ಹುಬ್ಬಳ್ಳಿ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರತಿವರ್ಷ ನೀಡುವ ಪ್ರತಿಷ್ಠಿತ ‘ಧೀಮಂತ’ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಈ ಬಾರಿ ಚುನಾವಣಾ ನೀತಿ ಸಂಹಿತೆಯ ಬಿಸಿ ತಟ್ಟಿದೆ. ನ.1ರಂದು ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸುವ ಸಂಪ್ರದಾಯಕ್ಕೆ ಈ ಬಾರಿ ತಾತ್ಕಾಲಿಕ ವಿರಾಮ ಬಿದ್ದಿದೆ. ಪ್ರಶಸ್ತಿ ಪ್ರದಾನವನ್ನು ಕೈಬಿಡದಿದ್ದರೂ, ನಿಗದಿತ ದಿನದಂದು ಸಮಾರಂಭ ಆಯೋಜಿಸಲು ಸಾಧ್ಯವಾಗದಿರುವುದು ಚರ್ಚೆಗೆ ಗ್ರಾಸವಾಗಿದೆ.
ಮಹಾನಗರ ಪಾಲಿಕೆಯು ಪ್ರತಿವರ್ಷ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅವಳಿ ನಗರದ ಪ್ರತಿಭಾವಂತ ಸಾಧಕರನ್ನು ಗುರುತಿಸಿ ಧೀಮಂತ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಸಾಹಿತ್ಯ, ಕಲೆ, ಕ್ರೀಡೆ, ಸಮಾಜಸೇವೆ, ವೈದ್ಯಕೀಯ, ಪತ್ರಿಕೋದ್ಯಮ, ರಂಗಭೂಮಿ, ಸಂಗೀತ, ಯೋಗ, ಕೃಷಿ ಹಾಗೂ ಸಂಶೋಧನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಈ ಗೌರವ ನೀಡಲಾಗುತ್ತದೆ. ತಮ್ಮ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದವರು, ಸಮಾಜಕ್ಕೆ ವಿಶೇಷ ಕೊಡುಗೆ ನೀಡಿದವರನ್ನು ಗುರುತಿಸಿ ಸನ್ಮಾನಿಸುವುದು ಈ ಪ್ರಶಸ್ತಿಯ ವಿಶೇಷತೆಯಾಗಿದೆ.
ಈ ಬಾರಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈವರೆಗೂ ಅರ್ಜಿ ಆಹ್ವಾನಿಸಿಲ್ಲ. ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ನೀತಿ ಸಂಹಿತೆಯನ್ನು ಪಾಲಿಕೆ ಇದಕ್ಕೆ ಕಾರಣವಾಗಿ ಮುಂದಿಟ್ಟಿದೆ. ಹೀಗಾಗಿ, ನ.1ರಂದೇ ಪ್ರಶಸ್ತಿ ಪ್ರದಾನ ಮಾಡುವ ಸಾಧ್ಯತೆ ಕೈತಪ್ಪಿದೆ. ಮುಂದಿನ ದಿನಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಪಾಲಿಕೆ ಉದ್ದೇಶಿಸಿದೆ.
ಇನ್ನೊಂದೆಡೆ, ಕನ್ನಡ ರಾಜ್ಯೋತ್ಸವದಂದೇ ಸ್ಥಳೀಯ ಸಾಧಕರನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ವಿಶೇಷತೆಯಾಗಿದ್ದು, ದಿನಾಂಕ ಬದಲಾವಣೆಯಿಂದ ಆ ಸಂಪ್ರದಾಯಕ್ಕೆ ಧಕ್ಕೆಯಾಗಿದೆ ಎಂದು ಕನ್ನಡಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಪ್ರಶಸ್ತಿ ಪ್ರದಾನ ವಿಳಂಬವಾಗುತ್ತಿರುವ ಬಗ್ಗೆ ಆಕ್ರೋಶವನ್ನೂ ಹೊರಹಾಕಿವೆ.
ರಾಜ್ಯೋತ್ಸವದ ಸಂಭ್ರಮದ ಜತೆಗೆ ಸಾಧಕರಿಗೆ ಸಿಗಬೇಕಿದ್ದ ಗೌರವ ಈ ಬಾರಿ ಮುಂದೂಡಿಕೆಯಾಗಿದ್ದು, ಪಾಲಿಕೆ ಯಾವಾಗ ಪ್ರಶಸ್ತಿ ಪ್ರದಾನ ಮಾಡಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.
ಧೀಮಂತ ಪ್ರಶಸ್ತಿ ಪ್ರದಾನವನ್ನು ರದ್ದುಗೊಳಿಸಿಲ್ಲ. ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ನ.1ರಂದು ಸಮಾರಂಭ ನಡೆಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸೂಕ್ತ ದಿನಾಂಕ ನಿಗದಿಪಡಿಸಿ ಕಾರ್ಯಕ್ರಮ ಆಯೋಜಿಸಿ ಸಾಧಕರನ್ನು ಗೌರವಿಸಲಾಗುವುದು.
<ದುರ್ಗಮ್ಮ ಬಿಜವಾಡ, ಮನಪಾ ಮೇಯರ್
ನಾಡಹಬ್ಬಗಳಿಗೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಈ ಕುರಿತು ಸಭೆಯಲ್ಲಿ ನಾವು ನವೆಂಬರ್ ಒಂದರಂದೇ ಕಾರ್ಯಕ್ರಮ ಆಯೋಜಿಸಲು ಮನವಿ ಮಾಡಿದ್ದೇವೆ. ಆದರೆ, ಪಾಲಿಕೆ ಆಡಳಿತ ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಎಂದು ಹೇಳುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ.
<ಸಂಜೀವ ದುಮಕನಾಳ, ಹುಬ್ಬಳ್ಳಿ ನಿವಾಸಿ