Uttarakhand | ದೇಶಕ್ಕೆ ಸ್ವಾತಂತ್ರ್ಯ ದೊರೆತು 79 ವರ್ಷಗಳ ಬಳಿಕ ಸಿಪು ಗ್ರಾಮಕ್ಕೆ ರಸ್ತೆ ಭಾಗ್ಯ!
ಚೀನಾ ಗಡಿಯ 11,820 ಅಡಿ ಎತ್ತರದ ಗ್ರಾಮಕ್ಕೆ ಮೊದಲ ವಾಹನ; 24 ಕೋಟಿ ರೂ. ವೆಚ್ಚದಲ್ಲಿ 10 ಕಿ.ಮೀ. ರಸ್ತೆ ನಿರ್ಮಾಣ
Photo: x.com/LegendNewsin
ಡೆಹ್ರಾಡೂನ್: ದೇಶಕ್ಕೆ ಸ್ವಾತಂತ್ರ್ಯ ದೊರೆತು 79 ವರ್ಷಗಳ ಬಳಿಕ ಉತ್ತರಾಖಂಡದ ಚೀನಾ ಗಡಿ ಭಾಗದಲ್ಲಿರುವ ಪಿತ್ರೋಗಢ ಜಿಲ್ಲೆಯ ದುರ್ಗಮ ಸಿಪು ಗ್ರಾಮಕ್ಕೆ ಕೊನೆಗೂ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಸಮುದ್ರ ಮಟ್ಟದಿಂದ ಸುಮಾರು 11,820 ಅಡಿ ಎತ್ತರದಲ್ಲಿರುವ ಈ ಗ್ರಾಮಕ್ಕೆ ಅಕ್ಟೋಬರ್ 24ರಂದು ಮೊದಲ ವಾಹನ ತಲುಪಿದೆ. ದರ್ಮ ಕಣಿವೆಯ ಜನರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಗ್ರಾಮಕ್ಕೆ ಮೊದಲ ವಾಹನ ತಲುಪಿದ ವಿಚಾರವನ್ನು ಗ್ರಾಮ ಮುಖ್ಯಸ್ಥೆ ಸರೋಜಿನಿ ಸಿಪಾಲ್ ತಿಳಿಸಿದ್ದಾರೆ. ಋತುಮಾನದ ವಲಸೆಯ ಸಂದರ್ಭದಲ್ಲಿ ಬುಧವಾರ ಸುಮಾರು ಎಂಟರಿಂದ ಹತ್ತು ಕುಟುಂಬಗಳು ಮೊದಲ ಬಾರಿಗೆ ರಸ್ತೆ ಮೂಲಕ ಧರ್ಚುಲ ತಲುಪುವಲ್ಲಿ ಯಶಸ್ವಿಯಾಗಿವೆ.
‘ಇದಕ್ಕೂ ಮೊದಲು ಗ್ರಾಮಸ್ಥರು ಮುಖ್ಯ ರಸ್ತೆಯನ್ನು ತಲುಪಲು ಸುಮಾರು 10 ಕಿ.ಮೀ. ದೂರ ನಡೆದುಕೊಂಡೇ ಹೋಗಬೇಕಿತ್ತು. ಹೊಸ ರಸ್ತೆ ಸಂಪರ್ಕದಿಂದ ಸಮಯ ಮತ್ತು ಶ್ರಮ ಉಳಿತಾಯವಾಗಲಿದೆ. ವಿಶೇಷವಾಗಿ ವೃದ್ಧರು, ಮಹಿಳೆಯರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ಸರೋಜಿನಿ ಸಿಪಾಲ್ ಹೇಳಿದ್ದಾರೆ.
ತಲೆಮಾರುಗಳಿಂದ ಸಿಪು ಗ್ರಾಮದ ಜನರು ಅಗತ್ಯ ವಸ್ತುಗಳನ್ನು ತರಲು ಕಡಿದಾದ ಬೆಟ್ಟದ ಹಾದಿಗಳಲ್ಲಿ ನಡೆದುಕೊಂಡೇ ಪ್ರಯಾಣಿಸಬೇಕಾಗಿತ್ತು. ಮಕ್ಕಳು, ರೋಗಿಗಳು ಹಾಗೂ ವೃದ್ಧರಿಗೆ ಈ ಪ್ರಯಾಣ ಅತ್ಯಂತ ಕಷ್ಟಕರವಾಗಿತ್ತು. ಇದೀಗ ಗ್ರಾಮಕ್ಕೆ ವಾಹನಗಳು ತಲುಪಿರುವುದರಿಂದ ಈ ಸಂಕಷ್ಟಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಆದರೆ, ರಸ್ತೆ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಲು ಇನ್ನಷ್ಟು ಕಾಮಗಾರಿಗಳು ಪೂರ್ಣಗೊಳ್ಳಬೇಕಿವೆ.
24 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಭಾಗವಾಗಿರುವ 'ಚೈತನ್ಯಯುತ ಗ್ರಾಮಗಳು' ಕಾರ್ಯಕ್ರಮದಡಿ ಧಾಕರ್-ಟಿಡಾಂಗ್-ಮಾರ್ಚಾ-ಸಿಪು ಮಾರ್ಗದಲ್ಲಿ 10 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲಾಗುತ್ತಿದೆ.
ಯೋಜನೆಯ ಕಾರ್ಯಪಾಲಕ ಎಂಜಿನಿಯರ್ ಕಿಶನ್ ಸಿಂಗ್ ಏರಿ ಅವರ ಪ್ರಕಾರ, 2024ರ ಜುಲೈನಲ್ಲಿ ಕಾಮಗಾರಿ ಆರಂಭವಾಗಿತ್ತು. ಅಂದಾಜು 24 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಮಾರ್ಗದಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ನಾಲ್ಕು ಸೇತುವೆಗಳನ್ನು ನಿರ್ಮಿಸುವ ಪ್ರಸ್ತಾವನೆಯೂ ಇದೆ. ಈ ಸಂಬಂಧ ಇಲಾಖೆಯು ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಿದೆ. ಪ್ರಸ್ತಾವನೆಗೆ ಅನುಮೋದನೆ ದೊರೆತ ಬಳಿಕ ಸೇತುವೆಗಳ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಏರಿ ತಿಳಿಸಿದ್ದಾರೆ.
ಭಾರತ–ಟಿಬೆಟ್ ವ್ಯಾಪಾರದ ಪ್ರಮುಖ ಹಾದಿ
ಸಿಪು ಮತ್ತು ದರ್ಮ ಕಣಿವೆಯ ಇತರ ಗ್ರಾಮಗಳು ಹಿಂದೆ ಭಾರತ ಮತ್ತು ಟಿಬೆಟ್ ನಡುವಿನ ವ್ಯಾಪಾರ ಮಾರ್ಗದ ಭಾಗವಾಗಿದ್ದವು ಎಂದು ಇತಿಹಾಸಕಾರ ಜೈ ಸಿಂಗ್ ರಾವತ್ ತಿಳಿಸಿದ್ದಾರೆ.
1962ರ ಭಾರತ–ಚೀನಾ ಯುದ್ಧಕ್ಕೂ ಮೊದಲು ಭೋಟಿಯಾ ಸಮುದಾಯದ ವ್ಯಾಪಾರಿಗಳು ಗಡಿ ದಾಟಿ ಉಪ್ಪು, ಉಣ್ಣೆ ಮತ್ತು ಬೋರಾಕ್ಸ್ ನಂತಹ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಗಡಿ ಮುಚ್ಚಿದ ಬಳಿಕ ಈ ವ್ಯಾಪಾರ ಸ್ಥಗಿತಗೊಂಡಿತು ಎಂದು ಅವರು ಹೇಳಿದ್ದಾರೆ.
ಪ್ರವಾಸೋದ್ಯಮಕ್ಕೂ ಹೊಸ ಅವಕಾಶ
ಹೊಸ ರಸ್ತೆ ಸಂಪರ್ಕದಿಂದ ಆದಿ ಕೈಲಾಸ, ಓಂ ಪರ್ವತ ಹಾಗೂ ಪಂಚಚೂಳಿ ಹಿಮನದಿ ಪ್ರದೇಶಗಳಿಗೆ ತೆರಳುವ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಇದರಿಂದ ಗ್ರಾಮದಲ್ಲಿ ಹೋಂಸ್ಟೇಗಳ ಆರಂಭ, ಪ್ರವಾಸೋದ್ಯಮ ಚಟುವಟಿಕೆಗಳ ಬೆಳವಣಿಗೆ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆಯುವ ನಿರೀಕ್ಷೆಯಿದೆ.
ಪ್ರವಾಸೋದ್ಯಮದ ಬೆಳವಣಿಗೆಯಿಂದ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದು. ಉದ್ಯೋಗಕ್ಕಾಗಿ ಗ್ರಾಮ ತೊರೆಯುವವರ ಸಂಖ್ಯೆಯನ್ನು ತಗ್ಗಿಸಲೂ ಇದು ನೆರವಾಗಬಹುದು ಎಂಬ ಆಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಉತ್ತರಾಖಂಡ ರಾಜ್ಯ ರಚನೆಯಾಗಿ 26 ವರ್ಷಗಳು ಕಳೆದಿರುವ ಸಂದರ್ಭದಲ್ಲಿ, ದೇಶಕ್ಕೆ ಸ್ವಾತಂತ್ರ್ಯ ದೊರೆತು ಸುಮಾರು 79 ವರ್ಷಗಳ ಬಳಿಕ ಸಿಪು ಗ್ರಾಮಕ್ಕೆ ಮೊದಲ ವಾಹನ ತಲುಪಿರುವುದು ಗಡಿ ಭಾಗದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.
ಸೌಜನ್ಯ: newindianexpress.com