ರಾಜ್ಯದಲ್ಲಿ ಪ್ರತಿವರ್ಷ ಸರಾಸರಿ 16,200 ಸೈಬರ್ ಅಪರಾಧ ದಾಖಲು

►ರಾಜ್ಯಾದ್ಯಂತ 73 ಡೀಪ್‌ಫೇಕ್ ಪ್ರಕರಣಗಳು ದಾಖಲು ►ಡಿಜಿಟಲ್ ಅರೆಸ್ಟ್ ಪ್ರಕರಣಗಳು 878ಕ್ಕೆ ಏರಿಕೆ

Update: 2026-08-06 08:12 IST


ಬೆಂಗಳೂರು : ರಾಜ್ಯದಲ್ಲಿ ಪ್ರತಿವರ್ಷ ಸರಾಸರಿ 16,200 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು, ಇತ್ತೀಚೆಗೆ ಪ್ರವರ್ಧಮಾನಕ್ಕೆ ಬಂದ ಕೃತಕ ಬುದ್ಧಿಮತ್ತೆ(ಎಐ) ಬಳಕೆಯಿಂದ ಸೃಷ್ಟಿಯಾಗುತ್ತಿರುವ ಡಿಪ್‌ಫೇಕ್ ವೀಡಿಯೊ ಹಾಗೂ ಛಾಯಚಿತ್ರಗಳು ಸೈಬರ್ ಪೊಲೀಸರಿಗೆ ಹೊಸ ಸಮಸ್ಯೆಯನ್ನು ತಂದೊಡ್ಡಿದೆ. ಈವರೆಗೆ ರಾಜ್ಯದಲ್ಲಿ ಡಿಪ್‌ಫೇಕ್ ಕುರಿತಾಗಿ 73 ಪ್ರಕರಣಗಳು ದಾಖಲಾಗಿದೆ. ಇನ್ನು ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳು 878ಕ್ಕೆ ಏರಿಕೆಯಾಗಿದೆ.

ಈ ಹಿಂದೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಆನ್‌ಪಾವತಿ, ಲೋನ್ ಅಪ್ಲಿಕೇಷನ್ ವಂಚನೆ, ಖಾತೆಗಳಲ್ಲಿ ಹಣ ಕದಿಯುವಿಕೆಯಂತಹ ಸೈಬರ್ ಅಪರಾಧಗಳು ದಾಖಲಾಗುತ್ತಿದ್ದವು. ಆದರೆ 2025ರಿಂದ ಸೈಬರ್ ವಂಚಕರು ಎಐ ಅನ್ನು ಬಳಸಿ, ಅಸಲಿ ವ್ಯಕ್ತಿಯ ದೃಶ್ಯ ಅಥವಾ ಧ್ವನಿಯನ್ನು ತಿರುಚಿ ಬೇರೆಯವರೇ ಮಾತನಾಡಿದಂತೆ ಬಿಂಬಿಸುವ ಡಿಪ್‌ಫೇಕ್ ವೀಡಿಯೊಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಇದು ಕಾನೂನುಬಾಹಿರವಾಗಿದೆ. ಹೀಗಾಗಿ ರಾಜ್ಯಾದ್ಯಂತ 2025ರಲ್ಲಿ 41 ಡಿಪ್‌ಫೇಕ್ ಪ್ರಕರಣಗಳು ದಾಖಲಾಗಿವೆ. 2026ರ ಜೂನ್ ಅಂತ್ಯದ ವೇಳೆಗೆ 32 ಡಿಪ್‌ಫೇಕ್ ಪ್ರಕರಣಗಳು ದಾಖಲಾಗಿವೆ.

ಹಿಂದಿನ ಮೂರು ವರ್ಷಗಳಿಂದ ರಾಜ್ಯಾದ್ಯಂತ ದಾಖಲಾಗಿರುವ 42,967 ಸೈಬರ್ ಅಪರಾಧ ಪ್ರಕರಣಗಳ ಪೈಕಿ 195 ಆನ್‌ಲೈನ್‌ನಲ್ಲಿ ಮಕ್ಕಳ ಅಶ್ಲೀಲತೆ(ಸಿಎಸ್‌ಎಎಮ್) ಪ್ರಕರಣ, 196 ಮ್ಯಾಟ್ರಿಮನಿ ವಂಚನೆ, 4,941 ಹೂಡಿಕೆ ವಂಚನೆ, 643 ನಕಲಿ ಗ್ರಾಹಕ ಕರೆ ಪ್ರಕರಣ, 878 ಡಿಜಿಟಲ್ ಅರೆಸ್ಟ್ ಪ್ರಕರಣ, 11 ಆಧಾರ್ ಆಧರಿತ ಪಾವತಿ(ಎಇಪಿಎಸ್) ಪ್ರಕರಣ, 2,730 ಆನ್‌ಲೈನ್ ಹಣ ವರ್ಗಾವಣೆ ವಂಚನೆ ಪ್ರಕರಣಗಳು ದಾಖಲಾಗಿವೆ.

1,407 ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣಗಳು, 408 ಸಾಲದ ಅಪ್ಲಿಕೇಶನ್‌ಗಳಲ್ಲಿನ ವಂಚನೆ ಪ್ರಕರಣಗಳು, 260 ಉಡುಗೊರೆಗಳು, ಐಫೋನ್ ಮತ್ತು ಲಾಟರಿ ವಂಚನೆ ಪ್ರಕರಣಗಳು, 1,051 ಉದ್ಯೋಗ ವಂಚನೆ ಪ್ರಕರಣಗಳು, 443 ಖಾತೆಗಳ ಹ್ಯಾಕಿಂಗ್ ಪ್ರಕರಣಗಳು, 86 ಇಮೇಲ್ ವಂಚನೆ ಪ್ರಕರಣಗಳು, 48 ಸಿಮ್ ಕಾರ್ಡ್ ವಿನಿಮಯ ಪ್ರಕರಣಗಳು ದಾಖಲಾಗಿವೆ.

1,023 ಸಾಮಾಜಿಕ ಮಾಧ್ಯಮ ಪ್ರಕರಣಗಳು, 136 ಕ್ರಿಪ್ಟೋ ಕರೆನ್ಸಿ ಹಾಗೂ ಬಿಟ್‌ಕಾಯಿನ್ ಪ್ರಕರಣಗಳು, 116 ಡೇಟಾ ಕಳ್ಳತನ ಪ್ರಕರಣಗಳು, 1,894 ಕೆವೈಸಿ ನವೀಕರಣ, ಅಪ್ಲಿಕೇಷನ್ ಲಿಂಕ್‌ಗಳಿಗಾಗಿ ಒಟಿಪಿ ವಂಚನೆ ಪ್ರಕರಣಗಳು, 137 ಜಾಹೀರಾತು ವಂಚನೆ ಪ್ರಕರಣಗಳು ದಾಖಲಾಗಿವೆ. ಉಳಿದ 26,364 ಪ್ರಕರಣಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಇತರ ಸೆಕ್ಷನ್‌ಗಳಲ್ಲಿ ದಾಖಲಾಗಿವೆ.

ವೀಡಿಯೊ ಕರೆಯ ಮೂಲಕ ಪೊಲೀಸ್, ಸಿಬಿಐ ಅಥವಾ ಕಸ್ಟಮ್ಸ್ ಅಧಿಕಾರಿಯಂತೆ ನಟಿಸಿ ಜನರನ್ನು ಹೆದರಿಸುವುದಲ್ಲದೆ, ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಬೆದರಿಸಿ ಹಣ ಸುಲಿಗೆ ಮಾಡುವ ಡಿಜಿಟಲ್ ಅರೆಸ್ಟ್ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿವೆ. 2024ರಲ್ಲಿ 455 ಪ್ರಕರಣ, 2025ರಲ್ಲಿ 346 ಪ್ರಕರಣ ಮತ್ತು 2026ರಲ್ಲಿ ಜೂನ್ ಅಂತ್ಯಕ್ಕೆ 77 ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅನಿಲ್

contributor

Similar News