ಫೋರ್ಟ್ ಹುಡ್ ದಾಳಿಕೋರನ ಮರಣದಂಡನೆ ನೇರಪ್ರಸಾರಕ್ಕೆ ಅಮೆರಿಕ ನಿರ್ಧಾರ: ಇರಾನ್ ನ ಗಲ್ಲುಶಿಕ್ಷೆ ಟೀಕಿಸಿದ್ದ ಟ್ರಂಪ್ ರಿಂದ ಅನುಮೋದನೆ
ಡಿಸೆಂಬರ್ 3ರಂದು ಶಿಕ್ಷೆ ಜಾರಿ ಸಾಧ್ಯತೆ; 2009ರ ದಾಳಿಯಲ್ಲಿ 13 ಮಂದಿ ಮೃತ್ಯು, 32 ಜನರಿಗೆ ಗಾಯ
ವಾಷಿಂಗ್ಟನ್: ಅಮೆರಿಕದ ಫೋರ್ಟ್ ಹುಡ್ ಸೇನಾ ನೆಲೆಯಲ್ಲಿ 2009ರಲ್ಲಿ ಗುಂಡಿನ ದಾಳಿ ನಡೆಸಿ 13 ಮಂದಿಯನ್ನು ಹತ್ಯೆ ಮಾಡಿದ ಹಾಗೂ 32 ಮಂದಿಯನ್ನು ಗಾಯಗೊಳಿಸಿದ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿರುವ ನಿದಾಲ್ ಮಲಿಕ್ ಹಸನ್ ಗೆ ಡಿಸೆಂಬರ್ 3ರಂದು ಮರಣದಂಡನೆ ಜಾರಿಗೊಳಿಸಲು ಸೇನೆ ನಿರ್ಧರಿಸಿದೆ. ಫೈರಿಂಗ್ ಸ್ಕ್ವಾಡ್ ಮೂಲಕ ಶಿಕ್ಷೆ ಜಾರಿಗೊಳಿಸಲಿದ್ದು, ಈ ಪ್ರಕ್ರಿಯೆಯನ್ನು ನೇರಪ್ರಸಾರ ಮಾಡಲು ಪೆಂಟಗನ್ ಯೋಜಿಸಿದೆ.
ಅಮೆರಿಕದ ಸೇನೆಯಲ್ಲಿ 65 ವರ್ಷಗಳಿಗೂ ಹೆಚ್ಚು ಅವಧಿಯ ಬಳಿಕ ನಡೆಯಲಿರುವ ಮೊದಲ ಮರಣದಂಡನೆ ಇದಾಗಿದೆ. ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಬುಧವಾರ ಈ ಕುರಿತು ಮಾತನಾಡಿದ್ದು, ಜನರು ಮರಣದಂಡನೆ ಪ್ರಕ್ರಿಯೆಯನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ. ಪೆಂಟಗನ್ ಅಧಿಕಾರಿಗಳು ಗುರುವಾರ ನೇರಪ್ರಸಾರದ ವಿಷಯವನ್ನು ದೃಢಪಡಿಸಿದ್ದು, ಹೆಚ್ಚಿನ ವಿವರಗಳನ್ನು ಬಳಿಕ ನೀಡುವುದಾಗಿ ತಿಳಿಸಿದ್ದಾರೆ.
ಮರಣದಂಡನೆಯನ್ನು ಸಾರ್ವಜನಿಕವಾಗಿ ಪ್ರಸಾರ ಮಾಡುವ ನಿರ್ಧಾರವು ಕಾನೂನು ಮತ್ತು ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಯೇಲ್ ಕಾನೂನು ಶಾಲೆಯ ಮಿಲಿಟರಿ ಕಾನೂನು ತಜ್ಞ ಯುಜೀನ್ ಆರ್. ಫಿಡೆಲ್ ಅವರ ಪ್ರಕಾರ, ಹಸನ್ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಶಿಕ್ಷೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಬಹುದು. ಇದರಿಂದ ಮರಣದಂಡನೆ ಜಾರಿ ವಿಳಂಬವಾಗಬಹುದು. ಪ್ರಕರಣವು ಈಗಿನ ಆಡಳಿತದ ಅವಧಿಯನ್ನೂ ಮೀರಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕಿ ಡೆಬೊರಾ ಡೆನ್ನೊ ಅವರು, ಮರಣದಂಡನೆಯನ್ನು ನೇರಪ್ರಸಾರ ಮಾಡುವುದರಿಂದ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಶಿಕ್ಷೆ ಹೇಗೆ ಜಾರಿಯಾಗುತ್ತದೆ ಎಂಬುದನ್ನು ಸಾರ್ವಜನಿಕರು ತಿಳಿದುಕೊಳ್ಳಲು ಇದು ನೆರವಾಗಬಹುದು ಎಂದಿದ್ದಾರೆ.
ಮಾರಕ ಚುಚ್ಚುಮದ್ದಿಗೆ ಅಗತ್ಯವಿರುವ ಔಷಧಗಳನ್ನು ಪಡೆಯಲು ಹಾಗೂ ಮರಣದಂಡನೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಿದ್ಧರಿರುವ ವೈದ್ಯಕೀಯ ಸಿಬ್ಬಂದಿಯನ್ನು ಹುಡುಕಲು ಹಲವು ರಾಜ್ಯಗಳು ತೊಂದರೆ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಫೈರಿಂಗ್ ಸ್ಕ್ವಾಡ್ ಅನ್ನು ಪರ್ಯಾಯವಾಗಿ ಪರಿಗಣಿಸಲಾಗುತ್ತಿದೆ ಎಂದು ವಿಲ್ಲನೋವಾ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ಬ್ರೆನ್ನರ್ ಫಿಸೆಲ್ ಹೇಳಿದ್ದಾರೆ.
ಫೈರಿಂಗ್ ಸ್ಕ್ವಾಡ್ ಮೂಲಕ ಮರಣದಂಡನೆ ಜಾರಿಗೊಳಿಸುವುದು ತ್ವರಿತ ಮತ್ತು ನಿಖರವಾದ ವಿಧಾನವಾಗಬಹುದು ಎಂಬುದು ಅವರ ಅಭಿಪ್ರಾಯ. ಆದರೆ, ಈ ವಿಧಾನವು ಸೇನಾ ಶಕ್ತಿ ಮತ್ತು 'ಮಾರಕ ಸಾಮರ್ಥ್ಯದ ಸಂಸ್ಕೃತಿ'ಯನ್ನು ಪ್ರದರ್ಶಿಸುವ ಉದ್ದೇಶವನ್ನೂ ಹೊಂದಿರಬಹುದು ಎಂದು ಅವರು ಹೇಳಿದ್ದಾರೆ.
ಯುಸಿ ಬರ್ಕ್ಲಿ ಕಾನೂನು ಶಾಲೆಯ ಪ್ರಾಧ್ಯಾಪಕಿ ಎಲಿಜಬೆತ್ ಸೆಮೆಲ್ ಅವರು, ಮರಣದಂಡನೆಗೆ ಗುರಿಯಾಗಿರುವ ವ್ಯಕ್ತಿಯ ಘನತೆ, ಶಿಕ್ಷೆಯನ್ನು ವೀಕ್ಷಿಸಲು ಯಾರಿಗೆ ಅವಕಾಶ ನೀಡಲಾಗುತ್ತದೆ ಮತ್ತು ಇಂತಹ ಸಾರ್ವಜನಿಕ ಪ್ರದರ್ಶನದ ಹಿಂದಿನ ಸರಕಾರದ ಉದ್ದೇಶದ ಬಗ್ಗೆ ಪ್ರಶ್ನೆಗಳಿವೆ ಎಂದಿದ್ದಾರೆ. ಸರಕಾರ ಮರಣದಂಡನೆಯನ್ನು ಪ್ರಸಾರ ಮಾಡುವ ನಿದರ್ಶನವಿಲ್ಲ ಎಂದು ಹೇಳಿದ್ದಾರೆ.
ಹಸನ್‌ಗೆ ಮರಣದಂಡನೆ ಜಾರಿಗೊಳಿಸುವುದನ್ನು ಅನುಮೋದಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಹಿಂದೆ ಇರಾನ್ ನಲ್ಲಿ ನಡೆಯುವ ಸಾರ್ವಜನಿಕ ಗಲ್ಲುಶಿಕ್ಷೆಗಳನ್ನು ಟೀಕಿಸಿದ್ದರು.
ಫೆಬ್ರವರಿ 28ರಂದು ಇರಾನ್ ಮೇಲೆ ದಾಳಿ ನಡೆಸುವ ನಿರ್ಧಾರಕ್ಕೂ ಮುನ್ನ, ಪ್ರತಿಭಟನಾಕಾರರ ಹತ್ಯೆಯ ಸಾಧ್ಯತೆಯನ್ನು ಮಿಲಿಟರಿ ಕ್ರಮಕ್ಕೆ ಒಂದು ಕಾರಣವಾಗಿ ಉಲ್ಲೇಖಿಸಿದ್ದರು. ಜನವರಿ 14ರಂದು ಮಾತನಾಡಿದ್ದ ಅವರು, ಇರಾನ್ ನಲ್ಲಿ ಹತ್ಯೆಗಳು ನಿಲ್ಲುತ್ತಿವೆ ಮತ್ತು ಗಲ್ಲುಶಿಕ್ಷೆ ಜಾರಿಗೊಳಿಸುವ ಯೋಜನೆ ಇಲ್ಲ ಎಂದು ಹೇಳಿದ್ದರು.
ಇರಾನ್ ವಿರುದ್ಧದ ಯುದ್ಧ ಆರಂಭವಾಗುವುದಕ್ಕೆ ಕೆಲವೇ ದಿನಗಳ ಮೊದಲು ಮಾಡಿದ 'ಸ್ಟೇಟ್ ಆಫ್ ದಿ ಯೂನಿಯನ್' ಭಾಷಣದಲ್ಲಿಯೂ, ಹಿಂಸಾಚಾರದ ಬೆದರಿಕೆಯ ಮೂಲಕ ಅನೇಕರನ್ನು ಗಲ್ಲಿಗೇರಿಸುವುದನ್ನು ತಡೆಯಲಾಗಿದೆ ಎಂದು ಟ್ರಂಪ್ ಹೇಳಿದ್ದರು.
ಹಸನ್ ತಮ್ಮ ಅಂತಿಮ ಕೋರಿಕೆಗಳನ್ನು ಸಲ್ಲಿಸಿದ್ದಾರೆಯೇ ಅಥವಾ ಟ್ರಂಪ್ ಆಡಳಿತವನ್ನು ಸಂಪರ್ಕಿಸಿದ್ದಾರೆಯೇ ಎಂದು ಕೇಳಿದಾಗ, 'ನಮಗೆ ಅದರ ಬಗ್ಗೆ ಆಸಕ್ತಿಯಿಲ್ಲ. ನಾವು ಅವರನ್ನು ಡಿಸೆಂಬರ್ 3ರಂದು ನೋಡುತ್ತೇವೆ' ಎಂದು ಹೆಗ್ಸೆತ್ ಉತ್ತರಿಸಿದ್ದರು.
ಅಮೆರಿಕದ ಸೇನೆಯಲ್ಲಿ ಮೇಜರ್ ಆಗಿದ್ದ ಮನೋವೈದ್ಯ ನಿದಾಲ್ ಮಲಿಕ್ ಹಸನ್, 2009ರ ನವೆಂಬರ್ 5ರಂದು ಫೋರ್ಟ್ ಹುಡ್ ನ ವೈದ್ಯಕೀಯ ಕಟ್ಟಡದಲ್ಲಿ ಗುಂಡಿನ ದಾಳಿ ನಡೆಸಿದ್ದನು. ಅಲ್ಲಿ ಸೈನಿಕರು ಲಸಿಕೆ ಪಡೆಯಲು ಮತ್ತು ಸೇನಾ ನಿಯೋಜನೆಗೆ ಅಗತ್ಯವಾದ ವೈದ್ಯಕೀಯ ಅನುಮೋದನೆ ಪಡೆಯಲು ಸಾಲಿನಲ್ಲಿ ಕಾಯುತ್ತಿದ್ದರು.
ಹಸನ್, ಲೇಸರ್ ದೃಷ್ಟಿ ವ್ಯವಸ್ಥೆ ಹೊಂದಿದ್ದ ಕೈಬಂದೂಕಿನಿಂದ ಗುಂಡು ಹಾರಿಸಿದ್ದನು. ಪಾರ್ಕಿಂಗ್ ಸ್ಥಳದತ್ತ ಓಡುತ್ತಿದ್ದ ಸೈನಿಕರ ಬೆನ್ನಿಗೂ ಗುಂಡು ಹಾರಿಸಿದ್ದರು. ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದು, 32 ಮಂದಿ ಗಾಯಗೊಂಡಿದ್ದರು.
ಅಫ್ಘಾನಿಸ್ತಾನದಲ್ಲಿ ಅಮೆರಿಕ ಕಾರ್ಯಚರಣೆ ತಡೆಯಲು ಈ ಕೃತ್ಯ ಎಸಗಿದ್ದಾಗಿ ಹಸನ್ ಹೇಳಿದ್ದನು. ಆದರೆ, 2013ರ ವಿಚಾರಣೆಯಲ್ಲಿ ಈ ವಾದವನ್ನು ಸಮರ್ಥನೆಯಾಗಿ ಮಂಡಿಸಲು ಮಿಲಿಟರಿ ನ್ಯಾಯಾಧೀಶರು ಅವಕಾಶ ನೀಡಿರಲಿಲ್ಲ.
ಕಾನೂನು ಜಾರಿ ಅಧಿಕಾರಿಗಳು ಬೆನ್ನಿಗೆ ಗುಂಡು ಹಾರಿಸಿದ ಬಳಿಕ ಹಸನ್ ಸೊಂಟದ ಕೆಳಭಾಗದಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿದ್ದನು. ಈಗ ಆತ ವೀಲ್‌ಚೇರ್ ಬಳಸುತ್ತಿದ್ದಾನೆ.
1961ರಲ್ಲಿ ಕೊನೆಯ ಮರಣದಂಡನೆ
ಎರಡನೇ ಮಹಾಯುದ್ಧದ ಬಳಿಕ ಅಮೆರಿಕದ ಸೇನೆಯು ಫೈರಿಂಗ್ ಸ್ಕ್ವಾಡ್ ಮೂಲಕ ಯಾವುದೇ ಸಿಬ್ಬಂದಿಗೆ ಮರಣದಂಡನೆ ಜಾರಿಗೊಳಿಸಿಲ್ಲ ಎಂದು ಹೆಗ್ಸೆತ್ ಹೇಳಿದ್ದಾರೆ.
1961ರ ಏಪ್ರಿಲ್ 13ರಂದು ಸೈನಿಕ ಜಾನ್ ಬೆನೆಟ್ ಅವರನ್ನು ನೇಣು ಹಾಕುವ ಮೂಲಕ ಗಲ್ಲಿಗೇರಿಸಲಾಗಿತ್ತು. ಅದೇ ಅಮೆರಿಕದ ಸೇನೆಯಲ್ಲಿ ಕೊನೆಯದಾಗಿ ನಡೆದ ಮರಣದಂಡನೆ ಎಂದು ಅವರು ತಿಳಿಸಿದ್ದಾರೆ.
ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ 2025ರ ವರದಿಯ ಪ್ರಕಾರ, ಜಗತ್ತಿನಲ್ಲಿ ಕನಿಷ್ಠ 17 ಸಾರ್ವಜನಿಕ ಮರಣದಂಡನೆಗಳ ಬಗ್ಗೆ ಮಾಹಿತಿ ಲಭ್ಯವಿದೆ. ಅವುಗಳಲ್ಲಿ ಇರಾನ್ ನಲ್ಲಿ 11 ಮತ್ತು ಅಫ್ಘಾನಿಸ್ತಾನದಲ್ಲಿ ಆರು ಪ್ರಕರಣಗಳು ಸೇರಿವೆ.