ಮುಖ್ಯಮಂತ್ರಿಗಳ ಸಭೆಯಲ್ಲಿ ಮೇಕೆದಾಟು ಯೋಜನೆಗೆ ಡಿಕೆ ಶಿವಕುಮಾರ್ ಪಟ್ಟುಹಿಡಿದಾಗ ವಿಜಯ್ ಮೌನವಾಗಿದ್ದರು : ಡಿಎಂಕೆ ಆರೋಪ
Photo Credit : x.com/arivalayam
ಚೆನ್ನೈ : ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆ ಪ್ರಮುಖ ಚರ್ಚಾ ವಿಷಯವಾಗಿ ಹೊರಹೊಮ್ಮಿದ್ದು, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯೋಜನೆಯ ನಿರ್ಮಾಣಕ್ಕೆ ಪಟ್ಟು ಹಿಡಿದು ಮಾತನಾಡಿದ್ದಾರೆ. ಆದರೆ , ಈ ಯೋಜನೆಯನ್ನು ವಿರೋಧಿಸುವ ಬದಲು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮೌನ ವಹಿಸಿದ್ದರು ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ ಆರೋಪಿಸಿದ್ದಾರೆ.
ಮಹಾಬಲಿಪುರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯ ಬೆನ್ನಲ್ಲೇ ದಯಾನಿಧಿ ಮಾರನ್ ಪತ್ರಿಕಾಗೋಷ್ಠಿಯಲ್ಲಿ ಈ ಮೇಲಿನಂತೆ ಹೇಳಿಕೆ ನೀಡಿದ್ದಾರೆ.
ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಮೇಕೆದಾಟು ಯೋಜನೆಯ ಪರವಾಗಿ ಬಹಿರಂಗವಾಗಿ ಮಾತನಾಡಿದರೂ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಯೋಜನೆಯನ್ನು ವಿರೋಧಿಸಿ ಒಂದೇ ಒಂದು ಮಾತನ್ನೂ ಆಡದೆ ಮೌನವಾಗಿದ್ದರು ಎಂದು ಮಾರನ್ ಆರೋಪಿಸಿದ್ದಾರೆ.
ಮೇಕೆದಾಟು ಯೋಜನೆಯನ್ನು ನೇರವಾಗಿ ಉಲ್ಲೇಖಿಸದ ವಿಜಯ್, ಮೇಲ್ಭಾಗದ ರಾಜ್ಯಗಳು ಕೈಗೊಳ್ಳುವ ಯಾವುದೇ ನಿರ್ಧಾರಗಳು ಕೆಳಭಾಗದ ರಾಜ್ಯದ ನೀರಿನ ಹಕ್ಕಿನ ಮೇಲೆ ಪರಿಣಾಮ ಬೀರದಂತೆ ಕಾನೂನಿನ ಚೌಕಟ್ಟಿನಲ್ಲೇ ಇರಬೇಕು ಎಂದು ಸಭೆಯಲ್ಲಿ ಹೇಳಿದ್ದಾರೆ ಎಂದು ಮಾರನ್ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಸಭೆಯ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಮಿಳುನಾಡು ಮತ್ತು ಪುದುಚೇರಿಯ ಹಿತಾಸಕ್ತಿಗಳನ್ನು ರಕ್ಷಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಹೇಳಿದ್ದಾರೆ.
ಮೇಕೆದಾಟು ಯೋಜನೆಯಿಂದ ತಮಿಳುನಾಡು ಮತ್ತು ಪುದುಚೇರಿಯ ರೈತರಿಗೂ ಪ್ರಯೋಜನವಾಗಲಿದೆ ಎಂದು ತಿಳಿಸಿರುವ ಅವರು, ಕುಡಿಯುವ ನೀರಿಗಾಗಿ ಕೇವಲ 5 ಟಿಎಂಸಿ ನೀರನ್ನು ಮಾತ್ರ ಮೀಸಲಿಡಲಾಗಿದ್ದು, ಜಲಾಶಯದಲ್ಲಿ ಸಂಗ್ರಹವಾಗುವ ಉಳಿದ ಹೆಚ್ಚುವರಿ ನೀರೆಲ್ಲವೂ ತಮಿಳುನಾಡಿಗೆ ಹರಿಯಲಿದೆ ಎಂದು ಹೇಳಿದ್ದಾರೆ.
“ನಿಮಗೆ ಸಹಾಯ ಮಾಡಲು ನಮಗೆ ಸಹಕರಿಸಿ,” ಎಂದು ಅವರು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.