ಬಿಎಂಐಸಿ: ಸರಕಾರದ ನಡೆ ನಿಗೂಢ
ಬಿಎಂಐಸಿ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ಶಿಫಾರಸು ಮಾಡಲಾಗಿತ್ತು. ಈ ಸಮಿತಿ ವರದಿ ಧೂಳು ಹಿಡಿಯುತ್ತಿದೆ. ಸದನ ಸಮಿತಿ ಸದಸ್ಯರಾಗಿದ್ದ ಕೆ.ಎಂ. ಶಿವಲಿಂಗೇಗೌಡ, ಬಸವರಾಜ ರಾಯರೆಡ್ಡಿ, ಪ್ರಿಯಾಂಕ್ ಖರ್ಗೆ ಈಗ ರಾಜ್ಯ ಕಾಂಗ್ರೆಸ್ ಸರಕಾರದ ಸಚಿವರು. ಸದನ ಸಮಿತಿ ವರದಿ ಮತ್ತು ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನೈಸ್ ಮೇಲೆ ಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ಒತ್ತಡ ಹೇರುವರೇ?
ಇದೊಂದು ‘ಲ್ಯಾಂಡ್ ಮಾರ್ಕ್’ ತೀರ್ಪು. ‘ಬೆಂಗಳೂರು- ಮೈಸೂರು ಇನ್‌ಫ್ರಾಸ್ಟ್ರಕ್ಷರ್ ಕಾರಿಡಾರ್ ಯೋಜನೆ’ಗೆ (ಬಿಎಂಐಸಿಪಿ) ರೈತರ ಜಮೀನು ಲೂಟಿ ಮಾಡಿರುವ ಬಗ್ಗೆ ರಾಜ್ಯ ಹೈಕೋರ್ಟ್‌ನ ದ್ವಿಸದಸ್ಯ ಪೀಠ ಜುಲೈ 29ರಂದು ಮಹತ್ವದ ತೀರ್ಪು ಪ್ರಕಟಿಸಿದೆ. ಕಳೆದ ವರ್ಷ ಏಕಸದಸ್ಯ ಪೀಠ ಭೂಸ್ವಾಧೀನ ರದ್ದುಪಡಿಸಿ ಕೊಟ್ಟ ತೀರ್ಪನ್ನು ಎತ್ತಿ ಹಿಡಿದಿದೆ. ನ್ಯಾ. ಡಿ.ಕೆ. ಸಿಂಗ್ ಹಾಗೂ ನ್ಯಾ. ಟಿ.ಎಂ. ನದಾಫ್ ಅವರನ್ನೊಳಗೊಂಡ ವಿಭಾಗೀಯ ಪೀಠ ಜನಪರ ತೀರ್ಪು ಪ್ರಕಟಿಸಿದೆ. ಇದು ಈಚೆಗೆ ಹೊರಬಂದಿರುವ ಸಂವೇದನಾಶೀಲ ತೀರ್ಪು ಎಂದರೂ ತಪ್ಪಲ್ಲ.
‘ನಮ್ಮ ರಾಜಕೀಯ ವ್ಯವಸ್ಥೆ ಹೇಗೆ ಶ್ರೀಮಂತರ ಹಿತಾಸಕ್ತಿಗಳನ್ನು ರಕ್ಷಣೆ ಮಾಡುತ್ತಿದೆ. ಉಳ್ಳವರ ಸಾಮ್ರಾಜ್ಯ ವಿಸ್ತರಣೆಗೆ ಹೇಗೆ ಬೆಂಬಲವಾಗಿ ನಿಲ್ಲುತ್ತಿದೆ. ಬಡವರು ಶ್ರಮಿಕರು, ದನಿಯಿಲ್ಲದ ಅಸಹಾಯಕರನ್ನ ಹೇಗೆ ದೋಚುತ್ತಿದೆ’ ಎಂಬುದು ಮತ್ತೊಮ್ಮೆ ಬಯಲಾಗಿದೆ.
‘ಬಿಎಂಐಸಿ ಯೋಜನೆಗೆ ಜಮೀನು ಸ್ವಾಧೀನಪಡಿಸಿಕೊಂಡು ಎರಡು ದಶಕ ಕಳೆದರೂ ಪರಿಹಾರ ನಿಗದಿಪಡಿಸಿಲ್ಲ, ಪರಿಹಾರ ವಿತರಿಸಿಲ್ಲ. ಕೃಷಿಕರ ಜೀವನೋಪಾಯ ಕಸಿದುಕೊಂಡು ಅಕ್ಷರಶಃ ಬೀದಿಗೆ ದಬ್ಬಲಾಗಿದೆ. ಈ ಅವಧಿಯಲ್ಲಿ ರೈತರು ಎದುರಿಸಿದ ಕಷ್ಟನಷ್ಟ ನಿರ್ಲಕ್ಷಿಸುವಂತಿಲ್ಲ. ಇದು ರಾಜ್ಯದಲ್ಲಿ ನಡೆದಿರಬಹುದಾದ ದೊಡ್ಡ ಹಗರಣ. ಸಂವಿಧಾನ ಹಾಗೂ ರೈತರಿಗೆ ಮಾಡಿದ ವಂಚನೆ’ ಎಂದು ತೀರ್ಪು ಹೇಳಿದೆ. ಇಷ್ಟಾದರೂ ಸರಕಾರ ಏನೂ ಆಗಿಲ್ಲವೆಂಬಂತೆ ಕಣ್ಣು-ಕಿವಿ ಮುಚ್ಚಿಕೊಂಡಿದೆ. ಮುಂದಿನ ನಡೆ ತೀರ್ಮಾನಿಸದೆ ಕಾಲ ಹರಣ ಮಾಡುತ್ತಿದೆ.
ಈ ಯೋಜನೆಗೆ ಜಮೀನು ಕಳೆದುಕೊಂಡವರಲ್ಲಿ ಎಷ್ಟು ಮಂದಿ ಬದುಕಿದ್ದಾರೋ? ಎಷ್ಟು ಮಂದಿ ಸತ್ತಿದ್ದಾರೋ? ಶಾಲಾ-ಕಾಲೇಜು ಶುಲ್ಕ ಕಟ್ಟಲಾಗದೆ ಎಷ್ಟು ಮಕ್ಕಳು ಶಿಕ್ಷಣದಿಂದ ವಂಚಿತವಾದವೋ? ಖರ್ಚುವೆಚ್ಚ ಭರಿಸಲಾಗದೆ ಅದೆಷ್ಟು ಮದುವೆಗಳು ಮುರಿದುಬಿದ್ದವೋ? ಚಿಕಿತ್ಸೆಗೆ ಹಣವಿಲ್ಲದೆ ಎಷ್ಟು ಮಂದಿ ಪ್ರಾಣ ಕಳೆದುಕೊಂಡರೋ? ಈ ಯೋಜನೆಯಿಂದ ಆಗಿರುವ ಸಾಮಾಜಿಕ ಪರಿಣಾಮ ಕುರಿತು ಸರಕಾರ ಸಮೀಕ್ಷೆ ನಡೆಸಬೇಕಿದೆ. ಅಲ್ಲದೆ, ಬೆಂಗಳೂರು ಮತ್ತು ಸುತ್ತಮುತ್ತಲ ಕೆರೆ, ಕಟ್ಟೆಗಳು, ಕೊಳಗಳು, ಜಲಾನಯನ ಪ್ರದೇಶವನ್ನು ಯೋಜನೆಗೆ ಬಿಟ್ಟುಕೊಡಲಾಗಿದೆ. ಇದರಿಂದ ಪರಿಸರದ ಮೇಲಾಗಿರುವ ಪರಿಣಾಮ ಕುರಿತೂ ಅಧ್ಯಯನ ಮಾಡಬೇಕಿದೆ. ಅಂದಾಜಿನಂತೆ 270 ಎಕರೆ ಕೆರೆ, ಕಟ್ಟೆ, ಕೊಳ ಮತ್ತು ಜಲಾನಯನ ಪ್ರದೇಶ ನೈಸ್ ಪಾಲಾಗಿದೆ. ನಮ್ಮ ಸರಕಾರಕ್ಕೆ ಪರಿಸರ ಸಂರಕ್ಷಣೆ ಬಗೆಗಿರುವ ಆಸಕ್ತಿಯನ್ನು ಇದು ತೋರುತ್ತದೆ.
ರಾಜ್ಯ ಸರಕಾರ ಮತ್ತು ನೈಸ್ 1997ರಲ್ಲಿ ಬಿಎಂಐಸಿ ಯೋಜನೆಯ ಮೂಲ ಒಪ್ಪಂದ (ಫ್ರೇಮ್ ವರ್ಕ್ ಅಗ್ರಿಮೆಂಟ್) ಮಾಡಿಕೊಂಡಿತು. ಐದು ಟೌನ್‌ಶಿಪ್, ಬೆಂಗಳೂರು-ಮೈಸೂರು ಮಧ್ಯೆ 111ಕಿ.ಮೀ. ಎಕ್ಸ್‌ಪ್ರೆಸ್ ವೇ, 41.8 ಕಿ.ಮೀ. ವರ್ತುಲ ರಸ್ತೆ, 9.8 ಕಿ.ಮೀ. ಸಂಪರ್ಕ ರಸ್ತೆ ನಿರ್ಮಿಸಬೇಕಿತ್ತು. ಯೋಜನೆಗೆ 20,193 ಎಕರೆ ಜಮೀನು ಅಗತ್ಯವಿತ್ತು. ನಿಗದಿಗಿಂತ ಹೆಚ್ಚುವರಿಯಾಗಿ ಜಮೀನು ಕೊಡಲಾಯಿತು. 2023ರವರೆಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯಿತು. ಆದರೆ, ಕಳೆದ 23ವರ್ಷಗಳಲ್ಲಿ ನಿರ್ಮಿಸಿರುವುದು ಐದಾರು ಕಿ.ಮೀ. ರಸ್ತೆ ಮಾತ್ರ! ಈ ಅವಧಿಯಲ್ಲಿ ನೈಸ್ ಕೋಟಿ ಕೋಟಿ ಹಣ ಲೂಟಿ ಮಾಡಿದೆ. ಅಭಿವೃದ್ಧಿಪಡಿಸಿದ ಜಮೀನುಗಳನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಮಾರಾಟ ಮಾಡಿದೆ, ಟೋಲ್ ಸಂಗ್ರಹದಿಂದ ಕೋಟ್ಯಂತರ ರೂ. ಸುಲಿಗೆ ಮಾಡಿದೆ.
ಸೋಮವಾರ ಅನಿರ್ದಿಷ್ಟ ಅವಧಿಗೆ ಮುಂದೂಡಿದ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಹೈಕೋರ್ಟ್ ತೀರ್ಪು ಕುರಿತು ಸಮಗ್ರ ಚರ್ಚೆ ನಡೆಯಬೇಕಿತ್ತು. ‘ಹಗಲು ದರೋಡೆ’ ಪ್ರತಿಧ್ವನಿಸಬೇಕಿತ್ತು. ಆದರೆ, ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಕಾಳಜಿ ಇರಲಿಲ್ಲ. ‘ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ’ದ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆ ಕೊಡಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದರಿಂದ ಬೇರೆ ಯಾವುದೇ ಕಲಾಪ ನಡೆಯಲಿಲ್ಲ. ಪ್ರಮುಖ ಸಮಸ್ಯೆಗಳು ಯಾವುದೆಂದು ವಿರೋಧ ಪಕ್ಷಗಳು ಗ್ರಹಿಸಬೇಕಿತ್ತು. ಆಡಳಿತ- ವಿರೋಧ ಪಕ್ಷಗಳ ನಡುವಿನ ಗಲಾಟೆಯ ‘ಜುಗಲ್ಬಂದಿ’ಯಲ್ಲಿ ಎಲ್ಲ ಕೊಚ್ಚಿ ಹೋಯಿತು. ಬಡ ಬೋರೇಗೌಡನ ತೆರಿಗೆ ಹಣದಲ್ಲಿ ‘ಬಂದ ದಾರಿಗೆ ಸುಂಕ’ ಪಡೆದು ಶಾಸಕರು ಊರುಗಳಿಗೆ ಹಿಂದಿರುಗಿದರು. ಇದು ಪ್ರಜಾಪ್ರಭುತ್ವ ಅಣಕಿಸುವ ನಡವಳಿಕೆಯಲ್ಲದೆ ಮತ್ತೇನಲ್ಲ.
ನೈಸ್ ಅಕ್ರಮ ಮುಂದಿಟ್ಟುಕೊಂಡು ರಾಜ್ಯ ಸರಕಾರ ಹಾಗೂ ಆಡಳಿತ ಪಕ್ಷವನ್ನು ವಿರೋಧ ಪಕ್ಷಗಳು ಹಣಿಯಬಹುದಿತ್ತು. ಹಗರಣವನ್ನು ಜನರ ಮುಂದಿಡಬಹುದಿತ್ತು. ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡಲು ಬಿಜೆಪಿ ವಿಫಲ ಆಗಿರುವುದಕ್ಕೆ ನೈಸ್ ಹಗರಣ ಮತ್ತೊಂದು ಉದಾಹರಣೆಯಾಯಿತು.
ನೈಸ್ ಅಕ್ರಮಗಳ ಕುರಿತು ಹತ್ತು ವರ್ಷಗಳ ಹಿಂದೆಯೇ ಶಾಸಕ ಟಿ.ಬಿ. ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸದನ ಸಮಿತಿ ವರದಿ ಸಲ್ಲಿಸಿತ್ತು. ಎರಡು ವರ್ಷದಲ್ಲಿ 50 ಸಭೆಗಳನ್ನು ನಡೆಸಿ ವರದಿ ಸಿದ್ಧಪಡಿಸಿತ್ತು. ವರದಿ ಸಲ್ಲಿಕೆಗೆ ಕೆಲವು ಪ್ರಭಾವಿ ರಾಜಕಾರಣಿಗಳು ಅಡ್ಡಿಯಾಗಿದ್ದರು. ಪ್ರಮುಖ ಪತ್ರಿಕೆಯೊಂದು ಇದನ್ನು ಬಯಲಿಗೆಳೆದಿತ್ತು. ಆ ಬಳಿಕ ಸದನದಲ್ಲಿ ವರದಿ ಮಂಡನೆಗೆ ಅವಕಾಶ ಕೊಡಲಾಯಿತು. ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ಶಿಫಾರಸು ಮಾಡಲಾಗಿತ್ತು. ಈ ಸಮಿತಿ ವರದಿ ಧೂಳು ಹಿಡಿಯುತ್ತಿದೆ. ಸದನ ಸಮಿತಿ ಸದಸ್ಯರಾಗಿದ್ದ ಕೆ.ಎಂ. ಶಿವಲಿಂಗೇಗೌಡ, ಬಸವರಾಜ ರಾಯರೆಡ್ಡಿ, ಪ್ರಿಯಾಂಕ್ ಖರ್ಗೆ ಈಗ ರಾಜ್ಯ ಕಾಂಗ್ರೆಸ್ ಸರಕಾರದ ಸಚಿವರು. ಸದನ ಸಮಿತಿ ವರದಿ ಮತ್ತು ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನೈಸ್ ಮೇಲೆ ಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ಒತ್ತಡ ಹೇರುವರೇ?
ನೈಸ್‌ಗೆ ಕೊಟ್ಟಿರುವ ಹೆಚ್ಚುವರಿ ಜಮೀನನ್ನು ವಾಪಸ್ ಪಡೆಯುವಂತೆ ಸದನ ಸಮಿತಿ ಹೇಳಿತ್ತು. ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕು. ಈವರೆಗೆ ಸಂಗ್ರಹಿಸಿದ ಟೋಲ್ ಶುಲ್ಕದ ಹಣವನ್ನು ವಸೂಲು ಮಾಡಬೇಕು ಎಂದೂ ಒತ್ತಾಯಿಸಿತ್ತು. ಬಿಎಂಐಸಿ ಜಮೀನು ಸ್ವಾಧೀನ ಪ್ರಕ್ರಿಯೆಯನ್ನು ಕೋರ್ಟ್ ರದ್ದುಪಡಿಸಿದ್ದರಿಂದ ಸರಕಾರಕ್ಕೆ ಬಲ ಬಂದಿದೆ. ಮುಂದೇನು ಎಂದು ತೀರ್ಮಾನವಾಗಬೇಕಿದೆ. ಈ ವಿಷಯದಲ್ಲಿ ಈಗಾಗಲೇ ವಿಳಂಬವಾಗಿದೆ. ಇನ್ನು ವಿಳಂಬ ಮಾಡದೆ ತಕ್ಷಣ ಕಾರ್ಯಪ್ರವೃತ್ತವಾಗಬೇಕು.
ಬಿಎಂಐಸಿ ಅಕ್ರಮ ಕುರಿತು ರೈತ ಸಂಘಟನೆಗಳೂ ತಟಸ್ಥವಾಗಿವೆ. ತೋರುವುದಕ್ಕೆ ಹತ್ತಾರು ರೈತ ಸಂಘಟನೆಗಳಿವೆ. ‘ರೈತ ನಾಯಕರು ಎಲ್ಲಿದ್ದಾರೆ?’ ಎಂದು ಹುಡುಕಬೇಕಾದ ಕಾಲ ಬಂದಿದೆ. ಮಾಧ್ಯಮಗಳ ಬಗ್ಗೆ ಇನ್ನು ಹೇಳುವುದೇ ಬೇಕಿಲ್ಲ. ನಿಜವಾದ ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿಲ್ಲ.
‘ನೈಸ್ ಯೋಜನೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಹಗಲು ದರೋಡೆ ಹೇಗೆ ನಡೆಯಿತು?’ ಎಂದು ಯಾರಾದರೂ ಪ್ರಶ್ನಿಸಬಹುದು. ಯೋಜನೆ ಕುರಿತು ಸಮಗ್ರ ತನಿಖೆ ನಡೆದರೆ ಮಾತ್ರ ಉತ್ತರ ಸಿಗಲು ಸಾಧ್ಯ. ಯೋಜನೆ ಕುರಿತು ತಜ್ಞರ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಸುವಂತೆ ಹೈಕೋರ್ಟ್ ಹೇಳಿದೆ. ‘ಫೊರೆನ್ಸಿಕ್ ಆಡಿಟ್’ ನಡೆಸಲು ಸೂಚಿಸಿದೆ. ಸರಕಾರ ಕಟ್ಟುನಿಟ್ಟಾಗಿ ಇದನ್ನು ಪಾಲಿಸಬೇಕಿದೆ.
ಬಿಎಂಐಸಿ ಮೂಲ ಒಪ್ಪಂದವಾದ ದಿನದಿಂದ ಇಲ್ಲಿವರೆಗೆ ಏನೇನು ನಡೆದಿದೆ? ಮೂಲ ಒಪ್ಪಂದದ ಹಿಂದೆ ಯಾವ ರಾಜಕಾರಣಿಗಳ ಕೈವಾಡವಿತ್ತು? ಯಾವ ಇಲಾಖೆ ಸಚಿವರು ಹಾಗೂ ಅಧಿಕಾರಿಗಳು ಒಪ್ಪಂದದ ಭಾಗವಾಗಿದ್ದರು? ಈ ಯೋಜನೆಯ ಫಲಾನುಭವಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಯಾರು? ಮೊದಲಾದ ಅಂಶಗಳನ್ನು ತನಿಖೆ ವ್ಯಾಪ್ತಿಗೆ ಒಳಪಡಿಸಬೇಕು. ರಾಜ್ಯ ಸರಕಾರದ ಅನೇಕ ಅಧಿಕಾರಿಗಳು ನಿವೃತ್ತಿ ಬಳಿಕ ನೈಸ್‌ನಲ್ಲಿ ದುಡಿದಿದ್ದಾರೆ ಎಂಬ ಆರೋಪವಿದೆ. ಆ ಬಗ್ಗೆ ತನಿಖೆ ನಡೆಯಬೇಕು.
ನೈಸ್‌ಗೆ ಟೋಲ್ ಪಾವತಿಸದಂತೆ ಕುಮಾರಸ್ವಾಮಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಅವರು ಎತ್ತಿರುವುದು ಗಂಭೀರವಾದ ವಿಚಾರ. ಈ ಕುರಿತು ಸರಕಾರ ತುರ್ತು ತೀರ್ಮಾನ ಮಾಡಬೇಕಿದೆ. ಹೈಕೋರ್ಟ್ ತೀರ್ಪಿನಲ್ಲಿ ಏನಾದರೂ ಗೊಂದಲದ ಅಂಶಗಳು (ಗ್ರೆ ಏರಿಯಾ) ಇದ್ದರೆ ನ್ಯಾಯಾಲಯದ ಸ್ಪಷ್ಟನೆ ಪಡೆಯಬೇಕು. ಅಡ್ವೊಕೇಟ್ ಜನರಲ್ ಅಭಿಪ್ರಾಯ ಕೇಳಬೇಕು.
ಬಿಎಂಐಸಿ ಯೋಜನೆಗೆ ಭೂಮಿ ಕಳೆದುಕೊಂಡಿರುವ ರೈತರನ್ನೇ ಪಾಲುದಾರರನ್ನಾಗಿ ಮಾಡಿಕೊಂಡು ನಿರಂತರವಾಗಿ ಆದಾಯ ಸಿಗುವಂತೆ ನೋಡಿಕೊಳ್ಳಬೇಕು. ಸ್ವಾಧೀನಪಡಿಸಿಕೊಂಡಿರುವ ಖಾಲಿ ಜಮೀನಿನಲ್ಲಿ ಟೌನ್‌ಶಿಪ್ ಅಭಿವೃದ್ಧಿಪಡಿಸಿ ಅದರಲ್ಲೂ ಸಂತ್ರಸ್ತರಿಗೆ ಪಾಲು ದೊರೆಯುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಚರ್ಚಿಸಲು ತುರ್ತಾಗಿ ಸರ್ವಪಕ್ಷಗಳ ಸಭೆ ಕರೆಯುವುದು ಸೂಕ್ತ. ಸರಕಾರದ ಮುಂದಿನ ನಡೆಗೆ ರೈತರು ಇನ್ನೆಷ್ಟು ದಿನ ಕಾಯಬೇಕಾಗುವುದೋ?
ಒಟ್ಟಾರೆ, ನೈಸ್ ಕೈಗೊಂಡಿರುವ ಬಿಎಂಐಸಿ ಯೋಜನೆ ಒಂದು ಫ್ರಾಡ್ ಎಂದು ಬಹಿರಂಗವಾಗಿದೆ. ಈ ಫ್ರಾಡ್ ಯೋಜನೆಯಿಂದ ನೊಂದ ರೈತರ ಕಣ್ಣೀರು ಒರೆಸಬೇಕಾದ್ದು ಸರಕಾರದ ಕರ್ತವ್ಯ. ಆ ಕೆಲಸವನ್ನು ತಾವೂ ರೈತನ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಡುವರೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.