ಹೋರಾಟದಲ್ಲಿ ಭಾಗಿಯಾಗಿರುವ ಯುವತಿಯರ ಧೈರ್ಯ, ಸಾಹಸ, ಬೌದ್ಧಿಕತೆ, ವಾಕ್ ಚಾತುರ್ಯ, ನಾಯಕತ್ವ ಗುಣ ಮೆಚ್ಚುವಂತಹದ್ದು. ಪ್ರತಿಯೊಬ್ಬರಲ್ಲೂ ವೈಚಾರಿಕ ಸ್ಪಷ್ಟತೆ ಇದೆ. ಸೈದ್ಧಾಂತಿಕ ಬದ್ಧತೆ ಇದೆ. ನೇಹಾ ಬೋರಾ, ರತ್ನಾ ಸಿಂಗ್, ಮನಿಕಾ, ನಿಧಿ, ಹೀನಾ ಫಾತಿಮಾ, ಪವಿತ್ರಾ ಮತ್ತಿತರರ ಜತೆ ಸಾವಿರಾರು ಯುವತಿಯರು ಹೆಜ್ಜೆ ಹಾಕಿದ್ದಾರೆ. ಅವರಲ್ಲಿ ಯಾರೂ ಕಡಿಮೆಯಿಲ್ಲ.

ದಿಲ್ಲಿಯಲ್ಲಿ ನಡೆಯುತ್ತಿರುವ ಜೆನ್ ಝಿಗಳ ಹೋರಾಟ ಹಲವು ದೃಷ್ಟಿಯಿಂದ ಮಹತ್ವ ಪಡೆದಿದೆ. ‘ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ’ (ನೀಟ್) ಪ್ರಶ್ನೆ ಪತ್ರಿಕೆಗಳ ಸೋರಿಕೆ ಹಗರಣದ ನೈತಿಕ ಹೊಣೆ ಹೊತ್ತು ಹಿಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಯುವ ಪೀಳಿಗೆ ಬೀದಿಗಿಳಿಯದಿದ್ದರೆ ಪ್ರಧಾನ್ ರಾಜೀನಾಮೆ ಕೊಡುತ್ತಿರಲಿಲ್ಲ. ಇದುವರೆಗೆ ಯಾರೂ ಮುಟ್ಟಲಾಗದ ಎನ್‌ಡಿಎ ಸರಕಾರವನ್ನು ಹುಡುಗರು ಬಗ್ಗಿಸಿದ್ದಾರೆ. ನೀಟ್ ಚಳವಳಿ ಯಶಸ್ಸಿನ ಬಳಿಕ ಮುಖ್ಯ ಚುನಾವಣಾ ಕಮಿಷನರ್ (ಸಿಇಸಿ) ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಜೆನ್ ಝಿಗಳು ಪಟ್ಟು ಹಿಡಿದಿದ್ದಾರೆ. ದಿಲ್ಲಿ ರಸ್ತೆಗಳನ್ನು ಹೋರಾಟದ ಕಣವಾಗಿ ಮಾರ್ಪಡಿಸಿದ್ದಾರೆ.

ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುತ್ತಿರುವ ಚಳವಳಿ ಇದೆಂದು ವಿಶ್ಲೇಷಿಸಲಾಗಿದೆ. ‘ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್) ನೆಪದಲ್ಲಿ ೧೩ ಕೋಟಿ ಹೆಸರು ತೆಗೆದ ಚುನಾವಣಾ ಆಯೋಗದ ಕ್ರಮದಿಂದ ಚಳವಳಿ ಹುಟ್ಟಿಕೊಂಡಿದೆ. ಹೋರಾಟದಲ್ಲಿ ಭಾಗವಹಿಸಲು ಬೇರೆ ದೇಶಗಳಲ್ಲಿ ಓದುತ್ತಿರುವ, ಉದ್ಯೋಗದಲ್ಲಿರುವ ಭಾರತದ ಕೆಲವು ಯುವಕರು, ಯುವತಿಯರು ಬಂದಿದ್ದಾರೆ. ಹೋರಾಟ ದಿಲ್ಲಿ ಗಡಿ ದಾಟಿ ಬೇರೆ ರಾಜ್ಯಗಳಿಗೂ ಹರಡಿದೆ. ಜೆನ್ ಝಿಗಳ ಹೋರಾಟ ಅಂತರ್‌ರಾಷ್ಟ್ರ ಮಟ್ಟದಲ್ಲೂ ಗಮನ ಸೆಳೆಯಲು ಸಫಲವಾಗಿದೆ.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕರ್ನಾಟಕ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಳಿಕ ‘ವೋಟ್ ಚೋರಿ’ ಕೂಗೆಬ್ಬಿಸಿದರು. ದಾಖಲೆ ಕೊಟ್ಟರು. ಅವರ ಆರೋಪವನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಬದಲಿಗೆ, ರಾಹುಲ್ ಮೇಲೆ ಜ್ಞಾನೇಶ್ ಕುಮಾರ್ ಮುಗಿಬಿದ್ದರು. ಕ್ಷಮೆ ಕೇಳುವಂತೆ ಆಗ್ರಹಿಸಿದರು. ಕಾಂಗ್ರೆಸ್ ಮುಖಂಡ ಜಗ್ಗಲಿಲ್ಲ. ಈಗ ಇದೇ ಬೇಡಿಕೆ ಮುಂದಿಟ್ಟುಕೊಂಡು ಯುವ ಪೀಳಿಗೆ ಬೀದಿಗಿಳಿದಿದೆ. ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಚಳವಳಿಗೆ ಶಕ್ತಿ ತುಂಬಿದೆ. ಸಿಇಸಿ ಮತ್ತು ಇಬ್ಬರು ಇಸಿಗಳ ನಡುವಿನ ‘ಮುಸುಕಿನ ಗುದ್ದಾಟ’ ಬಯಲಿಗೆಳೆದಿದೆ. ಈ ವರದಿ ಪ್ರಕಟವಾಗದಿದ್ದರೆ ಹೋರಾಟ ಇಷ್ಟು ತೀವ್ರವಾಗುತ್ತಿರಲಿಲ್ಲ.

ಜೆನ್ ಝಿಗಳ ಹೋರಾಟ ಭರವಸೆ ಹುಟ್ಟಿಸಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅವರ ಕೈಯಲ್ಲಿ ಸುರಕ್ಷಿತವಾಗಿ ಉಳಿಯುವ ವಿಶ್ವಾಸ ಮೂಡಿಸಿದೆ. ಈ ಹೋರಾಟದಲ್ಲಿ ಹುಡುಗರಷ್ಟೇ ಹುಡುಗಿಯರು ಸಕ್ರಿಯರಾಗಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಪೊಲೀಸ್ ದೌರ್ಜನ್ಯ, ಅನುಚಿತ ವರ್ತನೆಗೆ ಹೆದರಿಲ್ಲ. ಬದಲಿಗೆ, ಪ್ರತಿರೋಧ ತೋರಿದ್ದಾರೆ. ಘೋಷಣೆಗಳನ್ನು ಕೂಗಿದ್ದಾರೆ. ದಮಡಿ ಹಿಡಿದು ಕ್ರಾಂತಿಗೀತೆ ಹಾಡಿದ್ದಾರೆ. ಹುಡುಗರನ್ನು ಪೊಲೀಸರು ಹೊತ್ತೊಯ್ಯಲು ಅಡ್ಡಿಪಡಿಸಿ, ಗುರಾಣಿ ಆಗಿದ್ದಾರೆ. ಪೊಲೀಸರ ವಾಹನಗಳ ಮುಂದೆ ಕುಳಿತು ಮುಂದೆ ಹೋಗದಂತೆ ಅಡ್ಡಗಟ್ಟಿದ್ದಾರೆ. ಯುವತಿಯರನ್ನು ಪುರುಷ ಪೊಲೀಸರು ಮುಟ್ಟುವಂತಿಲ್ಲ. ಬಂಧಿಸಲು ಬರುವುದಿಲ್ಲ. ಇದರ ಲಾಭವನ್ನು ಚಳವಳಿಗಾರರು ಪಡೆದಿದ್ದಾರೆ. ಎಷ್ಟೋ ಹುಡುಗರು ಪೊಲೀಸರಿಂದ ತಪ್ಪಿಸಿಕೊಳ್ಳಲು ಯುವತಿಯರು ನೆರವಾಗಿದ್ದಾರೆ. ಚಳವಳಿ ತಂತ್ರದ ಭಾಗವಾಗಿ ಯುವತಿಯರನ್ನು ಮುಂದೆ ಬಿಟ್ಟು, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲಾಗುತ್ತಿದೆ.

ಈ ಹಿಂದೆ, ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ ಯುವತಿಯರ ರಕ್ಷಣೆಗೆ ಯುವಕರು ಇರುತ್ತಿದ್ದರು. ಈಗ ಪರಿಸ್ಥಿತಿ ಉಲ್ಟಾ. ಯುವತಿಯರೇ ಯುವಕರ ಬೆಂಗಾವಲಿಗಿದ್ದಾರೆ. ಅದಕ್ಕೆ ಈಗಿನ ಕಾನೂನುಗಳೂ ಕಾರಣವಾಗಿವೆ. ಹೋರಾಟದಲ್ಲಿ ಭಾಗಿಯಾಗಿರುವ ಯುವತಿಯರ ಧೈರ್ಯ, ಸಾಹಸ, ಬೌದ್ಧಿಕತೆ, ವಾಕ್ ಚಾತುರ್ಯ, ನಾಯಕತ್ವ ಗುಣ ಮೆಚ್ಚುವಂತಹದ್ದು. ಪ್ರತಿಯೊಬ್ಬರಲ್ಲೂ ವೈಚಾರಿಕ ಸ್ಪಷ್ಟತೆ ಇದೆ. ಸೈದ್ಧಾಂತಿಕ ಬದ್ಧತೆ ಇದೆ. ನೇಹಾ ಬೋರಾ, ರತ್ನಾ ಸಿಂಗ್, ಮನಿಕಾ, ನಿಧಿ, ಹೀನಾ ಫಾತಿಮಾ, ಪವಿತ್ರಾ ಮತ್ತಿತರರ ಜತೆ ಸಾವಿರಾರು ಯುವತಿಯರು ಹೆಜ್ಜೆ ಹಾಕಿದ್ದಾರೆ. ಅವರಲ್ಲಿ ಯಾರೂ ಕಡಿಮೆಯಿಲ್ಲ. ಕವಿ ಸಿದ್ದಲಿಂಗಯ್ಯ ಅವರ ಹೋರಾಟದ ಹಾಡುಗಳಲ್ಲಿ ಬರುವ ‘ಇವರು ಬಾಯಿ ಬಿಟ್ಟೊಡನೆ ಅವರ ಬಾಯಿ ಕಟ್ಟತು. ಇವರ ಕಂಠ ಕೇಳಿದೊಡನೆ ಅವರ ದನಿ ಇಂಗಿತು’ ಸಾಲಿನಂತೆ ಯುವತಿಯರು ಸರಕಾರದ ಬಾಯಿ ಕಟ್ಟಿದ್ದಾರೆ. ಅವರ ಬಾಯಿಂದ ಕಿಡಿಗಳು ಹಾರುತ್ತವೆ.

ಅಕ್ಟೋಬರ್ ೧೦ರ ಜೆನ್ ಝಿ ಹೋರಾಟಕ್ಕೆ ‘ಜಂತರ್ ಮಂತರ್’ ಬಳಿ ಪೊಲೀಸರು ಅನುಮತಿ ಕೊಡಲಿಲ್ಲ. ಇಡೀ ಪ್ರದೇಶಕ್ಕೆ ಬೇಲಿ ಹಾಕಲಾಯಿತು. ನಿರೀಕ್ಷೆಗೂ ಮೀರಿ ಭದ್ರತಾ ಸಿಬ್ಬಂದಿ ಜಮಾವಣೆ ಮಾಡಲಾಯಿತು. ಚಳವಳಿ ಹತ್ತಿಕ್ಕುವ ಪ್ರಯತ್ನ ನಡೆಯಿತು. ಸಿಜೆಪಿ ಮುಖಂಡರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್, ಅಶುತೋಷ್ ರಾಂಕಾ ಅವರನ್ನು ವಶಕ್ಕೆ ಪಡೆಯಲಾಯಿತು. ‘ಪ್ರತಿಭಟನಾಕಾರರು ಬರುವುದಿಲ್ಲ. ಪ್ರತಿಭಟನೆ ಆಗುವುದಿಲ್ಲ’ವೆಂದು ಸರಕಾರ ಭಾವಿಸಿತ್ತು. ಏನಾಗಬಹುದು, ಏನಾಗಬಹುದು ಎನ್ನುವ ತವಕ ಎಲ್ಲರಲ್ಲೂ. ನೇಹಾ ಬೋರಾ ಪ್ರತ್ಯಕ್ಷರಾದರು. ಹೋರಾಟಕ್ಕೆ ಜೀವ ತಂದರು. ಏಳು ಸಾವಿರ ಹೋರಾಟಗಾರರ ಬಂಧನವಾಯಿತು. ಆಗ ಮುಂದೆ ನಿಂತು ಹೋರಾಟ ನಡೆಸಿದ್ದೇ ಯುವತಿಯರು. ಇಡೀ ದಿಲ್ಲಿ ಜಂತರ್ ಮಂತರ್ ಆಯಿತು. ಪ್ರತಿಭಟನಾಕಾರರನ್ನು ನಿಯಂತ್ರಿಸುವುದು ಭದ್ರತಾ ಪಡೆಗೆ ಕಷ್ಟವಾಯಿತು.

ಇತ್ತೀಚಿನ ವರ್ಷಗಳಲ್ಲಿ ಯಾವ ಚಳವಳಿಯಲ್ಲೂ ಯುವತಿಯರು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಾಗಿಯಾಗಿರಲಿಲ್ಲ. ಸ್ವಾತಂತ್ರ್ಯ ಚಳವಳಿಯಲ್ಲಿ ಮಹಿಳೆಯರು ಸಕ್ರಿಯವಾಗಿದ್ದರು. ಆರಂಭದಲ್ಲಿ ಬೇರೆ ಬೇರೆ ಸಂಸ್ಥಾನಗಳನ್ನು ಆಳುತ್ತಿದ್ದ ಮಹಿಳೆಯರು ಕತ್ತಿ, ಗುರಾಣಿ, ಹಿಡಿದು ರಣರಂಗದಲ್ಲಿ ಬ್ರಿಟಿಷರ ವಿರುದ್ಧ ಸೆಣಸಿದ್ದರು. ಮಹಾತ್ಮಾ ಗಾಂಧಿ ಆಗಮನದ ಬಳಿಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಗಾಂಧೀಜಿ ಮತ್ತಿತರ ಪ್ರಮುಖ ನಾಯಕರ ಬಂಧನವಾದಾಗ ಮಹಿಳೆಯರೇ ಚಳವಳಿ ಮುನ್ನಡೆಸಿದ್ದರು. ಸಾವಿರಾರು ಮಹಿಳಾ ಹೋರಾಟಗಾರರ ಹೆಸರನ್ನು ಚರಿತ್ರೆ ದಾಖಲಿಸಿಲ್ಲ. ಈ ಚಳವಳಿಗಾಗಿ ಹಣ, ಆಭರಣ, ಮನೆ, ಜಮೀನು ದಾನ ಮಾಡಿದವರ ಸಂಖ್ಯೆ ಕಡಿಮೆಯಿಲ್ಲ. ಅವರೆಲ್ಲ ಅನಾಮಧೇಯರಾಗಿ ಉಳಿದಿದ್ದಾರೆ. ಆನಂತರ ಬೇಕಾದಷ್ಟು ಹೋರಾಟ ನಡೆದಿವೆ. ತುರ್ತು ಪರಿಸ್ಥಿತಿ ವಿರೋಧಿ ಹೋರಾಟದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ.

‘ನಿರ್ಭಯಾ ಅತ್ಯಾಚಾರ ಪ್ರಕರಣ’ ದೇಶದ ಸಾಕ್ಷಿ ಪ್ರಜ್ಞೆ ಕದಡಿತು. ಈ ಪ್ರಕರಣ ಭಾರೀ ಪ್ರತಿಭಟನೆ ಹುಟ್ಟುಹಾಕಿತು. ಯುವತಿಯರು ಅದರಲ್ಲೂ ೧೮- ೨೫ವರೆಗಿನ ವಯಸ್ಸಿನವರು ಹೆಚ್ಚಿದ್ದರು. ಅದೆಷ್ಟೊ ರಾತ್ರಿ ಪ್ರತಿಭಟನೆ ನಡೆಸಿದ್ದರು. ಚಳವಳಿ ಹತ್ತಿಕ್ಕಲು ಲಾಠಿ, ಅಶ್ರುವಾಯು, ಜಲ ಫಿರಂಗಿ ಬಳಸಿದರೂ ಪ್ರಯೋಜನವಾಗಲಿಲ್ಲ. ಕೊರೆಯುವ ಚಳಿಯಲ್ಲೂ ಸರಕಾರಕ್ಕೆ ಬಿಸಿ ತಟ್ಟಿತು. ಪರಿಣಾಮವಾಗಿ ಅತ್ಯಾಚಾರ ಸಂಬಂಧಿತ ಕಾನೂನುಗಳನ್ನು ಬಿಗಿಗೊಳಿಸಲಾಯಿತು.

ಮಹಿಳಾ ಕುಸ್ತಿ ಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ನಡೆದ ಪ್ರತಿಭಟನೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಆಕರ್ಷಿಸುವಲ್ಲಿ ಸೋತಿತು. ಹಲವು ದಿನ ಮಹಿಳಾ ಕುಸ್ತಿ ಪಟುಗಳು, ಅವರ ಬೆಂಬಲಿಗರು ಜಂತರ್ ಮಂತರ್‌ನ ಕಾಲು ದಾರಿಯಲ್ಲಿ ಮಲಗಿದರು. ದೌರ್ಜನ್ಯಕ್ಕೊಳಗಾದ ಮಹಿಳೆಯರು ಹರಿಸಿದ ಕಣ್ಣೀರಿಗೂ ಸರಕಾರದ ಕಲ್ಲು ಹೃದಯ ಕರಗಲಿಲ್ಲ. ಕೊನೆಗೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಬೇಕಾಯಿತು. ಕುಸ್ತಿ ಗೆದ್ದು ದೇಶಕ್ಕೆ ಕೀರ್ತಿ ತಂದ ಮಹಿಳಾ ಕುಸ್ತಿ ಪಟುಗಳ ಗೌರವಕ್ಕೆ ಕುಂದು ಬಂದಿದ್ದು ವಿಪರ್ಯಾಸ.

‘ಭ್ರಷ್ಟಾಚಾರ ವಿರೋಧಿ ಚಳವಳಿ’ಗೆ ಮಹಿಳೆಯರು ಬರಲಿಲ್ಲ. ಆದರೆ, ಸಿಎಎ ಹೋರಾಟದಲ್ಲಿ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಿದ್ದರು. ದಿಲ್ಲಿ ಗಡಿಯಲ್ಲಿ ನಡೆದ ರೈತ ಹೋರಾಟದಲ್ಲೂ ಕೆಲವು ಮಹಿಳೆಯರಿದ್ದರು. ಅದ್ಯಾವ ಹೋರಾಟಗಳೂ ತಾರ್ಕಿಕ ಅಂತ್ಯ ಕಾಣಲಿಲ್ಲ.

ಸಿಇಸಿ ವಿರುದ್ಧದ ಚಳವಳಿಗೆ ಸರಕಾರ ಹೆದರಿದೆ. ಚಳವಳಿ ತೀವ್ರತೆ ತಗ್ಗಿಸಲು ಆಯೋಗ ಪರೋಕ್ಷ ನಿರ್ಧಾರ ಪ್ರಕಟಿಸಿದೆ. ಆದರೆ, ಹೋರಾಟಗಾರರು ಮಣಿದಿಲ್ಲ. ಸಿಇಸಿ ರಾಜೀನಾಮೆ ಕೊಡುವವರೆಗೂ ಹೋರಾಟ ನಿಲ್ಲುವಂತೆ ಕಾಣುತ್ತಿಲ್ಲ. ಅಲ್ಲದೆ, ಇದು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಮತದಾನಕ್ಕೆ ಸಂಬಂಧಿಸಿದ ವಿಷಯವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವತಿಯರು ಬರುತ್ತಿದ್ದಾರೆ. ಹುಡುಗಿಯರು ಹುಡುಗರಿಗಿಂತ ಯಾವುದರಲ್ಲೂ ಹಿಂದಿಲ್ಲ ಎಂದು ಈ ಹೋರಾಟ ನಿರೂಪಿಸಿದೆ. ಓದಿನಲ್ಲಿ ಹುಡುಗಿಯರು ಮುಂದಿದ್ದರೂ, ಲಿಂಗ ತಾರತಮ್ಯ ಸಮಾನತೆ ಅವರ ಹಾದಿಗೆ ಅಡ್ಡಿಯಾಗಿದೆ.

ದಿಲ್ಲಿ ಚಳವಳಿ ಲಿಂಗ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ. ಅಷ್ಟೇ ಅಲ್ಲ, ಜಾತಿ ತಾರತಮ್ಯ, ಧರ್ಮ ತಾರತಮ್ಯವನ್ನೂ ಮೆಟ್ಟಿ ನಿಂತಿದೆ. ಸಾಮಾಜಿಕ ಸಮಾನತೆ- ಬಹುತ್ವದ ದೃಷ್ಟಿಯಿಂದ ಮೈಲಿಗಲ್ಲು.

(ಅಂಕಣಕಾರರು ಹಿರಿಯ ಪತ್ರಕರ್ತರು)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಹೊನಕೆರೆ ನಂಜುಂಡೇಗೌಡ

contributor