ಕಾಮಗಾರಿಯ ಹೆಸರಿನಲ್ಲಿ ಅವ್ಯವಸ್ಥೆ; ಸಂಕಷ್ಟದಲ್ಲಿ ನಾಗರಿಕರು
ಮುದ್ದೇಬಿಹಾಳ: ಪಟ್ಟಣದಲ್ಲಿ ಹಾಗೂ ಗ್ರಾಮೀಣ ಮಟ್ಟದಲ್ಲಿ ಅಭಿವೃದ್ಧಿ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ವಾಸ್ತವ ಸ್ಥಿತಿ ನೋಡಿದರೆ, ಅಭಿವೃದ್ಧಿ ಎಂಬ ಪದವೇ ಇಲ್ಲಿ ತನ್ನ ಅರ್ಥ ಕಳೆದುಕೊಂಡಂತೆ ಕಾಣುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಬೇಜವಾಬ್ದಾರಿತನ ಮತ್ತು ಗುತ್ತಿಗೆದಾರರ ನಿರ್ವಿಘ್ನ ಧೋರಣೆ, ಈ ಮೂರರ ಕೂಟವೇ ಇಂದು ಪಟ್ಟಣದ ಜನರನ್ನು ಸಂಕಷ್ಟದ ಗುಂಡಿಗೆ ತಳ್ಳಿದೆ.
ಒಳಚರಂಡಿ ಕಾಮಗಾರಿಯ ಕಥೆಯೇ ಸಾಕು ಈ ವ್ಯವಸ್ಥೆಯ ವೈಫಲ್ಯವನ್ನು ಬಯಲಿಗೆಳೆಯಲು. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡ ಕಾಮಗಾರಿ, ಇನ್ನೂ ಶೇ. ೮೦ ಮನೆಗಳಿಗೆ ಸಂಪರ್ಕ ನೀಡದೇ ಇದ್ದರೂ ‘ಪೂರ್ಣಗೊಂಡಿದೆ ಎಂದು ಕಾಗದದಲ್ಲಿ ಮುಕ್ತಾಯಗೊಂಡಿದೆ. ನೆಲಮಟ್ಟದಲ್ಲಿ ನೋಡಿದರೆ ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ, ದುರ್ವಾಸನೆ ಹರಡುತ್ತಿದೆ, ಕೆಲವೆಡೆ ಕಾಮಗಾರಿ ಕುಸಿದು ಜನರಿಗೆ ಜೀವ ಭೀತಿ ಉಂಟಾಗಿದೆ. ಇದು ಕಾಮಗಾರಿಯಲ್ಲಾ ಇದು ಸಾರ್ವಜನಿಕರ ಸಹನೆಯ ಮೇಲೆ ನಡೆಯುತ್ತಿರುವ ನಿರ್ಲಜ್ಜ ಪರೀಕ್ಷೆ ಎಂದು ಜನರು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಜೆಜೆಎಂ ಯೋಜನೆಯಡಿ ನಡೆಯುತ್ತಿರುವ ೨೪/೭ ಕುಡಿಯುವ ನೀರಿನ ಕಾಮಗಾರಿ ಮತ್ತೊಂದು ದುರಂತ ಅಧ್ಯಾಯವಾಗಿದೆ. ಪೈಪು ಹಾಕುವ ನೆಪದಲ್ಲಿ ಹೊಸದಾಗಿ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆಗಳು, ಪಾದಚಾರಿ ಮಾರ್ಗಗಳು, ಸಿಮೆಂಟ್ ಬ್ರಿಕ್ಸ್‌ಗಳನ್ನು ಸಂಪೂರ್ಣ ಹಾಳು ಮಾಡಲಾಗಿದೆ. ಆದರೆ ಕಾಮಗಾರಿ ಮುಗಿದ ನಂತರ ಅವುಗಳನ್ನು ಮರುಸ್ಥಾಪನೆ ಮಾಡುವ ಕನಿಷ್ಠ ಜವಾಬ್ದಾರಿಯೂ ತೋರಲಾಗಿಲ್ಲ. ಅಗೆದ ರಸ್ತೆಗಳನ್ನು ಹಾಗೆಯೇ ಬಿಟ್ಟು ತಿಂಗಳುಗಳು ಕಳೆದಿವೆ. ವಾಹನ ಸವಾರರು ದಿನವೂ ಆ ರಸ್ತೆಗಳ ಮೇಲೆ ತಮ್ಮ ಜೀವವನ್ನು ಪಣಕ್ಕಿಟ್ಟು ಸಂಚರಿಸುತ್ತಿದ್ದಾರೆ.
ವಿಜಯಪುರ ಮುಖ್ಯರಸ್ತೆ ಇಂದು ಒಂದು ಅಪಘಾತಗಳ ದಾರಿಯಾಗಿದೆ. ರಸ್ತೆ ತುಂಬೆಲ್ಲ ಹರಡಿಕೊಂಡಿರುವ ಕಲ್ಲುಗಳು ದ್ವಿಚಕ್ರ ವಾಹನ ಸವಾರರನ್ನು ಕ್ಷಣಾರ್ಧದಲ್ಲಿ ನೆಲಕ್ಕುರುಳಿಸುತ್ತಿವೆ. ಭಾರೀ ವಾಹನಗಳು ಹಾದುಹೋಗುವಾಗ ಅದರ ಚಕ್ರಗಳ ಬದಿಗೆ ಸಿಲುಕಿ ಕಲ್ಲುಗಳು ಎಸೆಯಲ್ಪಟ್ಟು ಪಾದಚಾರಿಗಳಿಗೆ ಗಾಯಗಳಾಗುತ್ತಿವೆ. ಇದು ಕೇವಲ ತೊಂದರೆ ಅಲ್ಲ,ಇದು ಜೀವಕ್ಕೆ ಅಪಾಯವಾಗಿ ಪರಿಣಮಿಸಿದೆ.
ಎಂಜಿವಿಸಿ ಕಾಲೇಜಿನ ಎದುರಿನ ಜಗದ್ಗುರು ಶ್ರೀ ರೇಣುಕಾಚಾರ್ಯ ವೃತ್ತದ ಬಳಿ ಪರಿಸ್ಥಿತಿ ಮತ್ತಷ್ಟು ಭಯಾನಕವಾಗಿದೆ. ಪ್ರತಿದಿನ ತರಕಾರಿ ಮಾರುಕಟ್ಟೆಗೆ ಬರುವ ಜನರು, ವ್ಯಾಪಾರಿಗಳು ವಾಹನ ನಿಲ್ಲಿಸಲು ಸ್ಥಳವಿಲ್ಲದೆ ರಸ್ತೆಯಲ್ಲಿಯೇ ನಿಲ್ಲಿಸುತ್ತಿದ್ದಾರೆ. ಟ್ರಾಫಿಕ್ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜನರು ಪ್ರತಿದಿನ ನರಕ ಅನುಭವಿಸುತ್ತಿದ್ದಾರೆ. ಇದು ಅಭಿವೃದ್ಧಿಯ ಫಲವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಅತ್ಯಂತ ವಿಷಾದಕರ ಸಂಗತಿ ಏನೆಂದರೆ, ಈ ಎಲ್ಲ ಸಮಸ್ಯೆಗಳ ಮಧ್ಯದಲ್ಲೇ ಪುರಸಭೆಯ ಮುಖ್ಯಾಧಿಕಾರಿಯ ನಿವಾಸ ಇದ್ದರೂ, ಅವರಿಂದ ಯಾವುದೇ ಕ್ರಮ ಕಂಡುಬಂದಿಲ್ಲ. ಜನರ ವಿಶ್ವಾಸವನ್ನು ಗೆದ್ದು ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳು, ಈಗ ಜನರ ಸಮಸ್ಯೆಗಳ ಕಡೆ ಕಣ್ಣು ಮುಚ್ಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪ್ರತಿದಿನ ರಸ್ತೆ ಮೇಲೆ ಬೀಳುವ ದ್ವಿಚಕ್ರ ವಾಹನ ಸವಾರರು, ದುರ್ವಾಸನೆಯ ನಡುವೆ ಬದುಕುವ ನಿವಾಸಿಗಳು, ಅಪಾಯದ ನಡುವೆ ಸಾಗುವ ಪಾದಚಾರಿಗಳು ಇವೆಲ್ಲ ಸಾಮಾನ್ಯ ವಿಷಯವಾಗಿಬಿಟ್ಟಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ರಸ್ತೆಗಳನ್ನು ಅಗೆದು ಬಿಟ್ಟು ಜನರನ್ನು ನರಕದಲ್ಲಿ ತಳ್ಳುವುದು ಯಾವ ಯೋಜನೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉತ್ತರಿಸಬೇಕು.
<ಶಿವಾನಂದ ವಾಲಿ
ಯುವಜನಸೇನೆ ರಾಜ್ಯಾಧ್ಯ