು ಮೋತಿ ಮಸೀದಿ ಸುತ್ತಮುತ್ತ ಪೆನ್ ಹಾಗೂ ಕೀ-ರಿಂಗ್‌ಗಳನ್ನು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆ.10ರಂದು ಧೋಬಿ ಘಾಟ್ ಬಳಿಯ ಲೋವರ್ ಲೇಕ್‌ನಲ್ಲಿ ಬಾಲಕನ ಕೊಳೆತ ಶವ ಪತ್ತೆಯಾಗಿತ್ತು. ಬಾಲಕನ ತಾಯಿ ನಾಪತ್ತೆ ದೂರು ಸಲ್ಲಿಸಿದ ಐದು ದಿನಗಳ ಬಳಿಕ ಮೈಮೇಲಿದ್ದ ಹಚ್ಚೆಯ ಆಧಾರದಲ್ಲಿ ಆತನ ಗುರುತು ತಿಳಿದುಬಂದಿತ್ತು.
ಖರೀದಿದಾರನನ್ನು ಹುಡುಕುವ ಯತ್ನದಲ್ಲಿದ್ದ ಗುಂಪು ದೇಹದಿಂದ ತೆಗೆದಿದ್ದ ಭಾಗಗಳನ್ನು ಎರಡು ದಿನಗಳ ಕಾಲ ಟೆರೇಸ್ ಮೇಲೆ ಇಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಆರೋಪಿಗಳಿಗೆ ಖರೀದಿದಾರರು ಸಿಕ್ಕಿರಲಿಲ್ಲ ಮತ್ತು ಅಂಗಾಂಶವನ್ನು ಹೇಗೆ ಸಂರಕ್ಷಿಸಬೇಕು ಅಥವಾ ಮಾರಾಟ ಮಾಡಬೇಕು ಎನ್ನುವುದು ಅವರಿಗೆ ತಿಳಿದಿರಲಿಲ್ಲ. ನಂತರ ಜೋಹೆಬ್ ಆ ದೇಹದ ಭಾಗಗಳನ್ನು ಪ್ರತ್ಯೇಕ ಜಲಮೂಲಗಳಲ್ಲಿ ಎಸೆಯುವಂತೆ ಇತರರಿಗೆ ಸೂಚಿಸಿದ್ದ.
ವೃಷಣಗಳನ್ನು ಅಪ್ಪರ್ ಲೇಕ್ ಮತ್ತು ಲೋವರ್ ಲೇಕ್‌ನಲ್ಲಿ ಎಸೆಯಲಾಗಿದೆ ಎಂದು ಶಂಕಿತರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.
ವೃಷಣಗಳನ್ನು ಎಸೆದ ನಿರ್ದಿಷ್ಟ ಸ್ಥಳಗಳನ್ನು ಗುರುತಿಸಲು ಶಂಕಿತರನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಮುಳುಗುತಜ್ಞರು ಎರಡು ಕೆರೆಗಳಲ್ಲಿ ಶೋಧ ನಡೆಸಲಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.