Uttar Pradesh | ಝಾನ್ಸಿಯಲ್ಲಿ ರಸ್ತೆ ಅಪಘಾತ : ಗ್ಯಾಂಗ್‌ಸ್ಟರ್‌ ಅತಿಕ್ ಅಹ್ಮದ್ ಕಿರಿಯ ಪುತ್ರ ಮೃತ್ಯು

Update: 2026-08-06 16:09 IST

Photo |X

ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗ್ಯಾಂಗ್‌ ಸ್ಟರ್‌ ಅತಿಕ್ ಅಹ್ಮದ್ ಕಿರಿಯ ಪುತ್ರ ಅಬಾನ್ ಅಹ್ಮದ್ ಮತ್ತು ಅವರ ಸ್ನೇಹಿತ ಸೋನು ಮೃತಪಟ್ಟಿದ್ದಾರೆ. ವಾಹನದಲ್ಲಿದ್ದ ಇತರ ಮೂವರು ಗಾಯಗೊಂಡಿದ್ದು, ಅವರನ್ನು ಸರಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆ ಸುಮಾರು 10.30ಕ್ಕೆ SUV ವಾಹನ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿರುವ ಬಗ್ಗೆ ಮಾಹಿತಿ ಬಂದಿತ್ತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬಿಬಿಜಿಟಿಎಸ್ ಮೂರ್ತಿ ತಿಳಿಸಿದ್ದಾರೆ.

ಅವರ ಪ್ರಕಾರ, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ SUV ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

"ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳು ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಮೂರ್ತಿ ಹೇಳಿದ್ದಾರೆ.

ಮೃತರನ್ನು ಪ್ರಯಾಗ್‌ರಾಜ್ ನಿವಾಸಿ ಅತಿಕ್ ಅಹ್ಮದ್ ಅವರ ಪುತ್ರ ಅಬಾನ್ ಅಹ್ಮದ್ ಹಾಗೂ ರಾಜಾ ಅವರ ಪುತ್ರ ಸೋನು ಎಂದು ಪೊಲೀಸರು ಗುರುತಿಸಿದ್ದಾರೆ.

ಪೊಲೀಸರ ಪ್ರಕಾರ, ಅಬಾನ್ ಝಾನ್ಸಿ ಜೈಲಿನಲ್ಲಿರುವ ತನ್ನ ಇಬ್ಬರು ಸಹೋದರರನ್ನು ಭೇಟಿ ಮಾಡಲು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News