ಅತಿವ್ಯಾಪ್ತಿಗೆ ಹೆಸರಾದ ಕೆಕೆಆರ್‌ಡಿಬಿ ಮಂಡಳಿ!
ಸಿಎಂ ಬಳಿ ಇರುವ ತನಿಖಾ ವರದಿ ಬಹಿರಂಗಪಡಿಸುತ್ತಾರಾ?: 6ನೆಯ ಗ್ಯಾರಂಟಿ ಮರೆತ ಸಚಿವ ಪ್ರಿಯಾಂಕ್ ಖರ್ಗೆ!
ಕಲಬುರಗಿ: ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಸ್ಥಾಪಿಸಿರುವ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯು ವಿವಿಧ ವಿಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ಕಳಪೆ ಕಾಮಗಾರಿ, ಭ್ರಷ್ಟಾಚಾರ ನಡೆಸಿರುವುದಲ್ಲದೆ ಅತಿವ್ಯಾಪ್ತಿ (ನಕಲು) ಮಾಡುವುದರಲ್ಲೂ ಗಮನ ಸೆಳೆದಿದೆ. ಮಂಡಳಿಯು 2018-19 ಹಾಗೂ 2019-20ರಲ್ಲಿ ಬೆಂಗಳೂರಿನ ಸರ್ವ ಶಿಕ್ಷಣ ಅಭಿಯಾನದ ನಿರ್ದೇಶಕರಿಗೆ 5,517 ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ತಂತ್ರಜ್ಞಾನ ನೆರವಿನ ಕಲಿಕಾ ಕಾರ್ಯಕ್ರಮದ(ಟಿಎಎಲ್ಪಿ) ಅನುಷ್ಠಾನಕ್ಕೆ 49.28 ಕೋಟಿ ರೂ. ಬಿಡುಗಡೆ ಮಾಡಿತ್ತು. ಇದರನ್ವಯ ಗಣಿತ, ವಿಜ್ಞಾನ ಕಿಟ್‌ಗಳು, ಕಂಪ್ಯೂಟರ್, ಲ್ಯಾಪ್ಟಾಪ್, ಎಲ್ಸಿಡಿ, ಪ್ರೊಜೆಕ್ಟರ್, ಯುಪಿಎಸ್ ಬ್ಯಾಟರಿ ಮತ್ತಿತ್ತರ ಸಾಮಗ್ರಿ ಗಳನ್ನು 718 ಶಾಲೆಗಳಿಗೆ ಸರಬರಾಜು ಮಾಡಲಾಗಿತ್ತು.
ಅದರಂತೆಯೇ ಬಿಜೆಪಿ ಅವಧಿಯಲ್ಲಿ ಆಗಲೇ ಸ್ಥಾಪಿತವಾಗಿದ್ದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿಂದಲೂ 600 ಸರಕಾರಿ ಶಾಲೆಗಳಿಗೆ ಅದೇ ತರಹದ ಸಾಮಗ್ರಿಗಳ ಪೂರೈಕೆಗೆ 1.32 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಖರೀದಿಸಲಾಗಿತ್ತು. ಪ್ರತ್ಯೇಕ ಏಜೆನ್ಸಿಗಳು 53 ಶಾಲೆಗಳಿಗೆ ಒಂದೇ ರೀತಿಯ ವಸ್ತುಗಳು ಸರಬರಾಜು ಮಾಡಿದ್ದವು. ಒಂದು ಏಜೆನ್ಸಿಯ ವಸ್ತುಗಳ ಬಳಕೆಯಾದರೆ ಇನ್ನೊಂದು ಏಜೆನ್ಸಿಯ ವಸ್ತುಗಳು ನಿಷ್ಕ್ರಿಯವಾಗಿದ್ದವು. ಇದರಿಂದಾಗಿ 1.33 ಕೋಟಿ ರೂ. ಮೌಲ್ಯದ ಖರೀದಿ ಅತಿವ್ಯಾಪ್ತಿ ಮಾಡಿರುವುದು ಸಿಎಜಿ ವರದಿಯಿಂದ ಗೊತ್ತಾಗಿದೆ.
ರಸ್ತೆ ಕಾಮಗಾರಿಯಲ್ಲೂ 1.28 ಕೋಟಿಯ ನಕಲು: ಕೆಕೆಆರ್ ಡಿಬಿಯು, ಕಲಬುರಗಿ ತಾಲೂಕಿನ ಉದನೂರು ಗ್ರಾಮದಿಂದ ಮಿಣಜಗಿ ಗ್ರಾಮಕ್ಕೆ 8.815 ಕಿಮೀ ರಸ್ತೆ ಕಾಮಗಾರಿಯನ್ನು ಪಂಚಾಯತ್ ರಾಜ್ ಇಲಾಖೆಗೆ ವಹಿಸಿತ್ತು. ಅದೇ ಪ್ರದೇಶದ 2.8 ಕಿಮೀ ಕಾಮಗಾರಿಯನ್ನು ಅದಾಗಲೇ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಪಿಆರ್‌ಇಡಿ ಯೋಜನಾ ವಿಭಾಗದ ಮೂಲಕ ಕಾರ್ಯಗತಗೊಳಿಸಲಾಗಿತ್ತು. ಟೆಂಡರ್ ಆಹ್ವಾನಿಸುವ ಮುನ್ನ ಎರಡು ಇಲಾಖೆಗಳು ಕಾಮಗಾರಿಯ ಅಂಶವನ್ನೇ ಪರಿಶೀಲಿಸಿಲ್ಲ. ಇದರಿಂದಾಗಿ ಗುತ್ತಿಗೆದಾರನಿಗೆ ಬಾಕಿ ಕಾಮಗಾರಿ ಪ್ರಕಾರ, 2.66 ಕೋಟಿ ರೂ. ಪಾವತಿಸಬೇಕಿತ್ತು. ಆದರೆ ಗುತ್ತಿಗೆದಾರನಿಗೆ 3.94 ಕೋಟಿ ರೂ. ಪಾವತಿಸಿತ್ತು. ಇದರಿಂದ 1.28 ಕೋಟಿ ರೂ. ಹೆಚ್ಚುವರಿ ಪಾವತಿಸಿ ಅತಿವ್ಯಾಪ್ತಿ ಮಾಡಲಾಯಿತು ಎಂದು ಸಿಎಜಿ ವರದಿ ತಿಳಿಸಿದೆ.
ಇದಷ್ಟೇ ಅಲ್ಲದೆ ಕೆಕೆಆರ್‌ಡಿಬಿ ಮಂಡಳಿಯು ಹಲವು ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿದ್ದು, ಆದರೆ ಗುಣಮಟ್ಟದ ಕಾಮಗಾರಿಗೆ ಒತ್ತು ಕೊಡದೆ ಕಳಪೆ ಕಾಮಗಾರಿಗಳಿಗೆ ಅವಕಾಶ ನೀಡಿ ಹಣ ಲೂಟಿ ಮಾಡಲು ಅವಕಾಶ ಕೊಟ್ಟಿದೆ ಎನ್ನುವ ಆರೋಪಗಳು ಬಂದಿವೆ. 2013 ರಿಂದ ಈಗಿನವರೆಗೆ ಕಳಪೆ ಗುಣಮಟ್ಟದ ಕಾಮಗಾರಿಗಳು ನಡೆಯುತ್ತಲೇ ಇವೆ. ಹಿಂದಿನ ಸುಧೀರ್ ಕುಮಾರ್ ಆಯೋಗದ ತನಿಖಾ ವರದಿ ಬಹಿರಂಗದ ಜೊತೆಗೆ ಇಂದಿನ ಕಾಮಗಾರಿಗಳ ತನಿಖೆಯೂ ನಡೆಸಬೇಕೆಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ಅವೈಜ್ಞಾನಿಕ ಕಾರ್ಯದರ್ಶಿಯನ್ನು ಕೈಬಿಡಿ
ಕೆಕೆಆರ್‌ಡಿಬಿ ಮಂಡಳಿಗೆ ನಿಯೋಜ ನೆಗೊಂಡ ಈಗಿನ ಕಾರ್ಯದರ್ಶಿ ನಳಿನ್‌ಅತುಲ್ ಅವರ ನೇಮಕವು ಅವೈಜ್ಞಾನಿಕವಾಗಿದ್ದು, ಸದರಿ ಕಾರ್ಯದರ್ಶಿಯನ್ನು ಕೈಬಿಟ್ಟು ಸರಕಾರದ ಕಾರ್ಯದರ್ಶಿಗೆ ಸಮನಾಗಿರುವ ಅಧಿಕಾರಿಯನ್ನು ನೇಮಿಸುವಂತೆ ಹೈಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿದೆ. ನ್ಯಾಯಾಲಯದ ಆದೇಶಕ್ಕೆ ಗೌರವ ನೀಡಿ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು, ತನಿಖಾ ವರದಿಯ ಬಹಿರಂಗ ಪಡಿಸುವುದರ ಬಗ್ಗೆ ರಾಜ್ಯ ಸರಕಾರ ಸ್ಪಷ್ಟನೆ ಕೊಡಬೇಕು ಎಂದು ಹೋರಾಟಗಾರ ಸೈಬಣ್ಣಾ ಜಮಾದಾರ ಆಗ್ರಹಿಸಿದ್ದಾರೆ. ಇನ್ನು ಸಿಎಂ ಡಿಕೆ ಶಿವಕುಮಾರ್ ಅವರ ಬಳಿ ಇದೆ ಎನ್ನಲಾದ ಸುಧೀರ್ ಕುಮಾರ್ ನೇತೃತ್ವದ ತನಿಖಾ ವರದಿಯನ್ನು ಬಹಿರಂಗ ಪಡಿಸಲಿದ್ದಾರೆಯೇ ಎನ್ನುವುದು ಕಾದುನೋಡಬೇಕಿದೆ.
ಕೆಕೆಆರ್‌ಡಿಬಿ ಮಂಡಳಿಯಲ್ಲಿ ಭಾರೀ ಭ್ರಷ್ಟಾಚಾರವಾಗಿದ್ದು, ಜೇವರ್ಗಿ, ಚಿಂಚೋಳಿ, ಯಡ್ರಾಮಿ, ಕಲಬುರಗಿ, ಕಮಲಾಪುರ್ ತಾಲೂಕು ಸೇರಿದಂತೆ ಅನೇಕ ಕಡೆಗಳಲ್ಲಿ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆ ಅಡಿ ಸಿಸಿ ರಸ್ತೆ ಮತ್ತು ಹಾಸ್ಟೆಲ್‌ಗಳು ಬಿಲ್ಡಿಂಗ್ ವರ್ಕ್ ಹಾಗೂ ಶೌಚಾಲಯಗಳ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ. ಸ್ವತಃ ಮಂಡಳಿಯ ಅಧ್ಯಕ್ಷರ ತಾಲೂಕಿನಲ್ಲಿ 40 ರಿಂದ 50 ಕೋಟಿ ರೂ. ಅಧಿಕ ಹಣ ಲೂಟಿ ಮಾಡಲಾಗಿದೆ. ಇದರ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು.
-ಮಹಾಂತಗೌಡ ನಂದಿಹಳ್ಳಿ,
ರೈತ ಹೋರಾಟಗಾರರು
ತನಿಖಾ ವರದಿಯ ಎರಡೂ ಪ್ರತಿಗಳು ಮುಖ್ಯಮಂತ್ರಿಗಳ ಬಳಿ ಇದೆ. ತನಿಖಾ ವರದಿ ಬಹಿರಂಗಕ್ಕೆ ಹೊಸ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಅದರಲ್ಲೇನಿದೆ ಹೊರಗೆ ಬರಲಿ, ಇದಕ್ಕಾಗಿ ಎಂತೆಂಥವರ ಜೊತೆ ಜಗಳವಾಡಿದ್ದೇನೆ. ಕೈವಾಡವಿದ್ದವರ ಕೃತ್ಯ ಬಯಲಾಗುತ್ತದೆ.
-ಪ್ರಿಯಾಂಕ್ ಖರ್ಗೆ,
ಗೃಹ, ಕಲಬುರಗಿ ಉಸ್ತುವಾರಿ ಸಚಿವ
ಈ ಹಿಂದೆ ಕ.ಕ.ಮಾ.ಸಂ.ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿ ಕಾರ್ಯದರ್ಶಿ ಹಾಗೂ ಉಪಕಾರ್ಯದರ್ಶಿಯಾಗಿದ್ದ ಈಗಿನ ಗೃಹ ಹಾಗೂ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಕಾರ್ಯದರ್ಶಿ ಭೀಮಾಶಂಕರ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಅವರ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನರೆಡ್ಡಿ ಪಾಟೀಲ್ ಅವರನ್ನು ರಕ್ಷಿಸಲು ಕೆಕೆಆರ್‌ಡಿಬಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿನ ಅಕ್ರಮಗಳ ಬಗ್ಗೆಯ ತನಿಖಾ ವರದಿಯನ್ನು ಬಹಿರಂಗಪಡಿಸಿಲ್ಲ. ಮುಖ್ಯಮಂತ್ರಿಗಳಲ್ಲಿ ಇದೆ ಎನ್ನಲಾದ ಈ ಸಂಸ್ಥೆಗಳ ಬಹುಕೋಟಿ ಹಗರಣದ ತನಿಖಾ ವರದಿಯನ್ನು ಕೂಡಲೇ ಬಹಿರಂಗಪಡಿಸಬೇಕು.
-ಸೈಬಣ್ಣಾ ಜಮಾದಾರ,
ಸಾಮಾಜಿಕ ಹೋರಾಟಗಾರ