Ballari | ಸ್ವಚ್ಛತೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ನಿಡುಗುರ್ತಿ ಗ್ರಾ.ಪಂ. ವ್ಯಾಪ್ತಿಯಲ್ಲೇ ಕಸ ವಿಲೇವಾರಿಗೆ ನಿರ್ಲಕ್ಷ್ಯ !
ಸಂಡೂರು/ಬಳ್ಳಾರಿ: ಸ್ವಚ್ಛತೆಯ ವಿಚಾರದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವ ನಿಡುಗುರ್ತಿ ಗ್ರಾಮ ಪಂಚಾಯಿತಿಯಲ್ಲೇ ಕಸ ವಿಲೇವಾರಿಗೆ ಮೀನಾಮೇಷ ಎಣಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪಂಚಾಯಿತಿ ವ್ಯಾಪ್ತಿಯ ಕೇಂದ್ರ ಸ್ಥಾನವಾದ ನಿಡುಗುರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಒಣ ತ್ಯಾಜ್ಯವನ್ನು ವಿಲೇವಾರಿ ಮಾಡದೆ ನಿರ್ಲಕ್ಷಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ಶಾಲಾ ಆವರಣದಲ್ಲಿರುವ ಮರಗಳಿಂದ ಉದುರುವ ಎಲೆಗಳು ಹಾಗೂ ವಿದ್ಯಾರ್ಥಿಗಳು ಬಳಸಿದ ಸಣ್ಣಪುಟ್ಟ ಕಾಗದದ ತುಂಡುಗಳನ್ನು ಮಕ್ಕಳು ಪ್ರತಿನಿತ್ಯ ಸ್ವಚ್ಛಗೊಳಿಸಿ ಒಂದೆಡೆ ಸಂಗ್ರಹಿಸುತ್ತಿದ್ದಾರೆ. ಆದರೆ, ಸಂಗ್ರಹಿಸಿದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಪಂಚಾಯಿತಿಯಿಂದ ಯಾವುದೇ ನಿರಂತರ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.
ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತರಲಾಗಿದ್ದರೂ, ‘ಸಿಬ್ಬಂದಿಯನ್ನು ಕಳುಹಿಸಿ ಸ್ವಚ್ಛಗೊಳಿಸಲಾಗುವುದು’ ಎಂಬ ಭರವಸೆ ಮಾತ್ರ ಸಿಗುತ್ತಿದೆ. ಕೆಲವೊಮ್ಮೆ ಸಿಬ್ಬಂದಿಯನ್ನು ಕಳುಹಿಸಿದರೂ, ತ್ಯಾಜ್ಯ ತುಂಬಲು ವಾಹನ ಅಥವಾ ಸೂಕ್ತ ವ್ಯವಸ್ಥೆ ಇಲ್ಲ ಎಂಬ ನೆಪ ಹೇಳಿ ಹಿಂದಿರುಗುತ್ತಾರೆ. ಒಮ್ಮೆ ಬಂದು ಹೋದ ತ್ಯಾಜ್ಯ ಸಂಗ್ರಹ ವಾಹನ ಮತ್ತೆ ಶಾಲೆಯತ್ತ ಮುಖ ಮಾಡದಿರುವುದರಿಂದ ಕಸ ಅಲ್ಲಿಯೇ ಉಳಿಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ರಶಸ್ತಿ ಪಡೆದ ಪಂಚಾಯಿತಿಯಲ್ಲೇ ಇಂತಹ ಸ್ಥಿತಿ! :
ವಿಪರ್ಯಾಸವೆಂದರೆ, ಇದೇ ನಿಡುಗುರ್ತಿ ಗ್ರಾಮ ಪಂಚಾಯಿತಿಗೆ ನಾಲ್ಕು ವರ್ಷಗಳ ಹಿಂದೆಯೇ ‘ಸ್ವಚ್ಛ ಗ್ರಾಮ ಪಂಚಾಯಿತಿ’ ಎಂಬ ರಾಜ್ಯಮಟ್ಟದ ಪ್ರಶಸ್ತಿ ದೊರೆತಿದೆ ಎನ್ನಲಾಗಿದೆ. ಆದರೆ ಪ್ರಶಸ್ತಿ ಪಡೆದ ಪಂಚಾಯಿತಿಯ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿನ ಒಣ ಕಸವನ್ನು ವಿಲೇವಾರಿ ಮಾಡಲು ಅಗತ್ಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಸ್ವಚ್ಛತೆಯ ಹೆಸರಿನಲ್ಲಿ ಪ್ರಶಸ್ತಿ ಪಡೆದಿರುವ ಪಂಚಾಯಿತಿಯಲ್ಲಿ ಶಾಲೆಯ ತ್ಯಾಜ್ಯವನ್ನೇ ವಿಲೇವಾರಿ ಮಾಡಲು ಸಾಧ್ಯವಾಗದಿದ್ದರೆ, ಪ್ರಶಸ್ತಿಯ ಮಾನದಂಡವೇನು? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.
ಅನುದಾನ ಕೊರತೆಯ ನೆಪ :
ಪಂಚಾಯಿತಿಗೆ ಯಾವುದೇ ರೀತಿಯ ಅನುದಾನ ಲಭ್ಯವಿಲ್ಲ, ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇದೆ, ಪಂಚಾಯಿತಿಯನ್ನು ನಿರ್ವಹಿಸುವುದೇ ಕಷ್ಟವಾಗಿದೆ ಎಂಬ ಉತ್ತರವನ್ನು ಅಧಿಕಾರಿಗಳು ನೀಡುತ್ತಿದ್ದಾರೆ ಎನ್ನಲಾಗಿದೆ. ಸಣ್ಣಪುಟ್ಟ ಸ್ವಚ್ಛತಾ ಕಾರ್ಯಗಳಿಗೂ ಹಣಕಾಸಿನ ಕೊರತೆಯನ್ನು ಮುಂದಿಟ್ಟುಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಈಗಾಗಲೇ ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರ ಅವಧಿ ಪೂರ್ಣಗೊಂಡಿದ್ದು, ಪಂಚಾಯಿತಿಯ ಖಜಾನೆ ಖಾಲಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದಾಯದ ಕೊರತೆಯಿಂದ ಅಭಿವೃದ್ಧಿ ಹಾಗೂ ಮೂಲಭೂತ ಸ್ವಚ್ಛತಾ ಕಾರ್ಯಗಳಿಗೂ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.
108 ಸಮಸ್ಯೆಗಳ ಹೊತ್ತುಕೊಂಡು ಬರುವ ಜನರು! :
ಇದು ಕೇವಲ ಶಾಲೆಯ ಕಸ ವಿಲೇವಾರಿಗೆ ಸೀಮಿತವಾದ ಸಮಸ್ಯೆಯಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಪ್ರತಿನಿತ್ಯ ನಾನಾ ಸಮಸ್ಯೆಗಳನ್ನು ಹೊತ್ತುಕೊಂಡು ಪಂಚಾಯಿತಿ ಕಚೇರಿಗೆ ಬರುತ್ತಿದ್ದರೂ, ಅಧಿಕಾರಿಗಳಿಂದ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಜನರ ಮೂಲಭೂತ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹಾರ ಕಲ್ಪಿಸಬೇಕಾದ ಗ್ರಾಮ ಪಂಚಾಯಿತಿ ಆಡಳಿತವೇ ನಿರ್ಲಕ್ಷ್ಯಕ್ಕೆ ಒಳಗಾದರೆ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬ ಪ್ರಶ್ನೆ ಉದ್ಭವಿಸಿದೆ.
ರಾಜ್ಯಮಟ್ಟದ ‘ಸ್ವಚ್ಛ ಗ್ರಾಮ ಪಂಚಾಯಿತಿ’ ಪ್ರಶಸ್ತಿ ಪಡೆದಿರುವ ನಿಡುಗುರ್ತಿ ಗ್ರಾಮ ಪಂಚಾಯಿತಿ ಮೊದಲು ತನ್ನ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿನ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನಾದರೂ ಶಾಶ್ವತವಾಗಿ ಪರಿಹರಿಸಲಿ. ಪ್ರಶಸ್ತಿಯ ಗೌರವ ಉಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಶಾಲೆಯಲ್ಲಿ ಕಸ ಸಂಗ್ರಹವಾಗುತ್ತಿರುವ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದಾಗ ಮಾತ್ರ ವಾಹನ ಕಳುಹಿಸುವುದು, ಅದೂ ಸಂಪೂರ್ಣ ತ್ಯಾಜ್ಯವನ್ನು ವಿಲೇವಾರಿ ಮಾಡದೆ ಅರ್ಧಕ್ಕೆ ಬಿಟ್ಟು ಹೋಗುವುದು ಸರಿಯಲ್ಲ. ಮಕ್ಕಳ ಆರೋಗ್ಯ ಹಾಗೂ ಶಾಲೆಯ ಸ್ವಚ್ಛತೆಯ ದೃಷ್ಟಿಯಿಂದ ಕನಿಷ್ಠ ವಾರಕ್ಕೊಮ್ಮೆ ಶಾಲೆಯಲ್ಲಿನ ಒಣ ಕಸವನ್ನು ನಿಯಮಿತವಾಗಿ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿ ಕಲ್ಪಿಸಬೇಕು. ಸ್ವಚ್ಛ ಗ್ರಾಮ ಪಂಚಾಯಿತಿ ಎಂಬ ಪ್ರಶಸ್ತಿಗೆ ತಕ್ಕಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.”
-ಎನ್.ಎಸ್. ಈರಣ್ಣ, ಸ್ಥಳೀಯ ಹಿರಿಯ ನಾಗರಿಕರು
ಶಾಲೆಯಲ್ಲಿ ಸಣ್ಣಪುಟ್ಟ ದುರಸ್ತಿ ಹಾಗೂ ಅಗತ್ಯ ಕೆಲಸಗಳನ್ನು ಮಾಡಿಸುವಂತೆ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಾಗಲೆಲ್ಲ ಅನುದಾನವಿಲ್ಲ ಎಂಬ ಕಾರಣ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವುದು ಹಾಗೂ ಶಾಲೆಯ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸುವುದು ಪಂಚಾಯಿತಿಯ ಜವಾಬ್ದಾರಿಯಾಗಿದೆ. ಆದರೆ ಪ್ರತಿಯೊಂದು ಕೆಲಸಕ್ಕೂ ಒಂದೊಂದು ನೆಪ ಹೇಳುತ್ತಾ ಕಾಲಹರಣ ಮಾಡುತ್ತಿರುವುದು ಬೇಸರದ ಸಂಗತಿ. ಅಧಿಕಾರಿಗಳು ನೆಪ ಹೇಳುವುದನ್ನು ಬಿಟ್ಟು ಶಾಲೆಯ ಸಮಸ್ಯೆಗಳಿಗೆ ಸ್ಪಂದಿಸಿ, ಅಗತ್ಯ ಕೆಲಸಗಳನ್ನು ತ್ವರಿತವಾಗಿ ಕೈಗೊಳ್ಳಬೇಕು.
-ದಡ್ಡೆಪ್ಪ ಗುರಿಕಾರ, ಎಸ್‌ಡಿಎಂಸಿ ಅಧ್ಯಕ್ಷರು