ಸಾಂದರ್ಭಿಕ ಚಿತ್ರ | Photo Credit : PTI

ಬೆಂಗಳೂರು : ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ 21 ವೈದ್ಯಕೀಯ ಆಕಾಂಕ್ಷಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ವಿರುದ್ಧ ನೀಡಿರುವ ದೂರಿನಲ್ಲಿ ಅಪರಾಧಿಕ ಅಂಶಗಳು ಕಂಡು ಬಂದಿರುವುದಿಲ್ಲ ಎಂದು ವಿಧಾನ ಸೌಧ ಪೊಲೀಸ್ ಇನ್‌ಸ್ಪೆಕ್ಟರ್ ಅವರು ದೂರುದಾರರಿಗೆ ಹಿಂಬರಹ ನೀಡಿದ್ದಾರೆ. ಅಲ್ಲದೇ ಅವರ ವಿರುದ್ಧ ನೀಡಿದ್ದ ದೂರನ್ನೂ ತಿರಸ್ಕರಿಸಿದ್ದಾರೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿಯೇ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದಕ್ಕೆ ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಅಧಿಕಾರಿಗಳ ವ್ಯವಸ್ಥಿತ ವೈಫಲ್ಯವೇ ಇದಕ್ಕೆ ನೇರ ಕಾರಣ ಎಂದು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ದೂರನ್ನಾಧರಿಸಿ ಧರ್ಮೇಂದ್ರ ಪ್ರಧಾನ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ದೂರುದಾರರು ಒತ್ತಾಯಿಸಿ ಧರಣಿ ನಡೆಸಿದ್ದರು. ಈ ಸಂಬಂಧ ದೂರನ್ನು ಸ್ವೀಕರಿಸಿದ್ದ ಪೊಲೀಸ್ ಇನ್‌ಸ್ಪೆಕ್ಟರ್, ಈ ಕುರಿತು ಕಾನೂನು ಸಲಹಾ ಘಟಕದ ಅಭಿಪ್ರಾಯ ಕೋರಿದ್ದರು. ಈ ಅಭಿಪ್ರಾಯದ ಅನ್ವಯ ಧರ್ಮೇಂದ್ರ ಪ್ರಧಾನ್ ಅವರ ವಿರುದ್ಧ ನೀಡಿರುವ ದೂರಿನಲ್ಲಿ ಯಾವುದೇ ಅಪರಾಧಿಕ ಅಂಶಗಳು ಕಂಡುಬಂದಿರುವುದಿಲ್ಲ ಎಂದು ಸ್ಪಷ್ಟ ಅಭಿಪ್ರಾಯ ನೀಡಿದ್ದಾರೆ.

ಈ ಸಂಬಂಧ ದೂರುದಾರರಿಗೆ 2026ರ ಸೆ.2ರಂದು ಹಿಂಬರಹ ನೀಡಿದ್ದಾರೆ. ಇದರ ಪ್ರತಿಯು ‘the-file.in’ಗೆ ಲಭ್ಯವಾಗಿದೆ.

ಹಿಂಬರಹದಲ್ಲೇನಿದೆ? :

ತಾವು ನೀಡಿದ ದೂರಿನಲ್ಲಿ ನೀಟ್ ಪರೀಕ್ಷೆಯ ಲೀಕ್ ನಂತರ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಈ ಹಿಂದೆ ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರು ಪ್ರಚೋದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಇವರ ವಿರುದ್ಧ ಕಲಂ 108, 352, 61(2) ಬಿಎನ್‌ಎಸ್ ಅನ್ವಯ ಪ್ರಕರಣ ದಾಖಲಿಸಬೇಕು ಎಂದು ದೂರನ್ನು ನೀಡಲಾಗಿದೆ. ಈ ದೂರನ್ನು ಠಾಣೆಯಲ್ಲಿ ನೋಂದಾಯಿಸಲಾಗಿದೆ. ಅಲ್ಲದೇ ಈ ದೂರಿನಲ್ಲಿನ ಕೆಲವು ಅಂಶಗಳ ಬಗ್ಗೆ ಸ್ಪಷ್ಟತೆ ಕಂಡುಕೊಳ್ಳಲು ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು 2026ರ ಆಗಸ್ಟ್ 27ರಂದು ಸ್ವೀಕೃತಿ ನೀಡಿದೆ.

‘ನೀವು ನೀಡಿದ ದೂರಿನಲ್ಲಿ ಮೇಲ್ನೋಟಕ್ಕೆ ಅಪರಾಧಿಕ ಅಂಶಗಳು ಕಂಡುಬಂದಿರುವುದಿಲ್ಲ. ಈ ಹಂತದಲ್ಲಿ ತಮ್ಮ ದೂರಿನ ಮೇಲೆ ಪ್ರಕರಣ ದಾಖಲಿಸಲು ಅವಕಾಶವಿಲ್ಲ. ಆದ್ದರಿಂದ ತಮ್ಮ ದೂರನ್ನು ತಿರಸ್ಕರಿಸಿದೆ’ ಎಂದು ವಿಧಾನ ಸೌಧ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಅವರು 2026ರ ಸೆ.2ರಂದು ಹಿಂಬರಹದಲ್ಲಿ ವಿವರಿಸಿರುವುದು ತಿಳಿದು ಬಂದಿದೆ. 21 ಮಂದಿ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಧರ್ಮೇಂದ್ರ ಪ್ರಧಾನ್ ಹಾಗೂ ಸಂಬಂಧಪಟ್ಟ ಇತರ ಅಧಿಕಾರಿಗಳ ವ್ಯವಸ್ಥಿತ ವೈಫಲ್ಯವೇ ನೇರ ಕಾರಣ ಎಂದು ದೂರಿನಲ್ಲಿ ಆರೋಪಿಸಿದ್ದರು. ಭಾರತೀಯ ನ್ಯಾಯ ಸಂಹಿತೆ 2023 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ (ಸೆಕ್ಷನ್ 108), 352, ಮತ್ತು 61(2) ರ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರುದಾರರು ಒತ್ತಾಯಿಸಿದ್ದರು.ವಿಧಾನ ಸೌಧ ಪೊಲೀಸರು ದೂರಿನ ಸ್ವೀಕೃತಿ ನೀಡಿದ್ದರು.

ಈ ವಿಷಯದಲ್ಲಿ ‘ಝೀರೋ ಎಫ್‌ಐಆರ್’ ದಾಖಲಿಸಿಕೊಂಡು, ಮುಂದಿನ ತನಿಖೆಗಾಗಿ ಅಧಿಕೃತ ತನಿಖಾ ಸಂಸ್ಥೆಗೆ ಹಸ್ತಾಂತರಿಸಬೇಕು ಎಂದು ದೂರುದಾರರು ಪೊಲೀಸರನ್ನು ಆಗ್ರಹಿಸಿದ್ದರು.

ನೀಟ್ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಭಾರಿ ವಿವಾದ ಉಂಟಾಗಿತ್ತು. ನೀಟ್-ಯುಜಿ ಪರೀಕ್ಷೆ ವ್ಯವಸ್ಥೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದಗಳ ಹಿನ್ನೆಲೆಯಲ್ಲಿ ವ್ಯಾಪಕ ವಿರೋಧ ಹಾಗೂ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಈ ಬೆಳವಣಿಗೆಗಳ ನೈತಿಕ ಹೊಣೆ ಹೊತ್ತು ಜುಲೈ 25, 2026 ರಂದು ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿಬಿಐ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ಕೆಲವು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಮುಂದುವರಿಸಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸಿಬಿಐ ತನಿಖೆ:

2026ರ ನೀಟ್-ಯುಜಿ ಪರೀಕ್ಷಾ ವಲಯದಲ್ಲಿ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದಾಗ, ಕೇಂದ್ರ ಸರಕಾರವು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿ ಎಫ್‌ಐಆರ್ ದಾಖಲಿಸಿತ್ತು. ಸೋನಮ್ ವಾಂಗ್ಚುಕ್ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ದಿಲ್ಲಿಯಲ್ಲಿ ತೀವ್ರ ಪ್ರತಿಭಟನೆಗಳು ನಡೆದಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ.ಮಹಾಂತೇಶ್

contributor