ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ /ಪುತ್ರ ಪಾರ್ಥ್ ಪವಾರ್     Photo Credit : PTI

ಮುಂಬೈ : ಪುಣೆಯ ಮುಂಢ್ವಾ ಜಮೀನು ಖರೀದಿ ಪ್ರಕರಣದಲ್ಲಿ, 40 ಎಕರೆ ಭೂಮಿಯನ್ನು ಖರೀದಿಸಿದ ಅಮೇಡಿಯಾ ಎಂಟರ್ಪ್ರೈಸಸ್ ಎಲ್ಎಲ್ಪಿ ಕಂಪನಿಯಲ್ಲಿ ಶೇ. 99ರಷ್ಟು ಮಾಲೀಕತ್ವ ಹೊಂದಿದ್ದರೂ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರ ಪುತ್ರ ಹಾಗೂ ರಾಜ್ಯಸಭಾ ಸಂಸದ ಪಾರ್ಥ್ ಪವಾರ್ ಅವರನ್ನು ಎಫ್ಐಆರ್ ನಲ್ಲಿ  ಆರೋಪಿಯನ್ನಾಗಿ ಏಕೆ ಹೆಸರಿಸಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರನ್ನು ವಿವರಣೆ ಕೇಳಿದೆ.

ಅಮೇಡಿಯಾ ಎಂಟರ್ಪ್ರೈಸಸ್ ಗೆ ಅಕ್ರಮವಾಗಿ ಮಾಲೀಕತ್ವ ಹಕ್ಕುಗಳನ್ನು ಮಂಜೂರು ಮಾಡಲು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿರುವ ಪುಣೆ ತಹಶೀಲ್ದಾರ್ ಸೂರ್ಯಕಾಂತ್ ಗುಲಾಬ್ರಾವ್ ಯೇವಲೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ಏಕಸದಸ್ಯ ಪೀಠ ಈ ನಿರ್ದೇಶನ ನೀಡಿದೆ.

ಪಾರ್ಥ್ ಪವಾರ್ ಮತ್ತು ಅವರ ಸೋದರಸಂಬಂಧಿ ದಿಗ್ವಿಜಯ್ ಪಾಟೀಲ್ ಜಂಟಿ ಮಾಲೀಕತ್ವದ ಕಂಪನಿಯು, ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲು ಅನುಮತಿಯಿಲ್ಲದ 1,800 ರೂ. ಕೋಟಿ ಮೌಲ್ಯದ ಸರ್ಕಾರಿ ಸ್ವಾಮ್ಯದ ‘ಮಹಾರ್ ವತನ್’ ಜಮೀನನ್ನು ಕೇವಲ 300ರೂ. ಕೋಟಿಗೆ ಖರೀದಿಸಿತ್ತು ಎಂದು ಆರೋಪಿಸಲಾಗಿದೆ.

ಈ ಸರ್ಕಾರಿ ಜಮೀನನ್ನು ವರ್ಗಾಯಿಸಲಾಗಿದ್ದ 272 ಜನರ ಪವರ್ ಆಫ್ ಅಟಾರ್ನಿ ಹೊಂದಿದ್ದ ಪುಣೆ ನಿವಾಸಿ ಶೀತಲ್ ತೇಜ್ವಾನಿ ಅವರೊಂದಿಗೆ ಕಳೆದ ವರ್ಷ ಮೇ 20ರಂದು ಮಾರಾಟ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಸ್ಥಳದಲ್ಲಿ ಡೇಟಾ ಸೆಂಟರ್ ಸ್ಥಾಪಿಸುವ ಯೋಜನೆ ಇದೆ ಎಂದು ತಿಳಿಸಿ 21 ರೂ. ಕೋಟಿ ಮುದ್ರಾಂಕ ಶುಲ್ಕ ವಿನಾಯಿತಿ ಪಡೆಯಲಾಗಿತ್ತು. ಇದರ ಬದಲಿಗೆ ಕೇವಲ 500ರೂ. ಮುದ್ರಾಂಕ ಶುಲ್ಕ ಪಾವತಿಸಲಾಗಿತ್ತು.

ಪ್ರಕರಣದಲ್ಲಿ ಈವರೆಗೆ ನಾಲ್ವರ ವಿರುದ್ಧ ಆರೋಪ

ಪೊಲೀಸರು ತಮ್ಮ ಪ್ರಥಮ ಮಾಹಿತಿ ವರದಿ (FIR) ಮತ್ತು ಚಾರ್ಜ್ ಶೀಟ್ ನಲ್ಲಿ ದಿಗ್ವಿಜಯ್ ಪಾಟೀಲ್, ಅಮಾನತುಗೊಂಡ ಉಪ-ನೋಂದಣಾಧಿಕಾರಿ ರವೀಂದ್ರ ತಾರು, ತಹಶೀಲ್ದಾರ್ ಸೂರ್ಯಕಾಂತ್ ಯೇವಲೆ ಮತ್ತು ಪವರ್ ಆಫ್ ಅಟಾರ್ನಿ ಹೊಂದಿರುವ ಶೀತಲ್ ತೇಜ್ವಾನಿ ಅವರನ್ನು ಆರೋಪಿಗಳಾಗಿ ಹೆಸರಿಸಿದ್ದಾರೆ.

ಸೋಮವಾರ ಯೇವಲೆ ಪರ ವಕೀಲ ಹರ್ಷದ್ ನಿಂಬಾಳ್ಕರ್ ವಾದ ಮಂಡಿಸಿ, ತಮ್ಮ ಕಕ್ಷಿದಾರರು ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿದರು. ಇದನ್ನು ವಿರೋಧಿಸಿದ ಸರ್ಕಾರದ ಪರ ವಕೀಲರು, ಯೇವಲೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ವಾದಿಸಿದರು. ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯವರೆಗೆ ಯೇವಲೆಗೆ ನೀಡಲಾಗಿದ್ದ ಮಧ್ಯಂತರ ರಕ್ಷಣೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಪಾರ್ಥ್ ಪವಾರ್ ಅವರು ʼರಾಜ್ಯದ ಉಪ ಮುಖ್ಯಮಂತ್ರಿಯವರ ಮಗ ಮತ್ತು ಅತ್ಯಂತ ಪ್ರಭಾವಿ ವ್ಯಕ್ತಿಯಾಗಿರುವ ಕಾರಣ ಅವರನ್ನು ಆರೋಪಿಯನ್ನಾಗಿ ಮಾಡಲಾಗಿಲ್ಲʼ ಎಂದು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಲಾಯಿತು.

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಪಾರ್ಥ್ ಪವಾರ್ ಅವರನ್ನು ಆರೋಪಿಯನ್ನಾಗಿ ಏಕೆ ಹೆಸರಿಸಿಲ್ಲ ಎಂಬುದಕ್ಕೆ ಎರಡು ವಾರಗಳ ಒಳಗೆ ವಿವರಣೆ ನೀಡುವಂತೆ ಡಿಜಿಪಿ ಮತ್ತು ತನಿಖಾಧಿಕಾರಿಗೆ ನಿರ್ದೇಶನ ನೀಡಿತು.

ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ನಿಗದಿಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor