ಅನುಭವ ಮಂಟಪದೊಳಗೊಂದು ಪ್ರಜಾಪ್ರಭುತ್ವದ ಪ್ರಬುದ್ಧ ಚಿಂತನೆ
ಚರ್ಚೆ ಎಂದರೆ ವಾದವಲ್ಲ, ತಿಳಿವಳಿಕೆಯ ವಿಸ್ತಾರ! ಅಲ್ಲಿ, ಮತವಿಲ್ಲದೆ ಮಾತಿತ್ತು, ಸಮಭಾವದ ಚರ್ಚೆಯಿತ್ತು. ವೈಚಾರಿಕ, ವಾಸ್ತವ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವಗಳೇ ತಾತ್ವಿಕ ತಳಹದಿಗಳಾಗಿದ್ದವು. ಪ್ರಶ್ನಿಸುವ ಮನೋಧರ್ಮ ಮತ್ತು ಮುಕ್ತ ಚರ್ಚೆಗಳು ಒಟ್ಟು ವಿಶೇಷತೆ. ಹೀಗೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಶ್ರಮಿಕರ ಘನತೆ, ಕಾಯಕ ಮತ್ತು ದಾಸೋಹಗಳೆಂಬ ವೈಚಾರಿಕ ಚಿಂತನೆಗಳ ಮೂಲಕ ಪ್ರಬುದ್ಧ ಸಮಾಜಕ್ಕೆ ಪ್ರಸ್ತಾವನೆ ಬರೆದ ಅನನ್ಯ ವೇದಿಕೆ ಅನುಭವ ಮಂಟಪ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅನಾವರಣಗೊಳಿಸಿದ ಮೊದಲ ಪ್ರಜ್ಞಾವಂತ ವೇದಿಕೆಯೂ ಹೌದು. ಆ ಕಾಲಘಟ್ಟದ ಮೂಲಭೂತ ಸವಾಲುಗಳನ್ನು ವೈಚಾರಿಕ ಚಿಂತನೆಗೊಳಪಡಿಸಿ ಸಾಮುದಾಯಿಕ ಒಳಿತಿಗಾಗಿ ಪರಿಹಾರಗಳನ್ನು ಕಂಡುಕೊಳ್ಳಲು, ಮುಕ್ತ ಸಂವಾದಕ್ಕೆ ಇದು ಅಧಿಕೃತ ಚಾಲನೆ ನೀಡಿತು.
ಬೀದರ್ ಜಿಲ್ಲೆಯ ಕಲ್ಯಾಣದಲ್ಲಿ 12ನೇ ಶತಮಾನದಲ್ಲಿ ರೂಪುಗೊಂಡ ಅನುಭವ ಮಂಟಪ ದೇಶದ ಮೊತ್ತ ಮೊದಲ ಪ್ರಜಾಸೌಧವೆಂದು ಗುರುತಿಸಿಕೊಂಡಿದೆ. ಬಸವಣ್ಣ ಮತ್ತು ಶಿವಶರಣರನೇಕರು ಸೇರಿ ಸ್ಥಾಪಿಸಿದ ಐತಿಹಾಸಿಕ ಚಿಂತನಾ ವೇದಿಕೆಯು ಸಮಾಜ/ ಸಮುದಾಯ ನಿರ್ಮಾಣ ಪ್ರಕ್ರಿಯೆಗೆ ಶಾಶ್ವತ ದಿಕ್ಕು ತೋರಿಸಿದೆ. ಜಾತಿ, ವರ್ಗ, ಲಿಂಗ ವೃತ್ತಿಯಾಧಾರಿತ ತಾರತಮ್ಯಕ್ಕೆ ಇಲ್ಲಿ ಅವಕಾಶವಿರಲಿಲ್ಲ, ಬದಲಾಗಿ ಹೊಲದಲ್ಲಿ ಉಳುವ ರೈತನಿಂದ ಹಿಡಿದು ವೃತ್ತಿ ನಿರತ ಕವಿ, ಕುಂಬಾರ, ತಂಬೂರಿ ವಾದಕ, ಅಂಬಿಗ, ಚಮ್ಮಾರ ಹೀಗೆ ಎಲ್ಲಾ ವರ್ಗಗಳೂ ಸಮಾನ ಸ್ಥಾನಮಾನ ಮತ್ತು ಹಕ್ಕುಗಳೊಂದಿಗೆ ತಮ್ಮನ್ನು ತಾವು ಪ್ರತಿನಿಧಿಸಿಕೊಳ್ಳಲು, ಶಿವ ಭಕ್ತಿಯ ಚಿಂತನೆಗಳನ್ನು ಪಸರಿಸಲು ಮುಕ್ತ ವೇದಿಕೆಯಾಯಿತು. ಅನುಭವ ಮಂಟಪದ ಒಟ್ಟು ಧ್ವನಿ- ವಚನ ಸಾಹಿತ್ಯ ರೂಪದಲ್ಲಿ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಮೌಲ್ಯಗಳೆನಿಸಿವೆ. ವಿಶೇಷವಾಗಿ, ಅಲ್ಲಮಪ್ರಭುಗಳ ಶೂನ್ಯ ಸಿಂಹಾಸನದ ಪರಿಕಲ್ಪನೆ, ಸಮಾನ ಪ್ರಾತಿನಿಧ್ಯದ ಚಿಂತನೆಯನ್ನು ಪ್ರತಿಪಾದಿಸುವುದರೊಂದಿಗೆ, ಎಲ್ಲರನ್ನೊಳಗೊಳ್ಳುವ ಜನಪರ ಆಡಳಿತಕ್ಕೆ ನೂತನ ಆಯಾಮ ನೀಡಿದೆ. ಮಹಿಳಾ ವಚನಕಾರರೂ ಪುರಾತನ ಸಮಾಜದ ಬಂಧನಗಳನ್ನು ಮುರಿದು, ಆಧ್ಯಾತ್ಮಿಕ ಜೀವನ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿ, ಧರ್ಮ ನಿಷ್ಠೆಗೆ ದಾರಿ ತೋರಿದ ಬೆಳವಣಿಗೆಗಳು ಐತಿಹಾಸಿಕವೆನಿಸಿವೆ. ಹೀಗೆ ಮಹಿಳಾ ಸ್ವಾತಂತ್ರ್ಯ, ವ್ಯಕ್ತಿ ಗೌರವ, ಕಾಯಕ ದಾಸೋಹಗಳೆಂಬ ಪ್ರಬುದ್ಧ ಚಿಂತನೆಗಳೊಂದಿಗೆ ಮಹಿಳಾ ನಾಯಕತ್ವವನ್ನು ಬೆಂಬಲಿಸಿ ಗೌರವಿಸಿರುವ ಪ್ರಾಯೋಗಿಕ ನಿದರ್ಶನಗಳು ಅನುಭವ ಮಂಟಪದ ನೆಲೆಯಲ್ಲಿ ಮಹತ್ವಪೂರ್ಣ ಕೊಡುಗೆಗಳಾಗಿ ಉಳಿದಿವೆ.
<ಸಮಾಜ ಪರಿವರ್ತನೆಯ ಶಕ್ತಿ ಕೇಂದ್ರ
12ನೇ ಶತಮಾನದ ಭಾರತೀಯ ಸಮಾಜ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಬದಲಾವಣೆಗಳ ಯುಗವಾಗಿತ್ತು. ಈ ಕಾಲಘಟ್ಟದಲ್ಲಿ ಸಾಮಂತಶಾಹಿ ಆಡಳಿತ, ಜಾತಿ ವ್ಯವಸ್ಥೆ, ಧಾರ್ಮಿಕ ಕಟ್ಟುಪಾಡುಗಳು ಮತ್ತು ಸಾಮಾಜಿಕ ಆಸಹಿಷ್ಣುತೆ ಸಮಾಜವನ್ನು ತೀವ್ರವಾಗಿ ವ್ಯಾಪಿಸಿತ್ತು. ಬಲಿಷ್ಠ ವರ್ಗಗಳ ಆಧಿಪತ್ಯದಲ್ಲಿ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯು ಕೊರತೆಯಾಗಿತ್ತು. ಆಡಂಬರದ ಧಾರ್ಮಿಕ ಆಚರಣೆಗಳು, ದೈವಿಕತೆ ಮತ್ತು ಭಕ್ತರ ನಡುವಿನ ಮಧ್ಯವರ್ತಿತ್ವ ಶೋಷಿತ ಸಮುದಾಯಗಳ ಬದುಕಿಗೆ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಉದಯಿಸಿದ ಶರಣ ಸಂಕುಲಗಳು ನವಸಮಾಜದ ಮತ್ತು ಸಮ ಸಮಾಜದ ಪರ ಧ್ವನಿಯೆತ್ತುವ ಮೂಲಕ ಪರಿಶುದ್ಧ ಭಕ್ತಿ ಮಾರ್ಗವೊಂದೇ ದೈವಿಕ ಶಕ್ತಿಯ ಆದ್ಯತೆಯೆನ್ನುವ ತಾತ್ವಿಕ ಸಂದೇಶವನ್ನು ಜಗಜ್ಜ್ಜಾಹೀರುಗೊಳಿಸಿದವು. ಪ್ರಕೃತಿಯಲ್ಲಿ, ಪ್ರತಿಯೋರ್ವರ ಮನೆಮನಗಳಲ್ಲಿ, ದೈವಿಕ ನೆಲೆಯನ್ನು ಸಂಸ್ಥಾಪಿಸಿ, ಗುಡಿಸಲಲ್ಲಿ ಸ್ವಾಭಿಮಾನದ ಕ್ರಾಂತಿಗೆ ಪ್ರೇರಣೆ ನೀಡಿದವು. ಧ್ವನಿಯಿಲ್ಲದ ಸಮುದಾಯಗಳಿಗೆ ಧ್ವನಿಯಾದವು.
‘‘ಉಳ್ಳವರು ಶಿವಾಲಯವ ಮಾಡುವರಯ್ಯಾ, ನಾನೇನು ಮಾಡಲಿ ಬಡವನಯ್ಯಾ ಎನ್ನ ಕಾಲೇ ಕಂಬ, ಎನ್ನ ದೇಹವೇ ದೇಗುಲ, ಶಿರವೇ ಹೊನ್ನ ಕಲಶವಯ್ಯ ಕೂಡಲಸಂಗಮದೇವಾ, ಕೇಳಯ್ಯ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’’
‘‘ಮನವನರಿಯದೆ ಓದುದರೇನು?
ಮನಶುದ್ಧಿಯಾಗದೆ ಪೂಜೆಮಾಡುದೇನು?
ಲಿಂಗಜಾಗದೊಳಗಿನ ಲಿಂಗವ ಮರೆಯದೆ
ಹೊರಲಿಂಗವ ಮೆತ್ತೆಣಿಸುದೇನು?
ಬಸವಣ್ಣ
ಅಂಧಶ್ರದ್ಧೆ, ಆಡಂಬರದ ಆಚರಣೆಗಳನ್ನು ವಿಶ್ಲೇಷಣೆಗೆ ಗುರಿಪಡಿಸಿ ಜನರನ್ನು ಅರ್ಥಹೀನ ಆಚರಣೆಗಳಿಂದ ಬಿಡುಗಡೆಗೊಳಿಸುವ ವಿಭಿನ್ನ ಹೋರಾಟವನ್ನು ವಚನ ಚಳವಳಿ ಸಂಘಟಿಸಿತು. ಸಮಾಜದಲ್ಲಿ ಬೇರೂರಿದ್ದ ಅಸತ್ಯ, ಅನ್ಯಾಯ, ಅಧರ್ಮಗಳನ್ನು ನಿರಂತರ ಪ್ರಶ್ನಿಸುವ ಮೂಲಕ ಸಮಾಜದ ತಳಸ್ತರದ ಜನರೂ ಘನತೆಯ ಬದುಕನ್ನು ಸ್ವತಂತ್ರವಾಗಿ ಕಟ್ಟಿಕೊಳ್ಳಲು ‘ಕಾಯಕವೇ ಕೈಲಾಸ’ವೆಂಬ ಚಿಂತನೆಯೊಂದಿಗೆ ಜಾಗೃತಿ ಮೂಡಿಸಿದವು. ಒಟ್ಟಾಗಿ, ಜಾತಿ ವರ್ಗ, ಲಿಂಗ ತಾರತಮ್ಯವನ್ನು ಮೀರಿದ ಮಾನವೀಯ ಸಮಾಜ ನಿರ್ಮಾಣವೇ ಆ ಪ್ರಜಾಸೌಧದ ಮುಖ್ಯ ಕಾಳಜಿಯಾಗಿತ್ತು.
ಅನುಭವ ಮಂಟಪದ ಚರ್ಚೆಗಳಲ್ಲಿ ಮೂಲಭೂತವಾಗಿ ಬಾಹ್ಯರೂಢಿಯನ್ನು ಬಿಟ್ಟು ವಾಸ್ತವತೆಗಳನ್ನು, ಒಟ್ಟು ಜೀವನಾನುಭವಗಳನ್ನು ವೈಚಾರಿಕ ನೆಲೆಯಲ್ಲಿ ಚರ್ಚಿಸಲಾಯಿತು. ವಿಡಂಬನೆ ಮತ್ತು ಆತ್ಮಾವಲೋಕನದ ಅಂಶಗಳು ಪ್ರಧಾನವಾಗಿ ಈ ಚರ್ಚೆಗಳಲ್ಲಿ ಗೋಚರಿಸಿದವು. ಸಮಾಜದ ಬಹಿರಂಗ ಸವಾಲುಗಳನ್ನು ಅಂತರಂಗದ ಆಧ್ಯಾತ್ಮಿಕ ಅನುಭವಗಳೊಂದಿಗೆ ಮುಕ್ತವಾಗಿ ಧಿಕ್ಕರಿಸುವ ಮತ್ತು ಸ್ವಚ್ಛಗೊಳಿಸುವ ಪ್ರವೃತ್ತಿ ಅನುಭವ ಮಂಟಪದ ವಿಶೇಷತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ (ಅಕ್ಕಮಹಾದೇವಿ ವಿವಸ್ತ್ರಳಾಗಿ, ಅನುಭವ ಮಂಟಪ ಪ್ರವೇಶಿಸುವ ಸಂದರ್ಭದಲ್ಲಿ ) ನಡುವಿನ ಧಾರ್ಮಿಕ ಸಂವಾದವನ್ನು ವಿಶ್ಲೇಷಿಸುವುದಾದರೆ-
ಈ ಹೆಣದ ಕುಂಭವಿಟ್ಟು ಯಾಕೆ ಬಾಗಿಲ ತಟ್ಟಿದೆಯೆನು?
ಈ ದೇಹವು ನಾಶವಾಗುವದೂ, ಭಸ್ಮವಾಗುವದೂ,
ದೇವರಿಂದ ದೂರವಾಗುವದೂ ಗೊತ್ತಿದ್ದಾಗ?
ಏಕೆ ಅಂಥ ದೇಹವನ್ನು ತೊಳೆದಿಲ್ಲ, ಬಿಡಲಿಲ್ಲ?
ದೇಹವನ್ನು ಪರಿಗಣಿಸದವಳಾದರೆ, ದೇಹ ತೊಟ್ಟಿರುವುದೇಕೆ? ಈ ದೇಹವನ್ನು ಇನ್ನೂ ತ್ಯಜಿಸಿಲ್ಲವೇಕೆ? ಎಂದು ಅಲ್ಲಮ ಪ್ರಭುವಿನ ಪ್ರಶ್ನೆಗೆ
ಅಕ್ಕಮಹಾದೇವಿಯ ಆಧ್ಯಾತ್ಮಿಕ ನೆಲೆಯ ಉತ್ತರ
ನಾನು ನಿನ್ನ ಹೆಂಡತಿಯಾದಿಲ್ಲ,
ಮನೆಯಾದಿಲ್ಲ, ಮಕ್ಕಳಾದಿಲ್ಲ, ತಾಯಿಯಾದಿಲ್ಲ,
ನಾನಿಂದು ಚೆನ್ನಮಲ್ಲಿಕಾರ್ಜುನನ ಪ್ರಿಯೆಯಾದೆ.
ದೇಹ ತ್ಯಜಿಸಲು ಜಗವ ತ್ಯಜಿಸಿದೆನು,
ದೇಹವಿರುವದನು ನಾನರಿಯೆನು,
ಆದರೆ ದೇಹದಲ್ಲಿ ಜೀವವಿದ್ದರೆ,
ಅದು ನಿನ್ನ ತಾಳ್ಮೆಯ ಪರೀಕ್ಷೆಗೆ ಆಗಬಾರದೆ?
ನಾನು ಜಗತ್ತನ್ನು ತ್ಯಜಿಸಿದ್ದೇನೆ, ಮನಸ್ಸು ? ದೇಹದ ಸೀಮೆಯನ್ನು ಮೀರಿ ಶಿವನ ಪ್ರಿಯೆಯೆಂದು ಬಾಳುತ್ತಿದ್ದೇನೆ. ದೇಹವನ್ನು ತೊರೆದುಬಿಟ್ಟಿದ್ದರೂ, ನಿನ್ನ ಪ್ರಶ್ನೆಗೆ ನನ್ನ ಧೈರ್ಯ ಮತ್ತು ವಿಶ್ವಾಸದ ಪರೀಕ್ಷೆ ಆಗಬಾರದೆ?
ಹೀಗೆ ನೇರ, ನಿಷ್ಠುರ ನಡೆನುಡಿಯ ಮುಕ್ತ ಚಿಂತನೆಗೆ ಆದ್ಯತೆ ನೀಡಿದ್ದ ಅನುಭವ ಮಂಟಪದಲ್ಲಿ ಪರಸ್ಪರ ಶರಣು ಶರಣಾರ್ಥಿಗಳೆಂದು ಸಂಬೋಧಿಸಿ, ಗೌರವ ಮತ್ತು ಪ್ರಬುದ್ಧತೆಯಿಂದ ನಡೆದ ಚರ್ಚೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿ ಸರ್ವಕಾಲಕ್ಕೂ ಮಾದರಿಯೆನಿಸಿವೆ. ಇದು ಚರ್ಚೆಯ ಮೂಲಕ ಚಿಂತನೆಯ ಪ್ರಬುದ್ಧ ಸಂಸ್ಕೃತಿಯನ್ನು ಭಾರತೀಯರೊಳಗೆ ಹುಟ್ಟುಹಾಕಿ ವೈವಿಧ್ಯದೊಗೆ ಏಕತಾ ಪ್ರಜ್ಞೆಯನ್ನು ಉತ್ತೇಜಿಸಿದ ಶ್ರೇಷ್ಠ ಆಲೋಚನಾ ಕ್ರಮವೆಂದರೂ ತಪ್ಪಿಲ್ಲ. ಈ ವಿಧಾನವು 12ನೇ ಶತಮಾನದಲ್ಲಿ ನೈಜ ಜನತಂತ್ರ, ಸಮಾನತೆ ಆಧಾರಿತ ಸ್ವತಂತ್ರ ಸಂವಾದದ ಪ್ರಾತ್ಯಕ್ಷಿಕೆಯಾಗಿ ಭಿನ್ನತೆಯೊಂದಿಗೆ ಸಹಜವಾಗಿ ಸಹಿಷ್ಣುತಾ ಬಾಂಧವ್ಯವನ್ನು ಬೆಳೆಸಿ, ಸಮಾಜದ ನೈಜ ಪಥವನ್ನು ಸೂಚಿಸಿದೆ.
<ಬಸವಣ್ಣ ಮತ್ತು ಅಕ್ಕಮಹಾದೇವಿ ಕೊಡುಗೆ
ಮೌಲ್ಯಾಧಾರಿತ ಸಮಾಜದ ಕನಸಿನೊಂದಿಗೆ ಸಮಾನತೆಯ ಪ್ರಾತ್ಯಕ್ಷಿಕೆಯಾಗಿ ಮೂಡಿಬಂದ ಅನುಭವ ಮಂಟಪವು, ಪ್ರಜಾಪ್ರಭುತ್ವದ ತತ್ವಗಳನ್ನು ಅತ್ಯಂತ ವೇಗವಾಗಿ ಪಸರಿಸಿತು. ಬಸವಣ್ಣನವರ ನಾಯಕತ್ವದಲ್ಲಿ ಸಮಾನತೆ, ಕಾಯಕ-ದಾಸೋಹದ ಮಹತ್ವ ಮತ್ತು ಸ್ತ್ರೀ-ಪುರುಷರಿಗೆ ಸಮಾನ ಸ್ಥಾನಮಾನದ ಧ್ವನಿ ವಿಶೇಷವಾಗಿ ಇಲ್ಲಿ ಉಚ್ಚರಿಸಿತು. ಶಿವಶರಣರಿಗೆ ಸರಿಸಮಾನವಾಗಿ, ಮಹಿಳಾ ನಾಯಕತ್ವದ ಪ್ರತಿಷ್ಠೆಯನ್ನು ಕ್ರಾಂತಿಕಾರಿ ಸಮಾಜ ಸುಧಾರಣಾ ಪಥದೊಂದಿಗೆ ಅಕ್ಕಮಹಾದೇವಿ ನಿರ್ವಹಿಸಿ ಪ್ರತಿನಿಧಿಸಿರುವ ಮಾದರಿಯೂ ಇಲ್ಲಿ ಉಲ್ಲೇಖನೀಯ. ವೈಯಕ್ತಿಕ-ಸಾಮಾಜಿಕ ನಿರಾಕರಣೆಗಳ ನಡುವೆಯೂ, ಆಧ್ಯಾತ್ಮಿಕ ಶಕ್ತಿ ಹಾಗೂ ಚಿಂತನೆಯ ತೀವ್ರತೆಯಿಂದ ಸಾಂಪ್ರದಾಯಿಕ ಕಟ್ಟುಪಾಡುಗಳ ಭೀತಿಯನ್ನು ಆಕೆ ನಿರ್ವಹಿಸುವ ರೀತಿ, ಪ್ರತಿಭಟನೆಯ ರೂಪದಲ್ಲಿ ಪ್ರಬುದ್ಧ ಚಿಂತನೆಗಳನ್ನು ನಿರ್ಭೀತಿಯಿಂದ ವ್ಯಕ್ತಪಡಿಸುವ ಮಾದರಿ ಭಿನ್ನವಾದುದು ಮತ್ತು ಗಮನಾರ್ಹವಾದುದು. ದೇಹ-ಮನಸ್ಸಿನ ಬಾಹ್ಯ ಅಲಂಕಾರಕ್ಕಿಂತ ಆತ್ಮದ ಪರಿಶುದ್ಧತೆಯೇ ಮುಖ್ಯವೆಂದು ಸಾರುವ ಆಕೆಯ ವಚನಗಳು ಅನುಭವ ಮಂಟಪದ ಚಿಂತನೆಗೆ ವೈಜ್ಞಾನಿಕವೂ ಮಾನವೀಯವೂ ಆದ ರೂಪವನ್ನು ನೀಡಿದವು.
‘‘ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ?
ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದಡೆಂತಯ್ಯಾ?
ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದಡೆಂದಯ್ಯಾ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ, ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ, ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು’’
ಹೀಗೆ, ಅನುಭವ ಮಂಟಪವು ಸಾಂಪ್ರದಾಯಿಕ ಭಾರತೀಯ ಸಮಾಜದಲ್ಲಿ ಸತ್ಯಶೋಧನೆಯೊಂದಿಗೆ ಜ್ಞಾನದರ್ಶನ ಮಾಡಿಸಿದ ಮೊದಲ ಪ್ರಜಾಸೌಧವೆಂದು ಖ್ಯಾತಿಯಾಗಿದೆ. ಅದು ಕೇವಲ ಧಾರ್ಮಿಕ ಮಠವಾಗಿರಲಿಲ್ಲ, ಬದಲಾಗಿ ಸಾಮಾಜಿಕ ಕ್ರಾಂತಿಯ ತಳಹದಿಯಾಗಿತ್ತು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ, ಅಕ್ಕನಾಗಮ್ಮ, ಗಂಗಾಂಬಿಕೆ, ನೀಲಾಂಬಿಕೆ, ಸುಳೆ ಸಂಕವ್ವ, ಮಡಿವಾಳ ಮಾಚಯ್ಯ, ಜೇಡರ ದಾಸಿಮಯ್ಯ ಸೇರಿದಂತೆ ನೂರಾರು ಶರಣರ ಚಿಂತನೆಗಳನ್ನು ಒಗ್ಗೂಡಿಸಿ, ಮಾನವ ಸಮಾಜಕ್ಕೆ ಸಮಾನತೆ ಮತ್ತು ಸರ್ವರ ಕಲ್ಯಾಣದ ಸಂದೇಶ ಸಾರಿದೆ. ಪ್ರಜಾಪ್ರಭುತ್ವದ ಮಾದರಿಯಾಗಿ ಭಾರತದ ಸಂವಿಧಾನದಲ್ಲೂ ಈ ಮಾನವತಾವಾದಿ ಆದರ್ಶಗಳು ಪ್ರತಿಬಿಂಬಗೊಂಡಿವೆ. ಹೀಗೆ, 12ನೇ ಶತಮಾನದಲ್ಲಿಯೇ ಭಿನ್ನ ಜಾತಿ, ಲಿಂಗ, ಪಂಗಡಗಳ ಶರಣರಿಗೆ ಒಂದೇ ವೇದಿಕೆಯ ಪ್ರಾಮುಖ್ಯವನ್ನು ಘೋಷಿಸಿದ ಅನುಭವ ಮಂಟಪವು ಭಾರತೀಯ ಪ್ರಜಾತಂತ್ರ ವ್ಯವಸ್ಥೆಗೆ ಸಾಂಸ್ಥಿಕ ಮತ್ತು ತಾತ್ವಿಕ ತಳಹದಿಯನ್ನೊದಗಿಸಿವೆಯೆಂದರೆ ತಪ್ಪಾಗಲಾರದು. ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಕಾಯಕ, ದಾಸೋಹವೆಂಬ ಪಂಚ ಸೂತ್ರಗಳನ್ನು ನಾಡಿನಾದ್ಯಂತ ಪ್ರತಿಷ್ಠಾಪಿಸಿ ಒಬ್ಬ ವ್ಯಕ್ತಿ- ಒಂದು ಮೌಲ್ಯ ನಿಯಮವನ್ನೂ ಸಾರ್ವತ್ರಿಕಗೊಳಿಸಿತು. ಅನುಭವ ಮಂಟಪವು ಧಾರ್ಮಿಕ ವೇದಿಕೆಗೆ ಸೀಮಿತವಾಗಿರದೆ, ಮಾನವೀಯ ಮೌಲ್ಯಗಳು, ಸಮಾನತೆ, ಚರ್ಚಾ ಸಂಸ್ಕೃತಿ ಮತ್ತು ನೈತಿಕ ಆಡಳಿತದ ನಿದರ್ಶನವಾಗಿ ಸರ್ವಕಾಲಕ್ಕೂ ಪ್ರಸ್ತುತವೆನಿಸಿದೆ. ಪ್ರಜಾಪ್ರಭುತ್ವ ಸಂಸ್ಕೃತಿ ಹಾಗೂ ಜನಪರ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಪ್ರಮುಖ ಮಾದರಿಯಾಗಿಯೂ ಶ್ರೇಷ್ಠವೆನಿಸಿವೆ.