ಬೀದರ್: ಮಳೆಯ ಕೊರತೆಯಿಂದ ಪ್ರಮುಖ ಬೆಳೆಗಳ ಉತ್ಪಾದನೆ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಅಕ್ಕಿ, ಜೋಳ ಹಾಗೂ ಗೋಧಿ ಸೇರಿದಂತೆ ಹಲವು ದವಸ ಧಾನ್ಯಗಳ ಬೆಲೆ ಏರಿಕೆಯಾಗಿದೆ. ಕಳೆದ ಎರಡು ತಿಂಗಳಲ್ಲಿ ಅಗತ್ಯ ಆಹಾರ ಪದಾರ್ಥಗಳ ದರ ಗಣನೀಯವಾಗಿ ಹೆಚ್ಚಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ.

ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಪ್ರಮುಖ ಕೃಷಿ ರಾಜ್ಯಗಳಲ್ಲಿ ಮಳೆಯ ಕೊರತೆಯಿಂದ ಬಿತ್ತನೆ ಮತ್ತು ಬೆಳೆ ಉತ್ಪಾದನೆಗೆ ಹಿನ್ನಡೆಯಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ದವಸ ಧಾನ್ಯಗಳ ಪೂರೈಕೆ ಕಡಿಮೆಯಾಗಿ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಬೀದರ್ ಜಿಲ್ಲೆಗೆ ತೆಲಂಗಾಣ ಮತ್ತು ಆಂಧ್ರಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಪೂರೈಕೆಯಾಗುತ್ತದೆ. ಈ ರಾಜ್ಯಗಳಲ್ಲಿ ಮಳೆಯ ಕೊರತೆಯಿಂದ ಭತ್ತದ ಉತ್ಪಾದನೆ ಕುಂಠಿತವಾಗಿರುವುದು ಅಕ್ಕಿ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ಅಕ್ಕಿ ಬೆಲೆಯಲ್ಲಿ ಭಾರಿ ಏರಿಕೆ

ಸಗಟು ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್ ಗಳ ಅಕ್ಕಿ ಬೆಲೆ ಎರಡು ತಿಂಗಳ ಹಿಂದೆ ಇದ್ದ ದರಕ್ಕೆ ಹೋಲಿಸಿದರೆ ಗಣನೀಯವಾಗಿ ಹೆಚ್ಚಾಗಿದೆ.

ಸೂರ್ಯ ಬ್ರಾಂಡ್ ಅಕ್ಕಿ ಕೆ.ಜಿಗೆ 60ರಿಂದ 95 ರೂ. ಗೆ, ಜನ್ನತ್ ಬ್ರಾಂಡ್ ಅಕ್ಕಿ 58ರಿಂದ 94 ರೂ. ಗೆ, ಏರಿಕೆಯಾಗಿದೆ. ಮಧುಬಾಲಾ ಮತ್ತು ಪ್ರಭಾಕರ್ ಬ್ರಾಂಡ್ ಅಕ್ಕಿ 55ರಿಂದ 98 ರೂ. ಗೆ ತಲುಪಿದೆ. ಅನಮೋಲ್ ಬ್ರಾಂಡ್ ಅಕ್ಕಿ 62ರಿಂದ 97 ರೂ. ಗೆ ಹೆಚ್ಚಳವಾಗಿದೆ. ನುಚ್ಚಕ್ಕಿಯ ಬೆಲೆಯೂ ಕೆ.ಜಿಗೆ 38ರಿಂದ 47 ರೂ. ಗೆ ಏರಿಕೆಯಾಗಿದೆ.

ಜೋಳ, ಗೋಧಿಯೂ ದುಬಾರಿ

ಜೋಳದ ಬೆಲೆಯಲ್ಲಿಯೂ ಭಾರಿ ಏರಿಕೆ ಕಂಡುಬಂದಿದೆ. ಮೋತಿ ಗೋಲ್ಡ್ ಪ್ರಥಮ ದರ್ಜೆಯ ಜೋಳ ಕೆ.ಜಿಗೆ 58ರಿಂದ 93 ರೂ. ಗೆ, ದ್ವಿತೀಯ ದರ್ಜೆಯ ಜೋಳ 42ರಿಂದ 90 ರೂ. ಗೆ ಹೆಚ್ಚಾಗಿದೆ. 5 ಸ್ಟಾರ್ ಬ್ರಾಂಡ್ ಜೋಳ 55ರಿಂದ 80 ರೂ. ಗೆ, ಹಾಗೂ ಆರ್ಟಿ ಬ್ರಾಂಡ್ ಜೋಳ 40ರಿಂದ 70 ರೂ. ಗೆ ಏರಿಕೆಯಾಗಿದೆ.

ಗೋಧಿಯ ಬೆಲೆಯೂ ಗ್ರಾಹಕರಿಗೆ ಹೊರೆಯಾಗಿದೆ. ಚೈನಾಯಿ ಗೋಧಿ ಕೆ.ಜಿಗೆ 32ರಿಂದ 45 ರೂ. ಗೆ ಹಾಗೂ ಶೈನ್ ಬ್ರಾಂಡ್ ಗೋಧಿ 30ರಿಂದ 38 ರೂ. ಗೆ ಹೆಚ್ಚಾಗಿದೆ.

ಸಗಟು ಮಾರುಕಟ್ಟೆಯಲ್ಲಿಯೇ ಈ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಕೆ.ಜಿಗೆ 100ರ ಗಡಿ ದಾಟಿದೆ. ಹೆಚ್ಚಿನ ಗ್ರಾಹಕರು ಚಿಲ್ಲರೆ ಅಂಗಡಿಗಳಲ್ಲಿ ಖರೀದಿ ಮಾಡುವುದರಿಂದ ಅವರ ಮೇಲಿನ ಹೊರೆ ಮತ್ತಷ್ಟು ಹೆಚ್ಚಾಗಿದೆ.

ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಾಗಬಹುದು ಎಂಬ ಆತಂಕದಿಂದ ಕೆಲವರು ಮುಂಚಿತವಾಗಿಯೇ ದವಸ ಧಾನ್ಯಗಳನ್ನು ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಆದರೆ, ದಿನಗೂಲಿ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಅಗತ್ಯ ಪ್ರಮಾಣದ ಆಹಾರ ಧಾನ್ಯಗಳನ್ನು ಖರೀದಿಸುವುದೇ ಕಷ್ಟವಾಗಿದೆ. ಅಂಗಡಿಗಳಿಗೆ ಬರುವ ಗ್ರಾಹಕರು ಬೆಲೆ ಕೇಳಿ ಅಚ್ಚರಿಗೊಂಡು, ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಖರೀದಿಸಿ ಹಿಂದಿರುಗುತ್ತಿದ್ದಾರೆ.

ತೆಲಂಗಾಣದಿಂದ ನಮ್ಮ ಅಂಗಡಿಗೆ ಅಕ್ಕಿ ಸರಬರಾಜಾಗುತ್ತದೆ. ಈ ಬಾರಿ ಮಳೆಯ ಕೊರತೆಯಿಂದ ಅಲ್ಲಿ ಭತ್ತದ ಬೆಳೆ ಸರಿಯಾಗಿ ಬಂದಿಲ್ಲ. ಹೀಗಾಗಿ ಅಕ್ಕಿ ಬೆಲೆ ಹೆಚ್ಚಾಗಿದೆ. ಕಳೆದ ಎರಡು ತಿಂಗಳಿಂದ ಹಂತ ಹಂತವಾಗಿ ಬೆಲೆ ಏರಿಕೆಯಾಗುತ್ತಿದ್ದು, ಇತ್ತೀಚೆಗೆ ಹೆಚ್ಚಳದ ಪ್ರಮಾಣ ಜಾಸ್ತಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಹೆಚ್ಚಾಗಬಹುದು ಎಂಬ ಆತಂಕದಿಂದ ಗ್ರಾಹಕರು ಈಗಲೇ ಧಾನ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ.

ದತ್ತಾತ್ರಿ, ಸಗಟು ವ್ಯಾಪಾರಸ್ಥ

ಕೆಲವು ದಿನಗಳ ಹಿಂದೆ ಅಕ್ಕಿ ಕೆ.ಜಿಗೆ 60ರಿಂದ 70 ರೂ. ಇತ್ತು. ಈಗ 100ರ ಗಡಿ ದಾಟಿದೆ. ಐದು ಕೆ.ಜಿ. ಜೋಳಕ್ಕೆ ಮೊದಲು 250 ರೂ. ಇತ್ತು. ಈಗ 500 ರೂ.ವರೆಗೆ ತಲುಪಿದೆ. ನಮ್ಮಂಥ ಬಡವರಿಗೆ ಈ ಬೆಲೆ ಏರಿಕೆ ತೀವ್ರ ಹೊರೆಯಾಗಿದೆ.

ಸ್ವಾತಿ, ಗ್ರಾಹಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಸೇನ ವ್ಹಿ ಫುಲೆ

contributor