×
Ad

ಡಾ.ರಾಜ್ ಕುಮಾರ್ ಕುಟುಂಬದ ಹೋಲಿಕೆ ಮಾಡಿದ್ದೇಕೆ ಸುದೀಪ್‌.?

Update: 2026-06-13 19:32 IST

ಸುದೀಪ್‌(PC : PTI)

ಸರಿಯಾಗಿ ವಾರದ ಹಿಂದೆ ನಟ ಸುದೀಪ್‌ ಅವರ ಅಕ್ಕನ ಮಗ ಸಂಚಿತ್ ಚಿತ್ರದ ಸುದ್ದಿಗೋಷ್ಠಿ ನೆರವೇರಿತು. ಆದರೆ ಅಲ್ಲಿ ಸುದೀಪ್‌ ಅವರು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರ ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಅದಕ್ಕೆ ಮುಖ್ಯ ಕಾರಣ ಅವರು ಡಾ.ರಾಜ್ ಕುಮಾರ್ ಕುಟುಂಬದ ಬಗ್ಗೆ ಎತ್ತಿದಂಥ ವಿಚಾರ.

ಸಂಚಿತ್ ಅವರಲ್ಲಿ ಮಾಧ್ಯಮದವರ ಪ್ರಶ್ನೆ ತುಂಬ ಸರಳವಾಗಿತ್ತು. "ನಿಪೊಕಿಡ್ಸ್ (ಅಕ್ಕನ ಮಕ್ಕಳು ಮೊದಲಾದವರು) ಹಂಡ್ರೆಡ್ ಪರ್ಸೆಂಟ್ ನಟನೆ ಕೊಟ್ಟರೂ ಕೂಡ ‘ನೆಪೊಟಿಸಮ್’ ಅಂತ ಚರ್ಚೆಯಾಗ್ತಿದೆ. ಈ ರೀತಿಯ ನೆಗೆಟಿವ್ ಕಮೆಂಟ್ಸ್ ಕೂಡ ಬರ್ತಿದೆ. ಇದು ನಿಮಗೂ ನೋವು ನೀಡಿರಬಹುದು. ಇದಕ್ಕೆ ನಿಮ್ಮ ರಿಯಾಕ್ಷನ್ ಏನು?" ಎನ್ನುವುದೇ ಆ ಪ್ರಶ್ನೆ. ಗಮನಿಸಿ ಇದು ಸಿನಿಮಾ ಬಿಡುಗಡೆಯಾದ ಮರುದಿನ ಕೇಳಲಾದ ಪ್ರಶ್ನೆ. ಆದರೆ ಸಂಚಿತ್ ಅದನ್ನು ಒಪ್ಪಿಕೊಂಡರು. "ಅದು ನನಗೆ ನೋವು ನೀಡಿದೆ. ನೆಪೊಟಿಸಮ್ ಎನ್ನುವ ಪದದಿಂದ ನಾನು ತಪ್ಪಿಸಲು ಸಾಧ್ಯವಿಲ್ಲ. ನನಗನಿಸುತ್ತೆ, ನನ್ನನ್ನು ಸಾಬೀತು ಮಾಡಿಕೊಳ್ಳುವಂಥ ಉತ್ತಮ ಕೆಲಸವನ್ನು ನಾನು ಮಾಡಿದ್ದೇನೆ. ಮಾತ್ರವಲ್ಲ, ಈಗ ಸಿಗುತ್ತಿರುವ ಪ್ರೀತಿಯಲ್ಲಿ ನನಗೆ ಆ ನೆಗೆಟಿವಿಟಿ ಎಲ್ಲಿಯೂ ಕಾಣುತ್ತಿಲ್ಲ" ಎಂದರು.

ಸಂಚಿತ್ ಇಷ್ಟು ಸೌಮ್ಯವಾಗಿ ಪ್ರತಿಕ್ರಿಯೆ ನೀಡಿ ಮುಗಿಸಿದ್ದ ಉತ್ತರವನ್ನು ಮತ್ತೆ ಎಳೆದಾಡಿದವರು ಸುದೀಪ್‌. ಯಾಕೆಂದರೆ ನೆಪೊಟಿಸಮ್ ಅಂದರೆ ಅರ್ಹತೆ ಇರದಿದ್ದರೂ ತಮ್ಮ ಸಂಬಂಧಿಕರನ್ನೇ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡುತ್ತಾರೆ ಎನ್ನುವ ಆರೋಪ ಎಂದು ಸುದೀಪ್‌ ಅವರಿಗೆ ಅರ್ಥವಾಗಿತ್ತು. ಆದರೆ ತನ್ನ ಅಕ್ಕನ ಮಗನ ಅರ್ಹತೆಯ ಬಗ್ಗೆ ಮಾತನಾಡಬೇಕಿದ್ದ ಸುದೀಪ್‌, ಪ್ರಶ್ನೆ ಕೇಳಿದವರ ಮೇಲೆಯೇ ತಿರುಗಿ ಬಿದ್ದರು. ಸಿನಿಮಾದವರಿಗೆ ಮಾತ್ರ ಯಾಕೆ ಕೇಳುತ್ತೀರಿ ಎನ್ನುವುದು ಸುದೀಪ್‌ ಅವರ ಪ್ರಶ್ನೆ. ಆದರೆ ನೆಪೊಟಿಸಮ್ ಬಗ್ಗೆ ಎಲ್ಲ ಕಡೆಯೂ ಪ್ರಶ್ನಿಸಲಾಗುತ್ತದೆ. ರಾಜಕಾರಣದಲ್ಲಂತೂ ಈ ಬಗ್ಗೆ ಅತಿ ಹೆಚ್ಚು ಚರ್ಚೆಯಾಗಿದೆ. ಸುದೀಪ್‌ ಚಿತ್ರರಂಗದಲ್ಲಿರುವ ಕಾರಣ ಅವರ ಅಕ್ಕನ ಮಗ ಈ ಪ್ರಶ್ನೆಯನ್ನು ಎದುರಿಸಬೇಕಾಯಿತು.! ಆದರೆ ಪ್ರಶ್ನೆಗೆ ಉತ್ತರಿಸುವುದನ್ನು ಬಿಟ್ಟು, "ಶಿವಣ್ಣನಿಗೆ ಈ ಪ್ರಶ್ನೆಯನ್ನು ಯಾಕೆ ಕೇಳಿಲ್ಲ" ಎಂದರೆ ಅರ್ಥವೇನು? ಮೊದಲನೆಯದಾಗಿ ಶಿವರಾಜ್ ಕುಮಾರ್ ನಾಯಕನಾಗಿ ಪ್ರವೇಶ ಮಾಡಿ 4 ದಶಕಗಳೇ ಕಳೆದಿವೆ. ಇಂದಿಗಿಂತ ನಿಷ್ಠುರವಾಗಿದ್ದ ಅಂದಿನ ಪತ್ರಕರ್ತರು ಖಂಡಿತಾ ಇಂಥ ಪ್ರಶ್ನೆ ಕೇಳಿರುತ್ತಾರೆ. ಆದರೆ ಸುದೀಪ್ ಅವರಿಗಾಗಿ ಅಂದು ಪ್ರಶ್ನಿಸಿದವರನ್ನು ಇಂದು ಹುಡುಕಿಕೊಂಡು ಹೋಗಲು ಸಾಧ್ಯವೇ? ಮಾತ್ರವಲ್ಲ ಶಿವರಾಜ್ ಕುಮಾರ್ ತಾವೇನು ಎನ್ನುವುದನ್ನು ಯಾವತ್ತೋ ಸಾಬೀತು ಪಡಿಸಿದ್ದಾರೆ. ಹಾಗಾಗಿಯೇ ಅದು ಇಲ್ಲಿನ ಪ್ರಶ್ನೆಯೇ ಅಲ್ಲ. 'ನಿಮ್ಮದೇನು' ಎನ್ನುವುದಷ್ಟೇ ವಿಚಾರ. ಸುದೀಪ್‌ ಕೂಡ ಅದನ್ನೇ ಉತ್ತರಿಸಿದ್ದರೆ ಪಾಪ ಸಂಚಿತ್ ಸಿನಿಮಾ ಸುದ್ದಿಗೋಷ್ಠಿಗೂ ಸಾರ್ಥಕತೆ ಸಿಗುತ್ತಿತ್ತು. ಸುದೀಪ್ ಗೆ ಯಾವತ್ತೂ ಒಂದು ಉದಾಹರಣೆ ಕೊಟ್ಟೇ ಮಾತನಾಡಿ ಅಭ್ಯಾಸ! ಆದರೆ ನೆನಪಿಡಬೇಕಾದ ವಿಚಾರ ಏನೆಂದರೆ ಡಾ.ರಾಜ್ ಕುಮಾರ್ ಕುಟುಂಬ ಉದಾಹರಣೆಗೆ, ಹೋಲಿಕೆಗೆ ನಿಲುಕುವಂಥದ್ದಲ್ಲ. ಅವರ ಕುಟುಂಬದ ಬಗ್ಗೆ ಸಿನಿಮಾ ಪತ್ರಕರ್ತರೇ ಪ್ರಶ್ನಿಸಬೇಕಿಲ್ಲ, ಇಡೀ ರಾಜ್ಯವೇ ಮಾತನಾಡುತ್ತಿರುತ್ತದೆ! ಶಿವಣ್ಣನ ವಿಚಾರ ಬಿಡಿ, ಇಡೀ ರಾಜ್ ಕುಟುಂಬದಲ್ಲಿ ಎಲ್ಲೇ ಒಂದು ಮಗು ಹುಟ್ಟಿದರೂ ಅದನ್ನು ರಾಜವಂಶದ ಕುಡಿ ಎಂದು ಕೊಂಡಾಡುವ ಅಭಿಮಾನಿಗಳಿದ್ದಾರೆ. ಬಾಲನಟನಾಗಿಯೇ ಎಂಟ್ರಿಕೊಡಿಸಲು ಕಾಯುವ ಚಿತ್ರೋದ್ಯಮಿಗಳಿದ್ದಾರೆ. ಸಿನಿಮಾಗೆ ಎಂಟ್ರಿ ಕೊಡುವ ಮೊದಲೇ ಅವರೇನೆಲ್ಲ ತಯಾರಿ ನಡೆಸುತ್ತಿದ್ದಾರೆ ಎನ್ನುವುದು ಕೂಡ ಸಾಮಾನ್ಯ ಜನತೆಯನ್ನು ತಲುಪಿರುತ್ತದೆ. ಆದರೆ ಸಂಚಿತ್ ಹಾಗಲ್ಲ. ವರ್ಷದ ಹಿಂದೆ 'ಜಿಮ್ಮಿ' ಎನ್ನುವ ಸಿನಿಮಾದ ಶೀರ್ಷಿಕೆ ಅನಾವರಣಗೊಳಿಸಿದ ಕಾರ್ಯಕ್ರಮವಾದಾಗಲೇ, ಸುದೀಪ್‌ ಅವರಿಗೆ ಹೀಗೊಬ್ಬ ಅಕ್ಕನ ಮಗನಿರುವ ಸತ್ಯ ಬಹುತೇಕ ಚಿತ್ರೋದ್ಯಮಿಗಳನ್ನು ತಲುಪಿದ್ದು. ಹಾಗಾಗಿ ಹೋಲಿಕೆಯೇ ಅರ್ಥಹೀನ ಅನಿಸಿತ್ತು.

ಇಷ್ಟಕ್ಕೂ ನೆಪೊಟಿಸಮ್ ಅನ್ನೋ ಪದವೇ ನಮ್ಮವರಿಗೆ ಗೊತ್ತಿಲ್ಲ ಎಂದರು ಸುದೀಪ್. ಬಾಂಬೆಯಲ್ಲಿ ಯಾವುದೋ ವರ್ಡ್ ಹುಟ್ಟಿದ ತಕ್ಷಣ ಕರ್ನಾಟಕಕ್ಕೆ ತರಬೇಡಿ. ಮಂಡ್ಯ, ಕೋಲಾರ, ಹಾಸನ, ಚಿತ್ರದುರ್ಗ, ದಾವಣಗೆರೆಯವರಿಗೆ ಅರ್ಥವೇ ಗೊತ್ತಿಲ್ಲ ಎಂದರು! ತಾನು ಮಾತ್ರ ಬಾಲಿವುಡ್ ಗೆ ಹೋಗಿ ನಟಿಸಬಹುದು. ತಮಿಳು, ತೆಲುಗುನಿಂದ ಕನ್ನಡಕ್ಕೆ ಭಟ್ಟಿ ಇಳಿಸಬಹುದು. ಮಾತ್ರವಲ್ಲ, ಮುಕ್ಕಾಲು ಪಾಲು ಇಂಗ್ಲಿಷ್ ಸೇರಿಸಿಯೇ ಮಾತನಾಡಬಹುದು. ಆದರೆ ಪತ್ರಕರ್ತರು ಮಾತ್ರ ಇಷ್ಟೇ ಪದ ಬಳಕೆ ಮಾಡಬೇಕು ಎನ್ನುವುದು ಸುದೀಪ್‌ ಅವರ ನಿಯಮ! ಆದರೆ ಯಾವ ಕೋಲಾರದ ಮಂದಿಗೆ ನೆಪೊಟಿಸಮ್ ಗೊತ್ತಿಲ್ಲ ಎಂದು ಸುದೀಪ್ ಹೇಳುತ್ತಾರೋ, ಅದೇ ಕೋಲಾರದ ಗಣಿಯ ಹಿನ್ನೆಲೆಯಲ್ಲಿ 4 ವರ್ಷದ ಹಿಂದೆಯೇ ಒಂದು ಚಿತ್ರ ಬಂದಿತ್ತು. ಪ್ರಪಂಚದಾದ್ಯಂತ ತಲುಪಿದ ಕೆ.ಜಿ.ಎಫ್ ಎನ್ನುವ ಆ ಕನ್ನಡ ಚಿತ್ರದಲ್ಲಿ ಯಶ್ ಹೇಳಿದ ನೆಪೊಟಿಸಮ್ ಡೈಲಾಗ್ ಗೊತ್ತಿಲ್ಲದವರು ಬಹುಶಃ ಯಾರೂ ಇರಲಿಕ್ಕಿಲ್ಲ.

ಘಟನೆ ಇಷ್ಟಕ್ಕೆ ಮುಗಿಯಲಿಲ್ಲ. ಅದರ ಬಳಿಕ ಸುದೀಪ್‌ ತಾವೇ ಪ್ರಾಯೋಜಿಸಿದ ಸಂದರ್ಶನದಲ್ಲಿ ತಾವು ರಾಜ್ ಕುಮಾರ್ ಕುಟುಂಬದ ಬಗ್ಗೆ ಪ್ರಸ್ತಾಪಿಸಿರುವುದರ ಹಿನ್ನೆಲೆಯನ್ನು ವಿವರಿಸಿ ತಿಪ್ಪೆ ಸಾರಿಸುವ ಪ್ರಯತ್ನ ಕೂಡ ನಡೆಸಿದರು. ಆದರೆ ಮರುದಿನ ಸಂಜೆ ಶಿವರಾಜ್ ಕುಮಾರ್ ಜೊತೆಯಲ್ಲೇ ಮುಂದೆಯೂ ಪ್ರತ್ಯಕ್ಷರಾದರು.

ಮಾಧ್ಯಮದವರು ಸಹಜವಾಗಿ ಸುದೀಪ್ ಏನು ಹೇಳಿದ್ದರೋ ಅದನ್ನು ಪ್ರಸ್ತಾಪಿಸಿ ಅಲ್ಲೇ ಶಿವಣ್ಣನ ಉತ್ತರ ಪಡೆಯುವ ಪ್ರಯತ್ನ ಕೂಡ ನಡೆಸಿದರು. ಆದರೆ ಅಲ್ಲಿ ಪ್ರಶ್ನೆ ಕೇಳಿದ ಮಾಧ್ಯಮ ಪ್ರತಿನಿಧಿಯನ್ನೇ ಒತ್ತಾಯಪೂರ್ವಕವಾಗಿ ಕ್ಯಾಮೆರಾ ಮುಂದೆ ಕರೆತಂದು ಅವರಿಂದಲೇ ಸುದೀಪ್‌ ತಮ್ಮ ಮಾತಿನ ಸ್ಪಷ್ಟೀಕರಣವನ್ನು ಕೊಡಿಸುವ ಕೆಲಸ ಮಾಡಿದರು! ವೈಯಕ್ತಿಕವಾಗಿ ಸುದೀಪ್‌ ಅವರಿಗೆ ಆ ಮಾಧ್ಯಮದ ವ್ಯಕ್ತಿಯೊಂದಿಗೆ ಇರುವ ಸಲುಗೆ ಏನೇ ಇರಬಹುದು. ಆದರೆ ಇತರ ಎಲ್ಲ ಮಾಧ್ಯಮಗಳ ಮುಂದೆ ಎಳೆತಂದು, ಏಕವಚನದಲ್ಲಿ ಮಾತನಾಡಿಸಿ ತನ್ನ ಬಗ್ಗೆ ಸ್ಪಷ್ಟೀಕರಣ ಕೊಡಿಸುವ ಯಾವ ಹಕ್ಕೂ ಇರಲಿಲ್ಲ. ಸುದೀಪ್ ಅವರು ಮಾಧ್ಯಮದ ಮಂದಿಯೊಂದಿಗೆ ಈ ರೀತಿ ನಡೆದುಕೊಳ್ಳುವುದು ಹೊಸತೇನಲ್ಲ. ಸಂಚಿತ್ ಜೊತೆಗಿನ ಮಾತುಕತೆಯಲ್ಲೇ "ನಾನು ಮೊದಲಿನಿಂದಲೂ ಹೀಗೆ" ಅಂತಾರೆ ಸುದೀಪ್‌. ಆದರೆ ಇದು ಸಂಚಿತ್ ಆದರ್ಶವಾಗಿಸಬಹುದಾದ ವಿಚಾರವಂತೂ ಖಂಡಿತಾ ಅಲ್ಲ. ಯಾಕೆಂದರೆ ಸ್ಟಾರ್ ಎಂದು ಗುರುತಿಸಿಕೊಂಡಂದಿನಿಂದಲೂ ಸುದೀಪ್ ಪ್ರೆಸ್‌ಮೀಟ್‌ ಗೆ ತಡವಾಗಿ ಬರುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಕಳೆದ ಶನಿವಾರ ಕೂಡ ಬೆಳಿಗ್ಗೆ 10.30ಕ್ಕೆ ಸುದ್ದಿಗೋಷ್ಠಿ ಎಂದು ಆಹ್ವಾನಿಸಲಾಗಿತ್ತು. ಸಾಮಾನ್ಯವಾಗಿ ಪತ್ರಕರ್ತರನ್ನು ಅರ್ಧಗಂಟೆ ಮುಂಚಿತವಾಗಿ ಆಹ್ವಾನಿಸುವುದು ವಾಡಿಕೆ. ಆದರೆ ಅವತ್ತು ಸುದ್ದಿಗೋಷ್ಠಿ ಶುರುವಾಗಿದ್ದು ಮಧ್ಯಾಹ್ನ 12 ಗಂಟೆ ಸುಮಾರಿಗೆ. ಸುದೀಪ್ ಆಗಮಿಸಿದ್ದು 12.30ಕ್ಕೆ. ಆನಂತರ ನಾಟಕೀಯವಾಗಿ ಸುದೀಪ್ ವೇದಿಕೆ ಏರಿದ್ದು 1.30ಕ್ಕೆ. ಸುದ್ದಿಗೋಷ್ಠಿ ಮುಕ್ತಾಯವಾಗುವಾಗ 2ಗಂಟೆ ದಾಟಿತ್ತು. ಮಾಧ್ಯಮದವರು ಎರಡು ಮೂರು ತಾಸು ವ್ಯಯಿಸಿದ್ದಕ್ಕಾಗಿ ಸಿಕ್ಕಿದ್ದು ಮಾತ್ರ ಪ್ರಶ್ನೆಯೇ ಸರಿಯಿಲ್ಲ ಎನ್ನುವ ಆರೋಪ.

ಸುದೀಪ್ ಅವರು ಸದಾ ಉದಾಹರಣೆಯ ಬೆನ್ನುಬಿದ್ದು ತಮ್ಮನ್ನು ತಾವು ಹೋಲಿಸುವುದರಲ್ಲೇ ಇರುತ್ತಾರೆ.

ಈ ಹಿಂದೆ ರಮ್ಮಿ ಜಾಹೀರಾತು ನೀಡುವುದನ್ನು ಪ್ರಶ್ನಿಸಿದಾಗ ರಮ್ಮಿಯನ್ನು ಸರ್ಕಾರವೇ ಬ್ಯಾನ್ ಮಾಡಬೇಕು ಎಂದಿದ್ದರು ಸುದೀಪ್‌. ಟ್ರೋಲ್ ಆಗುವವರನ್ನು ಬಿಗ್ ಬಾಸ್ ಸ್ಪರ್ಧಿಗಳಾಗಿ ಆಯ್ಕೆ ಮಾಡುವ ಬಗ್ಗೆ ಕೇಳಿದಾಗ ಪ್ರಶ್ನಿಸಿದ್ದೇ ತಪ್ಪು ಎನ್ನುವ ಉತ್ತರ ನೀಡಿದ್ದರು. ಆರೋಪ ಹೊಂದಿದವರಿಗೆ ಕ್ಲೀನಾಗಬಲ್ಲ ಜಾಗ ಬಿಗ್ ಬಾಸ್ ಎಂದಿದ್ದರು. ಆದರೆ ಕಳೆದ ಬಾರಿ ಬಿಗ್ ಬಾಸ್ ಗೆ ಆನ್ಲೈನ್ ಗೇಮಿಂಗ್ ಪ್ರಮೋಶನ್ ಇರಲಿಲ್ಲ. ಕ್ಲೀನಾಗಬೇಕಾದ ಸದಸ್ಯರನ್ನು ಬಿಗ್ ಬಾಸ್ ಮನೆಯಿಂದಲೇ ಪೊಲೀಸರು ಕರೆದೊಯ್ದ ಘಟನೆಯೂ ನಡೆಯಿತು. ದುರಂತ ಏನೆಂದರೆ ಇಷ್ಟೆಲ್ಲಾ ಆದರೂ ಸುದೀಪ್‌ ಅವರಿಗೆ ಪತ್ರಕರ್ತರ ಪ್ರಶ್ನೆಗಳಲ್ಲಿನ ಮುನ್ನೆಚ್ಚರಿಕೆಯ ಕಾಳಜಿ ಯಾವತ್ತಿಗೂ ಕೊಂಕಾಗಿಯೇ ಕಾಣುತ್ತದೆ.

ಬಹುಶಃ ಸುದೀಪ್‌ ಅವರು ಪತ್ರಕರ್ತರನ್ನು ತನ್ನ ಬಿಗ್ ಬಾಸ್ ಮನೆಯ ಸ್ಪರ್ಧಿಗಳೆಂದು ಅಂದುಕೊಂಡಂತಿದೆ. ಪ್ರಶ್ನೆ ಕೇಳಿದವರನ್ನೇ ಕಿಚಾಯಿಸುವುದು ಮತ್ತು ಬಳಿಕ ತಮ್ಮದೇನೋ ಉದಾಹರಣೆಯ ಉತ್ತರವನ್ನು ನೀಡುವುದು ಅಭ್ಯಾಸ ಮಾಡಿಕೊಂಡಿದ್ದಾರೆ. ವೈಯಕ್ತಿಕವಾಗಿ ಭೇಟಿಯಾಗಿ ‘ನಿಮ್ಮ ಅಭಿಮಾನಿ ಪತ್ರಕರ್ತ’ ಎಂದು ಹೇಳಿ ಸೆಲ್ಫೀ, ಆಟೋಗ್ರಾಫ್ ಮಾತ್ರವಲ್ಲ, ನಿಮ್ಮದೊಂದು ಜಾಕೆಟ್ ಕೊಡಿ ಎಂದರೂ ಕೊಟ್ಟು ಕಳಿಸುವಂಥವರು ಸುದೀಪ್! ಆದರೆ ಅಂಥ ಅಭಿಮಾನದ ಪತ್ರಿಕೋದ್ಯಮ ಪ್ರತಿಯೊಬ್ಬರ ಅಗತ್ಯತೆ ಏನೂ ಅಲ್ಲ. ಸುದ್ದಿಗೋಷ್ಠಿಯಲ್ಲೋ, ಪ್ರಶ್ನೋತ್ತರದಲ್ಲೋ ಪತ್ರಕರ್ತನ ನೇರ ಪ್ರಶ್ನೆಗೆ ಕೊಂಕು ಉತ್ತರ ನೀಡುವವರ ಬಗ್ಗೆ ಯಾವ ಪತ್ರಕರ್ತನಿಗೂ ವೈಯಕ್ತಿಕ ಅಭಿಮಾನ ಉಳಿಯುವುದು ದೂರದ ಮಾತು.

ಎಲ್ಲೋ ‘ಏನ್ರೀ ಮೀಡಿಯಾ..’ ಎಂದು ಮಾತಾಡಿದ್ದ ಆಡಿಯೋ ವೈರಲಾಗಿ ಅದರಿಂದ ರಾಜ್ಯಮಟ್ಟದ ಎಲ್ಲ ಮಾಧ್ಯಮಗಳಿಂದ ವರ್ಷಗಳ ಕಾಲ ಬ್ಯಾನ್ ಎದುರಿಸಿದ್ದವರು ದರ್ಶನ್. ಅದಕ್ಕಾಗಿ ಎಲ್ಲ ಪ್ರಮುಖ ಮಾಧ್ಯಮಗಳ ಸಂಪಾದಕರಲ್ಲಿ ಕ್ಷಮೆ ಯಾಚಿಸಿ ಪರಿಹರಿಸಿಕೊಳ್ಳಬೇಕಾಗಿ ಬಂದಿತ್ತು. ಆದರೆ ಮಾಧ್ಯಮದವರ ಜೊತೆ ಆಪ್ತರಂತೆಯೇ ಬೆರೆಯುತ್ತಲೇ ಪ್ರತಿ ಸುದ್ದಿಗೋಷ್ಠಿಯಲ್ಲಿಯೂ ಪ್ರಶ್ನೆ ಕೇಳಿದವರನ್ನೇ ತಪ್ಪಿತಸ್ಥರೆನ್ನುವಂತೆ ಅವಮಾನಿಸಲು ಪ್ರಯತ್ನಿಸುವವರು ಸುದೀಪ್. ಟಿಆರ್ಪಿ ವಿಚಾರದಲ್ಲಿ ಎಂದಿಗೂ ನಂಬರ್ ಒನ್ ಆಗಿದ್ದ ದರ್ಶನ್ ಅವರನ್ನೇ ಮರೆತುಬಿಟ್ಟಿದ್ದ ಮಾಧ್ಯಮಗಳಿಗೆ ಸುದೀಪ್ ಅವರು ಕೂಡ ಅನಿವಾರ್ಯತೆ ಏನಲ್ಲ. ಆದರೆ ಆ ಸತ್ಯವನ್ನು ಇನ್ನಷ್ಟು ಯಡವಟ್ಟು ಮಾಡುವ ಮೊದಲೇ ಸುದೀಪ್‌ ಅರ್ಥಮಾಡಿಕೊಂಡರೆ ಚೆನ್ನಾಗಿರುತ್ತದೆ.

ಸುದೀಪ್ ಅವರೊಳಗೆ ಖಂಡಿತವಾಗಿ ಒಂದೊಳ್ಳೆಯ ಮನಸು ಇದೆ. ಕೊರೊನ ಸಮಯದಲ್ಲಿ ಸಿನಿಮಾ ಪತ್ರಕರ್ತರಿಗೆಲ್ಲ ಸಹಾಯಹಸ್ತ ಚಾಚಿದ್ದರು. ಆದರೆ ಹಾಗಂತ ಪತ್ರಕರ್ತರಿಗೆ ಪ್ರಶ್ನೆ ಕೇಳುವುದೇ ತಪ್ಪು ಎನ್ನುವ ಅಧಿಕಾರ ತಮಗಿದೆ ಎಂದುಕೊಳ್ಳುವುದು ಖಂಡಿ ತಪ್ಪು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - -ಶಶಿಕರ ಪಾತೂರು

contributor

Similar News