ವಿಜಯಪುರ: ಜಗತ್ತೇ ಬೆರಗುಗೊಳ್ಳುವಂತೆ ನಿಂತಿರುವ ಗೋಳಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ 100ಕ್ಕೂ ಅಧಿಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಗುಮ್ಮಟನಗರಿ ವಿಜಯಪುರದಲ್ಲಿ ಪ್ರವಾಸೋದ್ಯಮಕ್ಕೆ ಅಗತ್ಯ ಮೂಲಸೌಲಭ್ಯಗಳ ಕೊರತೆ ಹಾಗೂ ಸ್ಮಾರಕಗಳ ಸಂರಕ್ಷಣೆಯಲ್ಲಿನ ನಿರ್ಲಕ್ಷ್ಯದ ಆರೋಪಗಳು ಕೇಳಿಬರುತ್ತಿವೆ.

ವಿಶ್ವಪ್ರಸಿದ್ಧ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ವಿಜಯಪುರವನ್ನು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಹಲವು ಬೇಡಿಕೆಗಳು ದಶಕಗಳಿಂದ ಕೇಳಿಬರುತ್ತಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಕಾರ್ಯಗತವಾಗಿಲ್ಲ ಎಂಬ ಅಸಮಾಧಾನ ಸ್ಥಳೀಯರಲ್ಲಿ ಇದೆ.

ಸ್ಮಾರಕಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಯ ಪ್ರಾದೇಶಿಕ ಕಚೇರಿಯನ್ನು ಧಾರವಾಡದಿಂದ ವಿಜಯಪುರಕ್ಕೆ ಸ್ಥಳಾಂತರಿಸಬೇಕು ಎಂಬ ಬೇಡಿಕೆಯೂ ಹಲವು ವರ್ಷಗಳಿಂದ ಮುಂದುವರಿದಿದೆ.

ಸ್ಥಳೀಯ ಮಟ್ಟದಲ್ಲಿ ಸ್ಮಾರಕಗಳ ನಿರ್ವಹಣೆ ಅಥವಾ ಮೂಲಸೌಲಭ್ಯಕ್ಕೆ ಸಂಬಂಧಿಸಿದ ಕೆಲಸಗಳಿಗೆ ಧಾರವಾಡ ಕಚೇರಿಯ ಅನುಮತಿ ಅಗತ್ಯವಾಗಿರುವುದರಿಂದ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬ ಆರೋಪಗಳೂ ಇವೆ. ಈ ವಿಳಂಬದಿಂದಾಗಿ ಸ್ಮಾರಕಗಳು ಕಣ್ಣೆದುರಲ್ಲೇ ಶಿಥಿಲಗೊಳ್ಳುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಳ್ಳುವಂತಾಗಿದೆ.

ಎಎಸ್‌ಐ ಪ್ರಾದೇಶಿಕ ಕಚೇರಿ ವಿಜಯಪುರದಲ್ಲೇ ಇದ್ದರೆ ಸ್ಮಾರಕಗಳ ನಿರಂತರ ಮೇಲ್ವಿಚಾರಣೆ, ನಿರ್ವಹಣೆ ಹಾಗೂ ತುರ್ತು ಸಂರಕ್ಷಣಾ ಕಾರ್ಯಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಸ್ಥಳೀಯ ಇತಿಹಾಸಕಾರರು ಮತ್ತು ನಾಗರಿಕರ ಪ್ರಮುಖ ಬೇಡಿಕೆಯಾಗಿದೆ.

ಹೆಸರಿಗಷ್ಟೇ ಪ್ರವಾಸೋದ್ಯಮ ಇಲಾಖೆ!

ವಿಜಯಪುರದ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಪಾತ್ರದ ಬಗ್ಗೆಯೂ ಅಸಮಾಧಾನ ವ್ಯಕ್ತವಾಗುತ್ತಿದೆ. ಪ್ರವಾಸಿಗರಿಗೆ ಅಗತ್ಯವಿರುವ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರಗಳು, ಸುಧಾರಿತ ಸಾರಿಗೆ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳ ಕೊರತೆ ಪ್ರವಾಸಿಗರಿಗೆ ತೊಂದರೆ ಉಂಟುಮಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ವಿಶ್ವದ ವಿವಿಧೆಡೆಯಿಂದ ಪ್ರವಾಸಿಗರು ಆಗಮಿಸುವ ನಗರದಲ್ಲಿ ಪ್ರಮುಖ ಸ್ಮಾರಕಗಳ ಕುರಿತು ಮಾಹಿತಿ ನೀಡುವ ಅಧಿಕೃತ ಪ್ರವಾಸಿ ಮಾಹಿತಿ ಕೇಂದ್ರಗಳ ಕೊರತೆಯೂ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಎಎಸ್‌ಐ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ನಡುವೆ ಹೆಚ್ಚಿನ ಸಮನ್ವಯದ ಅಗತ್ಯವಿದ್ದು, ಸ್ಮಾರಕಗಳ ಸಂರಕ್ಷಣೆಯ ಜತೆಗೆ ನಗರದಲ್ಲಿನ ಮೂಲಸೌಲಭ್ಯಗಳ ಅಭಿವೃದ್ಧಿಗೂ ಆದ್ಯತೆ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಇಲಾಖೆಯು ಕೇವಲ ಕಾಗದದ ಮೇಲೆ ಬಜೆಟ್ ಘೋಷಣೆಗಳು, ಸರಕಾರದ ಯೋಜನೆಗಳ ಅನುಮೋದನೆ ಮತ್ತು ಹೆಸರಿಗಷ್ಟೇ ಅನುದಾನ ಬಿಡುಗಡೆ ಮಾಡುವುದಕ್ಕೆ ಸೀಮಿತವಾಗಿದೆ ವಿನಃ, ಸ್ಥಳೀಯವಾಗಿ ಪ್ರವಾಸಿಗರನ್ನು ಸೆಳೆಯುವ ದೀರ್ಘಕಾಲೀನ ಯೋಜನೆಗಳ ರೂಪದಲ್ಲಿ ಯಾವುದೇ ಕ್ರಾಂತಿಕಾರಿ ಬದಲಾವಣೆ ತಂದಿಲ್ಲ.

ಯುನೆಸ್ಕೋ ಪಟ್ಟಿಗೆ ಸೇರಿಸುವ ಪ್ರಯತ್ನ ಎಲ್ಲಿದೆ?

ಗೋಳಗುಮ್ಮಟ ಮತ್ತು ಇಬ್ರಾಹಿಂ ರೋಜಾದಂತಹ ಐತಿಹಾಸಿಕ ಸ್ಮಾರಕಗಳನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಗಂಭೀರವಾಗಿ ಪ್ರಯತ್ನಿಸಬೇಕು ಎಂಬ ಬೇಡಿಕೆಯೂ ಇದೆ.

ಈ ನಿಟ್ಟಿನಲ್ಲಿ ಸಮಗ್ರ ಪ್ರಸ್ತಾವನೆ, ಸಂರಕ್ಷಣಾ ಯೋಜನೆ ಹಾಗೂ ಅಗತ್ಯ ದಾಖಲೆಗಳೊಂದಿಗೆ ಸರಕಾರಗಳು ಮುಂದಾಗಬೇಕು ಎಂದು ಸ್ಥಳೀಯ ಇತಿಹಾಸಕಾರರು ಹಾಗೂ ಸಾಮಾಜಿಕ ಸಂಘಟನೆಗಳು ಒತ್ತಾಯಿಸುತ್ತಿವೆ.

ಹದಗೆಟ್ಟ ರಸ್ತೆಗಳು

ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ನಗರದಲ್ಲಿನ ರಸ್ತೆಗಳ ಸ್ಥಿತಿಯೂ ಸಮಸ್ಯೆಯಾಗಿದೆ. ಹಲವು ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿದ್ದು, ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ ಎಂಬ ಒತ್ತಾಯ ಕೇಳಿಬರುತ್ತಿದೆ.

ಪ್ರಮುಖ ಪ್ರವಾಸಿ ತಾಣಗಳಿಗೆ ಸುಗಮ ಸಂಪರ್ಕ, ಸ್ವಚ್ಛತೆ, ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರು ಮತ್ತು ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ವಿಜಯಪುರದ ಐತಿಹಾಸಿಕ ಪರಂಪರೆಯನ್ನು ಪ್ರವಾಸೋದ್ಯಮದೊಂದಿಗೆ ಸಮಗ್ರವಾಗಿ ಜೋಡಿಸುವ ದೀರ್ಘಕಾಲೀನ ಯೋಜನೆ ರೂಪಿಸಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಶೇಷ ಅನುದಾನ ನೀಡಬೇಕು ಎಂಬ ಬೇಡಿಕೆಯೂ ಇದೆ.

ಬಹಳ ದಿನಗಳಿಂದ ಎಎಸ್‌ಐಯ ಸೂಪರಿಂಟೆಂಡೆಂಟ್ ಕಚೇರಿಯನ್ನು ವಿಜಯಪುರಕ್ಕೆ ತರಬೇಕು ಎಂದು ಸಂಸದರು ಮತ್ತು ಸಚಿವರ ಮೂಲಕ ಪ್ರಯತ್ನ ಮಾಡಿದ್ದೇವೆ. ಆದರೆ ಈವರೆಗೆ ಅದು ಸಾಧ್ಯವಾಗಿಲ್ಲ. ವಿಜಯಪುರದಲ್ಲಿ ಬಹಳಷ್ಟು ಸ್ಮಾರಕಗಳಿವೆ. ಹೀಗಾಗಿ ಎಎಸ್‌ಐ ಕಚೇರಿ ವಿಜಯಪುರದಲ್ಲೇ ಇರಬೇಕು ಎಂಬುದು ಬಹಳ ವರ್ಷಗಳ ಬೇಡಿಕೆ. ರಾಜ್ಯ ಸರಕಾರ ಈ ಕುರಿತು ಕೇಂದ್ರದ ಮೇಲೆ ಒತ್ತಡ ಹೇರಬೇಕು.

-ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಖ್ಯಾತ ಇತಿಹಾಸಕಾರ, ಸಂಶೋಧಕ ಹಾಗೂ ಸಾಹಿತಿ, ವಿಜಯಪುರ

ನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಗುಂಡಿಬಿದ್ದ ರಸ್ತೆಗಳಲ್ಲಿ ಸಂಚರಿಸುವ ಪ್ರವಾಸಿಗರು ಮತ್ತೆ ವಿಜಯಪುರಕ್ಕೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ಇದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ಕಾಗದದ ಮೇಲಿನ ಯೋಜನೆಗಳಿಗೆ ಸೀಮಿತವಾಗದೆ, ಪ್ರವಾಸಿಗರಿಗೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕು.

-ಭೋಗೇಶ ಸೋಲಾಪುರ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ, ವಿಜಯಪುರ

ಗೋಳಗುಮ್ಮಟ, ಇಬ್ರಾಹಿಂ ರೋಜಾದಂತಹ ವಿಶ್ವಮಟ್ಟದ ಸ್ಮಾರಕಗಳು ನಮ್ಮ ಜಿಲ್ಲೆಯಲ್ಲಿದ್ದರೂ, ಅವುಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಗಂಭೀರ ಪ್ರಸ್ತಾವನೆ ಸಲ್ಲಿಸುವಲ್ಲಿ ನಿರಾಸಕ್ತಿ ಕಂಡುಬರುತ್ತಿದೆ. ಎಎಸ್‌ಐ ಪ್ರಾದೇಶಿಕ ಕಚೇರಿ ಧಾರವಾಡದಲ್ಲಿದ್ದರೆ ಇಲ್ಲಿನ ಸ್ಮಾರಕಗಳ ನೈಜ ಸ್ಥಿತಿಯ ನಿರಂತರ ಮೇಲ್ವಿಚಾರಣೆ ಹೇಗೆ ಸಾಧ್ಯ? ಕಚೇರಿಯನ್ನು ತಕ್ಷಣ ವಿಜಯಪುರಕ್ಕೆ ಸ್ಥಳಾಂತರಿಸಬೇಕು.

-ರಫೀಕ್ ಭಂಡಾರಿ, ಸಾಮಾಜಿಕ ಚಿಂತಕ, ವಿಜಯಪುರ

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಖಾಜಾಮೈನುದ್ದೀನ್ ಪಟೇಲ್

contributor