ಕನಕಗಿರಿ: ತಾಲೂಕಿನ ಹುಲಿಹೈದರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಸ್ಯೆಗಳ ಸರಮಾಲೆಯೇ ಎದುರಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಇಚ್ಛಾಶಕ್ತಿ ಕೊರತೆಯಿಂದ ಮೂಲಭೂತ ಸೌಕರ್ಯಗಳಿಗಾಗಿ ಪರದಾಡುವಂತಾಗಿದೆ. ಪಂಚಾಯಿತಿಗೆ ಹೋದರೆ ಅಧಿಕಾರಿಗಳು ಇರುವುದಿಲ್ಲ. ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕುಡಿಯುವ ನೀರಿಗೆ ಹಾಹಾಕಾರ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ನಲ್ಲಿ ಸಂಪರ್ಕವಿದ್ದರೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಹಲವು ಬೋರ್‌ವೆಲ್‌ಗಳು ದುರಸ್ತಿಯಾಗದೆ ತಿಂಗಳುಗಳೇ ಕಳೆದಿವೆ. ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯೂ ಅರ್ಧಕ್ಕೆ ನಿಂತಿದ್ದು, ಗ್ರಾಮಸ್ಥರ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.

ರಸ್ತೆ, ಚರಂಡಿ ದುಸ್ಥಿತಿ: ಗ್ರಾಮಗಳ ಒಳರಸ್ತೆಗಳು ಹದಗೆಟ್ಟಿದ್ದು, ಮಳೆ ಬಂದಾಗ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಚರಂಡಿ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ.

ಬೀದಿ ದೀಪ, ತ್ಯಾಜ್ಯ ನಿರ್ವಹಣೆಗೆ ನಿರ್ಲಕ್ಷ್ಯ: ಹಲವು ಬೀದಿ ದೀಪಗಳು ಕೆಟ್ಟು ವರ್ಷಗಳೇ ಕಳೆದರೂ ದುರಸ್ತಿ ಮಾಡಿಲ್ಲ ಎನ್ನಲಾಗಿದೆ. ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಗ್ರಾಮಗಳ ರಸ್ತೆ ಬದಿಗಳಲ್ಲೇ ತ್ಯಾಜ್ಯದ ರಾಶಿ ಬೀಳುತ್ತಿದೆ.

ಸೌಲಭ್ಯ ವಿತರಣೆಯಲ್ಲಿ ಅಕ್ರಮದ ಆರೋಪ: ಸರಕಾಶರದ ವಿವಿಧ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ವಸತಿ, ಶೌಚಾಲಯ ಹಾಗೂ ಉದ್ಯೋಗ ಖಾತರಿ ಯೋಜನೆಗಳಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಹಣ ಪಾವತಿಯಾಗಲು ವಿಳಂಬವಾಗುತ್ತಿದೆ. ಇದರಿಂದ ಯೋಜನೆಗಳ ಅನುಷ್ಠಾನದ ಬಗ್ಗೆ ಗ್ರಾಮಸ್ಥರಲ್ಲಿ ಹಲವು ಪ್ರಶ್ನೆಗಳು ಮೂಡಿವೆ.

ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಹನುಮಂತಪ್ಪ ಅವರನ್ನು ಹಲವು ಬಾರಿ ಸಂಪರ್ಕಿಸಲು ಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಹೊನ್ನೂರ ಹುಸೇನ ಬೇಲ್ದಾರ್

contributor