West Bengal | ಬಾರ್ ಕೌನ್ಸಿಲ್ ಚುನಾವಣೆಯಲ್ಲಿ TMCಗೆ ಭರ್ಜರಿ ಗೆಲುವು; ಬಿಜೆಪಿಗೆ 3 ಸ್ಥಾನ

Update: 2026-08-20 08:30 IST

Photo: indiatoday

ಕೋಲ್ಕತ್ತಾ, ಆ.20: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (TMC)ಗೆ ಬಾರ್ ಕೌನ್ಸಿಲ್ ಚುನಾವಣೆ ಫಲಿತಾಂಶ ಕೊಂಚ ನೆಮ್ಮದಿ ತಂದಿದೆ. ಪಶ್ಚಿಮ ಬಂಗಾಳ ಬಾರ್ ಕೌನ್ಸಿಲ್‌ನ 23 ಚುನಾಯಿತ ಸ್ಥಾನಗಳ ಪೈಕಿ TMC 15 ಸ್ಥಾನಗಳನ್ನು ಗೆದ್ದು ನಿಯಂತ್ರಣ ಉಳಿಸಿಕೊಂಡಿದೆ.

ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಬಾರ್ ಕೌನ್ಸಿಲ್ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನಗಳಿಗೆ ತೃಪ್ತಿಪಟ್ಟಿದೆ. ಎಡರಂಗವೂ ಮೂರು ಹಾಗೂ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆದ್ದಿವೆ. ಈ ಫಲಿತಾಂಶ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ವ್ಯತಿರಿಕ್ತವಾಗಿದ್ದು, ಕಾನೂನು ಸಮುದಾಯದ ಕೆಲವು ವಿಭಾಗಗಳಲ್ಲಿ TMCಯ ಪ್ರಭಾವ ಮುಂದುವರಿದಿರುವುದನ್ನು ಸೂಚಿಸಿದೆ.

ಚುನಾಯಿತ 23 ಸ್ಥಾನಗಳ ಪೈಕಿ ಐದು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದವು. ಅವುಗಳಲ್ಲಿ TMC ನಾಲ್ಕು ಹಾಗೂ ಕಾಂಗ್ರೆಸ್ ಒಂದು ಸ್ಥಾನ ಗೆದ್ದಿವೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಇನ್ನಿಬ್ಬರು ಮಹಿಳಾ ಸದಸ್ಯರನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಾಮನಿರ್ದೇಶನ ಮಾಡಲಿದೆ. ಇದರಿಂದ ಪಶ್ಚಿಮ ಬಂಗಾಳ ಬಾರ್ ಕೌನ್ಸಿಲ್‌ನ ಒಟ್ಟು ಸದಸ್ಯರ ಸಂಖ್ಯೆ 25ಕ್ಕೆ ಏರಲಿದೆ.

ಚುನಾವಣೆಯಲ್ಲಿ ಒಟ್ಟು 75 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. TMC 23, ಬಿಜೆಪಿ 22, ಎಡರಂಗ 12 ಹಾಗೂ 18 ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ ತನ್ನ ಹಿಂದಿನ ಮೂರು ಸ್ಥಾನಗಳನ್ನು ಉಳಿಸಿಕೊಂಡಿದೆ. ಕಾಂಗ್ರೆಸ್ ಕೂಡ ಎರಡು ಸ್ಥಾನಗಳನ್ನು ಉಳಿಸಿಕೊಂಡಿದೆ. ಎಡರಂಗದ ಸ್ಥಾನಗಳು ಹಿಂದಿನ ನಾಲ್ಕರಿಂದ ಮೂರಕ್ಕೆ ಇಳಿದಿವೆ.

ಗೆದ್ದ TMC ಅಭ್ಯರ್ಥಿಗಳು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಶಿಫಾರಸಿನ ಮೇರೆಗೆ ಕಣಕ್ಕಿಳಿದಿದ್ದರು ಎಂದು ವರದಿಯಾಗಿದೆ. ತೃಣಮೂಲ ವಕೀಲರ ಘಟಕದ ಸದಸ್ಯ ಸುಭಾಷಿ ಚಕ್ರವರ್ತಿ ಅತಿ ಹೆಚ್ಚು ಅಂತರದಿಂದ ಗೆದ್ದ ಅಭ್ಯರ್ಥಿಯಾಗಿದ್ದಾರೆ. ಬೈಸಾನೋರ್ ಚಟರ್ಜಿ, ಅನ್ಸಾರ್ ಮಂಡಲ್, ಅಶೋಕ್ ದೇಬ್, ಇಂದ್ರಾನಿಲ್ ಬಸು ಮತ್ತು ಸಿದ್ಧಾರ್ಥ ಮುಖರ್ಜಿ ಪ್ರಮುಖ ವಿಜೇತರಾಗಿದ್ದಾರೆ.

ತೃಣಮೂಲ ವಕೀಲರ ಘಟಕದ ಸದಸ್ಯ ಸಂಜಯ್ ಬರ್ಧನ್ ಪ್ರಕಾರ, ರಾಜ್ಯದ ವಿವಿಧ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ವಕೀಲರು ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಹೊಸ ನಿಯಮಗಳ ಪ್ರಕಾರ 23 ಸ್ಥಾನಗಳ ಪೈಕಿ ಐದು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಈ ಪೈಕಿ TMC ನಾಲ್ಕು ಸ್ಥಾನಗಳನ್ನು ಗೆದ್ದಿದೆ.

ಬಾರ್ ಕೌನ್ಸಿಲ್ ಚುನಾವಣೆಗೆ ಮಾರ್ಚ್ 9ರಂದು ಮತದಾನ ಆರಂಭವಾಗಿತ್ತು. ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮುನ್ನ ಮತದಾನ ನಡೆದಿತ್ತು. ಇದೀಗ ಫಲಿತಾಂಶ ಪ್ರಕಟವಾಗಿರುವ ಹಿನ್ನೆಲೆಯಲ್ಲಿ TMC ಶೀಘ್ರದಲ್ಲೇ ಪಶ್ಚಿಮ ಬಂಗಾಳ ಬಾರ್ ಕೌನ್ಸಿಲ್‌ನ ಹೊಸ ಮಂಡಳಿಯನ್ನು ರಚಿಸುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News