ಗ್ರಾಹಕರ ಜೇಬಿಗೆ ಕತ್ತರಿಯಿಟ್ಟ ಮಳೆ ಕೊರತೆ: ನಿಡಗುಂದಿ ಸಂತೆಯಲ್ಲಿ ತರಕಾರಿ ಬೆಲೆ ಗಗನಕ್ಕೆ
ನಿಡಗುಂದಿ: ಸಮರ್ಪಕ ಮಳೆಯಾಗದೆ ಬರದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ನಿಡಗುಂದಿ ಪಟ್ಟಣದ ಶನಿವಾರದ ವಾರದ ಸಂತೆಯಲ್ಲಿ ತರಕಾರಿ ಬೆಲೆಗಳು ಏರಿಕೆಯಾಗಿವೆ. ಟೊಮ್ಯಾಟೊ, ಹಸಿಮೆಣಸಿನಕಾಯಿ, ಆಲೂಗಡ್ಡೆ ಸೇರಿದಂತೆ ವಿವಿಧ ಬಗೆಯ ಸೊಪ್ಪು ಹಾಗೂ ತರಕಾರಿಗಳ ದರ ಹೆಚ್ಚಳವಾಗಿದ್ದು, ಸಾಮಾನ್ಯ ಗ್ರಾಹಕರು ಅಗತ್ಯ ತರಕಾರಿಗಳನ್ನು ಖರೀದಿಸಲೂ ಹಿಂದೇಟು ಹಾಕುವಂತಾಗಿದೆ.
ಮಳೆಯ ಕೊರತೆಯಿಂದ ರೈತರ ಹೊಲಗಳಲ್ಲಿ ತರಕಾರಿ ಬೆಳೆಗಳು ಸಮರ್ಪಕವಾಗಿ ಬೆಳೆದಿಲ್ಲ. ಕೊಳವೆಬಾವಿ ನೀರಾವರಿ ಸೌಲಭ್ಯ ಹೊಂದಿರುವ ಕೆಲ ರೈತರು ಮಾತ್ರ ಸೊಪ್ಪು ಹಾಗೂ ಇತರೆ ತರಕಾರಿಗಳನ್ನು ಬೆಳೆದು ಮಾರುಕಟ್ಟೆಗೆ ತರುತ್ತಿದ್ದಾರೆ. ಹೀಗಾಗಿ ಸ್ಥಳೀಯವಾಗಿ ತರಕಾರಿ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆಗೆ ತಕ್ಕಷ್ಟು ಉತ್ಪನ್ನಗಳು ಲಭ್ಯವಾಗುತ್ತಿಲ್ಲ. ಇದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಸ್ಥಳೀಯ ಉತ್ಪಾದನೆ ಕುಸಿದಿರುವುದರಿಂದ ವ್ಯಾಪಾರಿಗಳು ವಿಜಯಪುರ, ಬಾಗಲಕೋಟೆ, ಹೊಸಪೇಟೆ, ಗಂಗಾವತಿ ಹಾಗೂ ಕೊಪ್ಪಳ ಸೇರಿದಂತೆ ವಿವಿಧ ಪ್ರದೇಶಗಳಿಂದ ತರಕಾರಿಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಹೊರ ಊರುಗಳಿಂದ ಸಾಗಣೆ ಮಾಡುವುದರಿಂದ ಸಾರಿಗೆ ವೆಚ್ಚವೂ ಹೆಚ್ಚಾಗಿದ್ದು, ಅದರ ಹೊರೆ ಅಂತಿಮವಾಗಿ ಗ್ರಾಹಕರ ಮೇಲೆ ಬೀಳುತ್ತಿದೆ.
ಈ ಕುರಿತು ಮಾರುಕಟ್ಟೆಯ ವ್ಯಾಪಾರಿಗಳು ಮಾತನಾಡಿ, ಸ್ಥಳೀಯ ರೈತರು ಬೆಳೆದ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದರೆ ಬೆಲೆ ನಿಯಂತ್ರಣದಲ್ಲಿರುತ್ತದೆ. ಆದರೆ ಈ ಬಾರಿ ಮಳೆಯ ಅಭಾವದಿಂದ ತರಕಾರಿ ಉತ್ಪಾದನೆ ಕಡಿಮೆಯಾಗಿದೆ. ಹೊರ ಜಿಲ್ಲೆ ಹಾಗೂ ದೂರದ ಊರುಗಳಿಂದ ತರಕಾರಿ ತರಿಸಿಕೊಳ್ಳಬೇಕಾಗಿರುವುದರಿಂದ ಸಾರಿಗೆ ವೆಚ್ಚವೂ ಸೇರಿ ದರ ಹೆಚ್ಚಳವಾಗಿದೆ ಎಂದು ತಿಳಿಸಿದರು.
ವೈದ್ಯರು ಪ್ರತಿದಿನ ಆಹಾರದಲ್ಲಿ ಹಸಿರು ಸೊಪ್ಪು ಹಾಗೂ ತರಕಾರಿಗಳನ್ನು ಸೇರಿಸಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಆದರೆ ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಅವುಗಳನ್ನು ಖರೀದಿಸಲು ಪರದಾಡುವಂತಾಗಿದೆ. ದಿನನಿತ್ಯದ ಅಡುಗೆಗೆ ಅಗತ್ಯವಿರುವ ತರಕಾರಿಗಳನ್ನೂ ಮಿತವಾಗಿ ಖರೀದಿಸುವ ಪರಿಸ್ಥಿತಿ ಎದುರಾಗಿದೆ.
ತರಕಾರಿಗಳ ಬೆಲೆಯಷ್ಟೇ ಅಲ್ಲದೆ, ಹಾಲು, ಹಣ್ಣು ಹಾಗೂ ಜೋಳ, ಗೋಧಿಯಂತಹ ಆಹಾರ ಪದಾರ್ಥಗಳ ದರವೂ ಏರಿಕೆಯಾಗುತ್ತಿರುವುದು ಜನಸಾಮಾನ್ಯರ ಆತಂಕ ಹೆಚ್ಚಿಸಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕುಟುಂಬಗಳ ಮಾಸಿಕ ಖರ್ಚಿನ ಮೇಲೂ ಹೆಚ್ಚಿನ ಹೊರೆ ಬೀಳುತ್ತಿದೆ.
ಒಂದೆಡೆ ಮಳೆಯಿಲ್ಲದೆ ಬೆಳೆ ಬೆಳೆಯಲಾಗದೆ ರೈತರು ಸಂಕಷ್ಟದಲ್ಲಿದ್ದರೆ, ಮತ್ತೊಂದೆಡೆ ದುಬಾರಿ ಬೆಲೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಮಳೆಯ ಅಭಾವದ ಬಿಸಿ ರೈತರು ಮತ್ತು ಗ್ರಾಹಕರು ಇಬ್ಬರನ್ನೂ ಕಾಡುತ್ತಿದ್ದು, ಈ ಪರಿಸ್ಥಿತಿಗೆ ಪರಿಹಾರ ಯಾವಾಗ ಎಂಬ ಪ್ರಶ್ನೆ ಎದುರಾಗಿದೆ.