‘ಭಾರತೀಯ ಕಾನೂನುಗಳನ್ನು ಪಾಲಿಸುತ್ತಿದ್ದೇವೆ’: ಕಾಂಗ್ರೆಸ್ ಪಕ್ಷದ ಪೋಸ್ಟ್ ಗಳ ನಿರ್ಬಂಧ ಆರೋಪಕ್ಕೆ Meta ಸ್ಪಷ್ಟನೆ
Photo Credit : X
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷ ಮತ್ತು ಅದರ ಯುವ ಘಟಕವಾದ ಇಂಡಿಯನ್ ಯೂತ್ ಕಾಂಗ್ರೆಸ್ (IYC)ಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣ ಪೋಸ್ಟ್ ಗಳು ಹಾಗೂ ಖಾತೆಗಳನ್ನು ನಿರ್ಬಂಧಿಸಲಾಗುತ್ತಿದೆ ಎಂಬ ಆರೋಪದ ಕುರಿತು ಮೆಟಾ ಕಂಪೆನಿ ಸ್ಪಷ್ಟನೆ ನೀಡಿದೆ. ಭಾರತೀಯ ಕಾನೂನುಗಳನ್ನು ಪಾಲಿಸುತ್ತಿದ್ದು, ತನ್ನ ನೀತಿಗಳು ಪಾರದರ್ಶಕವಾಗಿವೆ ಎಂದು ಮೆಟಾದ ನೀತಿ ನಿರೂಪಣಾ ತಂಡ ಕಾಂಗ್ರೆಸ್ ನಾಯಕರಿಗೆ ತಿಳಿಸಿದೆ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್ ಪಕ್ಷ ಮತ್ತು IYCಗೆ ಸಂಬಂಧಿಸಿದ ಪೋಸ್ಟ್ ಗಳು ಹಾಗೂ ಖಾತೆಗಳನ್ನು ಮೆಟಾ ನಿರ್ಬಂಧಿಸುತ್ತಿದೆ ಎಂಬ ಆರೋಪದ ಬಳಿಕ ಉಭಯ ಪಕ್ಷಗಳ ಪ್ರತಿನಿಧಿಗಳ ನಡುವೆ ನಡೆದ ಮೊದಲ ಸಭೆ ಇದಾಗಿದೆ.
ಹೈದರಾಬಾದ್, ಗುರುಗ್ರಾಮ್ ಮತ್ತು ಮುಂಬೈನಲ್ಲಿರುವ ಮೆಟಾ ಕಚೇರಿಗಳ ಮುಂದೆ IYC ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಈ ಸಭೆ ನಡೆದಿದೆ. ರಾಹುಲ್ ಗಾಂಧಿ ಅವರ ಹೆಸರನ್ನು ಉಲ್ಲೇಖಿಸಿರುವ ಪೋಸ್ಟ್ ಗಳನ್ನು ಮೆಟಾ ನಿರ್ಬಂಧಿಸುತ್ತಿದೆ ಎಂಬುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಕಾಂಗ್ರೆಸ್ ನಿಯೋಗ ಸಭೆಯಲ್ಲಿ ಮಂಡಿಸಿದೆ ಎಂದು ಮೂಲಗಳು ತಿಳಿಸಿವೆ.
ಮೆಟಾ ಕಚೇರಿಗಳ ಮುಂದೆ ಯೂತ್ ಕಾಂಗ್ರೆಸ್ ಪ್ರತಿಭಟನೆ
ನ. 20ರಂದು ಹೈದರಾಬಾದ್ ನಲ್ಲಿರುವ ಮೆಟಾ ಕಚೇರಿಯ ಮುಂದೆ ನಡೆದ ಪ್ರತಿಭಟನೆಯಲ್ಲಿ, IYC ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ರಾಷ್ಟ್ರೀಯ ಉಸ್ತುವಾರಿ ಮನೀಶ್ ಶರ್ಮಾ ಅವರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಮೆಟಾ ಅಮಾನತುಗೊಳಿಸಿದೆ ಅಥವಾ ನಿರ್ಬಂಧಿಸಿದೆ ಎಂದು ತೆಲಂಗಾಣ ಯೂತ್ ಕಾಂಗ್ರೆಸ್ ಅಧ್ಯಕ್ಷ ಜಕ್ಕಿಡಿ ಶಿವ ಚರಣ್ ರೆಡ್ಡಿ ಆರೋಪಿಸಿದ್ದರು.
ಗಚಿಬೌಲಿಯಲ್ಲಿರುವ ಮೆಟಾ ಕಚೇರಿಯೊಳಗೆ ಪ್ರವೇಶಿಸಿದ್ದ ತಮ್ಮ ಕಾರ್ಯಕರ್ತರು, ನಿರ್ಬಂಧಕ್ಕೊಳಗಾದ ಖಾತೆಗಳನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿದ್ದಾರೆ ಎಂದು ತೆಲಂಗಾಣ ಯೂತ್ ಕಾಂಗ್ರೆಸ್ ತಿಳಿಸಿತ್ತು. ಈ ವೇಳೆ ಪೊಲೀಸರು ರೆಡ್ಡಿ ಸೇರಿದಂತೆ ಕೆಲವು ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು.
ನ. 21ರಂದು ಸಾಮಾಜಿಕ ಜಾಲತಾಣ 'X' ನಲ್ಲಿ ಪೋಸ್ಟ್ ಮಾಡಿದ್ದ IYC, ತಮ್ಮ ನಾಯಕರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಮರುಸ್ಥಾಪಿಸದಿದ್ದರೆ ದೇಶಾದ್ಯಂತ ಇರುವ ಮೆಟಾ ಕಚೇರಿಗಳಿಗೆ ನುಗ್ಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ನ. 22ರಂದು ಮತ್ತಷ್ಟು ಪ್ರತಿಭಟನೆಗಳು ನಡೆದಿದ್ದವು.
ಸಾಮಾಜಿಕ ಜಾಲತಾಣ ವೇದಿಕೆಗಳ ಮೇಲಿನ ಸರ್ಕಾರದ ನಿಗಾ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ವಿವಾದ ಮುನ್ನೆಲೆಗೆ ಬಂದಿದೆ. ಫೆಬ್ರವರಿಯಲ್ಲಿ, ಕಾನೂನುಬಾಹಿರ ವಿಷಯಗಳನ್ನು ತೆಗೆದುಹಾಕಲು ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ನೀಡಲಾಗಿದ್ದ ಗಡುವನ್ನು ಕೇಂದ್ರ ಸರಕಾರ 36 ಗಂಟೆಗಳಿಂದ ಮೂರು ಗಂಟೆಗಳಿಗೆ ಇಳಿಸಿತ್ತು.
ಮೆಟಾ ನೀಡಿರುವ ಮಾಹಿತಿಯ ಪ್ರಕಾರ, 2026ರ ಮೊದಲಾರ್ಧದಲ್ಲಿ ಭಾರತದಲ್ಲಿ ಸ್ಥಳೀಯ ಕಾನೂನುಗಳ ಅಡಿಯಲ್ಲಿ 54 ಲಕ್ಷಕ್ಕೂ ಹೆಚ್ಚು ಪೋಸ್ಟ್ ಗಳು ಅಥವಾ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಇದಕ್ಕೆ ಹೋಲಿಸಿದರೆ, 2025ರ ಪೂರ್ಣ ವರ್ಷದಲ್ಲಿ ಸುಮಾರು 70 ಸಾವಿರ ಪೋಸ್ಟ್‌ಗಳು ಅಥವಾ ಖಾತೆಗಳನ್ನು ನಿರ್ಬಂಧಿಸಲಾಗಿತ್ತು.