Uttar Pradesh | ಅಪ್ರಾಪ್ತ ಪುತ್ರ ಚಲಾಯಿಸುತ್ತಿದ್ದ ಕಾರು ಅಪಘಾತ; ‘ಚಲ್ತಾ ಹೈ’ ಎಂದ ತಾಯಿ ವಿರುದ್ಧ ಜನರಿಂದ ಆಕ್ರೋಶ
Photo Credit : NDTV
ನೊಯ್ಡಾ: 15 ವರ್ಷದ ಅಪ್ರಾಪ್ತ ಪುತ್ರನಿಗೆ ಕಾರು ಚಲಾಯಿಸಲು ಸೂಚಿಸಿದ ಮಹಿಳೆಯೊಬ್ಬರು, ಆತ ಚಲಾಯಿಸುತ್ತಿದ್ದ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಬಳಿಕವೂ ಪುತ್ರನ ಕ್ರಮವನ್ನು ಸಮರ್ಥಿಸಿಕೊಂಡಿರುವ ಘಟನೆ ನೊಯ್ಡಾದಲ್ಲಿ ನಡೆದಿದೆ. ಅಪಘಾತದ ಬಳಿಕ ಮಹಿಳೆ ‘ಚಲ್ತಾ ಹೈ’ (ನಡೆಯುತ್ತದೆ) ಎಂದು ಹೇಳಿರುವುದು ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಮನೆಯಿಂದ ಹೊರಗೆ ತೆರಳಲು ತನ್ನ ಪುತ್ರನಿಗೆ ಕಾರು ಚಲಾಯಿಸುವಂತೆ ಮಹಿಳೆ ಸೂಚಿಸಿದ್ದರು ಎನ್ನಲಾಗಿದೆ. ಅವರ ನಿಯಮಿತ ಚಾಲಕ ರಜೆಯಲ್ಲಿದ್ದ ಕಾರಣ, ತಾನೇ ಪುತ್ರನಿಗೆ ಕಾರು ಚಲಾಯಿಸಲು ಹೇಳಿದ್ದಾಗಿ ಮಹಿಳೆ ತಿಳಿಸಿದ್ದಾರೆ.
ದಾರಿ ಮಧ್ಯೆ ಬಾಲಕ ಚಲಾಯಿಸುತ್ತಿದ್ದ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಬಾಲಕ ಹಾಗೂ ಆತನ ತಾಯಿ ಸ್ಥಳದಿಂದ ತೆರಳಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಮಧ್ಯಪ್ರವೇಶಿಸಿ ಕಾರನ್ನು ತಡೆದು ಇಬ್ಬರನ್ನೂ ಪ್ರಶ್ನಿಸಿದ್ದಾರೆ.
ಬಾಲಕನ ವಯಸ್ಸು ಹಾಗೂ ಚಾಲನಾ ಪರವಾನಗಿ ಕುರಿತು ಸ್ಥಳೀಯರು ಪ್ರಶ್ನಿಸಿದಾಗ, 15 ವರ್ಷದ ಬಾಲಕನ ಬಳಿ ಚಾಲನಾ ಪರವಾನಗಿ ಇಲ್ಲ ಎಂಬುದು ತಿಳಿದುಬಂದಿದೆ. ಇದನ್ನು ಬಾಲಕ ಹಾಗೂ ಆತನ ತಾಯಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಸ್ಥಳೀಯರು ಹಾಗೂ ಮಹಿಳೆಯ ನಡುವಿನ ಮಾತಿನ ಚಕಮಕಿಯ ವೇಳೆ, ಮಹಿಳೆ ಯಾವುದೇ ಪಶ್ಚಾತ್ತಾಪವಿಲ್ಲದೆ ಪುತ್ರನ ಕ್ರಮವನ್ನು ‘ಚಲ್ತಾ ಹೈ’ (ನಡೆಯುತ್ತದೆ) ಎಂದು ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕೆಲ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಆದರೆ, ಈ ಸಂಬಂಧ ಅಧಿಕೃತ ದೂರು ದಾಖಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಮಹಿಳೆಯ ಧೋರಣೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಜನರು ತೀವ್ರವಾಗಿ ಟೀಕಿಸಿದ್ದಾರೆ. ಅಪಘಾತ ಮತ್ತಷ್ಟು ಗಂಭೀರವಾಗಿದ್ದರೆ ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಬಹುದಿತ್ತು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅಪ್ರಾಪ್ತನಿಗೆ ಚಾಲನಾ ಪರವಾನಗಿ ಇಲ್ಲದಿದ್ದರೂ ವಾಹನ ಚಲಾಯಿಸಲು ಅವಕಾಶ ನೀಡಿರುವುದನ್ನೂ ಪ್ರಶ್ನಿಸಿದ್ದಾರೆ.