ಎಸ್‌ಐಆರ್: ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ!
ಚುನಾವಣಾ ಆಯೋಗದ ನಿರ್ಲಕ್ಷ್ಯಕ್ಕೆ ಹೊಣೆ ಯಾರು?
ಸಾಂದರ್ಭಿಕ ಚಿತ್ರ Photo : PTI
ಬೆಂಗಳೂರು : ಕೇಂದ್ರೀಯ ಚುನಾವಣಾ ಆಯೋಗವು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಯನ್ನು ಆರಂಭಿಸಿದೆ. ಆದರೆ, 2002 ಹಾಗೂ ಅದಕ್ಕಿಂತ ಮುಂಚಿತವಾಗಿ ವಿತರಣೆ ಮಾಡಿರುವ ಮತದಾರರ ಗುರುತಿನ ಚೀಟಿ ಇದ್ದರೂ, ಎಸ್‌ಐಆರ್‌ಗಾಗಿ ಬಿಡುಗಡೆ ಮಾಡಿರುವ ಮತದಾರರ ಪಟ್ಟಿಯಲ್ಲಿ ನೂರಾರು ಹೆಸರುಗಳು ನಾಪತ್ತೆಯಾಗಿರುವುದು ಕಂಡು ಬಂದಿದೆ.
2002ರಲ್ಲಿ ಅಸ್ತಿತ್ವದಲ್ಲಿದ್ದ ಬೆಂಗಳೂರಿನ ವರ್ತೂರು ವಿಧಾನಸಭಾ ಕ್ಷೇತ್ರವು 415 ಮತಗಟ್ಟೆಗಳನ್ನು ಹೊಂದಿತ್ತು. ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೌದೇನಹಳ್ಳಿ ಗ್ರಾಮದ ಮತಗಟ್ಟೆಯ ವಿವರ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಾಗಲಿ, ಚುನಾವಣಾ ಆಯೋಗದ ಮೊಬೈಲ್ ಆ್ಯಪ್‌ನಲ್ಲಾಗಲಿ ಲಭ್ಯವಿಲ್ಲ.
ಇದರಿಂದಾಗಿ, ಕೌದೇನಹಳ್ಳಿ ಗ್ರಾಮದ ನೂರಾರು ಮಂದಿ ಮತದಾರರು 2002ರಲ್ಲಿನ ತಮ್ಮ ಮತಗಟ್ಟೆ, ಕ್ರಮ ಸಂಖ್ಯೆಯ ವಿವರಗಳನ್ನು ಕಲೆ ಹಾಕಲು ಸಾಧ್ಯವಾಗುತ್ತಿಲ್ಲ. 1995, 1997, 2002ರಲ್ಲಿ ಕೇಂದ್ರೀಯ ಚುನಾವಣಾ ಆಯೋಗವೇ ವಿತರಣೆ ಮಾಡಿರುವ ಗುರುತಿನ ಚೀಟಿಗಳು ಇಲ್ಲಿನ ಮತದಾರರ ಬಳಿ ಲಭ್ಯವಿದೆ.
ಆದರೆ, ಎಸ್‌ಐಆರ್‌ಗಾಗಿ ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಹಾಕಿರುವ ಮತದಾರರ ಪಟ್ಟಿಯಲ್ಲಿ ಮಾತ್ರ ಗುರುತಿನ ಚೀಟಿಯ ಸಂಖ್ಯೆ ಹಾಕಿ ಹುಡುಕಿದರೂ ಮಾಹಿತಿ ಮಾತ್ರ ಇಲ್ಲ. ಚುನಾವಣಾ ಆಯೋಗದ ಈ ನಿರ್ಲಕ್ಷ್ಯಕ್ಕೆ ಯಾರು ಹೊಣೆ ಹೊರಬೇಕು ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
2025ರ ಮತದಾರರ ಪಟ್ಟಿಯ ಅನ್ವಯ ಎಲ್ಲರ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು ಗಣತಿ ನಮೂನೆ(ಎನ್ಯುಮರೇಷನ್ ಫಾರಂ)ಗಳನ್ನು ಹಂಚಿಕೆ ಮಾಡುತ್ತಿದ್ದಾರೆ. ಆದರೆ, ಇವರ ಬಳಿ 2002ರ ಮಾಹಿತಿ ಇಲ್ಲದಿರುವುದರಿಂದ 60, 70, 80 ವರ್ಷ ವಯೋಮಾನದವರು ಸಹ ತಮ್ಮ ವಿವರಗಳನ್ನು ಎಸ್‌ಐಆರ್ ಕಾಲಂ ನಲ್ಲಿ ನಮೂದಿಸಲು ಸಾಧ್ಯವಾಗುತ್ತಿಲ್ಲ.
ಯಾವೊಬ್ಬ ಅರ್ಹ ಮತದಾರರು ಕೈ ಬಿಟ್ಟು ಹೋಗಬಾರದು ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭಿಸಿರುವ ಎಸ್‌ಐಆರ್ ಪ್ರಕ್ರಿಯೆಯು, ಗುರುತಿನ ಚೀಟಿ ಹೊಂದಿದ್ದರೂ ಮತದಾರರ ಪಟ್ಟಿಯಿಂದ ಕೈ ಬಿಟ್ಟು ಹೋಗಿರುವ ಮತದಾರರಿಗೆ ಯಾವ ರೀತಿ ನ್ಯಾಯ ಒದಗಿಸಲಿದೆ ಎಂಬುದು ಕಾದು ನೋಡಬೇಕಿದೆ.
‘ಕೌದೇನಹಳ್ಳಿ ಗ್ರಾಮದ ಮತಗಟ್ಟೆಯ ವಿವರ ಎಲ್ಲಿಯೂ ಸಿಗುತ್ತಿಲ್ಲ. ಈ ಸಂಬಂಧ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರ ಗಮನ ಸೆಳೆಯಲಾಗಿತ್ತು. ಅವರು ಸಂಬಂಧಪಟ್ಟ ಜಿಲ್ಲಾ ಚುನಾವಣಾಧಿಕಾರಿಯನ್ನು ಸಂಪರ್ಕಿಸುವಂತೆ ಉತ್ತರಿಸಿದ್ದರು. ನಾವು ಜಿಲ್ಲಾ ಚುನಾವಣಾಧಿಕಾರಿಗೂ ಈ ವಿಷಯವನ್ನು ಮನದಟ್ಟು ಮಾಡಿದ್ದೇವೆ. ಆದರೆ, ಈವರೆಗೆ ನಮಗೆ ಯಾವುದೆ ಬೆಳವಣಿಗೆ ಕಂಡು ಬಂದಿಲ್ಲ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಚುನಾವಣಾ ಆಯೋಗ ಮತದಾರರ ಮಾಹಿತಿಯನ್ನು ಪರಿಶೀಲಿಸಿದ ಬಳಿಕವೇ ಗುರುತಿನ ಚೀಟಿ ನೀಡುವುದು. ಈಗ ನಮ್ಮ ಬಳಿಯಿರುವ ಮತದಾರರ ಗುರುತಿನ ಚೀಟಿಯ ವಿವರ ಹಾಕಿದರೆ, ಚುನಾವಣಾ ಆಯೋಗದಲ್ಲಿ ಮಾಹಿತಿ ಇಲ್ಲ ಎಂದು ವೆಬ್‌ಸೈಟ್ ಹಾಗೂ ಮೊಬೈಲ್ ಆ್ಯಪ್‌ನಲ್ಲಿ ತೋರಿಸುತ್ತಿದೆ. ಹಾಗಾದರೆ, ಗುರುತಿನ ಚೀಟಿ ನೀಡುವಾಗ ಸಂಗ್ರಹಿಸಿದ ಮಾಹಿತಿ ಎಲ್ಲಿ ಹೋಯಿತು?
-ಆರಿಝ್ ಅಹ್ಮದ್, ಸಮಾಜ ಸೇವಕ
ಚುನಾವಣಾ ಆಯೋಗ ಕನ್ನಡದಲ್ಲಿ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವ್ಯಾಕರಣ ದೋಷ ಎಷ್ಟರ ಮಟ್ಟಿಗೆ ಇದೆ ಎಂದರೆ, ಒಂದೊಂದು ಹೆಸರನ್ನು ಹತ್ತಾರು ಬಾರಿ ಓದಿ ಅರ್ಥೈಸಿಕೊಳ್ಳುವಂತಾಗಿದೆ. ನಾವು ಎನ್ಯುಮರೇಷನ್ ಫಾರಂನಲ್ಲಿ ಕೊಡುವ ಮಾಹಿತಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮತದಾರರಿಗೆ ನೋಟಿಸ್ ಕೊಡಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ. ಆದರೆ, ಅವರೇ ಸಿದ್ಧಪಡಿಸಿರುವ ಮತದಾರರ ಪಟ್ಟಿಯಲ್ಲಿರುವ ಲೋಪಗಳಿಗೆ ಯಾರನ್ನು ಹೊಣೆ ಮಾಡಬೇಕು.
-ಸುಹೇಲ್ ಎಸ್., ಯುವ ಮುಖಂಡ