ಆರೋಗ್ಯ ಸಮೀಕ್ಷೆಗೆ ಅಂಟಿದ ಅನಾರೋಗ್ಯ
ಮೂಲತಃ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಮಹಿಳಾ ಸ್ಪಂದಿ ಸಮೀಕ್ಷೆಯಾಗಿದೆ. ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಧಿಕ ಸಂಖ್ಯೆಯ ಸೂಚಿಗಳು ಸಮೀಕ್ಷೆಯಲ್ಲಿರುತ್ತಿದ್ದವು. ಇಂತಹ ಮಹಿಳಾ ಸ್ಪಂದಿ ಸೂಚಿಯಾದ ಸಮೀಕ್ಷೆಯು ಒಟ್ಟು ಜನಸಂಖ್ಯೆಯ ಮತ್ತು ಜನನ ಸಂದರ್ಭದಲ್ಲಿನ ಮಕ್ಕಳ ಲಿಂಗ ಅನುಪಾತಗಳ ಸೂಚಿಗಳನ್ನು ಒಳಗೊಂಡಿಲ್ಲ. ಒಂದು ಕಡೆ ವಯಸ್ಸಿಗೆ ತಕ್ಕ ಎತ್ತರವಿಲ್ಲದ(ಸ್ಟಂಟೆಡ್) ಮತ್ತು ಎತ್ತರಕ್ಕೆ ತಕ್ಕ ತೂಕವಿಲ್ಲದ(ವೇಸ್ಟೆಡ್) ಮಕ್ಕಳ ಪ್ರಮಾಣ ಕಡಿಮೆಯಾಗಿದೆ ಎಂದು ಸಮೀಕ್ಷೆ ಹೇಳುತ್ತದೆ. ಮತ್ತೊಂದು ಕಡೆ ಶಿಫಾರಸು ಮಾಡಿದ ತೂಕಕ್ಕಿಂತ(ಬಿಎಂಐ)ಕಡಿಮೆಯಿರುವ ಮಹಿಳೆಯರ ಮತ್ತು ಪುರುಷರ ಪ್ರಮಾಣ ಏರಿಕೆಯಾಗಿದೆ ಎನ್ನುತ್ತದೆ. ಈ ದ್ವಂದ್ವವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?
ಕಳೆದ ಮೂರು ದಶಕಗಳಿಂದ ನಡೆದುಕೊಂಡು ಬಂದಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(ಎನ್‌ಎಫ್‌ಎಚ್‌ಎಸ್)ಯ 6ನೆಯ ಸುತ್ತಿನ ವರದಿಯನ್ನು(ಫ್ಯಾಕ್ಟ್ ಶೀಟ್) ಒಕ್ಕೂಟ ಸರಕಾರ ಮೇ 29, 2026ರಂದು ಬಿಡುಗಡೆ ಮಾಡಿದೆ. ಜಾಗತಿಕಮಟ್ಟದಲ್ಲಿ ಇದು ಮನ್ನಣೆ ಪಡೆದ ಒಂದು ದೊಡ್ಡ ಸಮೀಕ್ಷೆಯಾಗಿದೆ. ಇದರಲ್ಲಿ ಆರೋಗ್ಯ ಕಾರ್ಯಕ್ರಮಗಳ ಬಗೆಗಿನ ಮಾಹಿತಿಯಲ್ಲದೆ ಕಾರ್ಯಕ್ರಮಗಳ ಫಲಿತಗಳನ್ನು ಈ ಸಮೀಕ್ಷೆಯು ಒಳಗೊಂಡಿರುತ್ತದೆ. ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾಮಟ್ಟದ ಆರೋಗ್ಯ ಮಾಹಿತಿಯ ಮೂಲ ಇದಾಗಿದೆ. ಸಂತಾನೋತ್ಪತ್ತಿ, ಆರೋಗ್ಯಕ್ಕೆ ಮತ್ತು ಜನಸಂಖ್ಯೆಗೆ ಸಂಬಂಧಿಸಿದ ಅನೇಕ ಸೂಚಿಗಳ ಬಗ್ಗೆ - ಉದಾ: ಲಿಂಗ ಅನುಪಾತ, ಶಿಶು ಮರಣ ಪ್ರಮಾಣ, ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಅನೀಮಿಯಾ(ರಕ್ತಹೀನತೆ), ಕುಟುಂಬಗಳು ಬಳಸುವ ನಿರ್ಮಲ ಅಡುಗೆ ಇಂಧನ, ಕುಡಿಯುವ ನೀರು, ಮಧುಮೇಹ ಮುಂತಾದ ಸಂಗತಿಗಳ ಬಗ್ಗೆ ಸಮೀಕ್ಷೆಗಳು ಸಾಂಖ್ಯಿಕ ಮಾಹಿತಿಯನ್ನು ನೀಡುತ್ತಾ ಬಂದಿವೆ.
ಆದರೆ ಇದೀಗ ಸಮೀಕ್ಷೆಯ 6ನೇ ಸುತ್ತಿನ ವರದಿಯನ್ನು ಕೇಂದ್ರವು ಬಿಡುಗಡೆ ಮಾಡಿದೆ. ಈ ಸಮೀಕ್ಷೆಯ ವರದಿ ಪ್ರಕಾರ ಕೇಂದ್ರ ಸರಕಾರವು ಹಿಂದಿನ ಸುತ್ತಿನಲ್ಲಿದ್ದ 131 ಸೂಚಿಗಳಿಗೆ ಬದಲಾಗಿ 101 ಸೂಚಿಗಳನ್ನು ಮಾತ್ರ ಸಮೀಕ್ಷೆಯು ಒಳಗೊಂಡಿದೆ. ದೇಶದಲ್ಲಿ ಸೂಕ್ತವಾದ ಆರೋಗ್ಯ ನೀತಿ ನಿರೂಪಣೆಯ ದೃಷ್ಟಿಯಿಂದ ಮಹತ್ವದ 30 ಸೂಚಿಗಳನ್ನು ಸಮೀಕ್ಷೆಯಲ್ಲಿ ಕೈಬಿಡಲಾಗಿದೆ. ಇದರಿಂದಾಗಿ ಸಮೀಕ್ಷೆಯ ವ್ಯಾಪ್ತಿಯು ಕಡಿಮೆಯಾಗಿದೆ.
ಸಮೀಕ್ಷೆಯಲ್ಲಿ ಕೈಬಿಟ್ಟ ಸೂಚಿಗಳು
ಪ್ರಧಾನಮಂತ್ರಿ ಅವರ ‘ಅನೀಮಿಯಾ ಮುಕ್ತ ಭಾರತ’ ಕಾರ್ಯಕ್ರಮದ ಮಾಪನವಾಗಬಹುದಾಗಿದ್ದ ಮಕ್ಕಳ ಮತ್ತು ಮಹಿಳೆಯರಲ್ಲಿನ ಅನೀಮಿಯಾ(ರಕ್ತಹೀನತೆ) ಸೂಚಿಗಳನ್ನು ಅದರ ಮಾಪನ ವಿಧಾನದಲ್ಲಿ ಸಮಸ್ಯೆಯಿದೆ ಎಂಬ ನೆಪ ಹೇಳಿ ಕೈಬಿಟ್ಟಿದೆ. ಮಕ್ಕಳು ಮತ್ತು ಮಹಿಳೆಯರಲ್ಲಿ ಅನೀಮಿಯಾ ಪ್ರಮಾಣವು 2015-16(4ನೆಯ ಸುತ್ತಿನ ಸಮೀಕ್ಷೆ)ರಿಂದ 2019-2021(5ನೆಯ ಸುತ್ತಿನ ಸಮೀಕ್ಷೆ) ಅವಧಿಯಲ್ಲಿ ಹೆಚ್ಚಾಗಿತ್ತು(ಮಕ್ಕಳು: ಶೇ. 58.6ರಿಂದ ಶೇ. 67.1. ಮಹಿಳೆಯರು: ಶೇ. 53.1ರಿಂದ ಶೇ. 57.0). ಇದನ್ನು ಗುರಿಯಾಗಿಟ್ಟುಕೊಂಡು ಇದು ಸರಕಾರಕ್ಕೆ ಕೆಟ್ಟ ಹೆಸರನ್ನು ತರುತ್ತದೆ ಎಂದು ಕಲ್ಪಿಸಿಕೊಂಡು 5ನೆಯ ಸುತ್ತಿನ ಸಮೀಕ್ಷೆಯ ಮುಖ್ಯಸ್ಥರಾಗಿದ್ದ ಡಾ. ಕೆ.ಎಸ್. ಜೇಮ್ಸ್ ಅವರನ್ನು ಕಾರಣ ನೀಡದೆ ಅಮಾನತು ಮಾಡಲಾಗಿತ್ತು. ಐದನೆಯ ಸುತ್ತಿನ 2019-2021ರ ಸಮೀಕ್ಷೆಯು ಕೋವಿಡ್ ಪೂರ್ವದ ಸಮೀಕ್ಷೆಯಾಗಿತ್ತು(5ನೆಯ ಸುತ್ತಿನ ಸಮೀಕ್ಷೆ ನಡೆದದ್ದು ಜೂನ್ 17, 2019ರಿಂದ ಎಪ್ರಿಲ್ 30, 2020ರವರೆಗೆ). ಕೋವಿಡ್ ಪೆಂಡಮಿಕ್ ಬಗ್ಗೆ ಡಬ್ಲುಎಚ್‌ಒ ಮಾರ್ಚ್ 1, 2020ರಂದು ಘೋಷಣೆ ನೀಡಿತ್ತು. ಇದರಿಂದಾಗಿ ಕೋವಿಡ್ ಪರಿಣಾಮಗಳ ಬಗ್ಗೆ ಸಮೀಕ್ಷೆಯು ಯಾವುದೇ ಸಂಗತಿಯನ್ನು ಒಳಗು ಮಾಡಿಕೊಳ್ಳುವುದು ಸಾಧ್ಯವಿರಲಿಲ್ಲ. ಈಗ ಕೋವಿಡ್ ನಂತರದ 2023-24ರ ಸಮೀಕ್ಷೆಯಲ್ಲಿ ಅನೀಮಿಯ ಪ್ರಮಾಣವು ತೀವ್ರ ಏರಿಕೆಯಾಗಿರುವ ಸಾಧ್ಯತೆಯನ್ನು ಗಮನಿಸಿ ಸಮೀಕ್ಷೆಯಲ್ಲಿ ಆ ಸೂಚಿಗಳನ್ನೇ ಕೈಬಿಡಲಾಗಿದೆ. ಹಿಂದಿನ 5ನೆಯ ಸಮೀಕ್ಷೆಯಲ್ಲಿ ವಯಸ್ಕ ಮಹಿಳೆ ಮತ್ತು ಪುರುಷರ ಸಾಕ್ಷರತೆಯ ಮಾಹಿತಿಯಿತ್ತು. ಇದನ್ನು ಈಗ ಸಮೀಕ್ಷೆಯಲ್ಲಿ ತೆಗೆದುಹಾಕಲಾಗಿದೆ. ಮತ್ತೊಂದು ಮಹತ್ವದ ಸೂಚಿಯಾದ ಕುಟುಂಬಗಳು ಬಳಸುವ ನಿರ್ಮಲ ಇಂಧನ ಸೂಚಿಯನ್ನು ಕೈಬಿಡಲಾಗಿದೆ. ಪ್ರಧಾನಮಂತ್ರಿ ಅವರ ಉಜ್ವಲ ಯೋಜನೆಯ ಪ್ರಗತಿಯ ಮೌಲ್ಯಮಾಪನಕ್ಕೆ ಆಧಾರವಾಗಬಹುದಾಗಿದ್ದ ಸದರಿ ಸೂಚಿಯನ್ನು ಸಮೀಕ್ಷೆಯಲ್ಲಿ ಸೇರಿಸಿಲ್ಲ.
ಶಿಶು ಮತ್ತು ಮಕ್ಕಳ ಮರಣಗಳ ವಿವರ
ಐದನೆಯ ಸುತ್ತಿನ ಸಮೀಕ್ಷೆಯಲ್ಲಿ ನವಜಾತಶಿಶು, ಶಿಶು(ಐಎಂಆರ್) ಮತ್ತು 5 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಮರಣಗಳಿಗೆ(ಸಿಎಂಆರ್)ಸಂಬಂಧಿಸಿದ ಮೂರು ಸೂಚಿಗಳಿದ್ದವು. ಶಿಶುಗಳ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಮಹತ್ವದ ಬೆಳಕು ಚೆಲ್ಲಬಹುದಾಗಿದ್ದ ಈ ಮೂರೂ ಸೂಚಿಗಳನ್ನು 6ನೆಯ ಸುತ್ತಿನ ಸಮೀಕೆಯಿಂದ ಹೊರಗಿಡಲಾಗಿದೆ. ಮೂಲತಃ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಮಹಿಳಾ ಸ್ಪಂದಿ ಸಮೀಕ್ಷೆಯಾಗಿದೆ. ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಧಿಕ ಸಂಖ್ಯೆಯ ಸೂಚಿಗಳು ಸಮೀಕ್ಷೆಯಲ್ಲಿರುತ್ತಿದ್ದವು. ಇಂತಹ ಮಹಿಳಾ ಸ್ಪಂದಿ ಸೂಚಿಯಾದ ಸಮೀಕ್ಷೆಯು ಒಟ್ಟು ಜನಸಂಖ್ಯೆಯ ಮತ್ತು ಜನನ ಸಂದರ್ಭದಲ್ಲಿನ ಮಕ್ಕಳ ಲಿಂಗ ಅನುಪಾತಗಳ ಸೂಚಿಗಳನ್ನು ಒಳಗೊಂಡಿಲ್ಲ. ಒಂದು ಕಡೆ ವಯಸ್ಸಿಗೆ ತಕ್ಕ ಎತ್ತರವಿಲ್ಲದ(ಸ್ಟಂಟೆಡ್) ಮತ್ತು ಎತ್ತರಕ್ಕೆ ತಕ್ಕ ತೂಕವಿಲ್ಲದ(ವೇಸ್ಟೆಡ್) ಮಕ್ಕಳ ಪ್ರಮಾಣ ಕಡಿಮೆಯಾಗಿದೆ ಎಂದು ಸಮೀಕ್ಷೆ ಹೇಳುತ್ತದೆ. ಮತ್ತೊಂದು ಕಡೆ ಶಿಫಾರಸು ಮಾಡಿದ ತೂಕಕ್ಕಿಂತ(ಬಿಎಂಐ)ಕಡಿಮೆಯಿರುವ ಮಹಿಳೆಯರ ಮತ್ತು ಪುರುಷರ ಪ್ರಮಾಣ ಏರಿಕೆಯಾಗಿದೆ ಎನ್ನುತ್ತದೆ. ಈ ದ್ವಂದ್ವವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?
ಸಿಸೇರಿಯನ್ ಹೆರಿಗೆಗಳು
ಸಹಜ ಹೆರಿಗೆಗಳಿಗಿಂತ ಸಿಸೇರಿಯನ್(ಸಿ ಸೆಕ್ಷನ್) ಹೆರಿಗೆಗಳಲ್ಲಿ ಅನೇಕ ಬಗೆಯ ಅಪಾಯಗಳಿರುತ್ತವೆ. ಮಹಿಳೆಯರ ಗರ್ಭಾಶಯಕ್ಕೆ ಸಂಬಂಧಿಸಿದ ಅಂಗಾಂಗಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಭವಿಷ್ಯದಲ್ಲಿ ಗರ್ಭ ಧರಿಸುವುದಕ್ಕೆ ಇದು ಅಡ್ಡಿಯಾಗಬಹುದು ಎನ್ನಲಾಗಿದೆ. ಇದು ಶಸ್ತ್ರಕ್ರಿಯೆಯ ಮೂಲಕ ನಡೆಯುವುದರಿಂದ ಇಲ್ಲಿ ತಾಯಿಗೆ ಮತ್ತು ಶಿಶುವಿಗೆ ತೊಂದರೆಗಳಾಗುವ ಸಾಧ್ಯತೆಯಿದೆ. ಈ ಸಮೀಕ್ಷೆಯ ಪ್ರಕಾರ ಸಾರ್ವಜನಿಕ ಆಸ್ಪತ್ರೆಗಳಲ್ಲಿನ ಒಟ್ಟು ಹೆರಿಗೆಗಳಲ್ಲಿ ಸಿಸೇರಿಯನ್ ಹೆರಿಗೆಗಳ ಪ್ರಮಾಣ 5ನೆಯ ಸುತ್ತಿನ ಸಮೀಕ್ಷೆಯಲ್ಲಿದ್ದುದಕ್ಕಿಂತ ಈಗ 6ನೆಯ ಸಮೀಕ್ಷೆಯ 2023-24ರಲ್ಲ್ ಏರಿಕೆಯಾಗಿದೆ. ಸಹಜ ಹೆರಿಗೆಗಳು ಸರಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಾಗಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ಇವು ಕಡಿಮೆ.
ನಿರ್ಮಲ ಇಂಧನ(ಕ್ಲೀನ್ ಪ್ಯೂಯಲ್) ಬಳಸುವ ಕುಟುಂಬಗಳ ಪ್ರಮಾಣವನ್ನು ಹಿಂದಿನ ಸಮೀಕ್ಷೆಗಳಲ್ಲಿ ಮಾಪನ ಮಾಡಲಾಗುತ್ತಿತ್ತು. ಈ ಕುಟುಂಬಗಳ ಪ್ರಮಾಣವು 2015-16ರಲ್ಲಿ ಶೇ. 43.8 ರಷ್ಟಿದ್ದುದು 2019-2021ರಲ್ಲಿ ಇದು ಶೇ. 58.6 ಕುಟುಂಬಗಳಿಗೆ ಏರಿಕೆಯಾಗಿತ್ತು. ಆದರೆ ಇದನ್ನು 2023-24ನೆಯ 6ನೆಯ ಸುತ್ತಿನ ಸಮೀಕ್ಷೆಯಲ್ಲಿ ಮಾಪನ ಮಾಡಿಲ್ಲ. ಇದರಿಂದಾಗಿ ಪ್ರಧಾನಮಂತ್ರಿಯ ಉಜ್ವಲ ಯೋಜನೆಯ ಪ್ರಗತಿಯನ್ನು ಚರ್ಚೆ ಮಾಡಲು ಸಾಧ್ಯವಿಲ್ಲ. ಸಾಂಕ್ರಾಮಿಕವಲ್ಲದ ರೋಗಗಳಾದ(ಎನ್‌ಸಿಡಿ) ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗಗಳ ಬಗ್ಗೆ ಸಮೀಕ್ಷೆಯು ಬೆಳಕು ಚೆಲ್ಲುತ್ತದೆ. ಆದರೆ ಅವುಗಳನ್ನು ತಡೆಯುವ ಕ್ರಮಗಳ ಬಗ್ಗೆ ಸಮೀಕ್ಷೆಯಲ್ಲಿ ಮಾಹಿತಿಯಿಲ್ಲ.
ಏರಿಕೆಯಾಗುತ್ತಿರುವ ಸ್ಥೂಲಕಾಯದ ಸಮಸ್ಯೆ
ಆರೋಗ್ಯದ ಒಂದು ಆತಂಕಕಾರಿ ಸಮಸ್ಯೆಯೆಂದರೆ ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ಸ್ಥೂಲಕಾಯದ (ಬೊಚ್ಚು)ಸಮಸ್ಯೆ. ಇದು ಅತ್ಯಂತ ಭಯಾನಕ ಆರೋಗ್ಯ ಸಮಸ್ಯೆಯಾಗಿದೆ. ನಮ್ಮ ದೇಶದಲ್ಲಿ ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ಸ್ಥೂಲಕಾಯದ ಪ್ರಮಾಣ 2015-16ರಲ್ಲಿ ಕ್ರಮವಾಗಿ ಶೇ. 20.6 ಮತ್ತು 18.1ರಷ್ಟಿದ್ದುದು 2023-24ರಲ್ಲಿ ಇದು ಶೇ. 30 ಮತ್ತು ಶೇ. 27.3ಕ್ಕೇರಿಕೆಯಾಗಿದೆ.
ಒಟ್ಟಾರೆ ಇಂದು ಕೇಂದ್ರ ಸರಕಾರವು ಒಂದೋ ಸಮೀಕ್ಷೆಗಳನ್ನು ತನಗೆ ಬೇಕಾದ ರೀತಿಯಲ್ಲಿ ತಿರುಚುತ್ತದೆ, ಇಲ್ಲವೇ ಸಮೀಕ್ಷೆಯ ವರದಿಗಳನ್ನು ಸಮೀಕ್ಷೆಯ ಮತ್ತು ಮಾಪನದ ವಿಧಾನಗಳು ಸರಿಯಿಲ್ಲ ಎಂದು ಅವುಗಳನ್ನು ತಳ್ಳಿಹಾಕುತ್ತದೆ. ಉದಾ: ಉದ್ಯೋಗ ಮತ್ತು ನಿರುದ್ಯೋಗಗಳ ಬಗ್ಗೆ ಐದು ವರ್ಷಗಳಿಗೊಮ್ಮೆ ಸಮೀಕ್ಷೆಗಳು ನಡೆಯುತ್ತಾ ಬಂದಿದ್ದವು. ಅಂತಹ 2017-18ರ ಸಮೀಕ್ಷೆಯಲ್ಲಿ ಕಳೆದ 45 ವರ್ಷಗಳಲ್ಲಿಯೇ ಅತ್ಯಂತ ಹೆಚ್ಚಿನ ನಿರುದ್ಯೋಗ ದೇಶದಲ್ಲಿದೆ ಎಂಬ ಫಲಿತಾಂಶ ಇದೆ ಎಂದು ಗೊತ್ತಾದಾಗ ಕೇಂದ್ರ ಸರಕಾರವು ಅದನ್ನು ಪ್ರಕಟಿಸದೆ ತಡೆಹಿಡಿದು ಬಿಟ್ಟಿತ್ತು. ಅದರಿಂದ ಬೇಸರಗೊಂಡ ಅದರ ತಜ್ಞರು ಆಯೋಗದಿಂದ ಹೊರನಡೆದರು. ಹಸಿವಿನ ಬಗ್ಗೆ(ವರ್ಲ್ಡ್ ಹಂಗರ್ ಇಂಡೆಕ್ಸ್), ಲಿಂಗ ಸಮಾನತೆಯ ಅಂತರದ ಬಗ್ಗೆ(ಗ್ಲೋಬಲ್ ಜೆಂಡರ್ ಗ್ಯಾಫ್ ಇಂಡೆಕ್ಸ್), ನಿರುದ್ಯೋಗದ ಬಗ್ಗೆ ಪ್ರಕಟವಾಗುತ್ತಿರುವ ಅಂತರ್‌ರಾಷ್ಟ್ರೀಯ ವರದಿಗಳನ್ನೆಲ್ಲ ಕೇಂದ್ರ ಸರಕಾರವು ತಿರಸ್ಕರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈಗ ಆರನೆಯ ಸುತ್ತಿನ 2023-24ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿಯನ್ನು ನೋಡಬೇಕಾಗಿದೆ. ಈ ಕ್ರಮಗಳು ತಕ್ಷಣಕ್ಕೆ ಸರಕಾರದ ವೈಫಲ್ಯವನ್ನು ತಡೆಹಿಡಿಯಬಹುದು-ಮರೆಮಾಚಬಹುದು. ಆದರೆ ಇದರಿಂದ ಅಧ್ಯಯನ ಆಧಾರದ ಸಮೀಕ್ಷೆಗಳು, ವರದಿಗಳು ಇಲ್ಲದಿದ್ದರೆ ಆರೋಗ್ಯ, ಉದ್ಯೋಗ, ಜನಸಂಖ್ಯೆ ಅಪೌಷ್ಟಿಕತೆ ಮುಂತಾದ ಮಹತ್ವದ ಸಂಗತಿಗಳ ಬಗ್ಗೆ ಸೂಕ್ತ ಕಾರ್ಯನೀತಿಗಳನ್ನು ರೂಪಿಸುವುದು ಕಷ್ಟವಾಗುತ್ತದೆ.