"ಒಂದು ತಿಂಗಳ ಹಿಂದೆಯಷ್ಟೇ ನಾನು ನಿಮಗೆ ದೇಶವಿರೋಧಿಯಾಗಿರಲಿಲ್ಲವೇ?": ಪಕ್ಷ ಸೇರುವ ಆಹ್ವಾನಕ್ಕೆ ಅಭಿಜಿತ್ ದೀಪ್ಕೆ ಪ್ರತಿಕ್ರಿಯೆ
ಅಭಿಜೀತ್ ದೀಪ್ಕೆ , ರಾಮದಾಸ್ ಅಠಾವಳೆ | Photo Credit : PTI
ಮುಂಬೈ: ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ನೀಡಿದ ಆಹ್ವಾನದ ಕುರಿತು ಪ್ರತಿಕ್ರಿಯಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ , ಕೇವಲ ಒಂದು ತಿಂಗಳ ಹಿಂದೆಯಷ್ಟೇ ತಮ್ಮನ್ನು ದೇಶವಿರೋಧಿ ಎಂದು ಕರೆದಿದ್ದನ್ನು ನೆನಪಿಸಿಕೊಳ್ಳಿ ಎಂದು ಹೇಳಿದ್ದಾರೆ.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಮುಖ್ಯಸ್ಥರಾಗಿರುವ ಅಠಾವಳೆ, ದೀಪ್ಕೆ ಅವರಿಗೆ ಪಕ್ಷ ಸೇರಿ ರಾಜಕೀಯ ಪ್ರವೇಶಿಸುವಂತೆ ಆಹ್ವಾನ ನೀಡಿದ್ದರು. ಕೇಂದ್ರದಲ್ಲಿ RPI(A) ಪಕ್ಷವು ಬಿಜೆಪಿ ನೇತೃತ್ವದ NDA ಮೈತ್ರಿಕೂಟದ ಭಾಗವಾಗಿದೆ.
ಈ ಆಹ್ವಾನದ ಕುರಿತು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ದೀಪ್ಕೆ , "ಕೇವಲ ಒಂದು ತಿಂಗಳ ಹಿಂದೆಯಷ್ಟೇ ನಾನು ನಿಮಗೆ ದೇಶವಿರೋಧಿಯಾಗಿರಲಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
ದೀಪ್ಕೆ ಅವರನ್ನು ಯುವ ಹಾಗೂ ಸಕ್ರಿಯ ಅಂಬೇಡ್ಕರ್ ವಾದಿ ಎಂದು ಬಣ್ಣಿಸಿದ್ದ ಅಠಾವಳೆ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸಲು ಮತ್ತು ಸಮಾಜ ಹಾಗೂ ಪಕ್ಷವನ್ನು ಬಲಪಡಿಸಲು ಅವರು ರಾಜಕೀಯ ಪ್ರವೇಶಿಸುವುದನ್ನು ಪರಿಗಣಿಸಬೇಕು ಎಂದು ಹೇಳಿದ್ದರು.