ಭಾಲ್ಕಿ : ಪಟ್ಟಣದ ಅಭಿವೃದ್ಧಿ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಭಾಲ್ಕಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದ್ದರೂ, ಪಟ್ಟಣದ ಪ್ರವೇಶದ್ವಾರದಲ್ಲಿರುವ ನಾಮಫಲಕದಲ್ಲಿ ಮಾತ್ರ ‘ಪುರಸಭೆ’ ಎಂಬ ಹಳೆಯ ಹೆಸರೇ ಮುಂದುವರಿದಿದೆ.

ನಗರಸಭೆ ಕಚೇರಿಯ ನಾಮಫಲಕವನ್ನು ಬದಲಾಯಿಸಲಾಗಿದ್ದು, ಪಟ್ಟಣ ಪ್ರವೇಶಿಸುವಾಗ ಸಾರ್ವಜನಿಕರ ಗಮನಕ್ಕೆ ಬರುವ ಸ್ವಾಗತ ಕಮಾನು ಹಾಗೂ ನಾಮಫಲಕಗಳಲ್ಲಿ ಹಳೆಯ ಹೆಸರನ್ನೇ ಉಳಿಸಲಾಗಿದೆ. ಆಡಳಿತಾತ್ಮಕವಾಗಿ ಮೇಲ್ದರ್ಜೆಗೇರಿಸಿದ ಬಳಿಕವೂ ಪ್ರಮುಖ ಸಾರ್ವಜನಿಕ ಸ್ಥಳದಲ್ಲಿರುವ ನಾಮಫಲಕವನ್ನು ನವೀಕರಿಸದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಮಫಲಕ ಕೇವಲ ಹೆಸರಿನ ಪ್ರದರ್ಶನವಲ್ಲ. ಅದು ಸ್ಥಳೀಯ ಸಂಸ್ಥೆಯ ಅಧಿಕೃತ ಸ್ಥಾನಮಾನ ಹಾಗೂ ಆಡಳಿತ ವ್ಯವಸ್ಥೆಯ ಗುರುತನ್ನು ಪ್ರತಿಬಿಂಬಿಸುತ್ತದೆ. ನಗರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕವೂ ‘ಪುರಸಭೆ’ ಎಂಬ ಹೆಸರು ಮುಂದುವರಿದಿರುವುದು ಹೊರ ಜಿಲ್ಲೆಗಳಿಂದ ಬರುವವರು ಹಾಗೂ ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗುತ್ತಿದೆ.

ಕಚೇರಿಯ ನಾಮಫಲಕ ಬದಲಾಯಿಸಿರುವ ಅಧಿಕಾರಿಗಳಿಗೆ ಪಟ್ಟಣದ ಪ್ರವೇಶದ್ವಾರದಲ್ಲಿರುವ ಫಲಕವನ್ನು ನವೀಕರಿಸುವುದು ಮರೆತಿರುವುದು ವಿಪರ್ಯಾಸ. ಸರಕಾರದ ಆದೇಶದಂತೆ ಆಡಳಿತಾತ್ಮಕ ಬದಲಾವಣೆ ಜಾರಿಗೊಂಡಿದ್ದರೂ ಅದರ ಸ್ಪಷ್ಟತೆ ಸಾರ್ವಜನಿಕವಾಗಿ ಕಾಣಿಸದಿರುವುದು ಅಧಿಕಾರಿಗಳ ಮೇಲ್ವಿಚಾರಣೆಯ ಬಗ್ಗೆಯೂ ಪ್ರಶ್ನೆ ಮೂಡಿಸಿದೆ.

ತಕ್ಷಣ ಫಲಕ ಬದಲಾವಣೆಗೆ ಒತ್ತಾಯ

ಪಟ್ಟಣದ ಪ್ರವೇಶದ್ವಾರದಲ್ಲಿರುವ ಹಳೆಯ ನಾಮಫಲಕವನ್ನು ತಕ್ಷಣ ಬದಲಾಯಿಸುವುದರ ಜೊತೆಗೆ, ನಗರ ವ್ಯಾಪ್ತಿಯಲ್ಲಿರುವ ಎಲ್ಲ ಸರಕಾರಿ ನಾಮಫಲಕಗಳನ್ನು ಪರಿಶೀಲಿಸಿ ಅಗತ್ಯವಿರುವ ಕಡೆ ಅಧಿಕೃತ ಹೆಸರನ್ನು ನವೀಕರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸದ್ಯ ಕಚೇರಿಯ ನಾಮಫಲಕದಲ್ಲಿ ಬದಲಾವಣೆ ಮಾಡಲಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು 15 ದಿನಗಳೊಳಗೆ ಪಟ್ಟಣದ ಹೊರ ವಲಯದಲ್ಲಿರುವ ಸ್ವಾಗತ ಕಮಾನುಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಲಾಗುವುದು.

-ಸಂಗಮೇಶ್ ಕಾರಬಾರಿ,

ನಗರಸಭೆ ಅಧಿಕಾರಿ, ಭಾಲ್ಕಿ

ಭಾಲ್ಕಿಯನ್ನು ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ ಕಚೇರಿಯ ನಾಮಫಲಕದಲ್ಲಿ ಮಾತ್ರ ಬದಲಾವಣೆಯಾಗಿದ್ದು, ಪಟ್ಟಣ ಪ್ರವೇಶಿಸುವ ದ್ವಾರದಲ್ಲಿರುವ ಫಲಕದಲ್ಲಿ ಬದಲಾವಣೆ ಕಂಡಿಲ್ಲ. ಅಧಿಕಾರಿಗಳ ನಿಷ್ಕಾಳಜಿತನ ಇಲ್ಲಿ ಎದ್ದು ಕಾಣುತ್ತಿದೆ. ಈ ವರದಿಯಿಂದಾದರೂ ನಾಮಫಲಕಗಳಲ್ಲಿ ಬದಲಾವಣೆ ಆಗಬೇಕು.

-ಗಣೇಶ್ ಪಾಟೀಲ್, ಜಿಲ್ಲಾಧ್ಯಕ್ಷ, ನಮ್ಮ ಕರ್ನಾಟಕ ಸೇನೆ, ಬೀದರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪರಶುರಾಮ ಕರಣಂ

contributor