Ballari | ಗಣಿಗಾರಿಕೆಯ ಗದ್ದಲದಲ್ಲಿ ಮರೆಯಾದ 50 ಸಾವಿರ ವರ್ಷಗಳ ನಾಗರಿಕತೆ

ಶಿಲಾಯುಗದಿಂದ ವಿಜಯನಗರದವರೆಗೆ ಸಂಡೂರಿನ ಅಚ್ಚರಿಯ ಇತಿಹಾಸ....!

Update: 2026-08-05 16:34 IST

ಸಂಡೂರಿನ ಇತಿಹಾಸ ಭಾಗ -1

ಬಳ್ಳಾರಿ: ಕರ್ನಾಟಕದಲ್ಲಿ ಸಂಡೂರು ಎಂದರೆ ಸಾಮಾನ್ಯವಾಗಿ ಕಬ್ಬಿಣದ ಅದಿರು, ಉಕ್ಕಿನ ಕೈಗಾರಿಕೆ ಮತ್ತು ಗಣಿಗಾರಿಕೆಯೇ ನೆನಪಾಗುತ್ತದೆ. ದೇಶದ ಕೈಗಾರಿಕಾ ಬೆಳವಣಿಗೆಗೆ ಅಪಾರ ಕೊಡುಗೆ ನೀಡುತ್ತಿರುವ ಈ ಭೂಭಾಗವು ವಾಸ್ತವದಲ್ಲಿ ಸಾವಿರಾರು ವರ್ಷಗಳ ಮಾನವ ನಾಗರಿಕತೆಯ ಅಪರೂಪದ ದಾಖಲೆಗಳನ್ನು ತನ್ನ ಮಣ್ಣಿನಡಿ ಸಂರಕ್ಷಿಸಿಕೊಂಡಿದೆ ಎಂಬುದು ಮಾತ್ರ ಇನ್ನೂ ವ್ಯಾಪಕವಾಗಿ ಜನರಿಗೆ ತಿಳಿದಿಲ್ಲ.

ಬೆಟ್ಟಗಳ ನಡುವೆ ಅಡಗಿರುವ ಗುಹೆಗಳು, ಕಲ್ಲಿನ ಆಯುಧಗಳು, ಶಿಲಾಚಿತ್ರಗಳು, ಬೃಹತ್ ಶಿಲಾಸಮಾಧಿಗಳು, ಕಬ್ಬಿಣ ಕರಗಿಸಿದ ಕುಲುಮೆಗಳು, ಪ್ರಾಚೀನ ದೇವಾಲಯಗಳು ಮತ್ತು ಶಾಸನಗಳು.. ಇವೆಲ್ಲವೂ ಸೇರಿ ಸಂಡೂರನ್ನು ದಕ್ಷಿಣ ಭಾರತದ ಅತ್ಯಂತ ಮಹತ್ವದ ಪ್ರಾಗೈತಿಹಾಸಿಕ ಮತ್ತು ಐತಿಹಾಸಿಕ ಪ್ರದೇಶವನ್ನಾಗಿ ರೂಪಿಸಿವೆ.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಅಧ್ಯಯನಗಳು, ಹಲವು ದಶಕಗಳಿಂದ ನಡೆದ ಪುರಾತತ್ವ ಸಂಶೋಧನೆಗಳು ಹಾಗೂ ಇತ್ತೀಚಿನ ನವಲೂಟಿ (ರಶೀದ್ ಗವಿ) ಅನ್ವೇಷಣೆಗಳು ಸಂಡೂರಿನ ಇತಿಹಾಸವನ್ನು ಹೊಸ ದೃಷ್ಟಿಕೋನದಿಂದ ನೋಡಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಿವೆ.

ಗಣಿಗಾರಿಕೆಯಾಚೆಗಿನ ಸಂಡೂರಿನ ನೈಜ ಪರಿಚಯ :

ಸಂಡೂರು ಪ್ರದೇಶದಲ್ಲಿ ಶಿಲಾಯುಗದ ಮಾನವ ನೆಲೆಸಿದ್ದ ಎಂಬುದಕ್ಕೆ ಪುರಾತತ್ವ ಸಾಕ್ಷ್ಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ರಾಬರ್ಟ್ ಬ್ರೂಸ್ ಫುಟ್ ಅವರಿಂದ ಆರಂಭವಾದ ಪ್ರಾಗೈತಿಹಾಸಿಕ ಅಧ್ಯಯನಗಳು, ಮೇಡೋಸ್ ಟೇಲರ್, ಥಾಮಸ್ ಮನ್ರೋ ಸೇರಿದಂತೆ ಅನೇಕ ಸಂಶೋಧಕರ ಕೆಲಸ ಹಾಗೂ ನಂತರದ ವಿಶ್ವವಿದ್ಯಾಲಯಗಳ ಅಧ್ಯಯನಗಳು ಸಂಡೂರಿನ ಮಹತ್ವವನ್ನು ನಿರಂತರವಾಗಿ ದಾಖಲಿಸಿವೆ.

ಇತ್ತೀಚಿನ ವರ್ಷಗಳಲ್ಲಿ ನವಲೂಟಿ (ರಶೀದ್ ಗವಿ) ಗುಹೆಯಲ್ಲಿ ನಡೆದ ಅಧ್ಯಯನ ಈ ಇತಿಹಾಸಕ್ಕೆ ಹೊಸ ತಿರುವು ನೀಡಿದೆ. ಗುಹೆಯಲ್ಲಿ ಪತ್ತೆಯಾದ ಸೂಕ್ಷ್ಮ ಶಿಲಾಯುಗದ ಉಪಕರಣಗಳು, ಪ್ರಾಣಿಗಳ ಪಳೆಯುಳಿಕೆಗಳು ಹಾಗೂ ನೆಲದೊಳಗಿನ ದಪ್ಪ ಪದರಗಳು ಈ ಪ್ರದೇಶದಲ್ಲಿ ಆದಿಮಾನವ ದೀರ್ಘಕಾಲ ವಾಸಿಸಿದ್ದ ಸಾಧ್ಯತೆಯನ್ನು ಬಲಪಡಿಸಿವೆ.

‘ಸಂಡೂರು’ ಎಂಬ ಹೆಸರಿನ ಹಿನ್ನೆಲೆ :

ಸಂಡೂರು ಎಂಬ ಹೆಸರಿನ ಕುರಿತು ಹಲವು ಅಭಿಪ್ರಾಯಗಳು ಲಭ್ಯವಿವೆ.

ಒಂದು ಅಭಿಪ್ರಾಯದ ಪ್ರಕಾರ, ಇದು ‘ಸ್ಕಂದಪುರ’ ಎಂಬ ಹೆಸರಿನಿಂದ ರೂಪಾಂತರಗೊಂಡಿದೆ. ಕುಮಾರಸ್ವಾಮಿ (ಸ್ಕಂದ) ಆರಾಧನೆಯ ಪ್ರಮುಖ ಕ್ಷೇತ್ರವಾಗಿದ್ದ ಕಾರಣ ಸ್ಕಂದಪುರವು ಕಾಲಕ್ರಮೇಣ ಸ್ಕಂದೂರು ಆಗಿ ನಂತರ ಸಂಡೂರು ಆಗಿರಬಹುದು.

ಮತ್ತೊಂದು ಅಭಿಪ್ರಾಯದಂತೆ, ಸುತ್ತಲಿನ ಬೆಟ್ಟಗಳಲ್ಲಿ ಅನೇಕ ಸಂದಿಗಳು ಇರುವುದರಿಂದ ಈ ಪ್ರದೇಶವನ್ನು ಸಂದಿಗಳ ಊರು ಅಥವಾ ಸಂದೂರು ಎಂದು ಕರೆಯಲಾಗಿದ್ದು, ನಂತರ ಅದು ಸಂಡೂರು ಆಗಿರಬಹುದು.

ಇನ್ನೊಂದು ಅಭಿಪ್ರಾಯದಲ್ಲಿ ಗ್ರಾಮದೇವತೆ ಚಂಡಿಯ ಆರಾಧನೆಯಿಂದ ಚಂಡಿಯೂರು ಮುಂದೆ ಸಂಡೂರು ಆಗಿದೆ ಎನ್ನಲಾಗಿದೆ.

ಶಿಲಾಯುಗ: ಸಂಡೂರಿನ ನಾಗರಿಕತೆಯ ಮೊದಲ ಅಧ್ಯಾಯ :

ಮಾನವ ಇತಿಹಾಸದಲ್ಲಿ ಅತಿ ದೀರ್ಘ ಅವಧಿಯೇ ಶಿಲಾಯುಗ. ಬರವಣಿಗೆ ಇಲ್ಲದ ಕಾಲವಾದ್ದರಿಂದ ಈ ಯುಗದ ಇತಿಹಾಸವನ್ನು ಕಲ್ಲಿನ ಆಯುಧಗಳು, ಗುಹೆಗಳು, ಶಿಲಾಚಿತ್ರಗಳು, ಪ್ರಾಣಿಗಳ ಎಲುಬುಗಳು ಹಾಗೂ ನೆಲದೊಳಗಿನ ಪುರಾವೆಗಳ ಆಧಾರದ ಮೇಲೆ ಪುನರ್ ನಿರ್ಮಿಸಲಾಗುತ್ತದೆ. ಸಂಡೂರಿನಲ್ಲಿ ಈ ಎಲ್ಲ ರೀತಿಯ ಪುರಾವೆಗಳು ದೊರೆತಿದೆ.

ಹಳೆ ಶಿಲಾಯುಗ : ಬದುಕಿಗಾಗಿ ನಡೆದ ಹೋರಾಟ

ಹಳೆ ಶಿಲಾಯುಗದ ಮಾನವ ಕೃಷಿಯನ್ನು ತಿಳಿದಿರಲಿಲ್ಲ. ಶಾಶ್ವತ ಮನೆಗಳಿರಲಿಲ್ಲ. ಆಹಾರಕ್ಕಾಗಿ ಕಾಡುಪ್ರಾಣಿಗಳನ್ನು ಬೇಟೆಯಾಡುವುದು, ಕಾಡಿನ ಹಣ್ಣು, ಬೇರು, ಗೆಡ್ಡೆಗಳನ್ನು ಸಂಗ್ರಹಿಸುವುದೇ ಜೀವನವಾಗಿತ್ತು.

ಜೋಗ, ಕುರೇಕುಪ್ಪೆ, ದರೋಜಿ ಮತ್ತು ಮಲ್ಲಾಪುರ ಪ್ರದೇಶಗಳಲ್ಲಿ ದೊರೆತ ಕೈಕೊಡಲಿಗಳು, ಸೀಳುಗತ್ತಿಗಳು ಮತ್ತು ಕಲ್ಲಿನ ಆಯುಧಗಳು ಸಂಡೂರಿನಲ್ಲಿ ಈ ಹಂತದ ಮಾನವ ನೆಲೆಸಿದ್ದನೆಂಬುದನ್ನು ದೃಢಪಡಿಸುತ್ತವೆ. ಈ ಆಯುಧಗಳಲ್ಲಿ ಕೆಲವು ಆಶ್ಯುಲಿಯನ್ ಪರಂಪರೆಯ ಲಕ್ಷಣಗಳನ್ನು ಹೊಂದಿರುವುದಾಗಿ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇದು ದಕ್ಷಿಣ ಭಾರತದ ಪ್ರಾಚೀನ ಕಲ್ಲಿನ ತಂತ್ರಜ್ಞಾನದ ಪ್ರಮುಖ ಅಧ್ಯಾಯವಾಗಿದೆ.

ಸಂಡೂರಿನ ಕಾಡುಗಳು : ಮೊದಲ ಬೇಟೆ ಪ್ರದೇಶಗಳು :

ಇಂದಿನಂತೆ ಅಂದು ಗಣಿಗಾರಿಕೆ ಇರಲಿಲ್ಲ. ಬೆಟ್ಟಗಳು ದಟ್ಟ ಅರಣ್ಯಗಳಿಂದ ಆವೃತವಾಗಿದ್ದವು. ಜಿಂಕೆ, ಕಾಡೆಮ್ಮೆ, ಕಾಡುಹಂದಿ, ಮೊಲ ಹಾಗೂ ಇತರೆ ಕಾಡುಪ್ರಾಣಿಗಳು ಹೇರಳವಾಗಿದ್ದವು.ಇಂತಹ ಪರಿಸರದಲ್ಲಿ ಬದುಕಲು ಕಲ್ಲಿನ ಆಯುಧಗಳೇ ಮಾನವನ ಪ್ರಮುಖ ಸಾಧನವಾಗಿದ್ದವು. ಸಂಡೂರಿನ ಅನೇಕ ಪುರಾತತ್ವ ನೆಲೆಗಳು ಇನ್ನೂ ಸಂಪೂರ್ಣ ವೈಜ್ಞಾನಿಕ ಉತ್ಖನನಕ್ಕೆ ಒಳಗಾಗಿಲ್ಲ. ಪತ್ತೆಯಾದ ಪುರಾವೆಗಳ ಬಹುಭಾಗವು ಮೇಲ್ಮೈ ಸಮೀಕ್ಷೆಗಳಿಂದಲೇ ಗುರುತಿಸಲ್ಪಟ್ಟಿವೆ.

ಆದ್ದರಿಂದ ರೇಡಿಯೋಮೆಟ್ರಿಕ್ ಕಾಲನಿರ್ಣಯ, ಕಾರ್ಬನ್-14 ಪರೀಕ್ಷೆ, ಭೂವಿಜ್ಞಾನ, ಪಳೆಯುಳಿಕೆ ವಿಜ್ಞಾನ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಪುರಾತತ್ವ ಮತ್ತು ಮಾನವಶಾಸ್ತ್ರಗಳನ್ನು ಒಟ್ಟುಗೂಡಿಸುವ ಬಹುಶಾಸ್ತ್ರೀಯ ಸಂಶೋಧನೆಗಳು ನಡೆದರೆ, ಸಂಡೂರಿನ ಇತಿಹಾಸವನ್ನು ಇನ್ನಷ್ಟು ನಿಖರವಾಗಿ ದಾಖಲಿಸಲು ಸಾಧ್ಯವಾಗಲಿದೆ. ಈ ಸಂಶೋಧನೆಗಳು ಕೇವಲ ಕರ್ನಾಟಕಕ್ಕಷ್ಟೇ ಅಲ್ಲ, ಇಡೀ ಭಾರತೀಯ ಉಪಖಂಡದ ಪ್ರಾಗೈತಿಹಾಸಿಕ ಅಧ್ಯಯನಕ್ಕೆ ಹೊಸ ದಿಕ್ಕು ನೀಡುವ ಸಾಮರ್ಥ್ಯ ಹೊಂದಿವೆ.

ಆದರೆ, ಸಂಡೂರಿನ ಇತಿಹಾಸದ ನಿಜವಾದ ವೈಶಿಷ್ಟ್ಯ ಕಾಣಿಸಿಕೊಳ್ಳುವುದು ಮಧ್ಯಶಿಲಾಯುಗದಿಂದ ಆರಂಭವಾಗುವ ನಾಗರಿಕತೆಯ ಬೆಳವಣಿಗೆಯಲ್ಲಿ. ಕಲ್ಲಿನ ಆಯುಧಗಳನ್ನು ಮಾತ್ರ ಬಳಸುತ್ತಿದ್ದ ಮಾನವ, ಕ್ರಮೇಣ ಪರಿಸರವನ್ನು ಅರ್ಥಮಾಡಿಕೊಳ್ಳುತ್ತಾ, ಹೊಸ ತಂತ್ರಜ್ಞಾನಗಳನ್ನು ರೂಢಿಸಿಕೊಂಡು, ಕೃಷಿ ಮತ್ತು ಪಶುಸಂಗೋಪನೆಯ ಮೂಲಕ ಶಾಶ್ವತ ಸಮಾಜವನ್ನು ನಿರ್ಮಿಸಿದ ಪಯಣದ ಸ್ಪಷ್ಟ ಕುರುಹುಗಳು ಸಂಡೂರಿನಲ್ಲಿ ಲಭ್ಯವಾಗಿವೆ.

ಮಧ್ಯಶಿಲಾಯುಗ: ಹೊಸ ತಂತ್ರಜ್ಞಾನದ ಆರಂಭ :

ಈ ಕಾಲದಲ್ಲಿ ಮಾನವ ದೊಡ್ಡ ಕಲ್ಲಿನ ಆಯುಧಗಳ ಬದಲಿಗೆ ಸಣ್ಣ ಮತ್ತು ಚೂಪಾದ ಸೂಕ್ಷ್ಮ ಶಿಲಾಯುಧಗಳನ್ನು ಬಳಸಲು ಆರಂಭಿಸಿದ. ಇವುಗಳನ್ನು ಮೈಕ್ರೋಲಿಥ್‌ಗಳು ಎಂದು ಕರೆಯಲಾಗುತ್ತದೆ. ಚರ್ಟ್, ಚಾಲ್ಸಿಡೋನಿ ಹಾಗೂ ಅಗೇಟ್ ನಂತಹ ಕಲ್ಲುಗಳಿಂದ ತಯಾರಿಸಲಾದ ಈ ಉಪಕರಣಗಳು ಬೇಟೆ, ಚರ್ಮ ಸಂಸ್ಕರಣೆ, ಮರ ಕತ್ತರಿಸುವುದು ಹಾಗೂ ಇತರೆ ದೈನಂದಿನ ಚಟುವಟಿಕೆಗಳಿಗೆ ಬಳಸಲ್ಪಡುತ್ತಿದ್ದವು.

ಸಂಡೂರಿನ ಯಶವಂತನಗರ, ರಾಜಾಪುರ, ತೋರಣಗಲ್ಲು, ಅಯ್ಯನಹಳ್ಳಿ, ಅಪ್ಪಲಾಪುರ ಮತ್ತು ಕುರೇಕುಪ್ಪೆ ಬೆಟ್ಟ ಪ್ರದೇಶಗಳಲ್ಲಿ ಇಂತಹ ನೂರಾರು ಸೂಕ್ಷ್ಮ ಶಿಲಾಯುಧಗಳು ದೊರೆತಿವೆ. ಬ್ಲೇಡ್‌ಗಳು, ಬರಿನ್‌ಗಳು, ಲ್ಯೂನೇಟ್‌ಗಳು, ಪಾಯಿಂಟ್‌ಗಳು ಹಾಗೂ ಕೋರ್‌ಗಳು ಈ ಭಾಗದಲ್ಲಿ ಅಭಿವೃದ್ಧಿ ಹೊಂದಿದ್ದ ಶಿಲಾ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿವೆ.

ನವಶಿಲಾಯುಗ; ನಾಗರಿಕತೆಯ ಮಹತ್ವದ ತಿರುವು :

ಈ ಅವಧಿಯಲ್ಲಿ ಮಾನವ ಜೀವನದಲ್ಲಿ ಮೂಲಭೂತ ಪರಿವರ್ತನೆ ಸಂಭವಿಸಿತು. ಅಲೆಮಾರಿ ಬದುಕಿಗೆ ತೆರೆಬಿದ್ದಿತು. ಕೃಷಿ ಆರಂಭವಾಯಿತು. ಪಶುಸಂಗೋಪನೆ ಬೆಳೆಯಿತು. ಮಣ್ಣಿನ ಪಾತ್ರೆಗಳ ತಯಾರಿಕೆ ಆರಂಭವಾಯಿತು. ಮನೆಗಳನ್ನು ನಿರ್ಮಿಸಿ ಕುಟುಂಬ ಮತ್ತು ಗ್ರಾಮ ವ್ಯವಸ್ಥೆ ರೂಪುಗೊಳ್ಳತೊಡಗಿತು. ಸಂಡೂರಿನ ಇಂಗಳಿಗಿ, ಲಿಂಗದಹಳ್ಳಿ, ರಾಜಾಪುರ, ದರೋಜಿ, ಲಕ್ಕಿಹಳ್ಳಿ, ತೋರಣಗಲ್ಲು ಹಾಗೂ ಅಂತಾಪುರ ಪ್ರದೇಶಗಳಲ್ಲಿ ದೊರೆತ ಉಜ್ಜಿದ ಕಲ್ಲಿನ ಕೊಡಲಿಗಳು, ಮಣ್ಣಿನ ಪಾತ್ರೆಗಳ ಅವಶೇಷಗಳು ಹಾಗೂ ಶಿಲಾಚಿತ್ರಗಳು ಈ ಬದಲಾವಣೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ.

ಬೂದಿದಿಬ್ಬಗಳು ಹೇಳುವ ಪ್ರಾಚೀನ ಜೀವನದ ಕಥೆ :

ಸಂಡೂರಿನ ನವಶಿಲಾಯುಗದ ಅಧ್ಯಯನದಲ್ಲಿ ಅತ್ಯಂತ ಗಮನಾರ್ಹ ಪುರಾವೆಗಳೆಂದರೆ ಬೂದಿದಿಬ್ಬಗಳು. ಇಂಗಳಿಗಿ ಹಾಗೂ ಲಿಂಗದಹಳ್ಳಿ ಸುತ್ತಮುತ್ತ ಕಂಡುಬಂದಿರುವ ಈ ಬೂದಿದಿಬ್ಬಗಳು ಕೇವಲ ಸುಟ್ಟ ಮರದ ಅವಶೇಷಗಳಲ್ಲ ಎಂದು ಪುರಾತತ್ವ ತಜ್ಞರು ಅಭಿಪ್ರಾಯಪಡುತ್ತಾರೆ. ಇವು ಪಶುಪಾಲನೆ, ಹಬ್ಬ-ಹರಿದಿನಗಳು ಅಥವಾ ಸಮೂಹ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿರಬಹುದೆಂಬ ಅಭಿಪ್ರಾಯವೂ ಇದೆ.ಸಂಡೂರಿನ ಬೂದಿದಿಬ್ಬಗಳು ಈ ಪ್ರದೇಶದ ಪ್ರಾಚೀನ ಕೃಷಿ ಮತ್ತು ಪಶುಸಂಗೋಪನಾ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ.

ಶಿಲಾಚಿತ್ರಗಳು : ಕಲ್ಲಿನ ಮೇಲೆ ಉಳಿದ ಕಲಾಸಂಸ್ಕೃತಿ :

ಲಕ್ಕಿಹಳ್ಳಿ, ಅಂತಾಪುರ ಹಾಗೂ ರಾಜಾಪುರ ಪ್ರದೇಶಗಳಲ್ಲಿ ಪತ್ತೆಯಾದ ಗೀರುಚಿತ್ರಗಳು ಮತ್ತು ಕುಟ್ಟಚಿತ್ರಗಳು ಈ ಭಾಗದ ಪ್ರಾಚೀನ ಕಲಾಸಂಸ್ಕೃತಿಯ ಪ್ರತೀಕಗಳಾಗಿವೆ.

ಶಿಲಾತಾಮ್ರಯುಗ : ಹೊಸ ಲೋಹದ ಪರಿಚಯ :

ನವಶಿಲಾಯುಗದ ನಂತರ ಮಾನವ ಕಲ್ಲಿನ ಜೊತೆಗೆ ತಾಮ್ರವನ್ನೂ ಬಳಸಲು ಆರಂಭಿಸಿದ. ಇದನ್ನೇ ಶಿಲಾತಾಮ್ರಯುಗ ಎಂದು ಕರೆಯಲಾಗುತ್ತದೆ. ಸಂಡೂರಿನ ಲಕ್ಷ್ಮಿಪುರ, ದರೋಜಿ, ಭೈರನಾಯಕನಹಳ್ಳಿ, ರಾಜಾಪುರ ಹಾಗೂ ಮೇದರಹಳ್ಳಿ ಪ್ರದೇಶಗಳಲ್ಲಿ ಈ ಕಾಲಕ್ಕೆ ಸೇರಿದ ಪುರಾವೆಗಳು ದೊರೆತಿವೆ.

ತಾಮ್ರದ ಕೊಡಲಿಗಳು, ಬಾಣದ ಮೊನೆಗಳು, ಮೀನು ಹಿಡಿಯುವ ಕೊಕ್ಕೆಗಳು ಹಾಗೂ ಕೃಷಿ ಉಪಕರಣಗಳು ಈ ಕಾಲದಲ್ಲಿ ತಾಂತ್ರಿಕ ಜ್ಞಾನ ಮತ್ತಷ್ಟು ವಿಸ್ತರಿಸಿದ್ದನ್ನು ಸೂಚಿಸುತ್ತವೆ. ಈ ಅವಧಿಯಲ್ಲಿ ಕೃಷಿ ಹೆಚ್ಚು ವ್ಯವಸ್ಥಿತವಾಯಿತು. ನೀರಿನ ಬಳಕೆ, ಆಹಾರ ಸಂಗ್ರಹಣೆ ಮತ್ತು ಗ್ರಾಮ ಜೀವನ ಇನ್ನಷ್ಟು ಸಂಘಟಿತ ಸ್ವರೂಪ ಪಡೆಯಿತು.

ಬೃಹತ್ ಶಿಲಾಯುಗ : ಕಬ್ಬಿಣದ ಯುಗದ ಉದಯ :

ಸಂಡೂರಿನ ಪುರಾತತ್ವ ಇತಿಹಾಸದಲ್ಲಿ ಅತ್ಯಂತ ಮಹತ್ವದ ಅಧ್ಯಾಯವೆಂದರೆ ಬೃಹತ್ ಶಿಲಾಯುಗ. ಈ ಕಾಲದಲ್ಲಿ ಮೊದಲ ಬಾರಿಗೆ ಕಬ್ಬಿಣದ ಬಳಕೆ ವ್ಯಾಪಕವಾಯಿತು. ಕೃಷಿ, ಬೇಟೆ ಹಾಗೂ ಯುದ್ಧಕ್ಕಾಗಿ ಕಬ್ಬಿಣದ ಉಪಕರಣಗಳನ್ನು ಬಳಸಲಾಯಿತು. ಇದೇ ಅವಧಿಯಲ್ಲಿ ಮರಣ ಹೊಂದಿದವರಿಗಾಗಿ ಬೃಹತ್ ಕಲ್ಲುಗಳಿಂದ ಸಮಾಧಿಗಳನ್ನು ನಿರ್ಮಿಸುವ ಪದ್ಧತಿಯೂ ಬೆಳೆಯಿತು.

ಮಲ್ಲಾಪುರ, ರಾಜಾಪುರ, ಭೈರನಾಯಕನಹಳ್ಳಿ, ಕುಮಾರಸ್ವಾಮಿ ಬೆಟ್ಟ, ಯಶವಂತನಗರ, ಅಂಕಮನಾಳೆ ಹಾಗೂ ತಾರನಗರ ಪ್ರದೇಶಗಳಲ್ಲಿ ವಿವಿಧ ಮಾದರಿಯ ಶಿಲಾಸಮಾಧಿಗಳು ಪತ್ತೆಯಾಗಿವೆ.

ಡಾಲ್ಮೆನ್, ಕಲ್ಲಿನ ವೃತ್ತಗಳು, ಶಿಲಾಕೋಣೆಗಳು ಹಾಗೂ ಸಮಾಧಿ ರಚನೆಗಳು ಈ ಭಾಗದ ಸಮಾಜವು ಮರಣಾನಂತರದ ಬದುಕಿನ ಕುರಿತೂ ನಂಬಿಕೆ ಹೊಂದಿದ್ದುದನ್ನು ಸೂಚಿಸುತ್ತವೆ.

ಸಂಡೂರು; ಪ್ರಾಚೀನ ಕಬ್ಬಿಣ ಉದ್ಯಮದ ಕೇಂದ್ರ? :

ಬೃಹತ್ ಶಿಲಾಯುಗದ ಅಧ್ಯಯನದಲ್ಲಿ ಸಂಡೂರಿನ ಮತ್ತೊಂದು ವಿಶೇಷತೆ ಬೆಳಕಿಗೆ ಬಂದಿದೆ. ಯಶವಂತ ನಗರ ಹಾಗೂ ಕುಮಾರಸ್ವಾಮಿ ಬೆಟ್ಟದ ಸುತ್ತಮುತ್ತ ಕಬ್ಬಿಣದ ಅದಿರು, ಕಬ್ಬಿಣ ಕರಗಿಸಿದ ಕುಲುಮೆಗಳು, ಕಬ್ಬಿಣದ ಕಿಟ್ಟಗಳು ಹಾಗೂ ಅಪೂರ್ಣ ಕಬ್ಬಿಣದ ಉಪಕರಣಗಳು ದೊರೆತಿವೆ. ಇವುಗಳಿಂದ ಈ ಭಾಗದಲ್ಲಿ ಕಬ್ಬಿಣ ಕರಗಿಸುವ ತಂತ್ರಜ್ಞಾನ ಅಭಿವೃದ್ಧಿಯಾಗಿತ್ತು ಎಂಬುದಕ್ಕೆ ಬಲವಾದ ಸೂಚನೆಗಳು ದೊರೆಯುತ್ತವೆ.

ಇತಿಹಾಸಕಾರರ ಅಭಿಪ್ರಾಯದಂತೆ, ಸಂಡೂರಿನ ಸಮೃದ್ಧ ಕಬ್ಬಿಣದ ಅದಿರು ಮತ್ತು ತಂತ್ರಜ್ಞಾನವೇ ನಂತರದ ಐತಿಹಾಸಿಕ ರಾಜವಂಶಗಳ ಗಮನವನ್ನೂ ಈ ಪ್ರದೇಶದತ್ತ ಸೆಳೆದಿರಬಹುದು.

ಆದಿ ಇತಿಹಾಸ, ರಾಜವಂಶಗಳ ಆಳ್ವಿಕೆ :

ಶಿಲಾಯುಗದ ಮಾನವ ನಾಗರಿಕತೆಯ ಬೆಳವಣಿಗೆಯ ನಂತರ ಸಂಡೂರು ಪ್ರದೇಶವು ಹೊಸ ಐತಿಹಾಸಿಕ ಘಟ್ಟವನ್ನು ಪ್ರವೇಶಿಸುತ್ತದೆ. ಈ ಹಂತವನ್ನು ಆದಿ ಇತಿಹಾಸ ಕಾಲ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಬರವಣಿಗೆ ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿಯಾಗಿರಲಿಲ್ಲ. ಆದರೆ ಗ್ರಾಮಗಳು, ವ್ಯಾಪಾರ, ದೇವಾಲಯಗಳು, ಇಟ್ಟಿಗೆ ಕಟ್ಟಡಗಳು ಮತ್ತು ಸಂಘಟಿತ ಸಮಾಜದ ಕುರುಹುಗಳು ಕಾಣಿಸಿಕೊಳ್ಳತೊಡಗಿದವು.

ಸಂಡೂರಿನ ಜೋಗಿಕೊಳ್ಳ, ದೇವಗಿರಿ, ಚೋರನೂರು, ಅಗ್ರಹಾರ, ಗೆಣತಿಕಟ್ಟೆ ಹಾಗೂ ಕುಮಾರಸ್ವಾಮಿ ಬೆಟ್ಟದ ಸುತ್ತಮುತ್ತ ನಡೆದ ಅಧ್ಯಯನಗಳಲ್ಲಿ ದೊರೆತ ಇಟ್ಟಿಗೆ ಕಟ್ಟಡಗಳ ಅವಶೇಷಗಳು, ಮಣ್ಣಿನ ಪಾತ್ರೆಗಳು ಮತ್ತು ಪ್ರಾಚೀನ ನೆಲೆಗಳು ಈ ಪ್ರದೇಶವು ಕ್ರಿ.ಪೂ. ಕೊನೆಯ ಶತಮಾನಗಳಿಂದಲೇ ಸಂಘಟಿತ ಮಾನವ ಸಮಾಜದ ಕೇಂದ್ರವಾಗಿತ್ತೆಂಬುದನ್ನು ಸೂಚಿಸುತ್ತವೆ.

ಮೌರ್ಯರಿಂದ ವಿಜಯನಗರದವರೆಗೆ: ಸಂಡೂರಿನ ಮೇಲೆ ಅನೇಕ ಸಾಮ್ರಾಜ್ಯಗಳ ಕಣ್ಣು

ಸಂಡೂರಿನ ಬೆಟ್ಟಗಳು ಕೇವಲ ಪ್ರಕೃತಿ ಸೌಂದರ್ಯಕ್ಕಷ್ಟೇ ಪ್ರಸಿದ್ಧವಾಗಿರಲಿಲ್ಲ. ಕಬ್ಬಿಣದ ಅದಿರು, ತಾಮ್ರ, ಮ್ಯಾಂಗನೀಸ್, ದಟ್ಟ ಅರಣ್ಯ ಮತ್ತು ಸ್ವಾಭಾವಿಕ ಕೋಟೆಯಂತಿದ್ದ ಭೌಗೋಳಿಕ ವಿನ್ಯಾಸದಿಂದಾಗಿ ಅನೇಕ ರಾಜವಂಶಗಳು ಈ ಪ್ರದೇಶವನ್ನು ತಮ್ಮ ಆಡಳಿತ ವ್ಯಾಪ್ತಿಗೆ ಸೇರಿಸಿಕೊಂಡವು.

ಮೌರ್ಯರ ಪ್ರಭಾವದ ನಂತರ ಗಂಗರು, ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಸಿಂಧರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ, ನಂತರ ಪಾಳೆಯಗಾರರು ಹಾಗೂ ಘೋರ್ಪಡೆ ಸಂಸ್ಥಾನಿಕರು ಈ ಭಾಗವನ್ನು ಆಳಿದರು. ಪ್ರತಿಯೊಂದು ರಾಜವಂಶವೂ ದೇವಾಲಯಗಳು, ಶಾಸನಗಳು, ದಾನಪತ್ರಗಳು ಹಾಗೂ ಆಡಳಿತದ ದಾಖಲೆಗಳ ಮೂಲಕ ಸಂಡೂರಿನ ಇತಿಹಾಸದಲ್ಲಿ ತನ್ನ ಗುರುತನ್ನು ಬಿಟ್ಟಿದೆ.

ಕುಮಾರಸ್ವಾಮಿ ಕ್ಷೇತ್ರ: ಸಾವಿರ ವರ್ಷಗಳ ಇತಿಹಾಸದ ಜೀವಂತ ದಾಖಲೆ :

ಇಲ್ಲಿನ ಶಾಸನಗಳು ಕ್ರಿ.ಶ. 11ನೇ ಶತಮಾನದಿಂದ 13ನೇ ಶತಮಾನದವರೆಗೆ ವಿವಿಧ ರಾಜವಂಶಗಳು ಕುಮಾರಸ್ವಾಮಿ ಕ್ಷೇತ್ರಕ್ಕೆ ನೀಡಿದ ದಾನಗಳು, ದೇವಾಲಯಗಳ ಜೀರ್ಣೋದ್ಧಾರ ಮತ್ತು ಆಡಳಿತದ ಮಾಹಿತಿಯನ್ನು ದಾಖಲಿಸಿವೆ.

ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು ಹಾಗೂ ಹೊಯ್ಸಳರು ಈ ಕ್ಷೇತ್ರಕ್ಕೆ ವಿಶೇಷ ಪ್ರೋತ್ಸಾಹ ನೀಡಿದ್ದರು. ಹೊಯ್ಸಳ ರಾಜ ವೀರ ಬಲ್ಲಾಳನ ಕಾಲದ ಶಾಸನಗಳು ಇಂದಿಗೂ ಈ ಭಾಗದ ಐತಿಹಾಸಿಕ ಮಹತ್ವವನ್ನು ಸಾರುತ್ತಿವೆ.

ವಿಜಯನಗರ ಸಾಮ್ರಾಜ್ಯ ಮತ್ತು ಸಂಡೂರು :

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸಂಡೂರು ಕೇವಲ ಗಡಿಭಾಗವಾಗಿರಲಿಲ್ಲ. ಇದು ಯುದ್ಧೋಪಕರಣಗಳ ತಯಾರಿಕೆ, ಕಬ್ಬಿಣದ ಉತ್ಪಾದನೆ ಹಾಗೂ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು ಎಂಬ ಅಭಿಪ್ರಾಯವನ್ನು ಅನೇಕ ಇತಿಹಾಸಕಾರರು ವ್ಯಕ್ತಪಡಿಸಿದ್ದಾರೆ.

ಅಪಾರ ಪ್ರಮಾಣದ ಕಬ್ಬಿಣದ ಅದಿರು ಮತ್ತು ಕುದುರೆಗಳಿಗೆ ಸೂಕ್ತವಾದ ಹುಲ್ಲುಗಾವಲುಗಳು ಇದ್ದ ಕಾರಣ ವಿಜಯನಗರ ಆಡಳಿತದಲ್ಲಿ ಸಂಡೂರಿಗೆ ಕಾರ್ಯತಂತ್ರದ ಮಹತ್ವ ದೊರೆತಿತ್ತು. ತಾರಕೇಶ್ವರ ದೇವಾಲಯ, ಅಂತಾಪುರ ಹಾಗೂ ಕುರೇಕುಪ್ಪೆ ಪ್ರದೇಶಗಳ ಶಾಸನಗಳು ವಿಜಯನಗರ ಸಾಮ್ರಾಜ್ಯದ ಆಡಳಿತದ ಕುರುಹುಗಳನ್ನು ಇಂದಿಗೂ ಉಳಿಸಿಕೊಂಡಿವೆ.

ಸಂಡೂರು ಏಕೆ ವಿಭಿನ್ನ? :

ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ ಶಿಲಾಯುಗದ ನೆಲೆಗಳು ದೊರೆತಿದ್ದರೂ, ಸಂಡೂರಿನ ವಿಶೇಷತೆ ಏನೆಂದರೆ ಒಂದೇ ಪ್ರದೇಶದಲ್ಲಿ ಹಳೆ ಶಿಲಾಯುಗದಿಂದ ಬೃಹತ್ ಶಿಲಾಯುಗದವರೆಗೆ ನಿರಂತರ ಮಾನವ ವಾಸದ ಪುರಾವೆಗಳು ದೊರೆತಿರುವುದು. ಇದು ಕೇವಲ ಪುರಾತತ್ವದ ಮಾಹಿತಿಯಲ್ಲ; ಸಾವಿರಾರು ವರ್ಷಗಳ ಮಾನವ ವಿಕಾಸವನ್ನು ಒಂದೇ ಭೌಗೋಳಿಕ ಪ್ರದೇಶದಲ್ಲಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸುವ ಅಪರೂಪದ ಪರಂಪರೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂಡೂರಿನ ಪ್ರತಿಯೊಂದು ಗುಡ್ಡ, ಪ್ರತಿಯೊಂದು ಗುಹೆ, ಪ್ರತಿಯೊಂದು ಶಿಲಾಸಮಾಧಿಯೂ ಒಂದು ಐತಿಹಾಸಿಕ ದಾಖಲೆ ಎಂಬುದರಲ್ಲಿ ಸಂದೇಹವಿಲ್ಲ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಮಹಮ್ಮದ್ ಖಾಸೀಂ

contributor

Similar News