ಬಳಕೆಯಾಗದ PM-CARES | ಸಂಗ್ರಹಿಸಿದ್ದು 1,162 ಕೋಟಿ ರೂ., ಖರ್ಚಾಗಿದ್ದು ಕೇವಲ 16.47 ಕೋಟಿ ರೂ.

2023-25ರ ಲೆಕ್ಕ ಪರಿಶೋಧನೆ ವರದಿ

Update: 2026-08-19 11:38 IST

ನರೇಂದ್ರ ಮೋದಿ | Photo Credit ; PTI 

ಹೊಸದಿಲ್ಲಿ, ಆ.18: ವಿವಾದಾಸ್ಪದ ‘ಪಿಎಂ-ಕೇರ್ಸ್‌’ ನಿಧಿಗೆ 2023-24 ಮತ್ತು 2024-25ರ ಅವಧಿಯಲ್ಲಿ ದೇಶ ಮತ್ತು ವಿದೇಶಗಳಿಂದ 1,162.92 ಕೋಟಿ ರೂ. ದೇಣಿಗೆ ಬಂದಿದೆ, ಆದರೆ ಈ ಅವಧಿಯಲ್ಲಿ ಕೇವಲ 16.47 ಕೋಟಿ ರೂ.ಯನ್ನು ಖರ್ಚು ಮಾಡಲಾಗಿದೆ ಎಂದು ಲೆಕ್ಕಪರಿಶೋಧನಾ ವರದಿ ತಿಳಿಸಿದೆ.

2024-25ರಲ್ಲಿ, ಈ ನಿಧಿಗೆ 479.97 ಕೋಟಿ ರೂ. ದೇಣಿಗೆ ಬಂದಿದೆ, ಆದರೆ ಅದು ಕೇವಲ 87.85 ಲಕ್ಷ ರೂ. ಖರ್ಚು ಮಾಡಿದೆ. ಈ ಹಣವನ್ನು ಕೋವಿಡ್-19 ಸಾಂಕ್ರಾಮಿಕಕ್ಕೆ ಬಲಿಯಾದ ವ್ಯಕ್ತಿಗಳ ಮಕ್ಕಳಿಗೆ ನೀಡಲಾಗಿದೆ. 2023-24ರಲ್ಲಿ, ಅದು 682.94 ಕೋಟಿ ರೂ. ಸಂಗ್ರಹಿಸಿದೆ ಹಾಗೂ 15.59 ಕೋಟಿ ರೂ. ಖರ್ಚು ಮಾಡಿದೆ.

‘2025 ಮಾರ್ಚ್ 31ರಂದು ಕೊನೆ ಗೊಂಡ ವರ್ಷದ ಸ್ವೀಕೃತಿ ಮತ್ತು ಪಾವತಿ ಲೆಕ್ಕ’ದ ಪ್ರಕಾರ, ಪಿಎಂಕೇರ್ಸ್‌ ಫಂಡ್‌ನ ಖಾತೆಗಳಲ್ಲಿ 8,452.06 ಕೋಟಿ ರೂ. ಇದೆ. ಈ ಪೈಕಿ, 7,846.65 ಕೋಟಿ ರೂ. ನಿರಖು ಠೇವಣಿಗಳಲ್ಲಿದೆ.

2020 ಮಾರ್ಚ್‌ನಲ್ಲಿ ಸ್ಥಾಪನೆ ಯಾದಂದಿನಿಂದ ಈ ನಿಧಿಯು ದೇಣಿಗೆಯಾಗಿ 14,766.95 ಕೋಟಿ ರೂ. ಸಂಗ್ರಹಿಸಿದೆ ಹಾಗೂ 2024-25ರವರೆಗೆ 8,133.29 ಕೋಟಿ ರೂ. ಖರ್ಚು ಮಾಡಿದೆ. ಹೆಚ್ಚಿನ ಪ್ರಮಾಣದ ಖರ್ಚನ್ನು ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಮಾಡಲಾಗಿದೆ.

ಹಣವನ್ನು ಖರ್ಚು ಮಾಡದೆ ಯಾಕೆ ಇಟ್ಟುಕೊಳ್ಳಲಾಗಿದೆ?

‘‘ಕೊನೆಗೂ ಪಿಎಂ ಕೇರ್ಸ್ ಫಂಡ್‌ನ 2024-25ರ ಲೆಕ್ಕಪರಿಶೋಧನೆ ಹೇಳಿಕೆಯನ್ನು ಬಿಡುಗಡೆಗೊಳಿಸಲಾಗಿದೆ! ಮುಖ್ಯಾಂಶಗಳು: ಲಭ್ಯವಿರುವ 8,452 ಕೋಟಿ ರೂ. 0.01 ಶೇಕಡದಷ್ಟು ಭಾಗ ಮಾತ್ರ ಬಳಸಲಾಗಿದೆ! ಪಿಎಂಕೇರ್ಸ್‌ ಫಂಡ್ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಸುಮ್ಮನೆ ಯಾಕೆ ಇಟ್ಟು ಕೂತಿದೆ?’’ ಎಂದು ಪಾರದರ್ಶಕತೆಗಾಗಿ ಹೋರಾಡುತ್ತಿರುವ ಅಂಜಲಿ ಭಾರದ್ವಾಜ್ ‘ಎಕ್ಸ್’ನಲ್ಲಿ ಬರೆದಿದ್ದಾರೆ.

‘‘ಅದೂ ಅಲ್ಲದೆ, ಮಂಜೂರಾಗಿರುವ ‘‘324 ಕೋಟಿ ರೂ. ಪಿ.ಎಂ.ಕೇರ್ಸ್‌ಗೆ ಮರುಪಾವತಿಸಲಾಗಿದೆ. ಆದರೆ, ಈ ಹಣವನ್ನು ಯಾಕೆ ಮಂಜೂರು ಮಾಡಲಾಗಿತ್ತು ಹಾಗೂ ಅದನ್ನು ಯಾಕೆ ವಾಪಸ್ ಮಾಡಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಯಾವ ಸಂಸ್ಥೆಯು ಈ ಹಣವನ್ನು ಮರುಪಾವತಿ ಮಾಡಿದೆ? ತಪ್ಪು ಬಳಕೆಯ ಉತ್ತರದಾಯಿತ್ವದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮರುಪಾವತಿ ಮಾಡಲಾಯಿತೇ? ಲೆಕ್ಕಪರಿಶೋಧನೆ ವರದಿಯ ಜೊತೆಗಿರುವ ಟಿಪ್ಪಣಿಗಳನ್ನು

ಯಾಕೆ ಬಹಿರಂಗಪಡಿಸಲಾಗಿಲ್ಲ?’’ ಎಂದು ಅವರು ಪ್ರಶ್ನಿಸಿದ್ದಾರೆ.

2022-23ರಲ್ಲಿ, ನಿಧಿಯು 912.21 ಕೋಟಿ ರೂ. ಸಂಗ್ರಹಿಸಿತ್ತು ಹಾಗೂ 439.38 ಕೋಟಿ ರೂ. ಖರ್ಚು ಮಾಡಿತ್ತು. ಈ ಪೈಕಿ 346 ಕೋಟಿ ರೂ.ಯನ್ನು ಕೋವಿಡ್-19 ಸಾಂಕ್ರಾಮಿಕದ ವೇಳೆ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ನೀಡಲಾಗಿತ್ತು. 91.87 ಕೋಟಿ ರೂ.ಯನ್ನು ಸುಮಾರು ಒಂದು ಲಕ್ಷ ಆಮ್ಲಜನಕ ಉತ್ಪಾದಕ ಯಂತ್ರಗಳ ಖರೀದಿಗೆ ಬಳಸಲಾಗಿತ್ತು.

ವಿಪತ್ತುಗಳ ಸಮಯದಲ್ಲಿ ನಾಗರಿಕರಿಗೆ ನೆರವು ನೀಡುವ ಉದ್ದೇಶದಿಂದ ನಿಧಿಯೊಂದನ್ನು ಸ್ಥಾಪಿಸಲಾಗಿದೆ. ಅದಕ್ಕೆ ವಿದೇಶಗಳಿಂದಲೂ ದೇಣಿಗೆಗಳು ಬರುತ್ತವೆ. ಆದರೆ, ಅದನ್ನು ನಿಗೂಢತೆ ಆವರಿಸಿದೆ. ಜೊತೆಗೆ, ಅದನ್ನು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಿಂದಲೂ ಹೊರಗಿಡಲಾಗಿದೆ. ಆ ಮೂಲಕ ಅದರ ಸಾರ್ವಜನಿಕ ಪರಿಶೀಲನೆಯನ್ನು ತಪ್ಪಿಸಲಾಗಿದೆ.

ಅಂಜಲಿ ಭಾರದ್ವಾಜ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News