×
Ad

ಬೌದ್ಧರುಧಾನ್ಯ ಈ ನೆಲವೀಡು

Update: 2025-10-20 12:12 IST

ಪಾಳಿ ಭಾಷೆಯ ಕನ್ನಡ ಪ್ರಾರ್ಥನೆಯ ಭಾಗ ಹೀಗಿದೆ.

ಶೀಲವಂತ ಗುಣವಂತ ಹಾಗೂ

ಪ್ರಜ್ಞಾವಂತರಾದವರು ನನ್ನ ಗುರುಗಳು

ಕರುಣೆಯಿಂದ ನಮಗೆ ದಮ್ಮವನ್ನು ಬೋಧಿಸಿದರು

ಅವರಿಗೆ ಸದಾ ನನ್ನ ಕೃತಜ್ಞಪೂರ್ವ ನಮನಗಳು

ನನ್ನ ಈ ಪುಣ್ಯವನ್ನು ಅನುಮೋದಿಸಿ, ಹಂಚಿಕೊಂಡು ಪರಮ ಅಮೃತ ಸ್ಥಿತಿ ನಿಬ್ಬಾಣವನ್ನು ಪಡೆಯಲಿ.

ಈ ಪ್ರಾರ್ಥನೆಯನ್ನು ಕಳೆದ 14-10-2025 ರಂದು ಮೈಸೂರಿನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಬೌದ್ಧ ಸಮ್ಮೇಳನದ ಉದ್ಘಾಟನೆಯ ದಿನ ಹರ್ಷವರ್ಧನ ವೇದಿಕೆಯಲ್ಲಿ ಪೂಜ್ಯ ಬಂತೇಜಿ ಮನೋರಖಿತ ಕೊಳ್ಳೆಗಾಲದ ಚೇತೋವನದ ಬುದ್ಧವಿಹಾರದರವರು ಕಾರ್ಯಕ್ರಮದ ಮೊದಲಿಗೆ ಬುದ್ಧ, ಬಾಬಾ ಸಾಹೇಬರಿಗೆ ಪುಷ್ಪಾರ್ಚನೆ ಮಾಡುವ ಮುಂಚೆ ಹೇಳಿಕೊಟ್ಟ ಪ್ರಾರ್ಥನೆ ಇದು. ಇದರ ಅರ್ಥವನ್ನು ಹೇಳುತ್ತಾ ಬುದ್ಧ ಮಹಾ ಗುರುಗಳನ್ನು ನಾವು ನೋಡಿಲ್ಲ. ಆದರೆ ನಮಗೆ ಅವರ ಪ್ರಜ್ಞೆಯನ್ನು, ಅರಿವನ್ನು, ಪ್ರೀತಿ, ಕರುಣೆ, ಮಾತೃತ್ವದ ಸಕಲ ಜೀವಲೇಸನ್ನು ಬಯಸುವ ಮಾರ್ಗದ ಪಾಠವನ್ನು ಹೇಳಿಕೊಟ್ಟವರು ವಿಶ್ವಜ್ಞಾನಿ ಬೋಧಿಸತ್ವ ಬಾಬಾಸಾಹೇಬ್ ಅಂಬೇಡ್ಕರ್ ರವರನ್ನು ನಾವು ಗುರುಗಳೆಂದು ಭಾವಿಸಬೇಕು. ಅವರು ಅವರ ಗುರುಗಳೆಂದು ಭಾವಿಸಿದ ಬುದ್ಧ ಗುರುಗಳನ್ನು ಹಾಗೂ ಅಂಬೇಡ್ಕರ್ ಗುರುಗಳನ್ನು ಪ್ರಾರ್ಥಿಸಿದ್ದೀವಿ ಎಂದರು.

ಈ ಪ್ರಾರ್ಥನೆಯ ನಂತರ ಸಭಾಕಾರ್ಯಕ್ರಮ ನೆರವೇರಿತು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮಾನವ ಮೈತ್ರಿಗಾಗಿ ಎನ್ನುವ ಸಾಲುಗಳು ಪ್ರತಿಯೊಬ್ಬ ಜೀವಿಯ ಉಸಿರಾಟವನ್ನು ಆಲಿಸುವಂತಿತ್ತು. ಇದೊಂದು ಅಭೂತಪೂರ್ವ ಕಾರ್ಯಕ್ರಮ ಅಂತ ಎಲ್ಲರ ಮನಸ್ಸು ಹೇಳುತ್ತಿತ್ತು. ಅಲ್ಲಿ ಸೇರಿದ್ದ ನಾವೆಲ್ಲರೂ ಬುದ್ಧ ಮುಗುಳ್ನಗೆಯಲ್ಲಿ ಮುಳುಗಿ ಹೋಗಿದ್ದೇವಾ ಎನ್ನುವಷ್ಟು ಸಂಭ್ರಮದಲ್ಲಿದ್ದರು. ಇಡೀ ಆವರಣ ಬೌದ್ಧಮಯವಾಗಿತ್ತು. ‘ರಾಷ್ಟ್ರಕವಿ ಕುವೆಂಪು ನಾಡಗೀತೆಯಲ್ಲಿ ಬೌದ್ಧರುದ್ಯಾನ ಎಂದು ಹೇಳಿದ ಶಬ್ದ ಆ ಮಹಾಸಮ್ಮೇಳನದಲ್ಲಿ ಅನುರಣಿಸುತ್ತಿತ್ತು’. ಎಲ್ಲರೂ ಪರಿಚಿತರೆ ಎನ್ನುವ ಮನೋಭಾವ ಎಲ್ಲರೊಳಗೂ ಮಿಳಿತವಾಗಿತ್ತು.

ಕಳೆದ 5 ದಶಕಗಳಲ್ಲಿ ಅತ್ಯಂತ ಕಡೆಗಣಿಸಲ್ಪಟ್ಟ ಈ ಸಮುದಾಯ ಬಾಬಾ ಸಾಹೇಬರ ವಿಚಾರಗಳಿಂದ ಪ್ರಭಾವಿತಗೊಂಡ ಅರಿವು, ಎಚ್ಚರವನ್ನು ಪಡೆಯುತ್ತಾ ಬಾಬಾ ಸಾಹೇಬರು ಹೇಳಿದ ಬುದ್ಧ ಮಾರ್ಗದಲ್ಲಿ ನಡೆಯುತ್ತಿದೆ. ಒಂದು ವಿವೇಕದ ಸಂದೇಶದ ಅರಿವು ಪಡೆಯಲು 5 ದಶಕಗಳೇ ಬೇಕಾಗುತ್ತಿತ್ತೇನೋ... ಈ ಹಿಂದೆ ಇದೇ ಸ್ಥಳದಲ್ಲಿ ನಾಡಿನ ಹಿರಿಯ ರಾಜಕಾರಣಿಯಾದ ಶ್ರೀನಿವಾಸ್ ಪ್ರಸಾದ್ ಕೂಡ ಇಂತಹ ಸಮ್ಮೇಳನ ಮಾಡುವುದಕ್ಕೆ ಮುನ್ನುಡಿಯಾಗಿದ್ದರು. ಆ ಸಂದರ್ಭದ ಘೋಷವಾಕ್ಯ ‘‘ಬುದ್ಧನೆಡೆಗೆ ಮರಳಿ ನಡಿಗೆ’’. ಅವರ ಅನಾರೋಗ್ಯದ ಕಾರಣವೋ ಅಥವಾ ಈ ದಲಿತ ಸಮುದಾಯ ಹೊಟ್ಟೆತುಂಬಿದ ಕಾರಣವೋ ತಿಳಿಯದು. ಒಂದಿಷ್ಟು ದಿನಗಳ ಕಾಲ ಇಂತಹ ಸಮಾವೇಶವು ಕಡಿಮೆಯಾಗಿದ್ದವು. ಈಗ ಮತ್ತೆ ಅವುಗಳಿಗೆ ಚಲನೆ ಮತ್ತು ಚೈತನ್ಯ ಎರಡು ಸಿಕ್ಕಿವೆ. ಇದಕ್ಕೆ ಪೂರಕವಾಗಿ ಅನೇಕರು ಕಾರಣಕರ್ತರಾಗಿದ್ದಾರೆ. ವಿಶೇಷವಾಗಿ ಸ್ವಾಗತ ಸಮಿತಿಯಲ್ಲಿದ್ದ ಕೆಲವರನ್ನು ನೆನೆಯಲೇಬೇಕು. ಮೈಸೂರು ಮಾಜಿ ಮೇಯರ್ ಪುರುಷೋತ್ತಮ್ ಮತ್ತು ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿಯವರು ಹಾಗೆಯೇ ಅತ್ಯಂತ ಕ್ರಿಯಾಶೀಲವಾಗಿ ಹೊಸತಲೆಮಾರಿನ ಲೇಖಕಿ, ಚಿಂತಕ ಮೇಲಕುಂಡಿ ಮಹಾದೇವಸ್ವಾಮಿ ಅವರನ್ನು ಮರೆಯುವಂತಿಲ್ಲ. ಇದೆಲ್ಲಕ್ಕೂ ಮುಖ್ಯವಾಗಿ ಈ ಸಮಾರಂಭ ಯಶಸ್ವಿಯಾಗಬೇಕಾದರೆ ಆರ್ಥಿಕ ಬಲ ಮುಖ್ಯವಾಗುತ್ತದೆ. ಈ ಕಾರ್ಯಕ್ರಮಕ್ಕೆ ಸಹಕಾರಿಯಾದವರು ರಾಜ್ಯದ ಸಮಾಜಕಲ್ಯಾಣ ಮಂತ್ರಿಗಳಾದ ಡಾ. ಎಚ್.ಸಿ. ಮಹಾದೇವಪ್ಪರವರು. ಹಾಗೆಯೇ ಇನ್ನೂ ಅನೇಕರು ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ.

ಇದೊಂದು ಐತಿಹಾಸಿಕ ಜೀವಕಾರುಣ್ಯದ ಮಾನವೀಯ ಸಮಾವೇಶವಾಯಿತು. 1956 ಅಕ್ಟೋಬರ್ 14 ರಂದು ಬಾಬಾಸಾಹೇಬರು ಸುಮಾರು 5ಲಕ್ಷ ಜನರೊಂದಿಗೆ ಬೌದ್ಧರಾದರು. ‘‘ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ನಾನು ಹಿಂದೂವಾಗಿ ಸಾಯಲಾರೆ’’ ಎಂದು ಹೇಳಿ ಬೌದ್ಧ ದೀಕ್ಷೆ ಪಡೆದರು. ಈ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಇದಾದ ನಂತರವೂ ದಲಿತರ ಮೇಲಿನ ದೌರ್ಜನ್ಯ ಕಡಿಮೆಯಾಗಲಿಲ್ಲ.

ಬಾಬಾ ಸಾಹೇಬರು ಹುಟ್ಟಿದ್ದರಿಂದಲೇ ಭಾರತದಲ್ಲಿ ಮತ್ತೊಮ್ಮೆ ಬೌದ್ಧ ದಮ್ಮ ಉದಯಿಸಲಿಕ್ಕೆ ಕಾರಣವಾಯಿತು. ಭೀಮಾ ಸಾಹೇಬರು ಸಂವಿಧಾನ ಮೂಲಕ ಶೋಷಿತರಿಗೆ ಸವಲತ್ತುಗಳನ್ನು ಸಾಂವಿಧಾನಿಕವಾಗಿ ಕೊಡಿಸಿದರು. ಆದರೆ ಜಾತಿಧರ್ಮಗಳ ಮೌಢ್ಯಗಳಿಂದ ಬಿಡುಗಡೆಯಾಗಬೇಕೆಂದರೆ ಅಸ್ಪಶ್ಯರು ಬೌದ್ಧರಾಗಲೇಬೇಕು ಎನ್ನುವ ಕನಸು ಕಂಡಿದ್ದರು. ಶೋಷಿತರು ಬೌದ್ಧರಾದರೆ ಅವರು ಶ್ರೇಷ್ಠರೂ ಆಗುವುದಿಲ್ಲ, ಕನಿಷ್ಠವೂ ಆಗುವುದಿಲ್ಲ. ಬದಲಿಗೆ ಅವರಿಗೆ ಉನ್ನತ ಮನಸ್ಥಿತಿಯ ಸಿರಿ ಸಂಪತ್ತಿನ ವ್ಯಕ್ತಿಗೌರವ ಮತ್ತು ಘನತೆ ತನಗೆ ತಾನೇ ದೊರೆಯುತ್ತದೆ. ಇದಾಗದ ಹೊರತು ಜಾತಿ ನಿರ್ಮೂಲ ಸಾಧ್ಯವೇ ಇಲ್ಲ ಎಂದು ಹೇಳಿದರು. ಹಿಂದೂ ಧರ್ಮ ಈವರೆಗೂ ಸುಧಾರಣೆ ಆಗಿಲ್ಲ ಎನ್ನುವುದು ಸಾರ್ವಕಾಲಿಕ ಸತ್ಯ. ಅವರು ಬೌದ್ಧ ದಮ್ಮ ಸ್ವೀಕರಿಸಿ ಆಡಿದ ಮಾತುಗಳಲ್ಲಿ ಪ್ರಮುಖಾಂಶವೆಂದರೆ, ಪ್ರತಿಯೊಬ್ಬರಿಗೆ ಸ್ಥಾನಮಾನ, ಆತ್ಮಗೌರವ, ಸ್ವಾಭಿಮಾನ ಮುಖ್ಯ. ಇವುಗಳನ್ನು ಪಡೆಯುವುದಕ್ಕೆ ಮೊದಲ ಆದ್ಯತೆಯಿರಬೇಕು. ಆದ್ದರಿಂದಲೇ ನಾವು ಸ್ವಾಭಿಮಾನದ ಬದುಕು ನಡೆಸಲು ಮುಂದಾಗಬೇಕು. ಇದಕ್ಕಾಗಿ ಸಂಘರ್ಷದ ದಾರಿ ಹಿಡಿಯುವುದು ಅನಿವಾರ್ಯವಾದರೂ ಸರಿ. ಮುಂದುವರಿದು ಗೌರವದ ಬದುಕು ನಡೆಸಲು ಪ್ರತಿಯೊಬ್ಬ ವ್ಯಕ್ತಿಗೂ ಹಕ್ಕಿದೆ. ಈ ಹಕ್ಕು ಪಡೆದುಕೊಳ್ಳಲು ನಾವು ತ್ಯಾಗಕ್ಕೂ ಸಿದ್ಧ. ಬೌದ್ಧರಾಗುವುದರಿಂದ ನಾವು ಹೊಸ ಮನುಷ್ಯರಾಗುತ್ತೇವೆ. ‘‘ನಾನು ಕೆಲವೊಂದು ಹಕ್ಕುಗಳನ್ನು ನಿಮ್ನ ವರ್ಗಕ್ಕೆ ಕೊಡಿಸಿದ್ದೇನೆ. ಅವರಿಗೆ ಹೊಸ ಬದುಕು ದಕ್ಕುವಂತೆಯೂ ನೋಡಿಕೊಳ್ಳುತ್ತೇನೆ ಎಂಬ ಭರವಸೆಯನ್ನು ಕೊಡುತ್ತೇನೆ. ನನ್ನಲ್ಲಿ ನಂಬಿಕೆ ಇಡಿ. ವಿರೋಧಿಗಳು ತಮ್ಮ ಹಿತಾಸಕ್ತಿಯನ್ನು ನೋಡಿಕೊಳ್ಳುತ್ತಿದ್ದಾರೆ, ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಪ್ರಚಾರಕ್ಕೆ ಕಿವಿಗೊಡಬೇಡಿ’’.

ಬಾಬಾ ಸಾಹೇಬರು ಮತಾಂತರ ಕುರಿತು ತಮ್ಮ ಸ್ಪಷ್ಟ ಮಾತುಗಳಲ್ಲಿ ಹೀಗೆ ಹೇಳಿದ್ದಾರೆ. ‘‘ಈ ಮತಾಂತರವು ನನಗೆ ಅಗಾಧ ತೃಪ್ತಿಯನ್ನು, ನೆಮ್ಮದಿಯನ್ನು ನೀಡಿದೆ. ನರಕದಿಂದ ನನಗೆ ಮುಕ್ತಿ ದೊರೆತಂತೆ ಅನಿಸಿದೆ. ಮತಾಂತರಗೊಂಡ ನೀವೆಲ್ಲರೂ ಇದನ್ನು ನಿಮ್ಮ ಅನುಭವದಿಂದಲೇ ಅರಿತುಕೊಳ್ಳಬೇಕು. ನನಗೆ ಕುರುಡು ಅನುಯಾಯಿಗಳು ಬೇಡ. ನನಗೆ ಕುರಿಗಳ ಬುದ್ಧಿ ಇಷ್ಟವಿಲ್ಲ. ಬುದ್ಧನಲ್ಲಿ ಶರಣಾಗ ಬರುವವರು ತಮ್ಮ ಸ್ವಂತ ಅರಿವಿನಿಂದ, ಸ್ವಂತ ತ್ಯಾಗದಿಂದ ಬರಬೇಕು. ಏಕೆಂದರೆ ಪಾಲಿಸಲು ಅತಿಕಷ್ಟವಾದ ಧರ್ಮ ಇದು. ಮನುಷ್ಯ ಏಳಿಗೆಗೆ ಧರ್ಮ ಅತ್ಯಂತ ಅಗತ್ಯ. ಬಡವರು ಕಡುಕಷ್ಟವನ್ನು ಅನುಭವಿಸಿ ತಾಳಿಕೊಳ್ಳುತ್ತಿರುವ ಅರಿವಿದೆ ನನಗೆ. ಜನರ ಆರ್ಥಿಕ ಸ್ಥಿತಿ ಸುಧಾರಿಸುವ ಕುರಿತು ನಾವು ಹೋರಾಟ ನಡೆಸಬೇಕು. ಆರ್ಥಿಕವಾಗಿ ಸಬಲರನ್ನಾಗಿಸಲು ನನ್ನ ಜೀವಮಾನವಿಡೀ ಹೋರಾಟುತ್ತಿದ್ದೇನೆ. ಅದಷ್ಟೇ ಅಲ್ಲಾ ಮನುಷ್ಯಕುಲವೇ ಆರ್ಥಿಕವಾಗಿ ಸಬಲರಾಗಬೇಕು’’.

ಬಾಬಾ ಸಾಹೇಬರು ಹೇಳಿದ ಕೊನೆಯ ಮಾತು ಬೋಧಿ ಸತ್ವ ಬುದ್ಧ ಪ್ರಜ್ಞೆ ಈ ವಿವೇಕ ಬಾಬಾ ಸಾಹೇಬರಿಗೆ ಯಾವತ್ತೋ ಇತ್ತು. ಈ ಎಲ್ಲಾ ಅರಿವಿನಿಂದಲೇ ಅಸ್ಪಶ್ಯರು ಮಾತ್ರವಲ್ಲ ಎಲ್ಲಾ ಸಮುದಾಯದವರು ಆರ್ಥಿಕವಾಗಿ ಸಬಲರಾದರೆ ಆ ದೇಶ ಸುಭಿಕ್ಷವಾಗಿರುತ್ತದೆ, ಸಮಸಮಾಜವಾಗಿರುತ್ತದೆ ಎಂದು ಹೇಳಿದ್ದಾರೆ, ಅದರ ಕನಸು ಕಂಡಿದ್ದಾರೆ. ಆದರೆ ಆ ಕನಸಿನ ಪ್ರಯಾಣ ಈ ಹೊತ್ತಿಗೂ ನಿರಂತರವಾಗಿ ನಡೆಯುತ್ತಲೇ ಇದೆ. ಮೊನ್ನೆ ನಡೆದ ಬೌದ್ಧ ಸಮ್ಮೇಳನವು ಈ ಹಿಂದೆ ನಡೆದ ಶ್ರೀನಿವಾಸ್ ರವರ ಪ್ರಯತ್ನದ ಸಮ್ಮೇಳನಕ್ಕಿಂತ ಒಂದಿಷ್ಟು ಭಿನ್ನವಾಗಿರಬಹುದೇ ಎನ್ನುವುದು ನನ್ನ ಆಲೋಚನೆ. ಬಾಬಾ ಸಾಹೇಬರು ಹೇಳಿದಂತೆ ಮತಾಂತರ ದಮ್ಮಪಾಲನೆ ಮಕ್ಕಳಾಟವಲ್ಲ. ಆದರೆ ಸಂವಿಧಾನದ ಸವಲತ್ತು ಪಡೆದವರು ಆರ್ಥಿಕವಾಗಿ ಸಬಲರಾಗಿದ್ದಾರೆ. ಇವರು ಮೌಢ್ಯಕ್ಕೆ ಬಲಿಯಾಗದೆ ದಮ್ಮ ಪಾಲಿಸಬಹುದು. ಆದರೂ ಇವತ್ತಿಗೂ ಹಿಂದೂ ಧರ್ಮದ ಮೌಢ್ಯಗಳಲ್ಲೇ ಮುಳುಗಿ ಹೋಗಿದ್ದಾರೆ. ಒಂದು ಕ್ಷಣ ಹಿಂದೂ ಧರ್ಮದಲ್ಲಿ ಅಸ್ಪಶ್ಯರ ಸ್ಥಾನಮಾನವೇನು? ಎಂದು ಯೋಚಿಸಿದರೆ ತಿಳಿಯುತ್ತದೆ. ಇವತ್ತಿಗೂ ನಮ್ಮ ಪತ್ರಿಕೆಗಳಲ್ಲಿ ‘ದಲಿತ ರಾಷ್ಟ್ರಪತಿ’ ಎಂದು ಬರೆಯುತ್ತಾರೆ. ಅವರು ರಾಷ್ಟ್ರದ ಮೊದಲ ಪ್ರಜೆಯಾಗಿ, ರಾಷ್ಟ್ರಪತಿಯಾದರು. ಆದರೆ ಅವರನ್ನು ನೋಡುವ ಮನೋಧರ್ಮ ಕಿಂಚಿತ್ತ್ತೂ ಬದಲಾಗಿಲ್ಲ. ಸರಕಾರದ ಹುದ್ದೆಗಳಲ್ಲಿ ಯಾವುದೇ ಉನ್ನತ ಅಧಿಕಾರಿಯಲ್ಲಿದ್ದರೂ ಉಳಿದ ಸಮುದಾಯದವರು ಆ ಸಮುದಾಯದ ಸ್ವಜಾತಿ ಸಹಚರರೊಡನೆ ಅವಮಾನದ ಮಾತುಗಳನ್ನಾಡುತ್ತಿರುತ್ತಾರೆ. ಆದ್ದರಿಂದ ಈ ಮನಸ್ಥಿತಿ ಬದಲಾಗುವ ಪ್ರಕ್ರಿಯೆಯಲ್ಲಿ ನಾವು ಭಾಗವಹಿಸಬೇಕಾಗಿದೆ. ಯಾರು ಅವಮಾನಿತರೋ ಅವರು ಬದಲಾಗುವ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದರೂ ಅವಮಾನಿಸುವ ಸಮುದಾಯಗಳು ಬದಲಾಗುತ್ತಿಲ್ಲ.

ಮೊನ್ನೆ ನಡೆದ ಸಭೆಗೆ ಹಾಜಾರಾದ ಎಲ್ಲರನ್ನು ಬೌದ್ಧಧರ್ಮದ ಉಪಾಸಕರೆಂದು ಕರೆಯಲಾಗುವುದಿಲ್ಲ. ಏಕೆಂದರೆ ಅವರಿಗಿನ್ನೂ ಬುದ್ಧನ ಪ್ರಾಥಮಿಕ ಪ್ರಾರ್ಥನೆಗಳು ಅರ್ಥವಾಗಿಲ್ಲ. ಭೀಮಾಸಾಹೇಬರು ಇದನ್ನು ಮತ್ತೆ ಮತ್ತೆ ಸ್ಪಷ್ಟಪಡಿಸಿದ್ದಾರೆ. ಮತಾಂತರಕ್ಕೆ ಒಂದು ಮಾನಸಿಕ ಸಿದ್ಧತೆ ಬೇಕು. ನಾವೆಲ್ಲರೂ ಆ ಮಾನಸಿಕ ಸಿದ್ಧತೆಗೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಅವರಲ್ಲಿ ಅಂಬೇಡ್ಕರ್ ಮತ್ತು ಬುದ್ಧನ ತತ್ವಗಳನ್ನು ಬಿತ್ತಿ ಬೆಳೆಸಬೇಕು. ಒಂದು ಸಮಾರಂಭಕ್ಕೆ ಬರುವ ಉತ್ಸಾಹ ಆ ಸಮಾರಂಭ ಮುಗಿದು ಹೊರಡುವ ಹೊತ್ತಿಗೆ ಅರ್ಧ ಕಡಿಮೆಯಾಗಿರುತ್ತದೆ. ಮನೆಗೆ ಹೋಗುವ ಹೊತ್ತಿಗೆ ಅದು ಪೂರ್ತಿ ಮರೆಯಾಗಿರುತ್ತದೆ. ಆದರೆ ಮನುಷ್ಯನ ಬಿಡುಗಡೆಯ ಇಂತಹ ಸಭೆಗಳು ವ್ಯಕ್ತಿಗತ ಮಾನಸಿಕ ಚೈತನ್ಯವನ್ನು ತುಂಬುವಂತಾಗಬೇಕು. ಆದರ್ಶವನ್ನು ಮೀರಿ ನೈತಿಕ ಮನೋಭಾವನೆಯನ್ನು ಹೆಚ್ಚಿಸಬೇಕು. ಇದನ್ನೇ ಬಾಬಾ ಸಾಹೇಬರು ಕೆಲವನ್ನು ತ್ಯಾಗ ಮಾಡಬೇಕು ಎಂದು ಹೇಳಿರುವುದು. ಕಾರ್ಯಕ್ರಮಗಳು ಸಾಮಾನ್ಯವಾಗಿ ಮಾತುಗಳಿಂದಲೇ ತುಂಬಿಹೋಗಿರುತ್ತದೆ. ಆದರೆ ಈ ಕಾರ್ಯಕ್ರಮದ ಅತ್ಯಂತ ಮುಖ್ಯ ಭಾಗವೇನೆಂದರೆ ಪ್ರಾರಂಭದಲ್ಲಿ ಬಹುತೇಕ ಎಲ್ಲಾ ಬಂತೇಜಿಯವರು ದಮ್ಮ ಮತ್ತು ಬುದ್ಧನ ಉಪದೇಶಗಳನ್ನು ಹೇಳಿರುವುದು ನಮ್ಮ ಕಿವಿಯಲ್ಲಿ, ಮನಸ್ಸಲ್ಲಿ ಉಳಿದರೆ ಮತ್ತು ನಾವು ಹಾಗೇ ನಡೆದುಕೊಂಡರೆ ಆಗ ಆ ಕಾರ್ಯಕ್ರಮದ ನಿಜವಾದ ಯಶಸ್ಸು. ಇಲ್ಲದೆ ಹೋದರೆ 10ರಲ್ಲಿ 11 ಎಂಬಂತೆ ಆಗುತ್ತದೆ.

ನಾನು ಕೂಡ ಒಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದೆ. ಅಲ್ಲಿ ಮನೋರೇಖಿತ ಬಂತೇಜಿಯವರ ಪ್ರಾರ್ಥನೆಯ ಒಂದು ಮಾತು ನಾವು ಬುದ್ಧ ಗುರುಗಳ ಅರಿವನ್ನು ತಿಳಿದು ನಡೆಯಬೇಕು ಎನ್ಮುವುದೇ ಕಾರ್ಯಕ್ರಮದ ಮುಖ್ಯ ಆಶಯ. ಆ ಸಭೆಯಲ್ಲಿ ನಾನು ಮಾತನಾಡಿದೆ. ಆ ಸಭೆಯಲ್ಲಿದ್ದ ಸಹೋದರ ಸಹೋದರಿಯರು ಮಾತನಾಡಿದರು. ನಾನು ಮಾತನಾಡಿದ್ದನ್ನು ಅಲ್ಲಿಂದ ಬಂದು ಮನೆಯಲ್ಲಿ ಕೂತು ನೆನೆದಾಗ ಒಂದು ರೀತಿಯ ಶೂನ್ಯದ ಅನುಭವವಾಯಿತು. ಧ್ಯಾನಕ್ಕೆ ಇರಬೇಕಾದ ಮನಸ್ಥಿತಿ ಮಾತುಗಳಲ್ಲಿ ಕಳೆದು ಹೋಯಿತಲ್ಲ ಎಂದೆನಿಸಿತು. ಈ ಕಾರ್ಯಕ್ರಮಕ್ಕೆ ಏನೂ ಅರಿಯದ ನನ್ನ ಅವ್ವನನ್ನು ಕರೆದುಕೊಂಡು ಬಂದಿದ್ದರೆ ಏನು ಮಾತನಾಡದೆ ಒಂದು ಘಳಿಗೆ ನಿಶ್ಯಬ್ದವಾಗಿ ನಿಂತು ಬುದ್ಧನ ಪ್ರತಿಮೆಯ ಮುಂದೆ ಕಣ್ಮುಚ್ಚಿ ಕೈ ಮುಗಿದು ನಡೆ ಮನೆಗೆ ಹೋಗೋಣ ಎನ್ನುತ್ತಿದ್ದರು. ಮನೆಗೆ ಬಂದ ಮೇಲೆಯೂ ಅವ್ವನೆದೆಯಲ್ಲಿ ಬುದ್ಧನ ಪ್ರತಿಮೆ ಇರುತ್ತಿತ್ತು. ನನಗೆ ಮಾತಿನ ಮಂದಿರ ಶೂನ್ಯವೆನಿಸಿತು... ಮಾತಿನಲ್ಲಿ ಬುದ್ಧನಿಲ್ಲವೆನಿಸಿತು.

ಇದಕ್ಕೆ ಪೂರಕವೆಂಬಂತೆ ರಾಷ್ಟ್ರಕವಿ ಗೋವಿಂದ ಪೈ ಯವರು ಬರೆದ ‘ಬೆಂಕಿ ಹತ್ತಿದ ಮನೆ’ ಕಥೆಯ ಸಾರಂಶ ಹೀಗಿದೆ. ಆತನಿಗೆ ಒಂದು ತುಂಬಾ ಹಳೆಯ ಮನೆ ಇತ್ತು. ಆ ಮನೆಯನ್ನು ಮರದ ಹಲಗೆಗಳಿಂದಲೇ ಕಟ್ಟಲಾಗಿತ್ತು. ಅದು ಎಷ್ಟು ಹಳೆಯದೆಂದರೆ ಆಕಸ್ಮಾತ್ ಒಂದು ಕಿಡಿ ಹತ್ತಿಕೊಂಡರೆ ಇಡೀ ಮನೆ ಭಸ್ಮವಾಗುತ್ತದೆ. ಅಂತಹ ಯಾವ ಅನಾಹುತಗಳು ಆಗದೆ ಬಹಳ ವರ್ಷದಿಂದ ಆ ಮನೆಯನ್ನು ಕಾಪಾಡಿಕೊಂಡು ಬಂದಿದ್ದ. ಒಂದು ದಿನ ಆಕಸ್ಮಿಕವಾಗಿ ಅಟ್ಟದಲ್ಲಿ ಬೆಂಕಿ ಹತ್ತಿಕೊಂಡಿತು. ಮನೆಯಲ್ಲಿರುವ ಮಕ್ಕಳು ಎಲ್ಲೆಂದರಲ್ಲಿ ಆಟವಾಡುತ್ತಿದ್ದರು. ಗೃಹಸ್ಥನಿಗೆ ನಿಜಕ್ಕೂ ದಿಕ್ಕು ತೋಚದಂತಾಯಿತು. ಯಾವ ಒಬ್ಬ ಮಗುವನ್ನು ಕರೆತಂದರು ಉಳಿದ ಮಕ್ಕಳು ಬೆಂಕಿಗಾಹುತಿಯಾಗುತ್ತಾರೆ. ಆದರೆ ಎಲ್ಲಾ ಮಕ್ಕಳನ್ನು ಈ ಅನಾಹುತದಿಂತ ತಪ್ಪಿಸಬೇಕೆಂದರೂ ಏನಾದರೂ ಉಪಾಯ ಮಾಡಲೇಬೇಕು. ಚಿಂತಿಸುವುದಕ್ಕೂ ಕೂಡ ಸಮಯ ಕಡಿಮೆ ಇತ್ತು. ಆದರೂ ಧೃತಿಗೆಡದೆ ಮಕ್ಕಳಿಗೆ ಮನೆಗೆ ಬೆಂಕಿ ಬಿದ್ದಿದೆಯೆಂದರೆ ಆ ಭಯಕ್ಕೆ ಅರ್ಧ ಮಕ್ಕಳ ಕಾಲು ಚಲಿಸುವುದಿಲ್ಲ. ಆ ಮಕ್ಕಳು ಸಂತೋಷದಿಂದ ಹೊರಗಡೆ ಬರಬೇಕು ಅದಕ್ಕೆ ಆ ಮಕ್ಕಳಿಗೆ ಕೂಗಿ ಹೇಳಿದೇ ‘ಮಕ್ಕಳೇ... ನಿಮಗೆ ಇಷ್ಟವಾದ ಸಿಹಿತಿಂಡಿಗಳನ್ನು ತಂದಿದ್ದೇನೆ. ನಿಮಗಿಷ್ಟವಾದ ಆಟಿಕೆಗಳನನ್ನು ತಂದಿದ್ದೇನೆ. ಎಲ್ಲರೂ ಓಡಿ ಬನ್ನಿ’ ಈ ಮಾತು ಮಕ್ಕಳಿಗೆ ಬೆಂಕಿಯ ಉರಿಯನ್ನಾಗಲಿ, ಬೆಂಕಿಯ ಜ್ವಾಲೆ ಕಣ್ಣಿಗೆ ಕಾಣದೆ ಕಿವಿಗೊಡದೆ ಮಕ್ಕಳೆಲ್ಲಾ ಸಂತೋಷದಿಂದ ಹೊರಗೆ ಬಂದರು. ಹೊರಗೆ ಬಂದಾಗ ಯಾವ ಆಟಿಕೆಗಳು ಯಾವ ಸಿಹಿತಿಂಡಿಗಳು ಇರಲಿಲ್ಲ. ಎದುರಿಗೆ ನಿಂತು ನೋಡಿದರೆ ತಾವು ಆಟವಾಡುತ್ತಿದ್ದ ಮನೆ ಬೆಂಕಿಯ ಜ್ವಾಲೆಯಿಂದ ಧಗಧಗಿಸುತ್ತಿದೆ. ಮಕ್ಕಳನ್ನು ಉಳಿಸಿದ ಗೃಹಸ್ಥನಿಗೆ ಸಂತೋಷ ಖುಷಿ ನೆಮ್ಮದಿ ಸಮಾಧಾನ ಸಿಗುತ್ತದೆ. ಈ ರೂಪಕ ಬುದ್ಧನಿಗೆ ಸರಿಹೊಂದುತ್ತದೆ. ನಾವೆಲ್ಲಾ ಒಂದು ಮೌಢ್ಯ, ಅವಿವೇಕದ ಧರ್ಮದಲ್ಲಿ ಸುಟ್ಟು ಬೂದಿಯಾಗುತ್ತಿದ್ದರೂ ಇನ್ನೂ ಅರ್ಥವಾಗಲಿಲ್ಲ ಎಂದರೆ ಹೇಗೆ? ಈ ಇಡೀ ಕಥೆಯ ತಿರುಳು ಈ ಸಮ್ಮೇಳನದ ಆಶಯ ಇರಬಹುದೇ? ಬಹುಶಃ ಇಲ್ಲಿ ನಾನು ನಮ್ಮ ಅವ್ವನನ್ನು ಕರೆತಂದಿದ್ದರೆ ಎನ್ನುವುದಕ್ಕಿಂತ ನಮ್ಮ ಅವ್ವನೇ ಇಂತಹ ಅರಿವಿನ ಮನೆಗೆ ಕರೆತಂದಿರಬಹುದೇ ಎಂದೆನಿಸಿದೆ. ಈ ಕಥೆ ನಿಮ್ಮೆಲ್ಲರಿಗೂ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ.

ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ಈ ನಾಡು ಬೌದ್ಧರ ಉದ್ಯಾನವನ ಎಂದಿದ್ದಾರೆ. ಅಂದರೆ ಈ ನಾಡು ಎಲ್ಲರನ್ನೂ ಒಳಗೊಳ್ಳುವ ಬುದ್ಧತತ್ವದ ನೆಲವೀಡು. ಇಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬದುಕಲು ಕುವೆಂಪು ಅವರು ಬುದ್ಧ ಮಾರ್ಗದಲ್ಲಿ ನಿಂತು ನಮ್ಮನ್ನು ಪ್ರೇರೇಪಿಸಿದ್ದಾರೆ. ಈ ನಾಡು ಸರ್ವಜನಾಂಗದ ಶಾಂತಿಯ ತೋಟವೆಂದ ಕುವೆಂಪು ಅವರು ಅದರ ಮೂಲಕ ವಿಶ್ವಮಾನವ ಸಂದೇಶ ನೀಡಿದ್ದಾರೆ. ಸಕಲಜೀವಗಳನ್ನೂ ಪ್ರೀತಿಸುವ ವಿಶ್ವಮಾನವ ಬುದ್ಧನಲ್ಲದೆ ಮತ್ತಾರು. ಪರಸ್ಪರ ದ್ವೇಷಾಸೂಯೆಗಳಿಂದ ನಲುಗುತ್ತಿರುವ ಮನುಷ್ಯರೆದೆಗಳಲ್ಲಿ ಬುದ್ಧಪ್ರೀತಿಯ ಉಸಿರು ತುಂಬುವುದು ಇವತ್ತಿನ ತುರ್ತುಕಾರ್ಯವಾಗಿದೆ.

ನಾವೆಲ್ಲರೂ ಮೌಢ್ಯದ ಬೆಂಕಿಯಿಂದ ಪಾರಾಗಬೇಕಾದರೆ ಬುದ್ಧನ ಕರೆಗೆ ಓಗೊಡಬೇಕು, ಬುದ್ಧನ ಹಾದಿಯಲ್ಲಿ ಸಾಗಬೇಕು. ಭೀಮಸಾಹೇಬರು ಹಾಗೆ ಸಾಗಿ ನಮಗೆಲ್ಲರಿಗೂ ಸಮತೆಯ ಗುರುವಾಗಿದ್ದಾರೆ... ಬೆಂಕಿಯಿಂದ ನಮ್ಮನ್ನು ಪಾರು ಮಾಡಲು ಪ್ರತಿನಿತ್ಯ ಕರೆಯುತ್ತಿದ್ದಾರೆ... ನಾವು ನಮ್ಮ ಧರ್ಮದ ಸಂಕೋಲೆಗಳಿಂದ ಬಿಡಿಸಿಕೊಂಡು ಹೊರಬರಲೇಬೇಕು ವಿಶ್ವಮಾನವರಾಗಬೇಕು.

ಬುದ್ಧಂ ಶರಣಂ ಗಚ್ಛಾಮಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸುಬ್ಬು ಹೊಲೆಯಾರ್

contributor

Similar News