ಲೋಕಸಭೆಯನ್ನು ವಿಸ್ತರಿಸದೆಯೇ ಮಹಿಳಾ ಪ್ರಾತಿನಿಧ್ಯ-ಡಿಲಿಮಿಟೇಷನ್-ಒಕ್ಕೂಟ ನ್ಯಾಯ ಸಾಧ್ಯ
2026ರ ಆಗಸ್ಟ್ 13ರಂದು ಸಂಸತ್ತಿನ ಉಭಯ ಸದನಗಳನ್ನು ಅನಿರ್ದಿಷ್ಟ ಕಾಲ ಮುಂದೂಡಿದ ನಂತರದಲ್ಲೂ ಸಹ ಮುಂಗಾರು ಅಧಿವೇಶನವನ್ನು ಔಪಚಾರಿಕವಾಗಿ ಸಮಾಪ್ತಿಗೊಳಿಸಿಲ್ಲ. ಹಾಗಾಗಿ ಡಿ ಲಿಮಿಟೇಷನ್ ಮತ್ತು ಮಹಿಳಾ ಮೀಸಲಾತಿ ಮಸೂದೆಯ ಹಿನ್ನೆಲೆಯಲ್ಲಿ ಸಂಸತ್ ಅಧಿವೇಶನವನ್ನು ಪುನರಾರಂಭಿಸಬಹುದು ಎಂಬ ಊಹಾಪೋಹಗಳು ದಟ್ಟವಾಗುತ್ತಿವೆ. ಇದು ಸಾಧ್ಯವಾಗುವುದೋ ಇಲ್ಲವೋ, ಸಂಸತ್ತು ಎದುರಿಸಬೇಕಾದ ಒಂದು ಪ್ರಶ್ನೆಯಂತೂ ಖಂಡಿತವಾಗಿ ಉದ್ಭವಿಸುತ್ತದೆ. ಡಿ ಲಿಮಿಟೇಷನ್ (ಕ್ಷೇತ್ರಗಳ ಮರುವಿಂಗಡನೆ ಮತ್ತು ಸಂಖ್ಯೆಯ ವಿಸ್ತರಣೆ) ಎಂದರೆ ಲೋಕ ಸಭೆಯಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದು ಎಂದು ಮಾತ್ರ ಅರ್ಥೈಸಬಹುದೇ?
ಸಂಖ್ಯೆಗಳು ಮಾತ್ರ ನಿರ್ಧರಿಸಲಾಗುವುದಿಲ್ಲ
ಮೇಲ್ನೋಟಕ್ಕೆ ಇದು ಸಂಖ್ಯೆಗಳ ಲೆಕ್ಕಾಚಾರದ ಹಾಗೆ ತೋರುತ್ತದೆ. 50 ವರ್ಷಗಳ ಹಿಂದೆ ಲೋಕಸಭಾ ಸ್ಥಾನಗಳನ್ನು ನಿಗದಿತ ಸಂಖ್ಯೆಗೆ ಸೀಮಿತಗೊಳಿಸಿದ ನಂತರದಲ್ಲಿ ಭಾರತದ ಜನಸಂಖ್ಯೆ ಅಪಾರ ಹೆಚ್ಚಳ ಕಂಡಿದೆ. ಆದ್ದರಿಂದ ಜನಸಂಖ್ಯಾ ಬೆಳವಣಿಗೆಗೆ ಪೂರಕವಾಗಿ ಪ್ರಾತಿನಿಧ್ಯವೂ ಹೆಚ್ಚಾಗಬೇಕು ಎಂದು ವಾದಿಸುವುದು ಸಹಜವಾಗಿಯೇ ಕಾಣುತ್ತದೆ. ಆದರೆ ಸಾಂವಿಧಾನಿಕ ಸಂರಚನೆಯ ವಿನ್ಯಾಸ ಕೇವಲ ಸಂಖ್ಯೆಗಳ ಲೆಕ್ಕಾಚಾರವಲ್ಲ.
ಪ್ರಾತಿನಿಧ್ಯವು ಸಾಧ್ಯವಾದಷ್ಟು ಮಟ್ಟಿಗೆ ಜನಸಂಖ್ಯೆಗೆ ಪೂರಕವಾಗಿರಬೇಕು ಎಂದು ಸಂವಿಧಾನದ ಅನುಚ್ಛೇದ 81 ಹೇಳುತ್ತದೆ. ಆದರೆ ಅನುಚ್ಛೇದ 82 ಪ್ರತಿಯೊಂದು ಜನಗಣತಿಯ ನಂತರವೂ ಮರು-ಹೊಂದಾಣಿಕೆಯ ಅವಕಾಶವನ್ನು ಕಲ್ಪಿಸುತ್ತದೆ. ಆದಾಗ್ಯೂ ಬಲವಾದ ರಾಷ್ಟ್ರೀಯ ಉದ್ದೇಶಗಳು ಎದುರಾಗಿದ್ದಾಗಲೂ ಸಹ ಭಾರತದ ಸಂಸತ್ತು ಎರಡು ಬಾರಿ,ಈ ಅನುಚ್ಛೇದವನ್ನು ತತ್ವವನ್ನು ಯಾಂತ್ರಿಕವಾಗಿ ಮಾರ್ಪಾಟು ಮಾಡಿದೆ. 1976ರಲ್ಲಿ 42ನೆಯ ಸಂವಿಧಾನ ತಿದ್ದುಪಡಿಯ ಮೂಲಕ, 1971ರ ಜನಗಣತಿಯನ್ನು ಆಧರಿಸಿ ಅಂತರ್‌ರಾಜ್ಯ ಸ್ಥಾನ ಹಂಚಿಕೆಯನ್ನು ಮಿತಿಗೊಳಿಸಲಾಯಿತು. ಇದರ ಪರಿಣಾಮ, ಕುಟುಂಬ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದ ರಾಜ್ಯಗಳು ಜನಸಂಖ್ಯೆಯನ್ನು ಕಡಿಮೆ ಮಾಡಿದ್ದಕ್ಕಾಗಿ ರಾಜಕೀಯ ದಂಡನೆಯನ್ನು ಎದುರಿಸಲಿಲ್ಲ. ಮತ್ತೊಮ್ಮೆ 84ನೆಯ ಸಂವಿಧಾನ ತಿದ್ದುಪಡಿಯ ಮೂಲಕ, 2026ರ ಜನಗಣತಿಯನ್ನು ನಡೆಸುವವರೆಗೂ ಈ ನಿಗದಿತ ಮಿತಿಯನ್ನು ವಿಸ್ತರಿಸಲಾಯಿತು. ಹೀಗೆ ಜನಸಂಖ್ಯೆ ನಿರ್ಣಾಯಕವೇ ಆದರೂ ಸಹ , ಬಾಧಿತವಾಗುವುದು ಅದೊಂದೇ ಸಾಂವಿಧಾನಿಕ ಮೌಲ್ಯ ಅಲ್ಲ ಎಂದು ಸಂಸತ್ತು ನಿರ್ಧರಿಸಿತ್ತು.
ಹಾಲಿ ಕೇಂದ್ರ ಸರಕಾರವು ಪ್ರತಿಯೊಂದು ರಾಜ್ಯದ ಪ್ರಾತಿನಿಧ್ಯವನ್ನು ಅಂದಾಜು ಶೇ. 50ರಷ್ಟು ಹೆಚ್ಚಿಸುವ ಪ್ರಸ್ತಾವನೆಯನ್ನು ಮಂಡಿಸಿದೆ. ಹೀಗೆ ಮಾಡುವುದರ ಮೂಲಕ ಪ್ರತಿಯೊಂದು ರಾಜ್ಯವೂ ಈಗಿರುವ ಅನುಪಾತದಲ್ಲೇ ಲೋಕಸಭಾ ಸ್ಥಾನಗಳನ್ನು ಹೊಂದಿರುತ್ತದೆ ಎಂದು ಸರಕಾರ ವಾದಿಸುತ್ತದೆ. ಮೇಲ್ನೋಟಕ್ಕೆ ಇದು, ದಕ್ಷಿಣದ ರಾಜ್ಯಗಳು ತಮ್ಮ ಸಾಪೇಕ್ಷ ಸ್ಥಾನಮಾನವನ್ನು ಕಳೆದುಕೊಳ್ಳುತ್ತವೆ ಎಂಬ ಭೀತಿಗೆ ಪ್ರತಿಕ್ರಿಯೆಯಾಗಿ ಕಾಣುತ್ತದೆ. ಆದರೆ ಅನುಪಾತವೊಂದೇ (proportion) ಪೂರ್ಣ ಸತ್ಯವನ್ನು ಸೂಚಿಸುವುದಿಲ್ಲ.
ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಲೋಕಸಭಾ ಸ್ಥಾನಗಳು 80 ರಿಂದ 120ಕ್ಕೆ ಹೆಚ್ಚಾದರೆ, ಅದೇವೇಳೆ ತಮಿಳುನಾಡಿನಲ್ಲಿ ಸ್ಥಾನಗಳು 39 ರಿಂದ 59ಕ್ಕೆ ಏರಿದರೆ , ಎರಡೂ ರಾಜ್ಯಗಳ ಅನುಪಾತದ ಸಂಬಂಧ ಯಥಾಸ್ಥಿತಿಯಲ್ಲಿರುತ್ತದೆ. ಆದರೂ ಸಂಸತ್ತಿನಲ್ಲಿ ಮತ ಚಲಾಯಿಸುವ ಸಂಸದರ ಸಂಖ್ಯೆಯಲ್ಲಿನ ವ್ಯತ್ಯಾಸ 41 ರಿಂದ 61ಕ್ಕೆ ಏರುತ್ತದೆ. ಸಂಸತ್ತಿನಲ್ಲಿ ಮತ ಚಲಾವಣೆಯು ಅನುಪಾತಗಳ ಲೆಕ್ಕದಲ್ಲಿ ನಡೆಯುವುದಿಲ್ಲ. ನಿಖರ ಸಂಖ್ಯೆಗಳಲ್ಲಿ ನಡೆಯುತ್ತದೆ. ಸರಕಾರಗಳು ರಚನೆಯಾಗುವುದು ಸಂಸದರ ಸಂಖ್ಯೆಯಿಂದ. ವಿಶ್ವಾಸ ನಿರ್ಣಯಗಳು, ಶಾಸನಗಳು ಮತ್ತು ಸದಸ್ಯರು ನಿರ್ಧರಿಸುವ ಸಾಂವಿಧಾನಿಕ ತಿದ್ದುಪಡಿಗಳು ನಿರ್ಧಾರವಾಗುವುದು ಸಂಖ್ಯೆಗಳ ಮುಖಾಂತರ. ಸಂಖ್ಯೆಗಳಲ್ಲಿ ವ್ಯತ್ಯಾಸ ಹೆಚ್ಚಾದರೂ ಸಹ ಪ್ರಮಾಣಾನುಗುಣವಾಗಿ (Pro-rata) ಶೇ. 50ರಷ್ಟು ಹೆಚ್ಚಳವು ಅನುಪಾತವನ್ನು ಯಥಾಸ್ಥಿತಿಯಲ್ಲಿರಿಸುತ್ತದೆ.
ಆದ್ದರಿಂದ 1976ರಲ್ಲಿ ನಿಗದಿಪಡಿಸಿದ ಸಂಖ್ಯಾಮಿತಿ ಒಕ್ಕೂಟ ಒಪ್ಪಂದವನ್ನು ಪುರಸ್ಕರಿಸಿತ್ತು. ಅಂದರೆ, ರಾಷ್ಟ್ರೀಯ ನೀತಿಯ ಅನುಗುಣವಾಗಿಯೇ ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ರಾಜ್ಯಗಳು ತಮ್ಮ ರಾಜಕೀಯ ಧ್ವನಿಯನ್ನು ಕಳೆದುಕೊಳ್ಳಲಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಈ ಗ್ರಹಿಕೆಯನ್ನು ವಿಚಾರ ಮಾಡದೆ ತಿರಸ್ಕರಿಸುವುದು ತಪ್ಪಾಗುತ್ತದೆ.
ಮತ್ತೊಂದೆಡೆ ಡಿ ಲಿಮಿಟೇಷನ್ ಮತ್ತು ಸಂಖ್ಯೆಗಳ ವಿಸ್ತರಣೆ ಎರಡನ್ನೂ ಪ್ರತ್ಯೇಕಿಸಲಾಗುವುದಿಲ್ಲ ಎಂಬ ತಪ್ಪು ಕಲ್ಪನೆಯೂ ಇದೆ. ಹಾಗೇನೂ ಇಲ್ಲ. ಪ್ರತಿಯೊಂದು ರಾಜ್ಯಕ್ಕೂ ಒದಗಿಸಲಾಗಿರುವ ನಿಗದಿತ ಸಂಸದರ ಸಂಖ್ಯೆಯನ್ನು ಬದಲಾವಣೆ ಮಾಡದೆಯೇ ಕ್ಷೇತ್ರದ ಗಡಿಗಳನ್ನು ವಿಸ್ತರಿಸಬಹುದು ಎಂದು ಭಾರತ ಈಗಾಗಲೇ ನಿರೂಪಿಸಿದೆ. 2001ರ ಜನಗಣತಿಯ ನಂತರ ಕೈಗೊಂಡ ಡಿ ಲಿಮಿಟೇಷನ್ ಪ್ರಕ್ರಿಯೆಯಲ್ಲಿ ರಾಜ್ಯಗಳಲ್ಲಿ ಆಂತರಿಕವಾಗಿ ಲೋಕಸಭಾ ಕ್ಷೇತ್ರಗಳನ್ನು ಮರುಸಂಘಟನೆ ಮಾಡಲಾಯಿತು. ಈ ಪ್ರಕ್ರಿಯೆಯ ಹೊರತಾಗಿಯೂ ನಿಗದಿತ ಅಂತರ್‌ರಾಜ್ಯ ಕ್ಷೇತ್ರಗಳ ಸ್ಥಾನಗಳಲ್ಲಿ ವ್ಯತ್ಯಯವಾಗಲಿಲ್ಲ.
ಇದೇ ನೀತಿಯನ್ನು ಪುನಃ ಅಳವಡಿಸಬಹುದು. 2027ರ ಜನಗಣತಿಯು ಪ್ರತಿಯೊಂದು ರಾಜ್ಯದಲ್ಲೂ ಆಂತರಿಕವಾಗಿ ಕ್ಷೇತ್ರಗಳನ್ನು ಮರು ವಿಂಗಡನೆ ಮಾಡಲು ಆಧಾರ ಒದಗಿಸುತ್ತದೆ. ಆಗ ರಾಜ್ಯಗಳಲ್ಲಿ ಜನಸಂಖ್ಯೆಯ ಕ್ಷೇತ್ರವಾರು ಹಂಚಿಕೆ ಸಮನಾಗಿರುತ್ತದೆ. ನಿಗದಿಸಲ್ಪಡುವ ಗಡಿಗಳು ಜನಸಂಖ್ಯೆಯ ಚಲನೆ ಮತ್ತು ನಗರೀಕರಣ ಪ್ರಕ್ರಿಯೆಯನ್ನು ಬಿಂಬಿಸಬಹುದು. ಈ ಯಾವುದೇ ಕ್ರಮಗಳಿಗೆ 543 ಲೋಕಸಭಾ ಸ್ಥಾನಗಳನ್ನು ದುಪ್ಪಟ್ಟು ಮಾಡುವ, ಪ್ರಸ್ತುತ ಒಕ್ಕೂಟ ಸಮತೋಲನವನ್ನು ಪಲ್ಲಟಗೊಳಿಸುವ ಅವಶ್ಯಕತೆ ಇರುವುದಿಲ್ಲ.
ಹಾಗೆಯೇ ಜನಸಂಖ್ಯಾ ಹೆಚ್ಚಳಕ್ಕೆ ಪ್ರತಿಕ್ರಿಯೆಯಾಗಿ ಶಾಸಕಾಂಗವನ್ನೂ ನಿರಂತರವಾಗಿ ವಿಸ್ತರಿಸುವುದು ಅನಿವಾರ್ಯವಾದ ಪರಿಣಾಮವೇನೂ ಅಲ್ಲ. ಅಮೆರಿಕದ ಪ್ರಾತಿನಿಧಿಕ ಸಭೆ (House of Representatives US) ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ, ಜನಸಂಖ್ಯೆಯ ಅಗಾಧ ಹೆಚ್ಚಳದ ಹೊರತಾಗಿಯೂ 435 ಸದಸ್ಯರನ್ನೇ ಹೊಂದಿದೆ (ಕೆಲವು ತಾತ್ಕಾಲಿಕ ಅಪವಾದಗಳು ಇರುವುದೂ ಹೌದು).
ಸ್ವಿಟ್ಸರ್‌ಲ್ಯಾಂಡ್‌ನ ನ್ಯಾಷನಲ್ ಕೌನ್ಸಿಲ್ 1963ರಿಂದಲೂ 200 ಸದಸ್ಯರನ್ನೇ ಹೊಂದಿದೆ. ಇನ್ನೂ ಮುಂದುವರಿಯುವುದಾದರೆ, ಹಂಗೇರಿ ತನ್ನ ಸಂಸತ್ ಸದಸ್ಯರ ಸಂಖ್ಯೆಯನ್ನು 386 ರಿಂದ 199ಕ್ಕೆ ಇಳಿಸಿದೆ. ಇಟಲಿ ತನ್ನ ಚೇಂಬರ್ ಆಫ್ ಡೆಪ್ಯುಟೀಸ್ ಸದಸ್ಯತ್ವವನ್ನು 630 ರಿಂದ 400ಕ್ಕೆ ಇಳಿಸಿದೆ. ಜನಸಂಖ್ಯೆಯ ವೃದ್ಧಿಯಾದಾಗಲೆಲ್ಲಾ ಶಾಸಕಾಂಗವೂ ವಿಸ್ತರಿಸಬೇಕು ಎಂಬ ಪ್ರಜಾಪ್ರಭುತ್ವೀಯ ಕಾನೂನು ಖಂಡಿತವಾಗಿಯೂ ಇಲ್ಲ.
ವಿಸ್ತರಿಸಿದ ಸದನ-ದುರ್ಬಲವಾಗುವ ಚರ್ಚೆ
ವಿಶಾಲವಾದ ಸದನವನ್ನು (Larger house) ಹೊಂದಿರುವುದರಿಂದ ಸಂಸತ್ತಿನ ಕಾರ್ಯನಿರ್ವಹಣೆಯ ಮೇಲೆ ಉಂಟಾಗುವ ಪರಿಣಾಮವನ್ನೂ ಸಹ ಕಾಳಜಿಯಿಂದ ಗಮನಿಸಬೇಕಿದೆ. ಸಂಸದರ ಸಂಖ್ಯೆ ಹೆಚ್ಚಾದ ಕಾರಣಕ್ಕೆ ಸಂಸದೀಯ ಸಮಯ (Parliamentary Time) ಹೆಚ್ಚಳವಾಗುವುದಿಲ್ಲ. 543 ಸಂಸದರು ಇರುವಾಗಲೂ ಸಹ ಅನೇಕ ಸಂಸದರಿಗೆ ಮಾತನಾಡಲು, ಪ್ರಶ್ನೆ ಕೇಳಲು, ಸಾರ್ವಜನಿಕ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಲು ಅವಕಾಶ ದೊರೆಯುವುದಿಲ್ಲ. ಶೇ. 50ರಷ್ಟು ವಿಸ್ತರಿಸಲ್ಪಟ್ಟ ಲೋಕಸಭೆಯಲ್ಲಿ 800ಕ್ಕೂ ಹೆಚ್ಚು ಸಂಸದರು ಇರುತ್ತಾರೆ. ಅಲ್ಲಿ ಈ ಅವಕಾಶಗಳು ಮತ್ತಷ್ಟು ದುರ್ಲಭವಾಗುತ್ತವೆ. ಸಂಖ್ಯೆಯ ದೃಷ್ಟಿಯಿಂದ ಪ್ರಾತಿನಿಧ್ಯವನ್ನು ಹೆಚ್ಚಿಸಬಹುದು ಆದರೆ ಚರ್ಚೆಯ ಗುಣಮಟ್ಟ ಕುಸಿಯುತ್ತದೆ. ಸಂಸತ್ತಿನ ಬಹುಮುಖ್ಯ ಕಾರ್ಯಗಳಲ್ಲಿ ಗುಣಮಟ್ಟದ ಚರ್ಚೆಯೇ ಪ್ರಮುಖವಾದುದು. ವಿಶ್ವದ ಇತರ ಪ್ರಜಾಪ್ರಭುತ್ವಗಳಿಗೆ ಹೋಲಿಸಿದರೆ ಭಾರತದ ಸಂಸದರು ಈಗಾಗಲೇ ಅತಿದೊಡ್ಡ ಸರಾಸರಿ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅಮೆರಿಕದ ಪ್ರಾದೇಶಿಕ ಚುನಾವಣಾ ಕ್ಷೇತ್ರ (Congressional
District) ಅಥವಾ ಇಂಗ್ಲೆಂಡಿನ ಸಂಸದೀಯ ಕ್ಷೇತ್ರಕ್ಕೆ ಹೋಲಿಸಿದರೆ ಈ ಕ್ಷೇತ್ರಗಳು ಹಲವು ಪಟ್ಟು ದೊಡ್ಡದಾಗಿವೆ. 543 ಸಂಸದರ ಸಂಖ್ಯೆಯ ಮಿತಿಯನ್ನು ಯಥಾಸ್ಥಿತಿಯಲ್ಲಿರಿಸಿ, ಜನಸಂಖ್ಯೆಯೂ ಬೆಳೆಯುತ್ತಿದ್ದರೆ,
ಡಿ ಲಿಮಿಟೇಷನ್ ನಂತರದಲ್ಲೇ ಹೊರೆ ಹೆಚ್ಚಾಗತೊಡಗುತ್ತದೆ.
ಹೆಚ್ಚಿನ ಪ್ರತಿನಿಧಿಗಳಿಗೆ ಸಂಪರ್ಕ ಸಾಧ್ಯತೆಯನ್ನು (Accessibility) ಹೆಚ್ಚಿಸುವುದೂ ಸಮಸ್ಯಾತ್ಮಕವಾಗುತ್ತದೆ. ಹೆಚ್ಚುವರಿ ಪ್ರತಿನಿಧಿಗಳು ಸಂಸತ್ತಿನಲ್ಲೇ ಇರಬೇಕು ಎಂದೇನೂ ಇಲ್ಲ. ಬಹುಪಾಲು ನಾಗರಿಕರು ರಸ್ತೆ, ಶಾಲೆ, ಆಸ್ಪತ್ರೆ, ಸ್ಥಳೀಯ ಸೇವೆಗಳು, ರಾಜ್ಯಾಡಳಿತ ಇತ್ಯಾದಿ ಸಮಸ್ಯೆಗಳಿಗಾಗಿ ಶಾಸಕ ಪ್ರತಿನಿಧಿಗಳನ್ನು ಸಂಪರ್ಕಿಸುತ್ತಾರೆ. ಇವೆಲ್ಲವೂ ರಾಜ್ಯಗಳ ಆಂತರಿಕ ಸಮಸ್ಯೆಗಳೇ ಆಗಿರುತ್ತವೆ ಈ ದೃಷ್ಟಿಯಿಂದ ನೋಡಿದಾಗ ರಾಜ್ಯಗಳಲ್ಲಿ ಜನಸಂಖ್ಯೆಯ ಹೆಚ್ಚಳವಾಗಿ, ಕ್ಷೇತ್ರಗಳು ಅಸ್ತವ್ಯಸ್ತವಾಗಿದ್ದರೆ ರಾಜ್ಯಮಟ್ಟದಲ್ಲಿ ಪ್ರಾತಿನಿಧ್ಯವನ್ನು ಹೆಚ್ಚಿಸುವುದು ವಿವೇಕಯುತ ಕ್ರಮ. ಚಿಕ್ಕ ಕ್ಷೇತ್ರಗಳು ಮತ್ತು ಹೆಚ್ಚಿನ ಶಾಸಕರು ಇರುವುದರಿಂದ ಪ್ರತಿನಿಧಿಗಳು ನಾಗರಿಕರಿಗೆ ನಿಕಟವಾಗುತ್ತಾರೆ, ಇದರಿಂದ ರಾಷ್ಟ್ರೀಯ ಶಾಸಕಾಂಗವನ್ನು ನಿರಂತರವಾಗಿ ವಿಸ್ತರಿಸುವ ಅವಶ್ಯಕತೆಯೂ ಉದ್ಭವಿಸುವುದಿಲ್ಲ.
ಈ ರೀತಿಯ ವಿಸ್ತರಣೆಯಿಂದ, ಲೋಕಸಭೆಯ ವಿಸ್ತರಣೆಯಿಂದ ಉಂಟಾಗುವ ಒಕ್ಕೂಟ ವ್ಯವಸ್ಥೆಯ ನಿರ್ಬಂಧಗಳೂ ಹೆಚ್ಚಾಗುವುದಿಲ್ಲ. ವಿಧಾನಸಭಾ ಕ್ಷೇತ್ರಗಳು ದೊಡ್ಡದಾಗಿದ್ದರೂ ರಾಜ್ಯಗಳ ನಡುವಿನ ಸಮತೋಲನದಲ್ಲಿ ವ್ಯತ್ಯಯವಾಗುವುದಿಲ್ಲ. ಏಕೆಂದರೆ ಪ್ರತಿಯೊಂದು ಕ್ಷೇತ್ರವೂ ತನ್ನ ವ್ಯಾಪ್ತಿಯೊಳಗಿನ ಜನತೆಯನ್ನಷ್ಟೇ ಪ್ರತಿನಿಧಿಸುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಸಂಪರ್ಕ ಸಾಧ್ಯತೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಧಾನಸಭೆಗಳ ವಿಸ್ತರಣೆ ಉಪಯುಕ್ತವಾಗುತ್ತದೆ, ಇದರಿಂದ ಸಂಸತ್ತಿನಲ್ಲಿ ಅಂತರ್‌ರಾಜ್ಯ ಸಮತೋಲನವೂ ಬಾಧಿತವಾಗುವುದಿಲ್ಲ. 1976ರಲ್ಲಿ ಮಿತಿಯನ್ನು ನಿಗದಿಪಡಿಸಿದ್ದು ಈ ದೃಷ್ಟಿಯಿಂದಲೇ. ಈಗ ಮಹಿಳಾ ಮೀಸಲಾತಿಯ ಪ್ರಶ್ನೆ ಮುನ್ನೆಲೆೆಗೆ ಬರುತ್ತದೆ. ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಾತಿ ನೀಡುವ ಪ್ರಕ್ರಿಯೆಯನ್ನು ಡಿ ಲಿಮಿಟೇಷನ್‌ಗೆ ತಳುಕುಹಾಕಲಾಗುತ್ತಿದೆ. ಚಾಲ್ತಿಯಲ್ಲಿರುವ
ರಾಜಕೀಯ ಹಿತಾಸಕ್ತಿಗಳಿಗೆ ವ್ಯತ್ಯಯವಾಗದೆ ಮಹಿಳೆಯರಿಗೂ ಅವಕಾಶ ಹೆಚ್ಚಿಸುವ ಒಂದು ಮಾರ್ಗವಾಗಿ ಲೋಕಸಭೆಯ ವಿಸ್ತರಣೆಯನ್ನು ಮುಂದಿಡಲಾಗುತ್ತಿದೆ.
ಆದರೆ ಸಂಸತ್ತಿನ ವಿಸ್ತರಣೆಗೆ ಮಹಿಳೆಯರ ಪ್ರಾತಿನಿಧ್ಯವನ್ನು ಸಾಂವಿಧಾನಿಕ ಸಮರ್ಥನೆಯಾಗಿ ಬಳಸಿಕೊಳ್ಳಬೇಕಿಲ್ಲ. ಹಾಲಿ ಲೋಕಸಭೆಯಲ್ಲಿ ಮೂರನೇ ಒಂದರಷ್ಟು ಸ್ಥಾನಗಳು ಎಂದರೆ 181. ಈಗಿರುವ 543 ಸಂಸದರ ಸಂಖ್ಯೆಯಲ್ಲೇ ಮಹಿಳೆಯರಿಗೆ ನೀಡಿರುವ ಸಾಂವಿಧಾನಿಕ ಪ್ರಾತಿನಿಧ್ಯದ ಭರವಸೆಯನ್ನು ಈಡೇರಿಸಬಹುದು. ಮೀಸಲಾತಿಯ ಉದ್ದೇಶ ಸಂಸದೀಯ ಸ್ಥಾನಗಳನ್ನು ಯಾರು ವಹಿಸಿಕೊಳ್ಳುತ್ತಾರೆ ಎಂದು ನಿರ್ಧರಿಸುವುದೇ ಹೊರತು ಹೆಚ್ಚುವರಿಯಾಗಿ ನೂರು ಸ್ಥಾನಗಳನ್ನು ಸೃಷ್ಟಿಸುವುದಲ್ಲ. ಶೇ. 50ರಷ್ಟು ವಿಸ್ತರಣೆಯಿಂದ ಕುತೂಹಲಕಾರಿ ಬೆಳವಣಿಗೆಯನ್ನು ಕಾಣಬಹುದು. ಮಹಿಳಾ ಸಂಸದರ ಸಂಖ್ಯೆ ಹೆಚ್ಚಾಗುತ್ತದೆ, ಇದು ಅಪೇಕ್ಷಣೀಯವೇ. ಆದರೆ ಈಗಾಗಲೇ ಇರುವ ದೊಡ್ಡ ರಾಜ್ಯಗಳ ಸಂಖ್ಯಾ ಪ್ರಾಬಲ್ಯವೂ ಹೆಚ್ಚಾಗುತ್ತದೆ. ಒಂದು ಪ್ರಾತಿನಿಧಿಕ ಅಸಮತೋಲನವನ್ನು ಸರಿಪಡಿಸುವ ಉದ್ದೇಶವುಳ್ಳ ಸುಧಾರಣಾ ಕ್ರಮ ಮತ್ತೊಂದು ಅಸಮತೋಲನವನ್ನು ಇನ್ನೂ ತೀವ್ರವಾಗಿಸುತ್ತದೆ. ಮಹಿಳಾ ಪ್ರಾತಿನಿಧ್ಯ ಮತ್ತು ಒಕ್ಕೂಟ ನ್ಯಾಯ ಎರಡೂ ಸಹ ನ್ಯಾಯಯುತವಾದ ಸಾಂವಿಧಾನಿಕ ಧ್ಯೇಯಗಳು. ಇವೆರಡರ ನಡುವೆ ಆಯ್ಕೆ ಮಾಡುವ ಅಗತ್ಯತೆ ಭಾರತಕ್ಕೆ ಇಲ್ಲ.
543- ಉಳಿಸಿಕೊಂಡು ಸುಧಾರಣೆಗಳು ಅಗತ್ಯ
ಇಲ್ಲಿ ಸರಳವಾದ ಪರಿಹಾರ ಇದೆ. ಲೋಕಸಭಾ ಸದಸ್ಯತ್ವವನ್ನು 543ರಲ್ಲೇ ಉಳಿಸಿಕೊಳ್ಳಬೇಕು. ಪ್ರಸ್ತುತ ಜಾರಿಯಲ್ಲಿರುವ ಅಂತರ್‌ರಾಜ್ಯ ಸ್ಥಾನ ವಿತರಣೆಯನ್ನು (Inter state seat Distribution) ಯಥಾವತ್ತಾಗಿ ಉಳಿಸಿಕೊಳ್ಳಬೇಕು. ನವೀಕೃತ (Updated) ಜನಸಂಖ್ಯಾ ಅಂಕಿಸಂಖ್ಯೆಗಳನ್ನಾಧರಿಸಿ ರಾಜ್ಯಗಳಲ್ಲಿ ಆಂತರಿಕ ಡಿ ಲಿಮಿಟೇಷನ್ ನಡೆಸಬೇಕು. ಈ ಚೌಕಟ್ಟಿನ ಒಳಗೇ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಬೇಕು. ಜನಸಂಖ್ಯೆಯ ಹೆಚ್ಚಳದಿಂದ ಉಂಟಾಗಿರುವ ಸಂಪರ್ಕ ಸಾಧ್ಯತೆಯ ಒತ್ತಡವನ್ನು (Accessbility Pressures) ನಿಭಾಯಿಸಲು ಸೂಕ್ತವಾಗಿ ವಿಧಾನಸಭೆಯನ್ನು ವಿಸ್ತರಿಸಬೇಕು.
ಅರ್ಧ ಶತಮಾನಕ್ಕೂ ಹೆಚ್ಚು ಕಾಲ ರಾಜ್ಯಗಳು ಜನಸಂಖ್ಯಾ ನೀತಿಗಳನ್ನು ಜಾರಿಗೊಳಿಸಿ ಅನುಷ್ಠಾನಗೊಳಿಸಿರುವುದು, ಯಶಸ್ವಿಯಾದ ಜನಸಂಖ್ಯಾ ಸ್ಥಿರೀಕರಣದಿಂದ (Population Stabilisation) ತಮ್ಮ ಸಂಸದೀಯ ಪ್ರಭಾವ ಕಡಿಮೆಯಾಗುವುದಿಲ್ಲ ಎಂಬ ನಂಬಿಕೆಯ ಮೇಲೆ. ವಿಶೇಷವಾಗಿ ದಕ್ಷಿಣ ರಾಜ್ಯಗಳು ಶಿಕ್ಷಣ, ಆರೋಗ್ಯ ಸೇವೆ ಮತ್ತು ಕುಟುಂಬ ಕಲ್ಯಾಣ ಯೋಜನೆಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಿ, ರಾಷ್ಟ್ರೀಯ ನೀತಿಯ ಅನುಸಾರವೇ ಉತ್ತೇಜಿಸಲಾಗಿರುವ ಫಲವಂತಿಕೆಯ ಮಟ್ಟವನ್ನು ಕಾಪಾಡಿಕೊಂಡಿವೆ. ಈ ಯಶಸ್ಸಿಗೆ ಮನ್ನಣೆ ನೀಡದೆ ಜನಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಳವಾದ ರಾಜ್ಯಗಳಿಗೆ ರಾಜಕೀಯ ಲಾಭ ಒದಗಿಸುವುದು, ಕೇಂದ್ರ ಸರಕಾರವೇ ಸೃಷ್ಟಿಸಿರುವ ಉತ್ತೇಜನವನ್ನು ತಲೆಕೆಳಗು ಮಾಡಿದಂತಾಗುತ್ತದೆ.
ಹಾಗಾಗಿ ಇಲ್ಲಿ ಪ್ರಶ್ನೆ ಜನಸಂಖ್ಯೆ ನಿರ್ಣಾಯಕವಾಗಬೇಕೋ ಬೇಡವೋ ಎನ್ನುವುದಲ್ಲ. ಇದು ಖಂಡಿತವಾಗಿಯೂ ಮುಖ್ಯವಾಗಬೇಕು. ಆದರೆ ಪ್ರಶ್ನೆ ಇರುವುದು, ಐದು ದಶಕಗಳ ಕಾಲ ಭಾರತ ಪ್ರಜ್ಞಾಪೂರ್ವಕವಾಗಿ ಕಾಪಾಡಿಕೊಂಡು ಬಂದಿರುವ ಒಕ್ಕೂಟದ ಸಮತೋಲನವನ್ನು ಈಗ ಮರುಹೊಂದಿಸುವ ಅವಶ್ಯಕತೆ
ಇದೆಯೇ? ಈ ಹಿಂದೆ ಎರಡು ಬಾರಿ ಸಂಸತ್ತು, ಜನಸಂಖ್ಯೆಯ ಹೆಚ್ಚಳವಾಗಿದ್ದರೂ ಸಹ ಅಂತರ್‌ರಾಜ್ಯ ಸ್ಥಾನ ವಿತರಣೆಯನ್ನು ಯಥಾಸ್ಥಿತಿಯಲ್ಲೇ ಉಳಿಸಿಕೊಳ್ಳಲು ಸಾಂವಿಧಾನಿಕ ತಿದ್ದುಪಡಿ ಮಾಡಿದೆ. ಮೂರನೆಯ ಬಾರಿ ಇದೇ ಕ್ರಮ ಕೈಗೊಳ್ಳಲು ನಿರಾಕರಿಸುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಸಂಸತ್ ಅಧಿವೇಶನವನ್ನು ಪುನಃ ಆಯೋಜಿಸಬಹುದೇ ಎನ್ನುವ ಅನಿಶ್ಚಿತತೆ ಇದನ್ನು ಕೇವಲ ಅಕಾಡಮಿಕ್ ಚರ್ಚೆಯಾಗಿಸುತ್ತದೆ. ಇಂದು ಕೈಗೊಳ್ಳುವ ನಿರ್ಧಾರ ಗಣತಂತ್ರದ ಒಕ್ಕೂಟ ಸಮತೋಲನವನ್ನು ಮುಂದಿನ ಹಲವು ದಶಕಗಳ ಕಾಲ ಪುನರ್‌ರಚನೆ ಮಾಡಬಹುದು.