×
Ad

ಸರ್ಕಾರಿ ಕೆಲಸ, ಆಸ್ತಿಗಾಗಿ ತಾಯಿಯನ್ನೇ ಸುಪಾರಿಕೊಟ್ಟು ಕೊಲೆಗೈದ 23 ವರ್ಷದ ಯುವತಿ

ಅಪಘಾತ ಎಂದು ಬಿಂಬಿಸಲು ಕಾರು ಢಿಕ್ಕಿ ಹೊಡೆಸಿ ಕೊಲೆ; ಸಿಸಿಟಿವಿಯಲ್ಲಿ ಬಯಲಾಯ್ತು ರಹಸ್ಯ!

Update: 2026-07-09 13:55 IST

ಆಯುಷಿ ಶರ್ಮಾ (Photo: indiatoday.in)

ಜೈಪುರ: ಕುಟುಂಬದ ಆಸ್ತಿಯನ್ನು ತನ್ನ ವಶಕ್ಕೆ ಪಡೆಯಲು ಮತ್ತು ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಳ್ಳಲು ತನ್ನ ಹೆತ್ತ ತಾಯಿಯನ್ನೇ ಕೊಲ್ಲಲು ಸಂಚು ರೂಪಿಸಿದ್ದಾಳೆ ಎಂಬ ಆರೋಪದ ಮೇಲೆ ಜೈಪುರದ 23 ವರ್ಷದ ಯುವತಿಯೊಬ್ಬಳನ್ನುಬಂಧಿಸಲಾಗಿದೆ. ಮಹಿಳೆಯು ತನ್ನ ಸಂಬಂಧಿಕರು ಹಾಗೂ ಸುಪಾರಿ ಹಂತಕರ ಸಹಾಯದೊಂದಿಗೆ ತಾಯಿಯ ಕೊಲೆಗೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಲಯವೊಂದರಲ್ಲಿ ಕೆಳವಿಭಾಗದ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ 45 ವರ್ಷದ ನೀರಜ್ ಶರ್ಮಾ ಕೊಲೆಯಾದವರು. ಜುಲೈ 3 ರಂದು ಜೈಪುರದ ಪ್ರತಾಪ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪುತ್ರಿ ಆಯುಷಿ ಶರ್ಮಾ ಸೇರಿದಂತೆ ಏಳು ಜನರನ್ನು ಬಂಧಿಸಿದ್ದು, ಇತರ ಆರೋಪಿಗಳನ್ನು ಮೋಹನ್ ಸ್ವರೂಪ್, ಮೋಹಿತ್ ಶರ್ಮಾ, ಆಕಾಶ್ ಶರ್ಮಾ, ಅರವಿಂದ್ ಶರ್ಮಾ, ಹೇಮಂತ್ ಶರ್ಮಾ ಮತ್ತು ರೋಹಿತ್ ಜಾತವ್ ಎಂದು ಗುರುತಿಸಲಾಗಿದೆ. ಈ ಸಂಚಿನ ಪ್ರಮುಖ ಸೂತ್ರಧಾರ ಎಂದು ತನಿಖಾಧಿಕಾರಿಗಳು ಗುರುತಿಸಿರುವ ಬಲರಾಮ್ ಅಲಿಯಾಸ್ ರವಿ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿ ಆಯುಷಿ ಶರ್ಮಾ ತನ್ನ ಚಿಕ್ಕಪ್ಪ ಮತ್ತು ಸೋದರಸಂಬಂಧಿಯೊಂದಿಗೆ ಸೇರಿ ಸಂಚು ರೂಪಿಸಿದ್ದು, 7 ಲಕ್ಷ ರೂಪಾಯಿ ನೀಡಿ ಸುಪಾರಿ ಹಂತಕರನ್ನು ನೇಮಿಸಿದ್ದಾಳೆ. ಅಲ್ಲದೆ, ಕೊಲೆಯನ್ನು ರಸ್ತೆ ಅಪಘಾತದಂತೆ ಬಿಂಬಿಸಲು ಸ್ಕಾರ್ಪಿಯೋ ಎಸ್ಯುವಿ ವಾಹನವನ್ನು ಹರಿಸಿ ತಾಯಿಯನ್ನು ಕೊಲೆ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ನೀರಜ್ ಅವರು ತಮ್ಮ ಮಗನನ್ನು ಕೋಚಿಂಗ್ ಸೆಂಟರ್ ಗೆ ಬಿಟ್ಟು ಮನೆಗೆ ಹಿಂದಿರುಗುತ್ತಿದ್ದಾಗ, ಸುಮಾರು 130 ಕಿಮೀ ವೇಗದಲ್ಲಿ ಬಂದ ಸ್ಕಾರ್ಪಿಯೋ ವಾಹನವೊಂದು ಅವರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಅವರ ದೇಹವು ಸುಮಾರು 100 ಅಡಿ ಎತ್ತರಕ್ಕೆ ಹಾರಿ ಬಿದ್ದಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ತನಿಖೆಯ ಭಾಗವಾಗಿ ಪೋಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಈ ಢಿಕ್ಕಿಯು ಕೇವಲ ಅಪಘಾತವಾಗಿರದೆ ಪೂರ್ವಯೋಜಿತ ಕೊಲೆಯಾಗಿದೆ ಎಂಬುದನ್ನು ಸೂಚಿಸುವ ಪುರಾವೆಗಳು ಲಭ್ಯವಾಗಿವೆ. ಅಂತಿಮವಾಗಿ, ಕುಟುಂಬದ ಹಲವು ಸದಸ್ಯರು ಮತ್ತು ಬಾಡಿಗೆ ಹಂತಕರು ಶಾಮೀಲಾಗಿ ನಡೆಸಿದ ದೊಡ್ಡ ಸಂಚು ಎಂದು ಈ ತನಿಖೆಯಿಂದ ಬಯಲಾಗಿದೆ.

ಆರೋಪಿಗಳು ಆರಂಭದಲ್ಲಿ ಬಾಡಿಗೆಗೆ ಪಡೆದ ಥಾರ್ ಎಸ್ಯುವಿ ಬಳಸಿ ನೀರಜ್ ಅವರ ಚಲನವಲನ ಗಮನಿಸುವ ಪ್ರಯತ್ನ ಮಾಡಿದ್ದರು. ಆದರೆ ಆ ಪ್ರಯತ್ನ ಯಶಸ್ವಿಯಾಗಲಿಲ್ಲ. ನಂತರ ಸ್ಕಾರ್ಪಿಯೋ ಬಳಸಿ ಸುಮಾರು ಒಂದು ತಿಂಗಳ ಕಾಲ ಅವರು ಅವರ ಚಲನವಲನಗಳನ್ನು ನಿರಂತರವಾಗಿ ಗಮನಿಸುತ್ತಿದ್ದರು. ಅಂತಿಮವಾಗಿ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನೀರಜ್ ಅವರ ಪತಿ ಸುಮಾರು ಒಂದು ವರ್ಷದ ಹಿಂದೆ ನಿಧನರಾಗಿದ್ದರು. ನೀರಜ್ ಅವರು ಅನುಕಂಪದ ಆಧಾರದ ಮೇಲೆ ನೇಮಕಾತಿ ಪಡೆದು ಎಲ್ಡಿಸಿ ಆಗಿ ಸೇವೆಗೆ ಸೇರಿದ್ದರು. ತಂದೆಯ ಮರಣದ ನಂತರ ಸಿಗುವ ಆ ಸರ್ಕಾರಿ ಕೆಲಸ ತನಗೆ ಬೇಕು ಎಂದು ಆಯುಷಿ ಬಯಸಿದ್ದಳು. ಆದರೆ ನೀರಜ್ ಅವರೇ ಆ ಕೆಲಸಕ್ಕೆ ಸೇರಿಕೊಂಡಿದ್ದರು. ಇದರೊಂದಿಗೆ ಕಳೆದ ಎರಡು-ಮೂರು ವರ್ಷಗಳಿಂದ ತಾಯಿ ಮತ್ತು ಮಗಳ ನಡುವೆ ಆಸ್ತಿ ವಿವಾದವೂ ನಡೆದಿತ್ತು ಎಂದು ಪೂರ್ವವಿಭಾಗದ ಡಿಸಿಪಿ ರಂಜಿತಾ ಶರ್ಮಾ ತಿಳಿಸಿದ್ದಾರೆ.

ನೀರಜ್ ಅವರ ಸಹೋದರ ರಾಕೇಶ್ ಕುಮಾರ್ ಶರ್ಮಾ ಅವರು ಈ ಪ್ರಕರಣದ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಮಗಳು, ಅತ್ತೆ ಕಡೆಯ ಕುಟುಂಬದ ಸದಸ್ಯರು ಮತ್ತು ಸೋದರಸಂಬಂಧಿಯಿಂದ ಆಗುತ್ತಿದ್ದ ಕಿರುಕುಳದ ಬಗ್ಗೆ ನೀರಜ್ ಸಹೋದರ ರಾಕೇಶ್ ಕುಮಾರ್ ಶರ್ಮಾರಿಗೆ ಹೇಳಿದ್ದರು. ಈ ಬಗ್ಗೆ ರಾಕೇಶ್ ಕುಮಾರ್ ಶರ್ಮಾ ಮಾಹಿತಿ ನೀಡಿದ್ದು, ಹಲವಾರು ಬಾರಿ ಆಕೆಗೆ ಜೀವ ಬೆದರಿಕೆಗಳು ಬಂದಿದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News