ಅಂತರ್ಜಾತಿ ವಿವಾಹ ಪ್ರೋತ್ಸಾಹ ಯೋಜನೆಯಲ್ಲಿ ಅಕ್ರಮ ಆರೋಪ

ನಕಲಿ ದಾಖಲೆ, ಡುಪ್ಲಿಕೇಟ್ ನೋಂದಣಿ, ಅವಧಿಗೂ ಮುನ್ನ ಎಫ್‌ಡಿ ಮುರಿತದ ಬಗ್ಗೆ ಅನುಮಾನ

Update: 2026-07-20 14:20 IST

ಕಲಬುರಗಿ: ಸಮಾಜ ಕಲ್ಯಾಣ ಇಲಾಖೆಯ ಅಂತರ್ಜಾತಿ ವಿವಾಹ ಪ್ರೋತ್ಸಾಹ ಯೋಜನೆ ಸೇರಿದಂತೆ ಪರಿಶಿಷ್ಟ ಜಾತಿ ಮರು ವಿವಾಹ ಹಾಗೂ ಪರಿಶಿಷ್ಟ ಜಾತಿಯೊಳಗಿನ ಸರಳ ವಿವಾಹ ಸಹಾಯಧನ ಯೋಜನೆಗಳಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

2017ರಿಂದ 2026ರವರೆಗೆ ಚಿಂಚೋಳಿ ತಾಲೂಕಿನ ಹಲವು ಫಲಾನುಭವಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ಸಹಾಯಧನ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಒಂದೇ ಫಲಾನುಭವಿಯ ಹೆಸರಿನಲ್ಲಿ ಡೂಪ್ಲಿಕೇಟ್ ನೋಂದಣಿ ಮಾಡಿ ಮತ್ತೆ ಸಹಾಯಧನ ಬಿಡುಗಡೆ ಮಾಡಿರುವುದು, ಗಂಡನ ಹೆಸರಿಗೆ ಈಗಾಗಲೇ ಸಹಾಯಧನ ಪಡೆದಿದ್ದರೂ ಹೆಂಡತಿಯ ಹೆಸರಿನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿ ಮತ್ತೊಮ್ಮೆ ಅನುದಾನ ಪಡೆದಿರುವುದು ಸೇರಿದಂತೆ ಹಲವು ರೀತಿಯ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡ ಸಚಿನ್ ಚವಾಣ್ ದೂರು ನೀಡಿದ್ದಾರೆ.

ಇದಲ್ಲದೆ, ಸುಳ್ಳು ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಹಾಗೂ ಇತರ ದಾಖಲೆಗಳನ್ನು ಸೃಷ್ಟಿಸಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಯೋಜನೆಯ ನಿಯಮದಂತೆ ನೀಡಲಾಗುವ 3 ಲಕ್ಷ ರೂ. ಸಹಾಯಧನವನ್ನು ನಿಗದಿತ ಅವಧಿಯವರೆಗೆ ಸ್ಥಿರ ಠೇವಣಿಯಾಗಿ (ಎಫ್‌ಡಿ) ಇಡಬೇಕಿದ್ದು, ಮೂರು ವರ್ಷಗಳೊಳಗೆ ಯಾವುದೇ ಕಾರಣಕ್ಕೂ ಮುರಿಯಲು ಅವಕಾಶವಿಲ್ಲ. ಆದರೆ ಮಧ್ಯವರ್ತಿಗಳು ಹಾಗೂ ಕೆಲ ಬ್ಯಾಂಕ್ ಸಿಬ್ಬಂದಿಯ ಸಹಕಾರದಿಂದ ಮೂರು ವರ್ಷ ಪೂರ್ಣಗೊಳ್ಳುವ ಮೊದಲೇ ಎಫ್‌ಡಿಗಳನ್ನು ಮುರಿದು ಹಣವನ್ನು ಪಡೆದುಕೊಂಡಿರುವುದು ಶಂಶಯಕ್ಕೆ ಎಡೆ ಮಾಡಿದೆ.

ಸಲ್ಲಿಕೆಯಾದ ಎಲ್ಲ ಅರ್ಜಿಗಳು, ಅನುಮೋದನೆಗೊಂಡ ಫಲಾನುಭವಿಗಳ ದಾಖಲೆಗಳು, ಸಹಾಯಧನ ಬಿಡುಗಡೆ ವಿವರಗಳು ಹಾಗೂ ಸ್ಥಳ ಪರಿಶೀಲನೆ (ಪಂಚನಾಮೆ) ವರದಿಗಳನ್ನು ಮರುಪರಿಶೀಲನೆ ಮಾಡಿ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಚಿನ್ ಚವಾಣ್ ಒತ್ತಾಯಿಸಿದ್ದಾರೆ.

ವರದಿ ನೀಡಲು ಅಧಿಕಾರಿಗಳ ಹಿಂದೇಟು?

ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಆರೋಪಗಳ ಕುರಿತು ಸ್ಪಷ್ಟ ವರದಿ ಹಾಗೂ ಸಂಬಂಧಿತ ದಾಖಲೆಗಳನ್ನು ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಚಿಂಚೋಳಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಕಡತಗಳನ್ನು ಮಾತ್ರ ಸಲ್ಲಿಸಲಾಗಿದೆ. ಆರೋಪಗಳ ಸತ್ಯಾಸತ್ಯತೆ ಬಗ್ಗೆ ಸ್ಪಷ್ಟ ವರದಿ ಮತ್ತು ದಾಖಲೆಗಳು ಇದುವರೆಗೆ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಆರೋಪಿಗಳಿಗೆ ಸಂಬಂಧಪಟ್ಟಂತೆ ಹಲವು ಬಾರಿ ಪತ್ರ ಮತ್ತು ಮೌಖಿಕವಾಗಿ ಸೂಚನೆ ನೀಡಿದ್ದೇವೆ. ಇದುವರೆಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಲ್ಲ. ಮಾಹಿತಿ ನೀಡುವಲ್ಲಿ ವಿಳಂಬವಾಗಿರುವುದರಿಂದ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ (ಕೆಸಿಎಸ್‌ಆರ್) 1966 ಪ್ರಕಾರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಮತ್ತೊಮ್ಮೆ ನೋಟಿಸ್ ನೀಡಿದ್ದೇವೆ. ಈ ಆಧಾರದಲ್ಲಿ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ.

-ಪ್ರೀತಿ ಚಂದ್ರಶೇಖರ್ ದೊಡ್ಡಮನಿ

ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಕಲಬುರಗಿ

2018-2026ರವರೆಗೆ ಈ ಯೋಜನೆ ಅಡಿಯಲ್ಲಿ ಸುಳ್ಳು ದಾಖಲಾತಿ ಸೃಷ್ಟಿಸಿ ಕೋಟಿಗಟ್ಟಲೆ ಭ್ರಷ್ಟಾಚಾರದಲ್ಲಿ ಭಾಗಿ ಆಗಿರುವ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸುವೋಮೋಟೊ ಕೇಸ್ ದಾಖಲಿಸಿ ಕಾನೂನು ಕ್ರಮ ಜರಗಿಸಬೇಕು. ಹಣ ಹಿಂಪಡೆದು ರಿಕವರಿ ಮಾಡಿ ಸೂಕ್ತ ಫಲಾನುಭವಿಗಳಿಗೆ ನೀಡಬೇಕು.

-ಸಚಿನ್ ಚವಾಣ್, ಜಿಲ್ಲಾಧ್ಯಕ್ಷ

ಕೆಆರ್‌ಎಸ್ ಪಕ್ಷ ಕಲಬುರಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಾಜಿದ್‌ ಅಲಿ

contributor

Similar News