ಸಂವಿಧಾನ ಮನೆ: ಮನಸ್ಸು ಕಟ್ಟುವ ‘ಮೇ ಗೆಳೆಯರ ಬಳಗ’
ಲಡಾಯಿ ಪ್ರಕಾಶನದ ಬಸೂ ಯಾರಿಗೆ ಗೊತ್ತಿಲ್ಲ. ಬಸೂ ಸ್ವತಃ ಕವಿ, ಲೇಖಕ, ಸಂಘಟಕ. ವಿಶೇಷವಾಗಿ ಇಡೀ ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತಿಗೆ ಹೆಚ್ಚು ಪರಿಚಿತವಾಗಿರುವುದು ಪ್ರಕಾಶಕರಾಗಿ. ಇವರ ಲಡಾಯಿ ಪ್ರಕಾಶನದಿಂದ ಸುಮಾರು 300ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರ ಪ್ರಕಟಿತ ಪುಸ್ತಕಗಳು ವಿಶೇಷವಾಗಿ ಪ್ರಗತಿಪರ ಚಿಂತನೆಗಳಿರುವ ಮಾನವೀಯ ಹೋರಾಟಗಳಿಗೆ ಮುನ್ನುಡಿಯಾಗುವಂತಹವು. ಲಡಾಯಿ ಪ್ರಕಾಶನದ ಪುಸ್ತಕಗಳು ಪ್ರಸಿದ್ಧರು ಪ್ರತಿಭಾವಂತರಿಂದ ಹಿಡಿದು ಹೊಸ ತಲೆಮಾರಿನ ತರುಣ-ತರುಣಿಯರ ಕತೆ, ಕಾವ್ಯ, ಕಾದಂಬರಿ, ವಿಚಾರ ವಿಮರ್ಶೆಗಳನ್ನು ಒಳಗೊಂಡಿದ್ದು ಅದರ ಆಶಯ ಸಮಸಮಾಜವನ್ನು ನಿರ್ಮಿಸುವುದೇ ಆಗಿದೆ. ಬಸೂ ಸಮಸಮಾಜದ ನಿರ್ಮಾಣದ ಸಿದ್ಧಾಂತಕ್ಕೆ ಬದ್ಧರಾಗಿರುವ ಪುಸ್ತಕ ಪರಿಚಾರಕರಾಗಿ ನಮ್ಮ ಭಾರತ ದೇಶದ ಮತ್ತು ಪಾಶ್ಚಿಮಾತ್ಯ ದೇಶದ ಹೆಸರಾಂತ ಲೇಖಕರ ಕಥೆ, ಕವಿತೆ, ಆತ್ಮಕಥೆ ಇತ್ಯಾದಿಗಳನ್ನು ಕೂಡ ಪ್ರಕಟಿಸಿದ್ದಾರೆ. ವಿವಿಧ ಭಾಷೆಗಳಲ್ಲಿರುವ ಅತ್ಯುತ್ತಮ ಎನಿಸುವ ಸೃಜನಶೀಲ ಬರವಣಿಗೆಯನ್ನು ಭಾಷಾಂತರ, ಅನುವಾದ ಮಾಡಿಸಿದ್ದಾರೆ. ಇವರು ಪ್ರಕಟಿಸಿರುವ ಅನೇಕ ಪುಸ್ತಕಗಳಿಗೆ ಪ್ರಮುಖ ಪ್ರಶಸ್ತಿಗಳು, ರಾಜ್ಯ ಸರಕಾರದ ಮನ್ನಣೆಗಳು, ಅಕಾಡಮಿ ಪ್ರಶಸ್ತಿಗಳು ಸಂದಿವೆ. ಇವರ ಮುದ್ರಣ ಅಚ್ಚುಕಟ್ಟು ಮತ್ತು ಒಳ್ಳೆಯ ಮುಖಪುಟವಿರುವ ಪುಸ್ತಕಗಳನ್ನು ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಓದುವ ಆಸೆಯನ್ನು ಹುಟ್ಟಿಸುತ್ತದೆ. ಇದು ಅವರಿಗೆ ಪುಸ್ತಕಗಳ ಮೇಲಿರುವ ಪ್ರೀತಿಯಿಂದ ಮಾತ್ರ ಸಾಧ್ಯ. ಬಸೂ ಪುಸ್ತಕ ಪ್ರಕಟಣೆಯನ್ನು ಅಭಿರುಚಿಯಿಂದಾಗಿ ಪ್ರಾರಂಭಿಸಿ ಈಗ ಅದನ್ನು ವ್ಯಾವಹಾರಿಕವಾಗಿಯೂ ಉದ್ಯಮದಂತೆ ಬೆಳೆಸಿದ್ದಾರೆ. ಒಳ್ಳೆಯ ಉದೇಶಕ್ಕಾಗಿ ಹೆಚ್ಚು ಪುಸ್ತಕಗಳನ್ನು ಕೊಳ್ಳುವವರಿಗೆ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಕೊಡುತ್ತಾರೆ.
ಹೀಗೆ ಹತ್ತು ಹಲವಾರು ಕಾರಣಕ್ಕೆ ಲಡಾಯಿ ಪ್ರಕಾಶನದ ಬಸೂ ಅನೇಕರಿಗೆ ಅಚ್ಚುಮೆಚ್ಚು. ಇವರು ಸಂಘಟನೆಯಲ್ಲೂ ನಿಸ್ಸೀಮರು. ಪ್ರತಿ ವರ್ಷ ಮೇ ತಿಂಗಳಲ್ಲಿ ಸಾಹಿತ್ಯದ ಮೂಲಕವಾಗಿ ವೈಚಾರಿಕ ಅರಿವಿನ ಸಮ್ಮೇಳನ ಮಾಡುತ್ತಾರೆ. ಈ ಕಾರ್ಯಕ್ರಮವನ್ನು ಮಾಡುವ ಮುಖಾಂತರ ಹೊಸ ತಲೆಮಾರಿನ ತರುಣ ತರುಣಿಯರಿಗೆ ‘ಅನುಭವ ಮಂಟಪ’ದ ರೀತಿ ಅರಿವನ್ನು ಹೆಚ್ಚಿಸುತ್ತಾರೆ. ತಾನು ಎಡಪಂಥೀಯ ಎಂದು ಹೆಮ್ಮೆ ಪಡುವ ಬಸೂ ಅವರ ಮೇ ಸಮ್ಮೇಳನದ ಉದ್ದೇಶ ಬುದ್ಧ, ಬಸವ , ಅಂಬೇಡ್ಕರ್, ಕುವೆಂಪು ಅವರಂತಹ ಸಮಾನತೆಯನ್ನು ಪ್ರತಿಪಾದಿಸಿದವರನ್ನು ಯುವಪೀಳಿಗೆಗೆ ಸತ್ಯದ ಮೂಲಕ ಪರಿಚಯಿಸುವುದು ಮತ್ತು ಸಮ್ಮೇಳನದಲ್ಲಿ ಎಲ್ಲಾ ಧರ್ಮೀಯರು ಒಳಗೊಳ್ಳುವುದು. ಇವರ ಕಾರ್ಯಕ್ರಮದಲ್ಲಿ ‘ಪ್ರಜಾಪ್ರಭುತ್ವ ಮತ್ತು ಸಂವಿಧಾನ’ ಕುರಿತು ಜಾಗೃತಿ ಇದ್ದೇ ಇರುತ್ತದೆ. ಇಷ್ಟೆಲ್ಲಾ ಪೀಠಿಕೆಗೆ ಕಾರಣ ಮೇ ಗೆಳೆಯರ ಬಳಗದಿಂದ ವಿಜಯಪುರದಲ್ಲಿ ಒಂದು ಸಂವಿಧಾನ ಮನೆ ಎಂದು ಕಟ್ಟುತ್ತಿದ್ದಾರೆ. ಈ ಮನೆ ನಮ್ಮೆಲ್ಲರ ಪ್ರೀತಿಯ ಲೇಖಕರು, ಅನುವಾದಕರು, ಹೋರಾಟಗಾರರು ಆಗಿರುವ ಅನಿಲ್ ಹೊಸಮನಿಯವರ ಮನೆ. ಈ ಮನೆಯ ಸುತ್ತಳತೆ 15-35. ಹಿಂದೆ ಇವರ ತಂದೆ ಚಂದ್ರಶೇಖರ್ ಹೊಸಮನಿಯವರು ಈ ಪುಟ್ಟ ಸುತ್ತಳತೆ ಮನೆಯಲ್ಲಿಯೇ ಸಂಸಾರದ ಜೊತೆಗೆ ವಾರಪತ್ರಿಕೆಯ ಪ್ರಿಂಟಿಂಗ್ ಮಿಷನ್ ಕೂಡ ನಡೆಸುತ್ತಿದ್ದರು. ಅದನ್ನು ಅನಿಲ್ ಹೊಸಮನಿಯವರು ಮುಂದುವರಿಸಿದ್ದಾರೆ. ಈ ಮನೆಯೇ ಈಗ ಸಂವಿಧಾನದ ಮನೆಯಾಗುತ್ತಿದೆ. ಮನೆ ಚಿಕ್ಕದೋ? ದೊಡ್ಡದೋ? ಪ್ರಶ್ನೆಯಲ್ಲ. ತಾನು ನಂಬಿದ ವಿಚಾರಗಳಿಗೆ ಮನಸ್ಸು ಕೊಟ್ಟಿದ್ದ ಅನಿಲ್ ಹೊಸಮನಿಯವರಿಗೆ ಮೇ ಗೆಳೆಯರೆಲ್ಲ ಸೇರಿ ಒಂದು ಮನೆ ಕಟ್ಟಿಸಿಕೊಡುತ್ತಿದ್ದಾರೆ. ಈ ಸಂವಿಧಾನ ಮನೆ ಕಟ್ಟುವ ಆಶಯ ಮತ್ತು ಕನಸು ಮನಸ್ಸುಗಳನ್ನು ಕಟ್ಟುವುದು.
ಇತ್ತೀಚಿನ ದಿನಗಳಲ್ಲಿ ‘ಪ್ರಜಾಪ್ರಭುತ್ವ ಮತ್ತು ಸಂವಿಧಾನ’ ಹೆಚ್ಚು ಹೆಚ್ಚು ಜನಸಾಮಾನ್ಯರೊಳಗೆ ಪ್ರವೇಶ ಪಡೆಯುತ್ತಿದೆ. ಕಳೆದೆರಡು ವರ್ಷಗಳಿಂದ ಕರ್ನಾಟಕ ಸರಕಾರವೇ ಸಂವಿಧಾನದ ಪ್ರಸ್ತಾವನೆಯನ್ನು ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ಅವರೆದೆಗೆ ಇಳಿಸುವ ಪ್ರಯತ್ನ ಮಾಡುತ್ತಿದೆ. ಈ ರೀತಿ ಬಹಳ ದೊಡ್ಡ ಜಾಗೃತಿಯನ್ನು ಉಂಟುಮಾಡುತ್ತಿದೆ. ನಮಗೆ ನಾವೇ ಅರ್ಪಿಸಿಕೊಂಡ ಸಂವಿಧಾನದ ಬಗ್ಗೆ ಜನರೊಳಗೆ ತಿಳುವಳಿಕೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮೇ ಗೆಳೆಯರ ಬಳಗ ಒಂದು ಪುಟ್ಟ ಮನೆ ಕಟ್ಟಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಡಾ. ಭೀಮಸಾಹೇಬ ಅಂಬೇಡ್ಕರ್ ಅವರು ಪ್ರಾರಂಭಿಸಿದ್ದ ವಿಮೋಚನಾ ಚಳವಳಿಯಿಂದ ಪ್ರಭಾವಿತರಾದ ಮುಂಬೈ ಕರ್ನಾಟಕ ಭಾಗದ ಅನೇಕರು ಅವರ ಹೋರಾಟಕ್ಕೆ ಕೈ ಜೋಡಿಸಿದ್ದರು. ಅಂತಹವರಲ್ಲಿ ಚಂದ್ರಶೇಖರ್ ಹೊಸಮನಿಯವರು ಒಬ್ಬರು. ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಭೀಮ ಸಾಹೇಬರಿಂದ ಪ್ರೇರಿತರಾಗಿದ್ದ ಅವರು ವಿಜಯಪುರ ಜಿಲ್ಲೆಯಲ್ಲಿ ಅಂಬೇಡ್ಕರ್ ಚಳವಳಿಯು ಗಟ್ಟಿಗೊಳಿಸುವುದಕ್ಕಾಗಿ ಇಡೀ ಬದುಕನ್ನು ಮುಡಿಪಾಗಿಟ್ಟರು. 70ರ ದಶಕದಲ್ಲಿ ‘ಪರಿವರ್ತಕ’ ಎಂಬ ಹೆಸರಿನ ವಾರಪತ್ರಿಕೆಯನ್ನು ಪ್ರಾರಂಭಿಸಿ ಅದರ ಮೂಲಕ ಭಗವಾನ್ ಬುದ್ಧರ ಮತ್ತು ಡಾ. ಭೀಮಸಾಹೇಬ್ ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳನ್ನು ಮನೆ ಮನೆಗೆ ತಲುಪಿಸುವ ಮಹತ್ಕಾರ್ಯವನ್ನು ಕೈಗೆತ್ತಿಕೊಂಡರು. ಭೀಮ ಸಾಹೇಬರ ವಿಚಾರಧಾರೆಯ ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದರೂ ಆ ಕೃತಿಗಳು ಈಗ ಲಭ್ಯವಿಲ್ಲ. ಅವರ ನಂತರದ ದಿನಗಳಲ್ಲಿ ಇದೇ ಕೆಲಸವನ್ನು ಅವರ ಪ್ರೀತಿಯ ಮಗ ಅನಿಲ್ ಹೊಸಮನಿ ಮುಂದುವರಿಸಿದ್ದಾರೆ. ಈ ಪತ್ರಿಕೆಗಳ ಜೊತೆಗೆ ‘ದಮ್ಮ ಚಕ್ರ ಪರಿವರ್ತನಾ ಪಾಕ್ಷಿಕ ಮತ್ತು ಬಹುಜನ ನಾಯಕ ದಿನಪತ್ರಿಕೆ’ ಅವರೇ ಸ್ವಂತವಾಗಿ ಆರಂಭಿಸಿದ ಪತ್ರಿಕೆಗಳಾಗಿರುತ್ತವೆ. ಧ್ವನಿ ಇಲ್ಲದವರಿಗೆ ಧ್ವನಿಯಾಗುವ ಅಕ್ಷರಸ್ಥರಿಗೂ ಅನಕ್ಷರಸ್ಥರಿಗೂ ನಾಳಿನ ಕನಸುಗಳನ್ನು ಬಿತ್ತುವ ಸಂಘಟನೆ ಮತ್ತು ಪತ್ರಿಕೆ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಕೆಲಸಗಳನ್ನು ಒಂದು ಪುಟ್ಟ ಮನೆಯಲ್ಲಿ ಸಂಸಾರದೊಟ್ಟಿಗೆ ಪತ್ರಿಕಾ ಕೆಲಸಗಳನ್ನೂ ಮಾಡುತ್ತಿರುವ ಅನಿಲ್ ಹೊಸಮನೆ ಈ ನಾಡಿನ ಸಾಕ್ಷಿಪ್ರಜ್ಞೆಯಾಗಿದ್ದಾರೆ ಮತ್ತು ಇವತ್ತು 50 ವರ್ಷಗಳು ತುಂಬಿರುವ ದಲಿತ ಸಂಘರ್ಷ ಸಮಿತಿ ಜೊತೆ ನಿರಂತರವಾಗಿದ್ದಾರೆ. ಇವತ್ತಿಗೂ ‘ಬಹುಜನ ನಾಯಕ-ದಿನಪತ್ರಿಕೆ’ ವಿಜಯಪುರ ಜಿಲ್ಲೆಯಲ್ಲಿ ಹೊಸ ಹೊಸ ಚಿಂತನೆಗಳೊಂದಿಗೆ ಸಾಗುತ್ತಿದೆ. ಅನಿಲ್ ಹೊಸಮನಿಯವರು ಬುದ್ಧ, ಬಸವ, ಅಂಬೇಡ್ಕರ್ ಸಿದ್ಧಾಂತ ಮತ್ತು ಸಂದೇಶಗಳನ್ನು ಜನರಿಗೆ ತಲುಪಿಸುವ ಗುರಿಯೊಂದಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಮೂಲತಃ ಲೇಖಕರಾದ ಅನಿಲ್ ಹೊಸಮನಿಯವರು ಬುದ್ಧಮಾರ್ಗ ಸಂಪಾದಕೀಯ ಲೇಖನಗಳನ್ನು ಸಂಗ್ರಹಿಸಿದ್ದಾರೆ.
ಹಾಗೇ ‘‘ಡಾ. ಅಂಬೇಡ್ಕರ್ ರವರ ‘ಮುಕ್ತಿಪತೆಕೋಣ’ ಇದನ್ನು ಕನ್ನಡಕ್ಕೆ ‘ಮುಕ್ತಿಮಾರ್ಗ’ ಎಂದು ಅನುವಾದಿಸಿದ್ದಾರೆ’’. ಬಹುಜನ ನಾಯಕರಾದ ಕಾನ್ಷೀರಾಮ್ ಬುದ್ಧ ಮತ್ತು ಅವರ ದಮ್ಮದ ಭವಿಷ್ಯ (ಮೂಲ ಡಾ. ಬಿ.ಆರ್. ಅಂಬೇಡ್ಕರ್), ಸಾಮ್ರಾಟ ಅಶೋಕ್, ರಾವಣ ಮಹಾತ್ಮನೋ? ರಾಕ್ಷಸನೋ? (ಮೂಲ ಎಲ್. ಆರ್. ಬಾಲಿ), ಬುದ್ಧರ ಬೋಧನೆ ಅವರ ಪ್ರಕಟಿತ ಕೃತಿಗಳಾಗಿವೆ. ಇತ್ತೀಚೆಗೆ ಅವರು ಅನುವಾದಿಸಿರುವ ಆತ್ಮಕಥನ ಡಾ. ಅಂಬೇಡ್ಕರ್ ಸಹವಾಸದಲ್ಲಿ- (ಇದು ಸವಿತಾ ಭೀಮ ರಾವ್ ಅಂಬೇಡ್ಕರ್ ರವರ ಆತ್ಮಕಥನ) ಈ ಪುಸ್ತಕಕ್ಕೆ ಕರ್ನಾಟಕ ಸರಕಾರದ ಅನುವಾದ ಅಕಾಡಮಿಯಿಂದ ಅನುವಾದಕ್ಕೆ ಪ್ರಶಸ್ತಿ ಗೌರವಗಳು ಸಂದಿವೆ. ಇದೊಂದು ಸಂಗ್ರಹಯೋಗ್ಯ ಪುಸ್ತಕವಾಗಿದ್ದು ಡಾ. ಸವಿತಾ ಅಂಬೇಡ್ಕರ್ ರವರ ಆತ್ಮೀಯ ಬರವಣಿಗೆಯನ್ನು ಇದರಲ್ಲಿ ಕಾಣಬಹುದು. ಸುಮಾರು 381 ಪುಟಗಳ ಈ ಪುಸ್ತಕ ಅನೇಕ ವಿವರಗಳನ್ನು ತಿಳಿಸುತ್ತದೆ. ಭೀಮಸಾಹೇಬರ ಜೀವನದ ಮಹತ್ವದ ಘಟ್ಟಗಳಲ್ಲಿ ಬೆನ್ನೆಲುಬಾಗಿ ನಿಂತಿದ್ದು ಅರ್ಥಾತ್ ಭೀಮ ಸಾಹೇಬರ ಉಸಿರೇ ಆಗಿದ್ದ ತಾಯಿ ರಮಾಬಾಯಿಯವರು. ತುಂಬಾ ಎಳೆವಯಸ್ಸಿನಲ್ಲೇ ಮದುವೆಯಾಗಿದ್ದರೂ ಇಡೀ ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಲ್ಲದೆ ಭೀಮ ಸಾಹೇಬರು ತಮ್ಮ ಧ್ಯೇಯದೆಡೆಗೆ ಮುನ್ನಡೆಯಲು ಸಹಕಾರಿಯಾದರು. ಅಂಬೇಡ್ಕರ್ ಅವರ ಮಹತ್ವ ಭಾರತಕ್ಕೆ ಪರಿಚಯವಾಗುವ ಹೊತ್ತಿಗೆ ತಾಯಿ ರಮಾಬಾಯಿ ಕ್ಷಯರೋಗದಿಂದ ನರಳುತ್ತಿದ್ದರು. ಇವರು ಬೆರಣಿ ತಟ್ಟಿ ಅದನ್ನು ಮಾರಿ ಪೈಸೆಪೈಸೆಯನ್ನು ಸಂಗ್ರಹಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗಿದ್ದನ್ನು ನಾವು ಯಾರೂ ಯಾವುದೇ ಕಾರಣಕ್ಕೂ ಮರೆಯಲಾಗದು. ಒಂದು ಬೆಂಕಿಪೊಟ್ಟಣವನ್ನು ಕನಿಷ್ಠ ಒಂದು ತಿಂಗಳವರೆಗೆ ಅದು ಖಾಲಿಯಾಗದಂತೆ ನೋಡಿಕೊಳ್ಳುತ್ತಿದ್ದರು. ಅಷ್ಟೊಂದು ಜಾಣೆಯಾಗಿದ್ದರು ಮತ್ತು ಜವಾಬ್ದಾರಿಯನ್ನು ಅರಿತುಕೊಂಡಿದ್ದರು. ಭೀಮ ಸಾಹೇಬರನ್ನು ನೆನೆಸಿಕೊಳ್ಳುವ ಪ್ರತಿ ಕ್ಷಣ ತಾಯಿ ರಮಾಬಾಯಿ ಅವರನ್ನು ನೆನಪಿಸಿಕೊಳ್ಳಲೇಬೇಕು. ರಮಾಬಾಯಿ ತೀರಿಕೊಂಡು ಹನ್ನೊಂದು ವರ್ಷಗಳ ನಂತರ ಡಾ. ಸವಿತಾ ಅಂಬೇಡ್ಕರ್ ರವರನ್ನು ಭೀಮ ಸಾಹೇಬರು ಮದುವೆ ಮಾಡಿಕೊಳ್ಳುತ್ತಾರೆ. ಇಂತಹ ಅನೇಕ ವಿಷಯಗಳು ಈ ಪುಸ್ತಕದಲ್ಲಿ ದಾಖಲಾಗಿವೆ. ಜೀವನದ ಅತ್ಯಂತ ಕಷ್ಟದ ದಿನಗಳಲ್ಲಿ ತಾಯಿ ರಮಾಬಾಯಿ ನೆರಳಾಗಿದ್ದರೆ, ಭೀಮಸಾಹೇಬರ ಜೀವನದ ಮಹತ್ವದ ಘಟ್ಟದಲ್ಲಿ ಡಾ. ಸವಿತಾ ಅಂಬೇಡ್ಕರ್ ಇದ್ದರು. ಇದರಲ್ಲಿ ವಿಶೇಷವಾಗಿ ಈ ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನ ರಚನೆಯ ಸಂದರ್ಭದಲ್ಲಿ ಭೀಮಸಾಹೇಬರ ಆರೋಗ್ಯ ಹದಗೆಡುತ್ತಿತ್ತು. ಆಗ ಡಾ. ಸವಿತಾ ಅಂಬೇಡ್ಕರ್ ನೆರಳಾಗಿದ್ದು ಭೀಮಸಾಹೇಬರಿಗೆ ಆರೈಕೆ ಮಾಡಿದರು.
ಹೀಗೆ ಈ ‘ಅಂಬೇಡ್ಕರ್ ಸಹವಾಸದಲ್ಲಿ ಆತ್ಮಕಥನ’ ಅನಿಲ್ ಹೊಸಮನಿಯವರು ಸ್ವತಃ ತಾವೇ ಅಂಬೇಡ್ಕರ್ ರವರ ನೆರಳಾಗಿದ್ದರು ಎನ್ನುವ ಹಾಗೇ ಅತ್ಯಂತ ಆತ್ಮೀಯ ಅನುವಾದವನ್ನು ಕನ್ನಡಕ್ಕೆ ತಂದಿದ್ದಾರೆ. ಅವರನ್ನು ನಿಜವಾಗಿಯೂ ಈ ಪುಸ್ತಕದ ಓದುಗರೆಲ್ಲ ಅಭಿನಂದಿಸಲೇಬೇಕು. ಅಂಬೇಡ್ಕರ್ ಚಿಂತನೆಯಲ್ಲೇ ಸಾಗಿ ಬಂದಿದ್ದ ಇವರ ತಂದೆಯ ನಿಜವಾದ ಬಳುವಳಿ ಅಂಬೇಡ್ಕರ್ ಚಿಂತನೆಯಾಗಿತ್ತು ಎಂಬುದು ಕನ್ನಡ ಅನುವಾದದಲ್ಲಿ ಎದ್ದು ಕಾಣುತ್ತದೆ. ಈ ಸಂದರ್ಭದಲ್ಲಿ ಡಾ. ಸವಿತಾ ಅಂಬೇಡ್ಕರ್ ರವರ ತುಂಬಾ ರಹಸ್ಯ ಎಂದು ಹೇಳಬಹುದಾದ ಒಂದು ಪುಟ್ಟ ಬರವಣಿಗೆ ಹೀಗಿದೆ; ‘‘ಭೀಮ ಸಾಹೇಬರ ಆತ್ಮೀಯರನ್ನು ಹೊರತುಪಡಿಸಿ ಯಾರಿಗೂ ತಿಳಿಯದ ರಹಸ್ಯವೊಂದನ್ನು ಇಲ್ಲಿ ಬಹಿರಂಗ ಪಡಿಸಲು ಇಚ್ಛಿಸುತ್ತೇನೆ. ಅದೇನೆಂದರೆ ನಾನು ಮತ್ತು ಡಾ. ಭೀಮ ಸಾಹೇಬ್ ಅಂಬೇಡ್ಕರ್ 1950 ರ ಮೇ, 2ರಂದು ಕೊಲಂಬೋದಲ್ಲಿ ನಡೆದ ವಿಶ್ವ ಬೌದ್ಧ ಸಮ್ಮೇಳನಕ್ಕೆ ಹೊರಡುವ ಮುನ್ನ ದಿಲ್ಲಿಯಲ್ಲಿ ಬೌದ್ಧ ದಮ್ಮದ ದೀಕ್ಷೆ ತೆಗೆದುಕೊಂಡೆವು. ಆರಂಭದಿಂದಲೇ ನಾವು ನಮ್ಮ ಬೌದ್ಧ ದಮ್ಮದ ಕಾರ್ಯವನ್ನು ಜೊತೆಯಾಗಿಯೇ ಕೈಗೊಂಡಿದ್ದೆವು. ಫೆಬ್ರವರಿ 6, 1955 ರಂದು ತಮ್ಮ ಸಹದ್ಯೋಗಿಯೊಬ್ಬರಿಗೆ ಬರೆದ ಪತ್ರದಲ್ಲಿ, ಡಾ. ಸಾಹೇಬರು ನಾವು ಕೈಗೊಂಡ ಧಾರ್ಮಿಕ ಕೆಲಸದ ಬಗ್ಗೆ ಹೇಳುತ್ತಾ ‘ಸವಿತಾ ಮತ್ತು ನಾನು ಬೌದ್ಧ ಕಾರ್ಯದಲ್ಲಿ ಬಹಳ ಆಳವಾಗಿ ತೊಡಗಿಸಿಕೊಂಡಿದ್ದೇವೆ’ ಎಂದು ಬರೆಯುತ್ತಾರೆ. ನಾನಿಲ್ಲಿ ಹೇಳಬೇಕಾಗಿರುವುದು, ಸಾಹೇಬರ ಜೀವನದಲ್ಲಿ ಪ್ರವೇಶಕ್ಕೆ ಮುಂಚೆಯೇ ಬುದ್ಧನ ತತ್ವಶಾಸ್ತ್ರವು ನನ್ನ ಜೀವನದ ಮೇಲೆ ಪ್ರಭಾವ ಬೀರಿತ್ತು. ಆದರೂ ನಾನು ಸಂಪೂರ್ಣ ಬೌದ್ಧಳಾಗುವ ಶ್ರೇಯಸ್ಸು ಭೀಮ ಸಾಹೇಬರಿಗೆ ಮಾತ್ರ ಸಲ್ಲುತ್ತದೆ. ಇದನ್ನು ನಾನು ನಮ್ರತೆ ಮತ್ತು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ’’. ಈ ನೆನಪನ್ನು ನಾನು ಅತ್ಯಂತ ಗಂಭೀರವಾಗಿ ಈ ಸಮಾಜಕ್ಕೆ ಮತ್ತು ವಿಶೇಷವಾಗಿ ಅಸ್ಪಶ್ಯ ಸಮುದಾಯಕ್ಕೆ ತಿಳಿಯಪಡಿಸುವುದೇನೆಂದರೆ ಡಾ. ಭೀಮ ಸಾಹೇಬರು ಕೊಟ್ಟ 3 ಮಹಾ ಮುಖ್ಯ ಮಂತ್ರಗಳನ್ನು ಮೀರಿ ಅಂತಿಮ ತಾರ್ಕಿಕ ಕನಸೊಂದು ಡಾ. ಭೀಮ ಸಾಹೇಬರಿಗಿತ್ತು. ಅದೇನೆಂದರೆ ಶತಮಾನಗಳ ದಾಸ್ಯದಿಂದ ಗುಲಾಮರಾಗಿ ಬದುಕಿದ್ದ ಈ ಅಸ್ಪಶ್ಯ ಸಮುದಾಯ ಸಂವಿಧಾನದಿಂದ ಸಿಕ್ಕ ಎಲ್ಲಾ ಸವಲತ್ತುಗಳನ್ನು ಪಡೆದು ಅಂತಿಮವಾಗಿ ಈ ಸಮುದಾಯ ಬೌದ್ಧರಾಗಬೇಕೆನ್ನುವುದು.
ಕಳೆದ 50 ವರ್ಷಗಳಲ್ಲಿ ದಲಿತ ಸಂಘರ್ಷ ಸಮಿತಿ ಹೋರಾಟದ ಹೆಜ್ಜೆಗಳನ್ನು ಹಿಂದಿರುಗಿ ನೋಡಿದರೆ ಈ ದೇಶದ ಮಹತ್ವದ ಚಾರಿತ್ರಿಕ ಹೋರಾಟ ಎನ್ನಿಸದಿರದು. ಆದರೆ ದಲಿತ ಸಂಘರ್ಷ ಸಮಿತಿ ಕಲಿಸಿದ ಅರಿವು, ಎಚ್ಚರ ಇವತ್ತಿಗೆ ಕರ್ನಾಟಕದಲ್ಲಿ 50 ಲಕ್ಷಕ್ಕಿಂತ ಹೆಚ್ಚು ಬೌದ್ಧರಾಗಬೇಕಿತ್ತು. ದುರಂತ ಎಂದರೆ ಒಂದು ಲಕ್ಷಕ್ಕೂ ಇದು ತಲುಪಿಲ್ಲ. ದಲಿತರ ಸ್ಥಿತಿ ಇಂದಿಗೂ ಶೋಚನೀಯವಾಗಿದೆ. ಬಾಯಿಹರುಕರೆಲ್ಲಾ ದಲಿತರ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡುತ್ತಿದ್ದಾರೆ. ನಮ್ಮ ಓದು, ಬರಹ, ಅರಿವು ಎಲ್ಲದರಿಂದ ನಾವು ಸಂಘಟಿತರಾಗಿ ಹೋರಾಡಬೇಕು. ಭೀಮ ಸಾಹೇಬರೇ ಹೇಳಿದ ‘‘ಶಿಕ್ಷಣವು ಹುಲಿಯ ಹಾಲಿನಂತಿದೆ, ಅದನ್ನು ಕುಡಿದವರು ಘರ್ಜಿಸಲೇಬೇಕು’’. ಇದು ಶಿಕ್ಷಣದ ಶಕ್ತಿ ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತಲು ಹಾಗೂ ಹಕ್ಕುಗಳಿಗಾಗಿ ಹೋರಾಡಲು ಶಕ್ತಿಯನ್ನು ನೀಡುತ್ತದೆ. ಆದರೆ ಇವತ್ತು ನಮ್ಮ ಘರ್ಜನೆ ನಮ್ಮ ಕಿವಿಗಳಿಗೇ ಕೇಳಿಸದಂತಾಗಿದೆ. ಇರಲಿ, ಆದರೂ ನಮ್ಮ ಮೇ ಗೆಳೆಯರ ಬಳಗ ಸಂವಿಧಾನದ ಮನೆ ಕಟ್ಟುತ್ತಿದ್ದಾರೆ ಎಂದರೆ ಅಲ್ಲಿ ಬೌದ್ಧ ನೆಲೆಯ ಅರಳಿಮರ ಚಿಗುರುತ್ತಿದೆ ಎಂದು ಭಾವಿಸೋಣ. ಅದು ಇನ್ನಷ್ಟು ವಿಸ್ತಾರವಾಗಲಿ. ಅನಿಲ್ ಹೊಸಮನಿಯವರ ಬರವಣಿಗೆ ಮನುಷ್ಯರ ಎದೆಗಳಲ್ಲಿ ಸಂವಿಧಾನದ ಪ್ರಜಾಪ್ರಭುತ್ವದ ಕನಸುಗಳು ಬಿತ್ತಲಿ ಎಂದು ಹಾರೈಸುತ್ತಾ... ಭೀಮ ಸಾಹೇಬರು ಹೇಳಿದ ಒಂದು ಮಾತು ಹೀಗಿದೆ; ‘ಮನಸ್ಸಿನ ಬೇಸರಕ್ಕೆ ಓದೇ ಮದ್ದು’.
ಲಡಾಯಿ ಪ್ರಕಾಶನದ ಬಸೂ ಪುಸ್ತಕಗಳನ್ನು ಪ್ರಕಟಿಸುತ್ತಲೇ ಇರಲಿ, ನಾವು ಓದುತ್ತಲೇ ಇರೋಣ, ಓದುವ ಸಹೃದಯರಿಗೂ ತಲುಪಿಸುವ ಪ್ರಯತ್ನ ಮಾಡೋಣ. ಮಾನವೀಯ ಜೀವಪರ ಚಳವಳಿಗಳು ಆರದಂತೆ ನೋಡಿಕೊಳ್ಳೋಣ. ಅರ್ಥಾತ್ ದಸಂಸ ನಾಯಕರಾಗಿದ್ದ ಬಿ. ಕೃಷ್ಣಪ್ಪರವರು ಹೇಳಿದಂತೆ ‘‘ಗುಡಿಸಲೊಂದರಲ್ಲಿ ಹೋರಾಟದ ಪುಟ್ಟ ಹಣತೆಯನ್ನು ಹಚ್ಚಿಟ್ಟಿದ್ದೀನಿ. ಬೆಳಕಿನ ಅರಿವಿನ ಕಿಚ್ಚು ಆರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಬ್ದಾರಿ’’. ಕಳೆದ 50 ವರ್ಷಗಳಿಗಿಂತ ಬರುವ 50 ವರ್ಷಗಳು ಬಹಳ ಪ್ರಮುಖ ಘಟ್ಟಗಳಲ್ಲೊಂದಾಗುತ್ತದೆ. ಅರ್ಥಾತ್ ಇವತ್ತು ಸಂವಿಧಾನ ಮನೆಯನ್ನು ಕಟ್ಟುತ್ತಿದ್ದೀವಿ. ಈ ದೇಶಕ್ಕೆ ಡಾ. ಭೀಮಸಾಹೇಬ್ ಅಂಬೇಡ್ಕರ್ ರವರು ಇಡೀ ಭಾರತಕ್ಕೆ ಸಂವಿಧಾನ ಮನೆಯನ್ನು ಕಟ್ಟಿ ಹೋಗಿದ್ದಾರೆ. ಈ ಮಹಾಮನೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದನ್ನು ಇನ್ನು ಎಷ್ಟೋ ಶತಮಾನಗಳವರೆಗೆ ಮತ್ತು ಮುಂದಿನ ತಲೆಮಾರುಗಳವರೆಗೆ ಹೀಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜೈ ಭೀಮ್! ಜೈ ಸಂವಿಧಾನ್! ಸಂವಿಧಾನ ಮನೆಗೆ ಜಯವಾಗಲಿ.