West Bengal | ಚರ್ಚ್ ಉದ್ಘಾಟನೆಯ ವೇಳೆ ಗುಂಪಿನಿಂದ ದಾಂಧಲೆ; ಪಾದ್ರಿಗಳು, ಭಕ್ತರ ಮೇಲೆ ಹಲ್ಲೆ
ಶಿಲುಬೆ ಧ್ವಂಸ; ಮಹಿಳೆಯರ ಬಳೆ ತೆಗೆಸಲು ಒತ್ತಾಯ | 30–35 ಮಂದಿಯಿಂದ ದಾಳಿ
ಸಾಂದರ್ಭಿಕ ಚಿತ್ರ Photo: x.com/Reporterworld_
ಕೋಲ್ಕತ್ತಾ, ನ. 2: ಪಶ್ಚಿಮ ಬಂಗಾಳದಲ್ಲಿ ಚರ್ಚ್ ಉದ್ಘಾಟನಾ ಸಮಾರಂಭದ ವೇಳೆ ಗುಂಪೊಂದು ನುಗ್ಗಿ ದಾಂಧಲೆ ನಡೆಸಿದೆ. ಚರ್ಚ್ ನಲ್ಲಿದ್ದ ಶಿಲುಬೆಯನ್ನು ಧ್ವಂಸಗೊಳಿಸಿ, ಬಿಷಪ್ ಸೇರಿದಂತೆ ಹಲವು ಪಾದ್ರಿಗಳು ಹಾಗೂ ಭಕ್ತರ ಮೇಲೆ ಹಲ್ಲೆ ನಡೆಸಿದೆ. ಮಹಿಳೆಯರು ಧರಿಸಿದ್ದ ಸಾಂಪ್ರದಾಯಿಕ ಬಳೆಗಳನ್ನು ತೆಗೆದುಹಾಕುವಂತೆಯೂ ಒತ್ತಾಯಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲೆಯ ಬಸಂತಿ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣತಲಾದಲ್ಲಿ ಶನಿವಾರ ಈ ಘಟನೆ ನಡೆದಿದೆ. ಬಿಷಪ್ ಸುಬ್ರತಾ ಚಕ್ರವರ್ತಿ, ಹಲವು ಪಾದ್ರಿಗಳು ಮತ್ತು ಭಕ್ತರು ಚರ್ಚ್ ಉದ್ಘಾಟನೆಗಾಗಿ ಸೇರಿದ್ದ ಸಂದರ್ಭದಲ್ಲಿ 30ರಿಂದ 35 ಮಂದಿಯ ಗುಂಪು ಆವರಣಕ್ಕೆ ನುಗ್ಗಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಪು ಅಲ್ಲಿದ್ದವರ ಮೇಲೆ ಹಲ್ಲೆ ನಡೆಸಿದೆ. ಮಹಿಳೆಯರ ಮೇಲೂ ಹಲ್ಲೆ ನಡೆಸಿ, ಅವರು ಧರಿಸಿದ್ದ ಸಾಂಪ್ರದಾಯಿಕ ಬಳೆಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದೆ. ಬಳಿಕ ಅವರನ್ನು ಚರ್ಚ್ ಆವರಣದಿಂದ ಹೊರಗೆ ಕಳುಹಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾಳಿಕೋರರು ಚರ್ಚ್ ನಲ್ಲಿದ್ದ ಶಿಲುಬೆಯನ್ನು ಧ್ವಂಸಗೊಳಿಸಿದ್ದಾರೆ. ಪಾದ್ರಿಗಳು ಮತ್ತು ಭಕ್ತರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಘಟನೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಲು ಯತ್ನಿಸಿದವರ ಫೋನ್ ಗಳನ್ನೂ ಒಡೆದುಹಾಕಿದ್ದಾರೆ. ಇನ್ನು ಮುಂದೆ ಆ ಸ್ಥಳದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಚರ್ಚ್ ಸದಸ್ಯರು ತಿಳಿಸಿದ್ದಾರೆ.
ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕ್ರೈಸ್ತ ಸಂಘಟನೆಯಾದ 'ಬಂಗೀಯ ಕ್ರಿಸ್ತಿಯ ಪರಿಷೇಬಾ' (ಬಿಸಿಪಿ) ದಾಳಿಯನ್ನು ಖಂಡಿಸಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಬೆದರಿಸುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ಸಂಘಟನೆ ಆರೋಪಿಸಿದೆ.
ಸಂಘಟನೆಯ ಸ್ಥಾಪಕ ರಾಜ್ಯ ಕಾರ್ಯದರ್ಶಿ ಹಾಗೂ ಕಾರ್ಯಾಧ್ಯಕ್ಷ ಹೆರೋಡ್ ಮಲ್ಲಿಕ್ ಮಾತನಾಡಿ, "ಬಿಷಪ್ ಅವರ ಸಮ್ಮುಖದಲ್ಲೇ ಚರ್ಚ್ ಉದ್ಘಾಟನಾ ಸಮಾರಂಭದ ವೇಳೆ ಹಲವು ಪಾದ್ರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ" ಎಂದು ಹೇಳಿದ್ದಾರೆ.
"ಸಂಘಟಿತ ಗುಂಪುಗಳು ಶಾಂತಿಯುತ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಕಾನೂನನ್ನು ಕೈಗೆತ್ತಿಕೊಳ್ಳುತ್ತಿವೆ. ಇಂತಹ ದಾಳಿಗಳ ವಿರುದ್ಧ ಆಡಳಿತ ಅಥವಾ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ದಾಳಿಕೋರರ ಧೈರ್ಯ ಹೆಚ್ಚಾಗಿದೆ. ಯಾವುದೇ ಹಿಂಜರಿಕೆಯಿಲ್ಲದೆ ಚರ್ಚ್ ನ ಪಾದ್ರಿಗಳ ಮೇಲೆಯೇ ಹಲ್ಲೆ ನಡೆಸುವ ಮಟ್ಟಕ್ಕೆ ಅವರು ಮುಂದಾಗಿದ್ದಾರೆ" ಎಂದು ಮಲ್ಲಿಕ್ ಆರೋಪಿಸಿದ್ದಾರೆ.
ಮೂರು ಕ್ರೈಸ್ತ ಕುಟುಂಬಗಳಿಗೂ ಬೆದರಿಕೆ ಆರೋಪ
ಇದಕ್ಕೂ ಕೆಲವು ವಾರಗಳ ಹಿಂದೆ ಪಶ್ಚಿಮ ಬಂಗಾಳದ ವೆಸ್ಟ್ ಮಿಡ್ನಾಪುರ್ ಜಿಲ್ಲೆಯಲ್ಲಿ ಮೂರು ಕ್ರೈಸ್ತ ಕುಟುಂಬಗಳು ಪೊಲೀಸರಿಗೆ ದೂರು ನೀಡಿದ್ದವು. ಕ್ರೈಸ್ತ ಧರ್ಮವನ್ನು ತ್ಯಜಿಸುವಂತೆ ಒತ್ತಾಯಿಸಿ ಗುಂಪೊಂದು ತಮಗೆ ಬೆದರಿಕೆ ಹಾಕಿ ಹಲ್ಲೆ ನಡೆಸಿದೆ ಎಂದು ಕುಟುಂಬಗಳು ಆರೋಪಿಸಿದ್ದವು.