ಟ್ರಂಪ್, ಅಮೆರಿಕ ಮತ್ತು ಝಿಯೋನಿಸ್ಟ್ ಇಸ್ರೇಲ್ ಜೊತೆಗಿನ ನಿಮ್ಮ ನಿಕಟತೆ ಏಕೆ? ರಾಹುಲ್ ಗಾಂಧಿಗೆ ಮುಕ್ತ ಪತ್ರ
ರಾಹುಲ್ ಗಾಂಧಿ (Photo: PTI)
ಆತ್ಮೀಯ ರಾಹುಲ್ ಗಾಂಧಿಯವರೇ,
ನೀವು ಆರೋಗ್ಯವಾಗಿದ್ದೀರಿ ಎಂದು ಭಾವಿಸುತ್ತೇನೆ!
2026ರ ನ. 18ರಂದು ಚಿಕಾಗೊ ವಿಶ್ವವಿದ್ಯಾಲಯದ 'ರೂಬೆನ್ಸ್ಟೈನ್ ಫೋರಂ'ನಲ್ಲಿ ಪ್ರೊಫೆಸರ್ ರಾಬರ್ಟ್ ಪೇಪ್ ಅವರೊಂದಿಗೆ ನೀವು ನಡೆಸಿದ ಸುದೀರ್ಘ ಸಂವಾದದ ಕುರಿತು, ಅದರಲ್ಲೂ ವಿಶೇಷವಾಗಿ 'ಇರಾನ್ ಯುದ್ಧ ಮತ್ತು ಜಗತ್ತಿನಲ್ಲಿ ಭಾರತದ ಪಾತ್ರ' ಎಂಬ ವಿಷಯದ ಬಗ್ಗೆ ನನ್ನಲ್ಲಿರುವ ಎರಡು ಗಂಭೀರ ಕಳವಳಗಳನ್ನು ನಿಮ್ಮ ಮುಂದಿಡಲು ಈ ಪತ್ರ ಬರೆಯುತ್ತಿದ್ದೇನೆ.
ಮೊದಲನೆಯದಾಗಿ, ಕಾರ್ಯಕ್ರಮದ ಶೀರ್ಷಿಕೆಯಲ್ಲೇ ಅಡಗಿರುವ ಪಕ್ಷಪಾತವನ್ನು ನೀವು ಗುರುತಿಸಬೇಕಿತ್ತು. ಅದು ಕೇವಲ 'ಇರಾನ್ ಯುದ್ಧ'ವಾಗಿರಲಿಲ್ಲ. ಬದಲಿಗೆ, ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಯುದ್ಧವಾಗಿತ್ತು. ಕಾರ್ಯಕ್ರಮದ ಶೀರ್ಷಿಕೆಯೇ ಆಯೋಜಕರ ಪೂರ್ವಗ್ರಹವನ್ನು ಬಹಿರಂಗಪಡಿಸುತ್ತದೆ.
ಭಾರತದಲ್ಲಿ ನೀವು ನೀಡುವ ಹೇಳಿಕೆಗಳನ್ನು ಗಮನಿಸಿದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವಮಾನಿಸುತ್ತಿದ್ದಾರೆ ಮತ್ತು ಒತ್ತಡಕ್ಕೆ ಸಿಲುಕಿಸುತ್ತಿದ್ದಾರೆ ಎಂಬುದು ನಿಮ್ಮ ಸ್ಪಷ್ಟ ನಿಲುವು. ಪ್ರಧಾನಿ ಮೋದಿ ಅವರು ಟ್ರಂಪ್ ಅವರ ನಿಯಂತ್ರಣದಲ್ಲಿದ್ದಾರೆ ಎಂದು ಪದೇ ಪದೇ ಆರೋಪಿಸಿದ್ದೀರಿ. ಇತ್ತೀಚೆಗೆ, ನ. 19ರಂದು ಕೂಡ ಮೋದಿಯವರನ್ನು 'ರಾಜಿ ಮಾಡಿಕೊಂಡ ಪ್ರಧಾನಿ' (Compromised PM) ಎಂದು ಕರೆದಿದ್ದೀರಿ.
ಆದರೆ, ಆತ್ಮೀಯ ರಾಹುಲ್ ಗಾಂಧಿಯವರೇ, ಚಿಕಾಗೋದಲ್ಲಿ ನೀವು ಆಡಿದ ಮಾತುಗಳು ನನಗೆ ಅಚ್ಚರಿ ಮೂಡಿಸಿವೆ. ನಿಮ್ಮ ಈ ಹೇಳಿಕೆಗಳನ್ನು ನಂಬುವುದೇ ಕಷ್ಟವಾಯಿತು.
ನೀವು ಹೀಗೆ ಹೇಳಿದ್ದೀರಿ:
"ಅಮೆರಿಕವು ಜಗತ್ತಿನ ಮೇಲೆ ಅತ್ಯಂತ ಸ್ಥಿರಗೊಳಿಸುವ ಪ್ರಭಾವ ಬೀರಿದೆ. ಒಂದು ದೇಶವಾಗಿ ನಾವು ಇದರಿಂದ ಅಪಾರ ಪ್ರಯೋಜನ ಪಡೆದಿದ್ದೇವೆ. 1990ರ ದಶಕದಿಂದ 2010ರವರೆಗಿನ ಅವಧಿಯಲ್ಲಿ ನಮಗೆ ಸಾಕಷ್ಟು ಲಾಭವಾಗಿದೆ. ನಮ್ಮ IT ಮೂಲಸೌಕರ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇದರ ಪ್ರಯೋಜನವನ್ನು ಕಾಣಬಹುದು. ಆದರೆ, ಜಗತ್ತಿನಲ್ಲಿ ಸ್ಥಿರತೆಯನ್ನು ಕಾಪಾಡುವ ಶಕ್ತಿಯಾಗಿ ಅಮೆರಿಕ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ ಎಂಬುದು ಈಗ ನನ್ನ ಕಳವಳವಾಗಿದೆ..."
ಮತ್ತೊಂದು ಸಂದರ್ಭದಲ್ಲಿ ನೀವು ಹೀಗೆ ಹೇಳಿದ್ದೀರಿ:
"ನೀವು ಹೀಗೆ ಹೇಳಬಹುದು: 'ನೋಡಿ, ಅಲ್ಲಿ ನ್ಯೂನತೆಗಳಿವೆ, ಅವರು ಇಲ್ಲಿ ತಪ್ಪು ಮಾಡಿದ್ದಾರೆ, ಅಲ್ಲಿ ತಪ್ಪು ಮಾಡಿದ್ದಾರೆ.' ಅದು ಸರಿ. ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ. ಆದರೆ, ಅಮೆರಿಕದ ನೀತಿಯ ಒಟ್ಟಾರೆ ದಿಕ್ಕು ಜಗತ್ತಿನಲ್ಲಿ ಸ್ಥಿರತೆಯನ್ನು ತರುವಂತೆಯೇ ಇತ್ತು."
ಭಾರತದಲ್ಲಿ ಮತ್ತು ಅಮೆರಿಕದ ನೆಲದಲ್ಲಿ ನೀವು ನೀಡಿದ ಈ ಎರಡು ಹೇಳಿಕೆಗಳ ನಡುವಿನ ವೈರುಧ್ಯವನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ? ಅಮೆರಿಕದ ಅಧ್ಯಕ್ಷ ಟ್ರಂಪ್ ಗೆ ಪ್ರಧಾನಿ ಮೋದಿ ಅಧೀನರಾಗಿದ್ದಾರೆ ಅಥವಾ ಅವರ ಮುಂದೆ ಶರಣಾಗಿದ್ದಾರೆ ಎಂಬ ನಿಮ್ಮ ಹಿಂದಿನ ಆರೋಪಗಳನ್ನು ಹಿಂಪಡೆಯಲು ಉದ್ದೇಶಿಸಿದ್ದೀರಾ?
ಜಗತ್ತಿನಲ್ಲಿ ಅಮೆರಿಕವು ಸ್ಥಿರತೆಯನ್ನು ಕಾಪಾಡುವ ಶಕ್ತಿಯಾಗಿದೆ ಎಂಬ ನಿಮ್ಮ ಪ್ರತಿಪಾದನೆ ಆಘಾತಕಾರಿಯಾಗಿದೆ. ಕಾಂಗ್ರೆಸ್ ಪ್ರಧಾನಿಗಳಾಗಿದ್ದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರೇ ಅಮೆರಿಕದ ಆಕ್ರೋಶವನ್ನು ಎದುರಿಸಿದ್ದರು. ಅಂತಹ ನಾಯಕರೂ ಆಡದ ಮಾತುಗಳನ್ನು ನೀವು ಆಡಿರುವುದು ಅಚ್ಚರಿ ಮೂಡಿಸುತ್ತದೆ.
ಆತ್ಮೀಯ ಆರ್.ಜಿ. (RG) ಅವರೇ, ಅಮೆರಿಕ ಜಗತ್ತಿನಾದ್ಯಂತ ಏನೆಲ್ಲ ಮಾಡಿದೆ ಎಂಬುದು ನಿಮಗೆ ತಿಳಿದಿಲ್ಲ ಎಂದು ನಾನು ಭಾವಿಸುವುದಿಲ್ಲ. ವಿಯೆಟ್ನಾಂ, ಕೊರಿಯಾ, ಇಂಡೋನೇಷ್ಯಾ, ಅಫ್ಘಾನಿಸ್ತಾನ, ಲ್ಯಾಟಿನ್ ಅಮೆರಿಕ, ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಅಮೆರಿಕ ಯಾವ ರೀತಿಯ 'ಸ್ಥಿರತೆ'ಯನ್ನು ತಂದಿದೆ ಎಂಬುದನ್ನು ದಯವಿಟ್ಟು ನಿಮ್ಮ ದೇಶವಾಸಿಗಳಿಗೆ ವಿವರಿಸಿ. ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಪರಮಾಣು ಬಾಂಬುಗಳನ್ನು ಎಸೆದಿದ್ದೂ ಜಗತ್ತಿನಲ್ಲಿ ಸ್ಥಿರತೆ ಸ್ಥಾಪಿಸುವ ಪ್ರಯತ್ನವೇ?
ಸರ್, "ಸ್ಥಿರತೆಯನ್ನು ಕಾಪಾಡುವ ಶಕ್ತಿಯಾಗಿ ಅಮೆರಿಕ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ ಎಂಬುದು ನನ್ನ ಕಳವಳ" ಎಂಬ ನಿಮ್ಮ ಮಾತುಗಳು, ಅಮೆರಿಕದ ಪ್ರಭಾವದಿಂದ ಸಂತ್ರಸ್ತರಾದವರಿಗೆ ಮತ್ತು ಈಗಲೂ ಅದರ ಪರಿಣಾಮಗಳನ್ನು ಅನುಭವಿಸುತ್ತಿರುವವರಿಗೆ ನಿದ್ರೆಯಿಲ್ಲದ ರಾತ್ರಿಗಳನ್ನು ಉಂಟುಮಾಡಲಿವೆ.
ಟ್ರಂಪ್ ಸುಂಕಗಳ ವಿಚಾರದಲ್ಲಿ ಆಡುತ್ತಿರುವ ಅಸಂಬದ್ಧ ಮಾತುಗಳು ಜಾಗತಿಕ ವ್ಯಾಪಾರಕ್ಕೆ ಸ್ಥಿರತೆಯನ್ನು ತಂದಿವೆಯೇ? ಇದಕ್ಕೂ ನೀವು ಉತ್ತರಿಸಬೇಕು. ನಿಮ್ಮಂತಹ ಉನ್ನತ ಸ್ಥಾನದಲ್ಲಿರುವ ಕಾಂಗ್ರೆಸ್ ನಾಯಕರೊಬ್ಬರು ಸಾಮ್ರಾಜ್ಯಶಾಹಿ ಯೋಜನೆಗಳನ್ನು ಸಮರ್ಥಿಸುವವರ ಸಾಲಿಗೆ ಸೇರುತ್ತಿರುವುದು ವಿಷಾದನೀಯ.
ಇಸ್ರೇಲ್ನೊಂದಿಗಿನ ಭಾರತದ ಸಂಬಂಧದ ಕುರಿತು ಪ್ರೊಫೆಸರ್ ಪೇಪ್ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ನೀವು ಹೀಗೆ ಹೇಳಿದ್ದೀರಿ:
"ನೋಡಿ, ನಮಗೆ ಇಸ್ರೇಲ್ ನೊಂದಿಗೆ ಸಂಬಂಧವಿದೆ. ಉತ್ತಮ ಸಂಬಂಧವಿದೆ. ನಾವು ಇಸ್ರೇಲ್ ನಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತೇವೆ. ಅದು ಒಳ್ಳೆಯದೇ... ಅಕ್ಟೋಬರ್ ನಲ್ಲಿ ನಡೆದ ಘಟನೆಯನ್ನು ನಾನು ಖಂಡಿಸುತ್ತೇನೆ. ಅದು ಅತ್ಯಂತ ಭೀಕರವಾದದ್ದು. ಅಂತಹ ಘಟನೆ ಎಂದಿಗೂ ನಡೆಯಬಾರದಿತ್ತು. ಅಮಾಯಕ ಜನರನ್ನು ಕೊಲ್ಲುವುದು ಸಂಪೂರ್ಣ ತಪ್ಪು. ಆದರೆ, ಗಾಝಾದಲ್ಲಿ ಇಸ್ರೇಲ್ ನಡೆಸಿರುವ ಕೃತ್ಯಗಳನ್ನೂ ನಾನು ಖಂಡಿಸುತ್ತೇನೆ. ಈ ಎರಡೂ ತಪ್ಪುಗಳನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ, ಅಲ್ಲವೇ?"
ಮತ್ತೆ ಮುಂದುವರಿದು ಹೀಗೆ ಹೇಳಿದ್ದೀರಿ: "ಇಸ್ರೇಲ್ ನೊಂದಿಗಿನ ಸಂಬಂಧಕ್ಕೆ ಕೆಲವು ವ್ಯೂಹಾತ್ಮಕ ಕಾರಣಗಳಿವೆ. ನಾವು ಅವರಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಇದೇ ಕಾರಣ. ಸ್ಪಷ್ಟವಾಗಿ ಹೇಳಬೇಕೆಂದರೆ, ನಾವು ಅತ್ಯುತ್ತಮ ಶಸ್ತ್ರಾಸ್ತ್ರಗಳನ್ನೇ ಖರೀದಿಸಬೇಕಾಗುತ್ತದೆ. ಇಸ್ರೇಲ್ ಅತ್ಯುತ್ತಮ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತದೆ, ಅಲ್ಲವೇ? ಆದ್ದರಿಂದ, ಇಸ್ರೇಲ್ ನೊಂದಿಗೆ ಉತ್ತಮ ಸಂಬಂಧ ಹೊಂದುವುದನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಆದರೆ, ಭಾರತವು ಜಾಗತಿಕ ವೇದಿಕೆಯಲ್ಲಿ ತನ್ನದೇ ಆದ ಪಾತ್ರವನ್ನು ವಹಿಸಬೇಕಾಗುತ್ತದೆ."
ಆತ್ಮೀಯ ಆರ್.ಜಿ. ಅವರೇ, ಇಸ್ರೇಲ್ ಮತ್ತು ಗಾಝಾ ಕುರಿತ ನಿಮ್ಮ ಹೇಳಿಕೆಗಳು ನೈಜ ಪರಿಸ್ಥಿತಿಯನ್ನು ವಿವರಿಸುವುದಕ್ಕಿಂತ ಹೆಚ್ಚಿನ ಸಂಗತಿಗಳನ್ನು ಮರೆಮಾಚುತ್ತವೆ ಎಂದು ಹೇಳಲು ವಿಷಾದಿಸುತ್ತೇನೆ.
ಗಾಝಾದಲ್ಲಿನ ಹಿಂಸಾಚಾರಕ್ಕೆ 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯೇ ಕಾರಣ ಎಂದು ಭಾವಿಸುವುದು ಮುಗ್ಧತೆಯಾಗುತ್ತದೆ. ಇದು ಪ್ರತ್ಯೇಕವಾಗಿ ನಡೆದ ಹಿಂಸಾಚಾರವಲ್ಲ. ಪ್ರೊಫೆಸರ್ ಇಲಾನ್ ಪಪ್ಪೆ ವಿವರಿಸಿರುವ 'ಹೆಚ್ಚುತ್ತಿರುವ ನರಮೇಧ'ದ ಭಾಗವಾಗಿ ಇದನ್ನು ನೋಡಬೇಕಾಗಿದೆ. 1947ರ ನ. 29ರಂದು ವಿಶ್ವಸಂಸ್ಥೆಯ ವಿಭಜನಾ ಯೋಜನೆ ಘೋಷಣೆಯಾದ ಬಳಿಕ ಫೆಲೆಸ್ತೀನಿಯನ್ನರು ನಿರಂತರವಾಗಿ ಎದುರಿಸುತ್ತಿರುವ ದಬ್ಬಾಳಿಕೆ ಮತ್ತು ಕಿರುಕುಳದ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಝಿಯೋನಿಸ್ಟ್ ಗಳಿಂದ ಫೆಲೆಸ್ತೀನಿಯನ್ನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯು ವಿಶ್ವ ಇತಿಹಾಸದಲ್ಲೇ ಅತ್ಯಂತ ದೀರ್ಘಕಾಲದಿಂದ ಮುಂದುವರಿದಿರುವ ದಬ್ಬಾಳಿಕೆಗಳಲ್ಲಿ ಒಂದಾಗಿದೆ.
ನೀವು ಹಮಾಸ್ ಮತ್ತು ಇಸ್ರೇಲ್ ನಡೆಸಿದ ಹತ್ಯೆಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ಸಮಾನವಾಗಿ ಪರಿಗಣಿಸಿದ್ದೀರಿ. ಹಮಾಸ್ 1,200 ಇಸ್ರೇಲಿಗಳನ್ನು ಕೊಂದಿದ್ದರೆ, ಅದಕ್ಕೆ ಪ್ರತಿಯಾಗಿ ಇಸ್ರೇಲ್ 2026ರ ನವೆಂಬರ್ 22ರವರೆಗೆ ಕನಿಷ್ಠ 74,742 ಫೆಲೆಸ್ತೀನಿಯನ್ನರನ್ನು ಹತ್ಯೆ ಮಾಡಿದೆ. ಮೃತಪಟ್ಟವರಲ್ಲಿ ಶೇ. 44ರಷ್ಟು ಮಕ್ಕಳು ಮತ್ತು ಶೇ. 26ರಷ್ಟು ಮಹಿಳೆಯರು. ಈ ಅಂಕಿ ಅಂಶವೂ ಅಂತಿಮವಲ್ಲ. ಇಸ್ರೇಲಿ ಸೇನೆಯ ಬಾಂಬ್ ದಾಳಿಯಿಂದ ಧ್ವಂಸಗೊಂಡ ಸಾವಿರಾರು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಇನ್ನೂ ಸಾವಿರಾರು ಮೃತದೇಹಗಳು ಹೂತುಹೋಗಿವೆ.
ಇಸ್ರೇಲಿ ಸರ್ಕಾರದ ಆದೇಶದಂತೆ ಕಾರ್ಯಾಚರಣೆ ನಡೆಸಿದ ಇಸ್ರೇಲಿನ ರಕ್ಷಣಾ ಪಡೆಗಳು (IDF), ಅತ್ಯಂತ ಪುರಾತನ ನಾಗರಿಕತೆಗಳಲ್ಲಿ ಒಂದಾದ ಫೆಲೆಸ್ತೀನಿಯನ್ ನಾಗರಿಕತೆಯನ್ನೇ ನಾಶಮಾಡಿವೆ. ಅದನ್ನು ಅಳಿಸಿಹಾಕುವ ಪ್ರಯತ್ನವನ್ನು ಇಸ್ರೇಲ್ ನಿರಂತರವಾಗಿ ನಡೆಸುತ್ತಿದೆ.
ಸರ್, ಇಸ್ರೇಲ್ ಗಾಝಾವನ್ನು ಕೊಲೆಯ ಕಣವನ್ನಾಗಿ ಪರಿವರ್ತಿಸಿದೆ.
ಅಲ್ಲಿ ಹತ್ಯೆಗೀಡಾದವರ ವಿವರಗಳು ಹೀಗಿವೆ:
ಆರೋಗ್ಯ ಕಾರ್ಯಕರ್ತರು:
1,700ಕ್ಕೂ ಹೆಚ್ಚು ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಕೊಲ್ಲಲ್ಪಟ್ಟಿದ್ದಾರೆ.
ಪತ್ರಕರ್ತರು ಮತ್ತು ಮಾಧ್ಯಮ ಕಾರ್ಯಕರ್ತರು:
ಅಂತರರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ ಪ್ರಕಾರ, ಗಾಝಾದಲ್ಲಿ ಕನಿಷ್ಠ 200 ಮಂದಿ ಹತ್ಯೆಯಾಗಿದ್ದಾರೆ.
ಮಾನವೀಯ ನೆರವು ಕಾರ್ಯಕರ್ತರು:
2026ರ ಎಪ್ರಿಲ್ ನಲ್ಲಿ ಬಿಡುಗಡೆಯಾದ ವಿಶ್ವಸಂಸ್ಥೆಯ ವರದಿಯ ಪ್ರಕಾರ, ಗಾಝಾ ಮತ್ತು ವೆಸ್ಟ್ ಬ್ಯಾಂಕ್ ನಲ್ಲಿ 560ಕ್ಕೂ ಹೆಚ್ಚು ಮಾನವೀಯ ನೆರವು ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ.
ಸರ್, ಇಸ್ರೇಲ್ ಅನ್ನು ಆಳುತ್ತಿರುವ ಝಿಯೋನಿಸ್ಟ್ ಗಳೇ ರಾಜಕೀಯ ಭಯೋತ್ಪಾದನೆಗೆ ನಾಂದಿ ಹಾಡಿದವರು ಎಂಬುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಇತಿಹಾಸದ ಪುಟಗಳಲ್ಲಿರುವ ಈ ಭಯಾನಕ ಕೃತ್ಯಗಳನ್ನು ಒಮ್ಮೆ ಪರಿಶೀಲಿಸಿ:
1. ಎಸ್.ಎಸ್. ಪ್ಯಾಟ್ರಿಯಾ ಹಡಗಿನ ಮೇಲಿನ ಬಾಂಬ್ ದಾಳಿ (ನವೆಂಬರ್ 1940): ಈ ದಾಳಿಯಲ್ಲಿ 250ಕ್ಕೂ ಹೆಚ್ಚು ಜನರು ಮೃತಪಟ್ಟರು.
2. ಲಾರ್ಡ್ ಮೊಯ್ನೆ ಅವರ ಹತ್ಯೆ (ನವೆಂಬರ್ 1944): ಮಧ್ಯಪ್ರಾಚ್ಯದಲ್ಲಿ ಬ್ರಿಟಿಷ್ ಸರ್ಕಾರದ ಪ್ರತಿನಿಧಿಯಾಗಿದ್ದ ಲಾರ್ಡ್ ಮೊಯ್ನೆ ಅವರನ್ನು ಈಜಿಪ್ಟ್ನ ಕೈರೋದಲ್ಲಿ ಹತ್ಯೆ ಮಾಡಲಾಯಿತು.
3. ಕಿಂಗ್ ಡೇವಿಡ್ ಹೋಟೆಲ್ ಬಾಂಬ್ ದಾಳಿ (ಜುಲೈ 22, 1946): ಜೆರುಸಲೆಮ್ ನ ಕಿಂಗ್ ಡೇವಿಡ್ ಹೋಟೆಲ್ ನಲ್ಲಿದ್ದ ಬ್ರಿಟಿಷ್ ಆಡಳಿತಾತ್ಮಕ ಮತ್ತು ಮಿಲಿಟರಿ ಕಚೇರಿಗಳ ಭಾಗದ ಮೇಲೆ ಬಾಂಬ್ ದಾಳಿ ನಡೆಸಲಾಯಿತು. ಈ ಘಟನೆಯಲ್ಲಿ ಬ್ರಿಟಿಷರು, ಅರಬ್ಬರು ಮತ್ತು ಯಹೂದಿ ನಾಗರಿಕರು ಹಾಗೂ ಅಧಿಕಾರಿಗಳು ಸೇರಿದಂತೆ 91 ಮಂದಿ ಮೃತಪಟ್ಟರು. ಹಲವರು ಗಾಯಗೊಂಡರು.
4. ಇಬ್ಬರು ಬ್ರಿಟಿಷ್ ಸಾರ್ಜೆಂಟ್ ಗಳ ಅಪಹರಣ ಮತ್ತು ಗಲ್ಲು (ಜುಲೈ 1947): ನೆಟನ್ಯಾದಲ್ಲಿ ಬ್ರಿಟಿಷ್ ಗುಪ್ತಚರ ಇಲಾಖೆಯ ಇಬ್ಬರು ಸಾರ್ಜೆಂಟ್ ಗಳಾದ ಕ್ಲಿಫರ್ಡ್ ಮಾರ್ಟಿನ್ ಮತ್ತು ಮೆರ್ವಿನ್ ಪೈಸ್ ಅವರನ್ನು ಅಪಹರಿಸಲಾಯಿತು. ಝಿಯೋನಿಸ್ಟ್ ಭಯೋತ್ಪಾದಕ ಗುಂಪಿನ ಸದಸ್ಯರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದಕ್ಕೆ ಪ್ರತೀಕಾರವಾಗಿ ಈ ಇಬ್ಬರನ್ನೂ ನಂತರ ಗಲ್ಲಿಗೇರಿಸಲಾಯಿತು.
5. ಡೀರ್ ಯಾಸಿನ್ ಹತ್ಯಾಕಾಂಡ (ಎಪ್ರಿಲ್ 1948): 1947–48ರ ಯುದ್ಧದ ಸಂದರ್ಭದಲ್ಲಿ 'ಇರ್ಗುನ್' (Irgun) ಮತ್ತು 'ಲೆಹಿ' (Lehi) ಎಂಬ ಝಿಯೋನಿಸ್ಟ್ ಭಯೋತ್ಪಾದಕ ಗುಂಪುಗಳು ಹಾಗೂ 'ಹಗಾನಾ' (Haganah) ಪಡೆಗಳು ಜೆರುಸಲೆಮ್ ಸಮೀಪದ ಡೀರ್ ಯಾಸಿನ್ ಎಂಬ ಅರಬ್ ಹಳ್ಳಿಯ ಮೇಲೆ ದಾಳಿ ನಡೆಸಿದವು. ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಫೆಲೆಸ್ತೀನಿಯನ್ ಗ್ರಾಮಸ್ಥರು ಹತ್ಯೆಗೀಡಾದರು. ಈ ಹತ್ಯಾಕಾಂಡವು ಫೆಲೆಸ್ತೀನಿಯನ್ನರು ತಮ್ಮ ನೆಲವನ್ನು ತೊರೆದು ಪಲಾಯನ ಮಾಡುವ ಪ್ರಕ್ರಿಯೆಯಲ್ಲಿ ನಿರ್ಣಾಯಕ ತಿರುವಾಯಿತು. ಈ ಘಟನೆಯನ್ನು ಆಗ ವ್ಯಾಪಕವಾಗಿ ಖಂಡಿಸಲಾಗಿತ್ತು.
ಹಮಾಸ್ 2023ರ ಅಕ್ಟೋಬರ್ 7ರಂದು ನಡೆಸಿದ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಗಾಝಾದ ಫೆಲೆಸ್ತೀನಿಯನ್ನರನ್ನು ಶಿಕ್ಷಿಸುತ್ತಿದೆ ಎಂಬ ವಾದವನ್ನೇ ಒಪ್ಪಿಕೊಂಡರೂ, ವೆಸ್ಟ್ ಬ್ಯಾಂಕ್ ನಲ್ಲಿರುವ ಫೆಲೆಸ್ತೀನಿಯನ್ನರ ಮೇಲೂ ನಿರಂತರ ದಾಳಿಗಳು ಏಕೆ ನಡೆಯುತ್ತಿವೆ ಎಂಬ ಪ್ರಶ್ನೆಗೆ ನಿಮ್ಮ ಉತ್ತರವೇನು?
ಈ ಬೆಳವಣಿಗೆಗಳು ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಕಳವಳ ಮೂಡಿಸಿವೆ.
ಆತ್ಮೀಯ ಆರ್.ಜಿ. ಅವರೇ, 2008–09, 2012, 2014 ಮತ್ತು 2018ರಲ್ಲಿ ಫೆಲೆಸ್ತೀನಿಯನ್ನರ ವಿರುದ್ಧ ನಡೆದ ಭೀಕರ ಹತ್ಯಾಕಾಂಡಗಳ ಬಗ್ಗೆ ನೀವು ಗಮನ ಹರಿಸದಿರುವುದು ವಿಷಾದನೀಯ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನೂರಾರು ನಿರ್ಣಯಗಳ ಮೂಲಕ ಖಂಡನೆಗೆ ಒಳಗಾಗಿರುವ ವಿಶ್ವದ ಏಕೈಕ ದೇಶ ಇಸ್ರೇಲ್. 'ಯುಎನ್ ವಾಚ್' (UN Watch) ಎಂಬ ಗುಂಪಿನ ಲೆಕ್ಕಾಚಾರದ ಪ್ರಕಾರ, 2015ರಿಂದ 2024ರ ನಡುವೆ ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಸಾಮಾನ್ಯ ಸಭೆಯಲ್ಲಿ 173 ನಿರ್ಣಯಗಳನ್ನು ಮಂಡಿಸಲಾಗಿತ್ತು. 2025ರಲ್ಲೂ ಇಂತಹ 15 ನಿರ್ಣಯಗಳು ಮಂಡನೆಯಾಗಿದ್ದವು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇಸ್ರೇಲ್ ಗೆ ಸಂಬಂಧಿಸಿದ 130ಕ್ಕೂ ಹೆಚ್ಚು ನಿರ್ಣಯಗಳನ್ನು ಮಂಡಿಸಲಾಗಿದೆ. ಇವುಗಳಲ್ಲಿ ಇಸ್ರೇಲ್ ಅನ್ನು ಟೀಕಿಸುವ ಸುಮಾರು 50 ಕರಡು ನಿರ್ಣಯಗಳನ್ನು ಅಮೆರಿಕ ತನ್ನ 'ವೀಟೋ' ಅಧಿಕಾರ ಬಳಸಿ ತಡೆಹಿಡಿದಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು 2015ರಿಂದ 2024ರ ನಡುವಿನ ಅವಧಿಯಲ್ಲೇ 112ಕ್ಕೂ ಹೆಚ್ಚು ನಿರ್ಣಯಗಳನ್ನು ಅಂಗೀಕರಿಸಿದೆ.
ಸರ್, 2026ರ ಫೆಬ್ರವರಿ 28ರಂದು ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ದಾಳಿಯ ಕುರಿತು ನೀವು ಏಕೆ ಒಂದೇ ಒಂದು ಮಾತನ್ನೂ ಆಡಲಿಲ್ಲ ಎಂಬುದು ನನಗೆ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಪ್ರಧಾನಿ ಮೋದಿ ಮತ್ತು ಅವರ ಸರ್ಕಾರ ಕೂಡ ಈ ವಿಚಾರದಲ್ಲಿ ಮೌನ ವಹಿಸಿದ್ದವು. ಇರಾನ್ ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಹತ್ಯೆಯ ಕುರಿತು ಕನಿಷ್ಠ ಸಂತಾಪವನ್ನೂ ಸೂಚಿಸಲಿಲ್ಲ. ಆದರೆ, ನೀವು ಇತರರಿಗಿಂತ ಭಿನ್ನವಾಗಿ ನಡೆದುಕೊಳ್ಳುತ್ತೀರಿ ಎಂದು ನಾನು ನಿರೀಕ್ಷಿಸಿದ್ದೆ.
ರಾಹುಲ್ ಅವರೇ, ಚಿಕಾಗೋದಲ್ಲಿ ನೀವು ಹೀಗೆ ಹೇಳಿದ್ದೀರಿ:
"ನಾವು ಅವರಿಂದ ಶಸ್ತ್ರಾಸ್ತ್ರಗಳನ್ನು ಏಕೆ ಖರೀದಿಸುತ್ತೇವೆ? ಸ್ಪಷ್ಟವಾಗಿ ಹೇಳಬೇಕೆಂದರೆ, ನಾವು ಅತ್ಯುತ್ತಮ ಶಸ್ತ್ರಾಸ್ತ್ರಗಳನ್ನೇ ಖರೀದಿಸಬೇಕಾಗುತ್ತದೆ. ಅವರು ಅತ್ಯುತ್ತಮ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಾರೆ, ಅಲ್ಲವೇ?"
ನಾವು ಇಸ್ರೇಲ್ ನಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತೇವೆ ಎಂಬುದು ನಿಜ. ಆದರೆ, ಫೆಲೆಸ್ತೀನಿಯನ್ನರ ನರಮೇಧದಲ್ಲಿ (Genocide) ಭಾಗಿಯಾಗಿದೆ ಎಂದು ಆರೋಪಿಸಲ್ಪಟ್ಟಿರುವ ಇಸ್ರೇಲ್ ಗೆ ಭಾರತವೇ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಪೂರೈಸುತ್ತಿದೆ ಎಂಬ ಸಂಗತಿಯನ್ನೂ ನೀವು ಅರಿತುಕೊಳ್ಳಬೇಕು.
2024ರ ನವೆಂಬರ್ 21ರಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ರಕ್ಷಣಾ ಸಚಿವರ ವಿರುದ್ಧ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC) ಬಂಧನ ವಾರಂಟ್ ಗಳನ್ನು ಹೊರಡಿಸಿತ್ತು. ಅಕ್ಟೋಬರ್ 7ರಂದು ಇಸ್ರೇಲಿಗಳ ಹತ್ಯೆಗೆ ಹೊಣೆಗಾರರೆಂದು ಪರಿಗಣಿಸಲಾದ ಹಮಾಸ್ ನ ಉನ್ನತ ನಾಯಕರ ವಿರುದ್ಧವೂ ವಾರಂಟ್ ಗಳನ್ನು ಹೊರಡಿಸಲಾಗಿತ್ತು.
ಗಾಝಾದಲ್ಲಿ ನಡೆಯುತ್ತಿರುವ ನರಮೇಧದಲ್ಲಿ ಭಾರತವೂ ನೇರವಾಗಿ ಭಾಗಿಯಾಗಿದೆ ಎಂಬ ಗಂಭೀರ ಆರೋಪವನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.
2024ರ ಮೇ 16ರಂದು 'ದಿ ಗಾರ್ಡಿಯನ್' ಪ್ರಕಟಿಸಿದ ವರದಿಯಲ್ಲಿ ಹೀಗೆ ಹೇಳಲಾಗಿತ್ತು:
"ಭಾರತದಿಂದ ಸುಮಾರು 27 ಟನ್ ಸ್ಫೋಟಕ ಸಾಮಗ್ರಿಗಳನ್ನು ಹೊತ್ತು ಇಸ್ರೇಲ್ ನ ಹೈಫಾ ನಗರಕ್ಕೆ ತೆರಳುತ್ತಿದ್ದ ಡೆನ್ಮಾರ್ಕ್ ಧ್ವಜ ಹೊಂದಿದ್ದ ಸರಕು ಹಡಗಿಗೆ ಸ್ಪೇನ್ ಅಧಿಕಾರಿಗಳು ಕಾರ್ಟಜೆನಾ ಬಂದರಿನಲ್ಲಿ ಲಂಗರು ಹಾಕಲು ಅನುಮತಿ ನಿರಾಕರಿಸಿದರು. ಇಸ್ರೇಲ್ ಗೆ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಹಡಗುಗಳಿಗೆ ಬಂದರು ಪ್ರವೇಶ ನಿರಾಕರಿಸುವ ವ್ಯವಸ್ಥಿತ ನೀತಿಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪೇನ್ ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬಾರೆಸ್ ತಿಳಿಸಿದ್ದಾರೆ..."
ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೂವೆನ್ ಅಝರ್ ಅವರು ಪ್ರಧಾನಿ ಮೋದಿಯವರ 'ಮೇಕ್ ಇನ್ ಇಂಡಿಯಾ' (Make in India) ನೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ನೀತಿಯು ಇಸ್ರೇಲಿನ ಶಸ್ತ್ರಾಸ್ತ್ರ ಕಂಪೆನಿಗಳಿಗೆ ಭಾರತದಲ್ಲಿ ಸ್ವತಂತ್ರವಾಗಿ ಅಥವಾ ಭಾರತೀಯ ಕಂಪೆನಿಗಳ ಸಹಯೋಗದೊಂದಿಗೆ ಯುದ್ಧ ಸಾಮಗ್ರಿಗಳ ಉತ್ಪಾದನೆ ಆರಂಭಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಅವರು ಹೇಳಿದ್ದಾರೆ.
ಇಂತಹ 700ಕ್ಕೂ ಹೆಚ್ಚು ಕಂಪೆನಿಗಳು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ತಯಾರಿಸುತ್ತಿವೆ ಎಂದು ನಂಬಲಾಗಿದೆ.
ರಾಹುಲ್ ಅವರೇ, ಚಿಕಾಗೋದಲ್ಲಿ ನೀವು ಹೀಗೆ ಹೇಳಿದ್ದೀರಿ:
"RSS ಮತ್ತು BJP ಇನ್ನು ಮುಂದೆ ಸಾಮಾನ್ಯ ರಾಜಕೀಯ ಪಕ್ಷಗಳಾಗಿ ಉಳಿದಿಲ್ಲ. 2014ರಲ್ಲಿ ನಡೆದದ್ದೇನೆಂದರೆ, ಬಿಜೆಪಿಯ ಆರ್ಥಿಕ ವ್ಯವಸ್ಥೆಯು ಅದಾನಿ ಅವರ ಕಂಪೆನಿಯೊಂದಿಗೆ ವಿಲೀನಗೊಂಡಿತು. ಅಂದರೆ, ಭಾರತದ ಅತಿದೊಡ್ಡ ಕಂಪೆನಿಯು ಆರ್ಥಿಕವಾಗಿ ಸಂಪೂರ್ಣವಾಗಿ ಬಿಜೆಪಿಯೊಂದಿಗೆ ಬೆರೆತುಹೋಗಿದೆ. ಇದು ಅವರಿಗೆ ಬೃಹತ್ ಆರ್ಥಿಕ ಏಕಸ್ವಾಮ್ಯವನ್ನು (Financial Monopoly) ಒದಗಿಸುತ್ತದೆ."
ಆದರೆ, ಇಸ್ರೇಲ್ ನ ಅತಿದೊಡ್ಡ ಶಸ್ತ್ರಾಸ್ತ್ರ ತಯಾರಕ ಸಂಸ್ಥೆಗಳಲ್ಲಿ ಒಂದಾದ 'ಎಲ್ಬಿಟ್' (Elbit) ಜೊತೆಗೂಡಿ ಯುದ್ಧ ಸಾಮಗ್ರಿಗಳನ್ನು ತಯಾರಿಸುವಲ್ಲಿ ಅದಾನಿ ಸಮೂಹವೂ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬ ಸಂಗತಿ ನಿಮಗೆ ನಿಜವಾಗಿಯೂ ತಿಳಿದಿಲ್ಲವೇ?
2018ರಲ್ಲಿ ಅದಾನಿ ಸಮೂಹದ ಪ್ರಮುಖ ಕಲ್ಲಿದ್ದಲು ಗಣಿಗಾರಿಕೆ ವ್ಯವಹಾರವಾದ 'ಅದಾನಿ ಎಂಟರ್ಪ್ರೈಸಸ್' (Adani Enterprises) ಮತ್ತು ಇಸ್ರೇಲ್ ನ ಅತಿದೊಡ್ಡ ಶಸ್ತ್ರಾಸ್ತ್ರ ಉತ್ಪಾದಕ ಸಂಸ್ಥೆಯಾದ 'ಎಲ್ಬಿಟ್ ಸಿಸ್ಟಮ್ಸ್' (Elbit Systems) ಜಂಟಿಯಾಗಿ 'ಅದಾನಿ ಎಲ್ಬಿಟ್ ಅಡ್ವಾನ್ಸ್ಡ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್' (Adani Elbit Advanced Systems India Limited) ಎಂಬ ಜಂಟಿ ಉದ್ಯಮವನ್ನು ಆರಂಭಿಸಿದವು.
2020ರ ಫೆಬ್ರವರಿ 6ರಂದು ಪ್ರಕಟವಾದ ಪತ್ರಿಕಾ ಪ್ರಕಟಣೆಯಲ್ಲಿ ಅದಾನಿ ಸಮೂಹ ಈ ಕುರಿತು ಮಾಹಿತಿ ನೀಡಿತ್ತು.
ಅದರ ಪ್ರಕಾರ:
"ಅದಾನಿ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ಮತ್ತು ಇಸ್ರೇಲ್ ನ ಎಲ್ಬಿಟ್ ಸಿಸ್ಟಮ್ಸ್ ನಡುವಿನ ಜಂಟಿ ಉದ್ಯಮವಾದ ಅದಾನಿ ಎಲ್ಬಿಟ್ ಅಡ್ವಾನ್ಸ್ಡ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್, ಹೈದರಾಬಾದ್ ನ ಅದಾನಿ ಏರೋಸ್ಪೇಸ್ ಪಾರ್ಕ್ ನಲ್ಲಿ ಮಾನವರಹಿತ ವೈಮಾನಿಕ ಡ್ರೋನ್ ಗಳನ್ನು ಸ್ಥಳೀಯವಾಗಿ ತಯಾರಿಸಲು ಮೊದಲ ಖಾಸಗಿ UAV ಉತ್ಪಾದನಾ ಸಂಕೀರ್ಣವನ್ನು ಸ್ಥಾಪಿಸಿದೆ. 2018ರ ಡಿಸೆಂಬರ್ ನಲ್ಲಿ ಉದ್ಘಾಟನೆಯಾದ ಈ ಘಟಕವು ಇಸ್ರೇಲ್ ನ ಹೊರಗೆ ಇರುವ ಏಕೈಕ ಹರ್ಮ್ಸ್ 900 ಉತ್ಪಾದನಾ ಸೌಲಭ್ಯವಾಗಿದೆ. ಇದು ಅಂತರರಾಷ್ಟ್ರೀಯ ಗ್ರಾಹಕರಿಗೆ ಹರ್ಮ್ಸ್ 900 ಮಾನವರಹಿತ ವೈಮಾನಿಕ ಡ್ರೋನ್ ಗಳನ್ನು ರಫ್ತು ಮಾಡಲು ಆರಂಭಿಸಿದೆ."
ರಾಹುಲ್ ಜಿ, ಇಸ್ರೇಲ್ ಅನ್ನು ಹೊಗಳುವ ಭರದಲ್ಲಿ ಆ ದೇಶವೇ ಪ್ರತ್ಯೇಕವಾಗಿ ತಯಾರಿಸಿ ಮಾರಾಟ ಮಾಡುವ ಪೆಗಾಸಸ್ ಸ್ಪೈವೇರ್ (Pegasus Spyware) ಬಗ್ಗೆ ನೀವು ಮರೆತಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.
ಪ್ರಧಾನಿ ಮೋದಿ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ನಡುವಿನ ವೈಯಕ್ತಿಕ ಸ್ನೇಹದ ಪರಿಣಾಮವಾಗಿ, ಹಿಂದುತ್ವ ರಾಜಕೀಯವನ್ನು ವಿರೋಧಿಸುತ್ತಿದ್ದಾರೆ ಎಂಬ ಶಂಕೆಯಿಂದ ವಕೀಲರು, ಪತ್ರಕರ್ತರು, ರಾಜಕಾರಣಿಗಳು ಮತ್ತು ಕಾರ್ಯಕರ್ತರ ವಿರುದ್ಧ ಬಳಸಲು ಭಾರತವು ಈ ಸ್ಪೈವೇರ್ ಅನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿತು ಎಂಬ ಆರೋಪಗಳಿವೆ.
ಪೆಗಾಸಸ್ ಸ್ಪೈವೇರ್ ಅನ್ನು 'ವಿಶ್ವದ ಅತ್ಯಂತ ಶಕ್ತಿಶಾಲಿ ಸೈಬರ್ ಆಯುಧ' ಎಂದು ಬಣ್ಣಿಸಲಾಗಿದೆ. ನಿಮ್ಮನ್ನೂ ಒಳಗೊಂಡಂತೆ ಕಾಂಗ್ರೆಸ್ ನಾಯಕರು ತಮ್ಮ ಮೊಬೈಲ್ ಫೋನ್ ಗಳನ್ನು ಹ್ಯಾಕ್ ಮಾಡಲು ಪೆಗಾಸಸ್ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸರ್, ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಹೆಸರುವಾಸಿಯಾದ ಭಾರತೀಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಮುರಳೀಧರ್ ಅವರನ್ನು ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶಗಳ ಕುರಿತ ವಿಶ್ವಸಂಸ್ಥೆಯ ಸ್ವತಂತ್ರ ಅಂತರರಾಷ್ಟ್ರೀಯ ತನಿಖಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಇಸ್ರೇಲಿ ಸಶಸ್ತ್ರ ಪಡೆಗಳು ಫೆಲೆಸ್ತೀನಿಯನ್ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿರುವ ಕುರಿತು ತನಿಖೆ ನಡೆಸುವುದು ಆಯೋಗದ ಕಾರ್ಯವಾಗಿತ್ತು.
ವರದಿಯಲ್ಲಿ ಹೀಗೆ ಹೇಳಲಾಗಿದೆ:
"ಪುರಾವೆಗಳು ಯಾವುದೇ ಅನುಮಾನಕ್ಕೂ ಅವಕಾಶ ನೀಡುವುದಿಲ್ಲ. ಫೆಲೆಸ್ತೀನಿಯನ್ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗಿತ್ತು."
ಇಸ್ರೇಲ್ ಈ ವರದಿಯನ್ನು ತಿರಸ್ಕರಿಸಿದೆ.
ಸರ್, ನೀವು ಕೂಡ ಈ ವರದಿಯನ್ನು ಕಡೆಗಣಿಸುತ್ತೀರಾ?
ರಾಹುಲ್ ಜಿ, ಫೆಲೆಸ್ತೀನಿಯನ್ನರ ವಿರುದ್ಧ ಪೆಲೆಟ್ ಗನ್ಗಳನ್ನು ಬಳಸಿದ ಮೊದಲ ದೇಶ ಇಸ್ರೇಲ್ ಎಂಬ ಸಂಗತಿಯನ್ನೂ ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.
ಈ ಆಯುಧಗಳು ಜನರನ್ನು ಕೊಲ್ಲದಿದ್ದರೂ, ಗಂಭೀರ ಗಾಯಗಳನ್ನುಂಟುಮಾಡಿ ಅವರನ್ನು ಜೀವಮಾನವಿಡೀ ಅಂಗವಿಕಲರನ್ನಾಗಿ ಮಾಡಬಲ್ಲವು. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಆಯುಧಗಳನ್ನು ಬಳಸಿದಾಗ ನೂರಾರು ಜನರು ಗುರಿಯಾಗಿದ್ದರು. ಇದರಿಂದ ಅನೇಕ ಯುವ ಪ್ರತಿಭಟನಾಕಾರರು ಅಂಗವಿಕಲರಾಗಿದ್ದರು. ಹೊಸದಿಲ್ಲಿಯ ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲೂ ಪೆಲೆಟ್ ಗನ್ ಗಳ ಬಳಕೆಯ ವಿಚಾರ ಮುನ್ನೆಲೆಗೆ ಬಂದಿತ್ತು.
ನನ್ನ ಪ್ರೀತಿಯ ರಾಹುಲ್, ಸರ್ವಾಧಿಕಾರ, ಅನ್ಯಾಯ, ಧಾರ್ಮಿಕ ಮತಾಂಧತೆ ಮತ್ತು ವಿಭಜಕ ರಾಜಕೀಯದ ವಿರುದ್ಧ ಹೋರಾಡುವ ನಾಯಕ ಎಂದು ಭಾರತ ನಿಮ್ಮನ್ನು ಗುರುತಿಸಿದೆ.
ಕ್ರಿಶ್ಚಿಯನ್, ಹಿಂದುತ್ವ ಮತ್ತು ಝಿಯೋನಿಸಂ ಸೇರಿದಂತೆ ವಿವಿಧ ರೂಪಗಳ ರಾಜಕೀಯ ಶಕ್ತಿಗಳ ಒಗ್ಗೂಡುವಿಕೆ ಮಾನವ ನಾಗರಿಕತೆಗೆ ದೊಡ್ಡ ಅಪಾಯವಾಗಿದೆ ಎಂಬುದನ್ನು ನೀವು ಅರಿತುಕೊಳ್ಳುತ್ತೀರಿ ಎಂದು ಆಶಿಸುತ್ತೇನೆ.
ದಯವಿಟ್ಟು ಭಾರತವನ್ನು ನಿರಾಶೆಗೊಳಿಸಬೇಡಿ!
- ಶಂಸುಲ್ ಇಸ್ಲಾಮ್ ಅವರು ದಿಲ್ಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು.
ಕೃಪೆ: countercurrents.org