ಆಳಂದ: ರಸಗೊಬ್ಬರಕ್ಕಾಗಿ ರೈತರ ಪರದಾಟ
ಆಳಂದ: ತಾಲೂಕಿನ ರುದ್ರವಾಡಿ ಗ್ರಾಮದಲ್ಲಿ ರಸಗೊಬ್ಬರ ಪಡೆಯಲು ರೈತರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಮುಂಗಾರು ಹಂಗಾಮು ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಳಿಸಲು ರಸಗೊಬ್ಬರ ಖರೀದಿಸಲು ರೈತರು ಹರಸಹಾಸ ಪರದಾಡುವಂತಾಗಿದೆ.
ಗ್ರಾಮದ ಪಿಕೆಪಿಎಸ್ ಮೂಲಕ ವಿತರಣೆ ನಡೆಯುತ್ತಿರುವ ಬೀಜ ಗೊಬ್ಬರ ಪಡೆಯಲು ಬೀಜ ದೊರೆತರೆ, ಬೇಕಾದ ರಸಗೊಬ್ಬರ ದೊರೆಯುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಮೂರು-ನಾಲ್ಕು ದಿನಗಳಿಂದಲೂ ಸರಣಿಯಲ್ಲಿ ಗಂಟೆ ಗಟ್ಟಲೆ ಕೇಂದ್ರದ ಎದುರು ನೂರಾರು ರೈತರು ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಮಹಿಳಾ ರೈತರು ಸೇರಿದಂತೆ ಪಿಕೆಪಿಎಸ್ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಬಂದ ರೈತರು ರಸಗೊಬ್ಬರ ಪಡೆಯಲು ಕಾಯುತ್ತಿದ್ದು, ವಿತರಣಾ ಪ್ರಕ್ರಿಯೆ ನಿಧಾನಗತಿ ಹಾಗೂ ಗೊಬ್ಬರ ಕೊರತೆಯಿಂದ ಅಸಮಾಧಾನ ವ್ಯಕ್ತಪಡಿಸಿದರು.
ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಬಿತ್ತನೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದ್ದು, ಈ ಸಮಯದಲ್ಲಿ ರಸಗೊಬ್ಬರದ ಅವಶ್ಯಕತೆ ಹೆಚ್ಚಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗದ ಕಾರಣ ರೈತರು ಹಲವು ಗಂಟೆಗಳ ಕಾಲ ಕಾಯುವಂತಾಗಿದೆ. ಕೆಲವರು ಬೆಳಗ್ಗೆಯಿಂದ ಸಾಲಿನಲ್ಲಿ ನಿಂತರೂ ಗೊಬ್ಬರ ದೊರೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ರೈತರು ಮಾತನಾಡಿ, ಕೃಷಿ ಚಟುವಟಿಕೆಗಳ ಮಹತ್ವದ ಸಮಯದಲ್ಲಿ ರಸಗೊಬ್ಬರ ಕೊರತೆ ಎದುರಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸರಕಾರ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ರೈತರ ಅಗತ್ಯವನ್ನು ಮನಗಂಡು ಸಮರ್ಪಕ ಪ್ರಮಾಣದಲ್ಲಿ ರಸಗೊಬ್ಬರ ಪೂರೈಸಬೇಕು ಎಂದು ಒತ್ತಾಯಿಸಿದರು.
ಸಮರ್ಪಕ ಗೊಬ್ಬರ ಪೂರೈಸಿ
ಅಗತ್ಯ ಪ್ರಮಾಣದ ರಸಗೊಬ್ಬರ ಪೂರೈಕೆ ಮಾಡುವ ಮೂಲಕ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ರೈತರಿಗೆ ಡಿಎಪಿ 20.20.013 ಗೊಬ್ಬರ ಕೊರತೆಯಿದೆ. ಯೂರಿಯಾ ಮಾರಾಟ ಲಭ್ಯವಿಲ್ಲ. ಜನರು ಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ. ಸಕಾಲಕ್ಕೆ ಪಿಕೆಪಿಎಸ್ಗೆ ಅಗತ್ಯ ಮತ್ತು ಸಮಪರ್ಕ ಗೊಬ್ಬರವನ್ನು ದೊರೆಯಬೇಕು. ರೈತರಿಗೆ ನಿರೀಕ್ಷಿತವಾಗಿ ಬೇಡಿದಷ್ಟು ಗೊಬ್ಬರ ದೊರೆಯುತ್ತಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ಸರಣಿಗೆ ನಿಲ್ಲುವಂತಾಗಿದೆ. ಸರಕಾರ ಕ್ರಮ ಕೈಗೊಳ್ಳಬೇಕು.
-ಚಂದ್ರಕಾಂತ ಖೋಬ್ರೆ, ಕಿಸಾನಸಭಾ ತಾಲೂಕು ಗೌರವ ಅಧ್ಯಕ್ಷರು, ರುದ್ರವಾಡಿ
ಗೊಬ್ಬರ ಕೊರತೆಯಿಲ್ಲ
ತಾಲೂಕಿನ ಒಟ್ಟು 5 ರೈತ ಸಂಪರ್ಕ ಕೇಂದ್ರ ಹಾಗೂ ಆಯ್ದ ಪಿಕೆಪಿಎಸ್‌ನಲ್ಲಿ ಬಿತ್ತನೆ ಬೀಜ ವಿತರಣೆಗೆ ಕ್ರಮವಹಿಸಲಾಗಿದೆ. ಸರಸಂಬಾ, ನಿರುಗಡಿ, ರುದ್ರವಾಡಿ, ಕಿಣ್ಣಿಸುಲ್ತಾನ ಹೆಚ್ಚುವರಿ ಕೇಂದ್ರಗಳನ್ನಾಗಿ ರಿಯಾಯಿತಿ ದರದಲ್ಲಿ ಬೀಜ ವಿತರಿಸಲಾಗುತ್ತಿದೆ. ಆಳಂದಾ, ರುದ್ರವಾಡಿ, ಕಡಗಂಚಿ, ಮಟಕಿ ಪಿಕೆಪಿಎಸ್‌ಗಳಿಗೆ ಗೊಬ್ಬರ ವಿತರಣೆಗೆ ಅನುಮತಿ ನೀಡಲಾಗಿದೆ. ಗೊಬ್ಬರ ಪೂರೈಕೆಯಲ್ಲಿ ಕೊರತೆಯಿಲ್ಲ. ಆದರೆ ಪಿಕೆಪಿಎಸ್ನವರು ಕಡಿಮೆ ತರಿಸಿದ್ದರಿಂದ ಈ ರೀತಿಯಾಗಿರಬೇಕು. ಮಾರುಕಟ್ಟೆಯಲ್ಲೂ ಲಭ್ಯವಿದೆ. ಅನುಮತಿ ಪಡೆದ ಪಿಕೆಪಿಎಸ್‌ನವರು ಬೇಡಿಕೆಯಷ್ಟು ರಸಗೊಬ್ಬರ ತರಿಸಿಕೊಂಡು ರೈತರಿಗೆ ಪೂರೈಕೆಗೆ ಸೂಚಿಸಲಾಗುವುದು.
-ತಿಪ್ಪೇಸ್ವಾಮಿ ವಿ., ಸಹಾಯಕ ಕೃಷಿ ನಿರ್ದೇಶಕ ಆಳಂದ