ಧೂಳಖೇಡ ಬಸ್ ನಿಲ್ದಾಣದಲ್ಲಿ ಸೌಲಭ್ಯಗಳ ಕೊರತೆ
ಮಳೆಯಿರಲಿ, ಬಿಸಿಲಿರಲಿ... ಮರವೇ ಆಸರೆ
ಚಡಚಣ: ಮಹಾರಾಷ್ಟ್ರ-ಕರ್ನಾಟಕ ಗಡಿಯ ಧೂಳಖೇಡ ಗ್ರಾಮವು ಸಾವಿರಾರು ಪ್ರಯಾಣಿಕರ ಸಂಚಾರದ ಪ್ರಮುಖ ಕೇಂದ್ರವಾಗಿದ್ದರೂ, ಮೂಲಭೂತ ಸೌಲಭ್ಯಗಳ ಕೊರತೆಯಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಪ್ರತಿದಿನ ಧೂಳಖೇಡ ಗ್ರಾಮದಿಂದ ಶಿರನಾಳ, ಮರಗೂರ, ಚಣೇಗಾಂವ, ಶಿರಗೂರ, ಹಲಸಂಗಿ, ತದ್ದೇವಾಡಿ, ಲೋಣಿ ಸೇರಿದಂತೆ ಕರ್ನಾಟಕ-ಮಹಾರಾಷ್ಟ್ರ ಗಡಿಯ ಅನೇಕ ಗ್ರಾಮಗಳ ಜನರು ರಾಜ್ಯ ಹಾಗೂ ಅಂತಾರಾಜ್ಯ ಬಸ್‌ಗಳ ಮೂಲಕ ಸಂಚಾರ ನಡೆಸುತ್ತಾರೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಗ್ರಾಮವು ಹಗಲು-ರಾತ್ರಿ 24 ಗಂಟೆಗಳ ಕಾಲ ಪ್ರಯಾಣಿಕರ ಕೇಂದ್ರ ಬಿಂದುವಾಗಿದ್ದರೂ, ಅಗತ್ಯ ಸೌಲಭ್ಯಗಳಿಲ್ಲದೇ ಜನರು ಪರದಾಡುವಂತಾಗಿದೆ.
ಬಸ್ ನಿಲ್ದಾಣದ ಕೊರತೆ: ಬಿಸಿಲು, ಮಳೆ ಎನ್ನದೇ ಪ್ರಯಾಣಿಕರು ರಸ್ತೆ ಬದಿಯಲ್ಲೇ ನಿಂತು ಬಸ್ ಗಾಗಿ ಕಾಯಬೇಕಾದ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಹಾಗೂಸಣ್ಣ ಮಕ್ಕಳೊಂದಿಗೆ ಪ್ರಯಾಣಿಸುವ ತಾಯಂದಿರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕುಳಿತುಕೊಳ್ಳಲು ಆಸನ ವ್ಯವಸ್ಥೆಯೂ ಇಲ್ಲ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬಸ್ ನಿಲ್ದಾಣ ನಿರ್ಮಾಣವಾಗಬೇಕಾಗಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಧೂಳಖೇಡ ಗ್ರಾಮ ಗಡಿ ಭಾಗದ ಪ್ರಮುಖ ಕೇಂದ್ರವಾಗಿದೆ. ಇಲ್ಲಿಂದ ರಾಜ್ಯ ಹಾಗೂ ಅಂತಾರಾಜ್ಯ ಪ್ರದೇಶಗಳಿಗೆ ಪ್ರಯಾಣಿಕರು ಸಂಚರಿಸುತ್ತಾರೆ. ಬಸ್‌ಗಾಗಿ ಕಾಯುವವರು ಬಿಸಿಲು ಮತ್ತು ಮಳೆಯಲ್ಲಿ ಮರದ ನೆರಳಿನಲ್ಲೇ ನಿಲ್ಲುವ ಪರಿಸ್ಥಿತಿ ಇದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಬೇಕು.
-ರಮೇಶ ಬೆಳ್ಳೆನವರ
ದಲಿತ ಸೇನೆ ತಾಲೂಕು ಅಧ್ಯಕ್ಷ
ಧೂಳಖೇಡ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಈ ಹಿಂದೆ ಸ್ಥಳದ ಸಮಸ್ಯೆ ಎದುರಾಗಿತ್ತು. ಗ್ರಾಮಸ್ಥರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಲು ತಿಳಿಸಲಾಗಿದೆ.
-ಇರ್ಫಾನ್, ಟೋಲ್ ಮ್ಯಾನೇಜರ್
ಬಸ್ ನಿಲ್ದಾಣದ ಕೊರತೆಯಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಗ್ರಾಮ ಪಂಚಾಯತಿಯಿಂದ ಮನವಿ ಸಲ್ಲಿಸಲಾಗುವುದು.
-ಈಶ್ವರ ಕಾಖಂಡಕಿ
ಪಿಡಿಒ, ಗ್ರಾಪಂ ಧೂಳಖೇಡ