ಎಸ್‌ಐಆರ್: ಇಂದು ನೋಟಿಸ್, ನಾಳೆಯೇ ಹಾಜರಾಗುವಂತೆ ಸೂಚನೆ
ನೋಟಿಸ್ ಪಡೆಯಲು ಮತದಾರರನ್ನೇ ಮನೆಗೆ ಕರೆಸಿಕೊಳ್ಳುತ್ತಿರುವ ಬಿಎಲ್ಒ: ಆರೋಪ
ಬೆಂಗಳೂರು : ಪ್ರಸ್ತುತ ಎಸ್‌ಐಆರ್‌ನ ನೋಟಿಸ್ ಹಂತದಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಮತ್ತು ಅನ್‌ಮ್ಯಾಪಡ್ ವರ್ಗದ ಮತದಾರರಿಗೆ ವಿಚಾರಣೆ ನಡೆಯುತ್ತಿದ್ದು, ನೋಟಿಸ್ ಪಡೆದವರು ನಿಗದಿತ ದಾಖಲೆಗಳೊಂದಿಗೆ ಸಂಬಂಧಿಸಿದ ಇಆರ್‌ಒ ಅಥವಾ ಎಇಆರ್‌ಒ ಮುಂದೆ ಹಾಜರಾಗಬೇಕಿದೆ. ಈ ಪ್ರಕ್ರಿಯೆಯ ನೋಟಿಸ್ ವಿತರಣೆಯಲ್ಲಿನ ವಿಳಂಬದ ನಡುವೆಯೇ, ನೋಟಿಸ್ ಪಡೆದ ಮರುದಿನವೇ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಮತದಾರರಿಗೆ ಸೂಚಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಬೂತ್‌ವೊಂದರಲ್ಲಿ ಮತದಾರರೊಬ್ಬರು ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಸೆ.7ರಂದು ನೋಟಿಸ್ ನೀಡಲಾಗಿದ್ದು, ಸೆ.8ರಂದು ಅಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ಅಷ್ಟೇ ಅಲ್ಲದೇ, ನೋಟಿಸ್‌ಗಳನ್ನು ಬಿಎಲ್‌ಒಗಳು ಮತದಾರರ ಮನೆಗಳಿಗೆ ತೆರಳಿ ನೀಡಬೇಕೆಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದರೂ, ಬಿಎಲ್‌ಒಗಳು ಮನೆಗಳಿಗೆ ತೆರಳಿ ನೋಟಿಸ್ ನೀಡುವ ಬದಲಿಗೆ, ಮತದಾರರನ್ನೇ ತಮ್ಮ ಬಳಿ ಬಂದು ನೋಟಿಸ್ ಪಡೆದುಕೊಳ್ಳುವಂತೆ ಕರೆ ಮಾಡಿ ಕರೆಸಿಕೊಳ್ಳುತ್ತಿದ್ದಾರೆ ಎಂದು ಎಸ್‌ಐಆರ್ ನೋಟಿಸ್ ಸಂತ್ರಸ್ತ ಮತದಾರರೊಬ್ಬರು ದೂರಿದ್ದಾರೆ.
ಎಸ್‌ಐಆರ್‌ನ ಲಾಜಿಕಲ್ ಡಿಸ್ಕ್ರಿಪೆನ್ಸಿ ಹಾಗೂ ಅನ್‌ಮ್ಯಾಪಡ್ ವರ್ಗದಲ್ಲಿರುವ ಮತದಾರರಿಗೆ ಆ.24 ರಿಂದ ನೋಟಿಸ್ ವಿತರಣೆ ಆರಂಭವಾಗಬೇಕಿತ್ತು. ಆದರೆ ನೋಟಿಸ್ ವಿತರಣೆ ಪ್ರಕ್ರಿಯೆಯು ಮೂರುನಾಲ್ಕು ದಿನಗಳ ನಂತರ ನಡೆದಿರುವುದು ಕಾಣುತ್ತದೆ. ಇದೀಗ ಸಂತ್ರಸ್ತ ಮತದಾರರಿಗೆ ನೋಟಿಸ್ ಪಡೆದ ತಕ್ಷಣವೇ, ಮರುದಿನ ಹಾಜರಾಗುವಂತೆ ಸೂಚಿಸಿದರೆ ಮತದಾರರಿಗೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಕೊಳ್ಳಲು ಸಮಯ ಸಿಗುವುದಿಲ್ಲ. ಹಳೆಯ ದಾಖಲೆಗಳನ್ನು ಪರಿಶೀಲಿಸುವುದು, ಕುಟುಂಬ ಸದಸ್ಯರಿಂದ ಮಾಹಿತಿ ಪಡೆಯುವುದು ಹಾಗೂ ಉದ್ಯೋಗದ ಕಾರಣದಿಂದ ಬೇರೆಡೆ ವಾಸಿಸುತ್ತಿರುವವರು ಸ್ವಂತ ಊರಿಗೆ ಮರಳುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಉದ್ಯೋಗದ ನಿಮಿತ್ತ ನಾನು ಬೇರೆಡೆ ಇದ್ದೇನೆ. ರವಿವಾರ ನೋಟಿಸ್ ಸಿಕ್ಕಿದೆ. ಸೋಮವಾರ ಹಾಜರಾಗುವಂತೆ ಹೇಳಲಾಗಿದೆ. ಊರಿಗೆ ಬರಲು ಹಾಗೂ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲು ಸಮಯ ಬೇಕು. ನೋಟಿಸ್ ನೀಡುವುದರಲ್ಲಿ ತಡ ಮಾಡಿ, ಹಾಜರಾಗುವುದಕ್ಕೆ ಮಾತ್ರ ತುರ್ತು ಮಾಡುವುದು ಯಾವ ನ್ಯಾಯ?
-ಎಸ್‌ಐಆರ್ ನೋಟಿಸ್ ಸಂತ್ರಸ್ತ ಮತದಾರ
ದಾಖಲೆ ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಿ
ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಉದ್ದೇಶವೇ ಅರ್ಹ ಮತದಾರರ ಹೆಸರುಗಳು ಪಟ್ಟಿಯಲ್ಲಿ ಉಳಿಯುವಂತೆ ಖಚಿತಪಡಿಸುವುದಾದರೆ, ನೋಟಿಸ್ ಪಡೆದವರಿಗೆ ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಮತ್ತು ಅಗತ್ಯ ದಾಖಲೆಗಳನ್ನು ಒದಗಿಸಲು ಸಮರ್ಪಕ ಕಾಲಾವಕಾಶ ನೀಡಬೇಕು. ವಿಶೇಷವಾಗಿ ಉದ್ಯೋಗ, ಶಿಕ್ಷಣ ಅಥವಾ ಇತರ ಕಾರಣಗಳಿಂದ ಸ್ವಂತ ಊರಿನಿಂದ ದೂರವಿರುವ ಮತದಾರರಿಗೆ ಮರುದಿನವೇ ಹಾಜರಾಗುವಂತೆ ಸೂಚಿಸುವುದು ಪ್ರಾಯೋಗಿಕವಾಗಿ ಕಷ್ಟ. ಹೀಗಾಗಿ ನೋಟಿಸ್ ವಿತರಣೆಯಲ್ಲಿನ ವಿಳಂಬವನ್ನು ಪರಿಗಣಿಸಿ, ಹಾಜರಾಗಲು ಹೆಚ್ಚುವರಿ ಸಮಯ ನೀಡಬೇಕು.
-ಪವನ್ ಕಲ್ಯಾಣ್,ಸದಸ್ಯ, ನಾಗರಿಕ ಮತಕಾವಲು ಸಮಿತಿ