×
Ad

ರಸ್ತೆ ಅಪಘಾತ, ಅಗ್ನಿ ದುರಂತ, ಆತ್ಮಹತ್ಯೆ: ಭಾರತೀಯ ನಗರಗಳ ವೈಫಲ್ಯ ಬಿಚ್ಚಿಟ್ಟ ಎನ್‌ಸಿಆರ್‌ಬಿ ಅಂಕಿ-ಅಂಶ

scroll.in ವರದಿಯಲ್ಲೇನಿದೆ?

Update: 2026-07-09 19:01 IST

ಸಾಂದರ್ಭಿಕ ಚಿತ್ರ | Photo Credit : magnific

ಜೂನ್ 22 ರಂದು ಲಕ್ನೋದ ಕೋಚಿಂಗ್ ಸೆಂಟರ್ ಹೊಂದಿದ್ದ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 15 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಭಾರತದ ನಗರಗಳಲ್ಲಿನ ಪರಿಚಿತ ವೈಫಲ್ಯಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಕಟ್ಟಡ ನಿಯಮಗಳ ಉಲ್ಲಂಘನೆ ಮತ್ತು ಜೀವಗಳು ಹೋದ ನಂತರವಷ್ಟೇ ಎಚ್ಚೆತ್ತುಕೊಳ್ಳುವ ಆಡಳಿತ ವ್ಯವಸ್ಥೆಯೇ ಇದಕ್ಕೆ ಕಾರಣ.

ಈ ಅಗ್ನಿ ಅವಘಡವು ಒಂದು ವಿರೋಧಾಭಾಸದತ್ತ ಗಮನ ಸೆಳೆದಿದೆ. ಭಾರತದ ನೀತಿ ನಿರೂಪಕರು ನಗರೀಕರಣವನ್ನು ಅಭಿವೃದ್ಧಿಯ ಹಾದಿ ಎಂದು ಬಿಂಬಿಸುತ್ತಾರೆ. ಆದರೆ, ಭಾರತೀಯ ನಗರಗಳು ತೀವ್ರ ಬಿಕ್ಕಟ್ಟಿನ ಸ್ಥಿತಿಯಲ್ಲಿವೆ ಎಂದು scroll.in ವರದಿ ಮಾಡಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಮೇ ತಿಂಗಳಲ್ಲಿ ಬಿಡುಗಡೆ ಮಾಡಿದ 'ಭಾರತದಲ್ಲಿನ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳು 2024' ರ ವರದಿಯ ಪ್ರಕಾರ, 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ 53 'ಮೆಗಾ ಸಿಟಿಗಳಲ್ಲಿ' ಆ ವರ್ಷ 69,378 ಆಕಸ್ಮಿಕ ಸಾವುಗಳು ದಾಖಲಾಗಿವೆ.

ನಗರ ನಿರ್ಮಾಣದ ಪ್ರಮುಖ ಮಾದರಿಯು ಉದ್ಯೋಗರಹಿತ ಬೆಳವಣಿಗೆ, ರಿಯಲ್ ಎಸ್ಟೇಟ್ ಉದ್ಯಮ ಮತ್ತು ಕ್ಷಿಪ್ರ ಸಂಚಾರಕ್ಕೆ ಆದ್ಯತೆ ನೀಡುತ್ತದೆಯೇ ವಿನಾಃ ಸುರಕ್ಷತೆ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಸಾರ್ವಜನಿಕ ಆರೋಗ್ಯವನ್ನು ನಿರ್ಲಕ್ಷಿಸುತ್ತದೆ. ಇದರ ಭೀಕರ ಪರಿಣಾಮಗಳು ಅಪಘಾತಗಳ ಅಂಕಿ-ಅಂಶಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ. ಅಗ್ನಿ ಅವಘಡಗಳಿಂದ ಸಂಭವಿಸುವ ಸಾವುಗಳು, ಹವಾಮಾನ ವೈಪರೀತ್ಯದ ದುರ್ಬಲತೆಗಳು ಮತ್ತು ಆತ್ಮಹತ್ಯೆಗಳು ಇದಕ್ಕೆ ಸಾಕ್ಷಿಯಾಗಿವೆ.

►ಸಾವಿಗೆ ಆಹ್ವಾನ ನೀಡುವ ರಸ್ತೆಗಳು

ಭಾರತದ "ಮೆಗಾ ಸಿಟಿಗಳಲ್ಲಿ" ಆಕಸ್ಮಿಕ ಸಾವುಗಳ ಪ್ರಮಾಣವು ಪ್ರತಿ ಲಕ್ಷ ಜನರಿಗೆ 43.2 ರಷ್ಟಿದ್ದು, ಇದು ಅಖಿಲ ಭಾರತ ಮಟ್ಟದ ಸರಾಸರಿ ಪ್ರಮಾಣವಾದ 33.3 ಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ.

ಈ ಸಾವುಗಳಲ್ಲಿ ಬಹುಪಾಲು ವಾಹನ ಅಪಘಾತಗಳಿಂದ ಸಂಭವಿಸಿವೆ ಎಂದು ವರದಿ ತಿಳಿಸಿದೆ. ದೇಶದ 53 ಮೆಗಾ ಸಿಟಿಗಳಲ್ಲಿ 73,426 ರಸ್ತೆ ಅಪಘಾತಗಳು, 63,519 ಗಾಯಗಳು ಮತ್ತು 17,797 ಸಾವುಗಳು ದಾಖಲಾಗಿವೆ. ಈ ರಸ್ತೆ ಅಪಘಾತಗಳಲ್ಲಿ ಶೇಕಡಾ 40.3 ರಷ್ಟು ನಗರ ಪ್ರದೇಶಗಳಲ್ಲಿಯೇ ಸಂಭವಿಸಿವೆ. ಇವುಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಅಪಘಾತಗಳು ವಸತಿ ಪ್ರದೇಶಗಳಲ್ಲಿ ಅಥವಾ ಅವುಗಳ ಹತ್ತಿರ ನಡೆದಿವೆ.

ಈ ರಸ್ತೆ ಅಪಘಾತಗಳು, ಮಾನವ ಜೀವಗಳಿಗಿಂತ ಕಾರುಗಳ ಸಂಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅಭಿವೃದ್ಧಿ ಮಾದರಿಯ ದುರಂತ ಲಕ್ಷಣಗಳಾಗಿವೆ. ಇಂತಹ ಅಪಘಾತಗಳಿಗೆ ಅತಿ ಹೆಚ್ಚು ಬಲಿಯಾಗುತ್ತಿರುವುದು ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು. ಭಾರತದ ನಗರಗಳಲ್ಲಿ ಬಹುತೇಕರು ನಡೆದುಕೊಂಡೇ ಓಡಾಡುತ್ತಿದ್ದರೂ ಸಹ, ಪಾದಚಾರಿಗಳ ಸಾವುಗಳ ಬಗ್ಗೆ ಸರಿಯಾದ ದಾಖಲಾತಿ ಮತ್ತು ವಿಶ್ಲೇಷಣೆಗಳು ನಡೆಯುತ್ತಿಲ್ಲ.

ಭಾರತದ ನಗರಗಳ ಪೈಕಿ ದಿಲ್ಲಿಯಲ್ಲಿ ಅತಿ ಹೆಚ್ಚು ರಸ್ತೆ ಅವಘಡದಲ್ಲಿ ಸಾವುಗಳು ಸಂಭವಿಸಿದ್ದು, ಜೈಪುರ ಮತ್ತು ಬೆಂಗಳೂರು ನಂತರದ ಸ್ಥಾನಗಳಲ್ಲಿವೆ. ಈ ಘಟನೆಗಳ ಪೈಕಿ ಶೇಕಡಾ 52.8 ರಷ್ಟು ಅತಿ ವೇಗದ ಚಾಲನೆಯಿಂದ, ಶೇಕಡಾ 30.1 ರಷ್ಟು ಅಪಾಯಕಾರಿ ಚಾಲನೆಯಿಂದ ಮತ್ತು ಕೇವಲ ಶೇಕಡಾ 2.6 ರಷ್ಟು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದರಿಂದ ಸಂಭವಿಸಿವೆ.

ರಸ್ತೆಗಳನ್ನು ಹೊರತುಪಡಿಸಿ, 2024 ರಲ್ಲಿ ರೈಲ್ವೆ ಹಳಿಗಳು ಮತ್ತು ರೈಲ್ವೆ ಆವರಣಗಳಲ್ಲಿ 25,000 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 22,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಇವುಗಳಲ್ಲಿ ಬಹುತೇಕ ಸಾವುಗಳು ಜನರು ಚಲಿಸುವ ರೈಲಿನಿಂದ ಕೆಳಗೆ ಬಿದ್ದಿರುವುದರಿಂದ ಅಥವಾ ಹಳಿಗಳನ್ನು ದಾಟುವಾಗ ರೈಲು ಢಿಕ್ಕಿ ಹೊಡೆದಿದ್ದರಿಂದ ಸಂಭವಿಸಿವೆ. ಈ ಅಂಕಿ-ಅಂಶಗಳು ನಮ್ಮ ಸಾರಿಗೆ ಯೋಜನೆ ಮತ್ತು ಸುರಕ್ಷತಾ ವ್ಯವಸ್ಥೆಗಳ ಸಂಪೂರ್ಣ ವೈಫಲ್ಯವನ್ನು ಎತ್ತಿ ತೋರಿಸುತ್ತವೆ.

ಲಕ್ನೋ ಕೋಚಿಂಗ್ ಸೆಂಟರ್‌ನ ಅಗ್ನಿ ಅವಘಡವು ನಗರ ಪ್ರದೇಶದ ಮತ್ತೊಂದು ದೊಡ್ಡ ಅಪಾಯವನ್ನು ಎತ್ತಿ ತೋರಿಸುತ್ತದೆ. ಅದುವೇ ಅಸುರಕ್ಷಿತ ಕಟ್ಟಡಗಳು. 2024 ರಲ್ಲಿ ಭಾರತದಲ್ಲಿ 5,971 ಅಗ್ನಿ ಅವಘಡಗಳು ಸಂಭವಿಸಿದ್ದು, 5,888 ಸಾವುಗಳು ದಾಖಲಾಗಿವೆ. ಈ ಪೈಕಿ ಶೇಕಡಾ 60 ಕ್ಕೂ ಹೆಚ್ಚು ಸಾವುಗಳು ವಸತಿ ಮತ್ತು ವಾಸದ ಮನೆಗಳಲ್ಲಿಯೇ ಸಂಭವಿಸಿವೆ.

ಕಾನೂನುಬಾಹಿರ ನಿರ್ಮಾಣ, ಕಳಪೆ ನಿರ್ವಹಣೆ, ಮಿತಿಮೀರಿದ ಜನಸಂದಣಿ, ಅಸಮರ್ಪಕ ಅಗ್ನಿ ಸುರಕ್ಷತಾ ಕ್ರಮಗಳು, ಮುಚ್ಚಿಹೋದ ತುರ್ತು ನಿರ್ಗಮನ ದಾರಿಗಳು ಮತ್ತು ಕಟ್ಟಡ ನಿಯಮಗಳ ಸಡಿಲ ಜಾರಿ ಇಂತಹ ಸಾವುಗಳಿಗೆ ಪ್ರಮುಖ ಕಾರಣಗಳಾಗುತ್ತವೆ. ಇಂತಹ ನಗರ ಪರಿಸರದಲ್ಲಿ ಒಂದು ಸಣ್ಣ ಕಿಡಿಯೂ ಸಹ ಭಾರೀ ಹಾನಿಗೆ ಕಾರಣವಾಗಬಹುದು.

►ಆತ್ಮಹತ್ಯೆ ಮತ್ತು ತಲ್ಲಣ

ಆಕಸ್ಮಿಕ ಸಾವುಗಳು ಭೌತಿಕ ಮೂಲಸೌಕರ್ಯಗಳ ವೈಫಲ್ಯವನ್ನು ಎತ್ತಿ ತೋರಿಸಿದರೆ, ವರದಿಯಲ್ಲಿನ ಆತ್ಮಹತ್ಯೆ ಪ್ರಮಾಣಗಳು ನಗರ ಜೀವನದ ಸಾಮಾಜಿಕ ಮತ್ತು ಆರ್ಥಿಕ ತಲ್ಲಣಗಳನ್ನು ಬಹಿರಂಗಪಡಿಸುತ್ತವೆ. ಮಾಹಿತಿಯ ಪ್ರಕಾರ, 2024 ರಲ್ಲಿ ನಗರಗಳಲ್ಲಿನ ಆತ್ಮಹತ್ಯೆ ಪ್ರಮಾಣವು ಪ್ರತಿ ಲಕ್ಷ ಜನಸಂಖ್ಯೆಗೆ 16.3 ರಷ್ಟಿತ್ತು, ಇದು ರಾಷ್ಟ್ರೀಯ ಸರಾಸರಿ 12.2 ಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ.

ಭಾರತದಲ್ಲಿ ವರದಿಯಾದ ಒಟ್ಟು 1,70,746 ಆತ್ಮಹತ್ಯೆಗಳ ಪೈಕಿ 26,150 ಸಾವುಗಳು 53 ಮೆಗಾ ಸಿಟಿಗಳಲ್ಲಿ ಸಂಭವಿಸಿವೆ. ದಿಲ್ಲಿ, ಬೆಂಗಳೂರು, ಚೆನ್ನೈ ಮತ್ತು ಮುಂಬೈ ನಗರಗಳಲ್ಲೇ ಇಂತಹ ಒಟ್ಟು ಸಾವುಗಳ ಪೈಕಿ ಸುಮಾರು ಮೂರನೇ ಒಂದು ಭಾಗದಷ್ಟು ಪ್ರಕರಣಗಳು ದಾಖಲಾಗಿವೆ.

ಆತ್ಮಹತ್ಯೆ ಮಾಡಿಕೊಂಡವರಲ್ಲಿ ದಿನಗೂಲಿ ನೌಕರರು ಅತಿ ದೊಡ್ಡ ಗುಂಪಾಗಿದ್ದು, ಅವರ ನಂತರದ ಸ್ಥಾನಗಳಲ್ಲಿ ಸ್ವಯಂ ಉದ್ಯೋಗಿಗಳು, ಸಂಬಳ ಪಡೆಯುವ ಉದ್ಯೋಗಿಗಳು, ನಿರುದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿದ್ದಾರೆ.

ನಗರಗಳು ಲಕ್ಷಾಂತರ ಕಾರ್ಮಿಕರಿಗೆ ಮತ್ತು ವಲಸಿಗರಿಗೆ ಅವಕಾಶಗಳನ್ನು ನೀಡುತ್ತವೆ ನಿಜ, ಆದರೆ ಇದರೊಂದಿಗೆ ಅಸುರಕ್ಷತೆ, ಅಸ್ಥಿರ ಉದ್ಯೋಗ, ಹೆಚ್ಚುತ್ತಿರುವ ಜೀವನ ವೆಚ್ಚ, ಸಾಲದ ಹೊರೆ ಮತ್ತು ಕಳಪೆ ಸಾಮಾಜಿಕ ರಕ್ಷಣೆಯನ್ನೂ ತಂದೊಡ್ಡುತ್ತವೆ. ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದವರಲ್ಲಿ ಕಂಡುಬರುವ ಆತ್ಮಹತ್ಯೆಗಳು ಕೇವಲ ಮಾನಸಿಕ ಆರೋಗ್ಯದ ಸಮಸ್ಯೆಯಷ್ಟೇ ಅಲ್ಲ, ಅವು ನಗರ ಅಭಿವೃದ್ಧಿಯ ಸ್ವರೂಪಕ್ಕೂ ನೇರವಾಗಿ ಸಂಬಂಧಿಸಿವೆ.

►ಹವಾಮಾನ ಬದಲಾವಣೆಗೆ ತುತ್ತಾಗುವ ಅಪಾಯದ ಸ್ಥಿತಿ

ಈ ವರದಿಯು ಕೇವಲ ಭಾಗಶಃ ಚಿತ್ರಣವನ್ನು ನೀಡುವ ಒಂದು ಕ್ಷೇತ್ರವೆಂದರೆ ಅದು ಹವಾಮಾನ ಸಂಬಂಧಿತ ಸಾವುಗಳು.ಬಿಸಿಲಾಘಾತ, ಚಳಿ, ಪ್ರವಾಹ, ಮಿಂಚು ಮತ್ತು ಇತರ ಪರಿಸರ ಕಾರಣಗಳಿಂದ ಸಂಭವಿಸುವ ಸಾವುಗಳನ್ನು ವರದಿಯಲ್ಲಿ "ಪ್ರಕೃತಿಯ ವಿಕೋಪಗಳು" ಅಡಿಯಲ್ಲಿ ಪಟ್ಟಿ ಮಾಡಲಾಗಿದೆ. 2024 ರಲ್ಲಿ ಮೆಗಾ ಸಿಟಿಗಳಲ್ಲಿ ಇಂತಹ 917 ಸಾವುಗಳು ಸಂಭವಿಸಿದ್ದು, ಬಿಸಿಲಾಘಾತ ಮತ್ತು ವಿಪರೀತ ಚಳಿ ಇದಕ್ಕೆ ಮುಖ್ಯ ಕಾರಣಗಳಾಗಿವೆ.

ಆದರೆ ಈ ವರ್ಗೀಕರಣವು ಸಮರ್ಪಕವಾಗಿಲ್ಲ. ಬಿಸಿಲಿನಿಂದ ಸಂಭವಿಸುವ ಸಾವುಗಳು ವರದಿಯಾಗುವುದು ತೀರಾ ಕಡಿಮೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದಲ್ಲದೆ, ಮಾಲಿನ್ಯ ಸಂಬಂಧಿತ ಸಾವುಗಳನ್ನು ಈ ವರದಿಯು ಲೆಕ್ಕಕ್ಕೆ ತೆಗೆದುಕೊಂಡಿಲ್ಲ.

ಹವಾಮಾನ ಸಂಬಂಧಿತ ಸಾವುಗಳು ನಗರಾಭಿವೃದ್ಧಿ ಯೋಜನೆಗಳ ನಿರ್ಧಾರಗಳು, ವಸತಿ ಪರಿಸ್ಥಿತಿಗಳು, ಸೌಲಭ್ಯಗಳ ಲಭ್ಯತೆ ಮತ್ತು ಸಾಮಾಜಿಕ ಆರ್ಥಿಕ ಅಸಮಾನತೆಗಳಿಂದ ತೀವ್ರವಾಗಿ ಪ್ರಭಾವಿತವಾಗಿರುತ್ತವೆ. ಹವಾಮಾನ ಬದಲಾವಣೆ ತೀವ್ರಗೊಂಡಂತೆ ಇಂತಹ ಅಪಾಯಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಈ ಸಾವುಗಳಿಗೆ "ಪ್ರಕೃತಿಯ ವಿಕೋಪಗಳು" ಕಾರಣ ಎಂದು ಹೇಳುವ ವರದಿಯ ಧೋರಣೆಯು ಕಳಪೆ ಆಡಳಿತ, ದೋಷಪೂರಿತ ಯೋಜನೆ ಮತ್ತು ಸಾರ್ವಜನಿಕ ನೀತಿಗಳ ಪಾತ್ರವನ್ನು ಮರೆಮಾಚುತ್ತದೆ. ಈ ಸಾವುಗಳು ಪರಿಸರದ ವಿದ್ಯಮಾನಗಳಷ್ಟೇ ಮಾನವ ನಿರ್ಮಿತ ವ್ಯವಸ್ಥೆಗಳ ವೈಫಲ್ಯಗಳೂ ಆಗಿವೆ.

ನಗರೀಕರಣದ ಕುರಿತಾದ ಬಹುತೇಕ ನೀತಿ ಚರ್ಚೆಗಳು ಆಡಳಿತಾತ್ಮಕ ವೈಫಲ್ಯಗಳು, ಮೂಲಸೌಕರ್ಯಗಳ ಕೊರತೆ ಅಥವಾ ಆರ್ಥಿಕ ಸ್ಪರ್ಧಾತ್ಮಕತೆಯ ಮೇಲಷ್ಟೇ ಗಮನ ಹರಿಸುತ್ತವೆ. ಈ ಕಳಕಳಿಗಳು ಸಮಂಜಸವಾಗಿದ್ದರೂ, ಅವು ಒಂದು ಮೂಲಭೂತ ಸತ್ಯವನ್ನು ಮರೆಮಾಚುತ್ತವೆ. ಅದೇನೆಂದರೆ ನಗರಗಳನ್ನು ರೂಪಿಸುತ್ತಿರುವ, ಆಳುತ್ತಿರುವ ಮತ್ತು ನಿರ್ವಹಿಸುತ್ತಿರುವ ದೋಷಪೂರಿತ ವಿಧಾನದಿಂದಾಗಿಯೇ ನಗರವಾಸಿಗಳು ಆತಂಕಕಾರಿ ದರದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ನಗರೀಕರಣದ ಈ ಬಿಕ್ಕಟ್ಟನ್ನು ಪರಿಹರಿಸಲು ಭಾರತಕ್ಕೆ ವಿಭಿನ್ನವಾದ ನಗರಾಭಿವೃದ್ಧಿ ಕಾರ್ಯಸೂಚಿಯ ಅಗತ್ಯವಿದೆ. ನಗರಗಳು ವೇಗಕ್ಕಿಂತ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು, ಕಾರುಗಳ ಬಳಕೆಯನ್ನು ಕಡಿಮೆ ಮಾಡಬೇಕು ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಹೂಡಿಕೆ ಮಾಡಬೇಕು. ಇದರೊಂದಿಗೆ ಪಾದಚಾರಿ ಮೂಲಸೌಕರ್ಯ, ಸೈಕ್ಲಿಂಗ್ ಜಾಲಗಳು ಮತ್ತು ವಾಹನಗಳ ವೇಗವನ್ನು ನಿಯಂತ್ರಿಸಿ ಸುರಕ್ಷತೆಯನ್ನು ಹೆಚ್ಚಿಸುವಂತಹ ರಸ್ತೆ ವಿನ್ಯಾಸಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.

ಕಟ್ಟಡ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿದೆ. ಅಲ್ಪಾವಧಿಯ ಕ್ರಮವಾಗಿ, ಅನಧಿಕೃತ ವಸತಿ ಪ್ರದೇಶಗಳನ್ನು ಸಂಪೂರ್ಣವಾಗಿ ಕಾನೂನುಬಾಹಿರ ಎಂದು ಹಣೆಪಟ್ಟಿ ಕಟ್ಟುವ ಬದಲು, ಅಲ್ಲಿನ ಬಹುಪಾಲು ಜನವಸತಿಗಳ ಅಗತ್ಯತೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಿಯಮಾವಳಿಗಳನ್ನು ರೂಪಿಸಬೇಕಿದೆ.

ದೀರ್ಘಾವಧಿಯಲ್ಲಿ, ಇಂತಹ ಅನಧಿಕೃತ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸೂಕ್ತ ವಸತಿ ಸೌಕರ್ಯ ಕಲ್ಪಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು. ತಾಪಮಾನ ನಿಯಂತ್ರಣ ಯೋಜನೆಗಳು , ಕೂಲಿಂಗ್ ಮೂಲಸೌಕರ್ಯ, ನಗರಾಭಿವೃದ್ಧಿಯಲ್ಲಿ ಹಸಿರೀಕರಣ ಮತ್ತು ಸುಧಾರಿತ ಪರಿಸರ ಉಸ್ತುವಾರಿ ವ್ಯವಸ್ಥೆಗಳ ಮೂಲಕ ನಗರ ನೀತಿಗಳು ಹವಾಮಾನ ವೈಪರೀತ್ಯವನ್ನು ತಡೆದುಕೊಳ್ಳುವ ಶಕ್ತಿಯನ್ನು ವೃದ್ಧಿಸಬೇಕಾಗಿದೆ.

ಅದೇ ಸಮಯದಲ್ಲಿ, ಉದ್ಯೋಗ ಸೃಷ್ಟಿ, ಕಾರ್ಮಿಕರ ರಕ್ಷಣೆಯ ಬಲವರ್ಧನೆ, ಕೈಗೆಟುಕುವ ದರದಲ್ಲಿ ವಸತಿ ಸೌಕರ್ಯ, ಸುಲಭವಾಗಿ ಲಭ್ಯವಾಗುವ ಮಾನಸಿಕ ಆರೋಗ್ಯ ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳ ವಿಸ್ತರಣೆಯ ಮೂಲಕ ನಗರಗಳು ಆತ್ಮಹತ್ಯೆಗೆ ಪ್ರೇರೇಪಿಸುವ ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳನ್ನು ಎದುರಿಸಬೇಕಾಗಿದೆ.

ಲಕ್ನೋದ ಅಗ್ನಿ ದುರಂತವು ಆ 15 ಜೀವಗಳ ನಷ್ಟವನ್ನು ತಡೆಯಬಹುದಿತ್ತು ಎಂಬುದನ್ನು ನೆನಪಿಸುತ್ತದೆ. ಆದರೆ ಇಂತಹ ಘಟನೆಗಳ ತಡೆಗಟ್ಟುವಿಕೆಗೆ ಸಮಸ್ಯೆಯ ತೀವ್ರತೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ನಮ್ಮ ನಗರಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಮತ್ತು ಯಾರನ್ನು ರಕ್ಷಿಸಲು ವಿಫಲವಾಗುತ್ತಿವೆ ಎಂಬುದರ ಕುರಿತು ಆಳವಾದ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಜವಾಬ್ದಾರಿ ಭಾರತದ ಮೇಲಿದೆ.

ಕೃಪೆ: scroll.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News