ಬೀಡಿ ಕಟ್ಟುವ ಕಾಯಕದ ‘ಭೈರ’ ಸಮುದಾಯ
ಭೈರ ಸಮುದಾಯ ಕರ್ನಾಟಕದಲ್ಲಿ ಎಸ್.ಸಿ. ಪಟ್ಟಿಯಲ್ಲಿದ್ದು ತನ್ನ ಪ್ರತ್ಯೇಕ ಅಸ್ಮಿತೆಗಾಗಿ ಅನೇಕ ವರ್ಷಗಳಿಂದಲೂ ಹೋರಾಡುತ್ತಿದೆ. ಅತ್ಯಂತ ಕಡಿಮೆ ಜನಸಂಖ್ಯೆಯ ಈ ಸಮುದಾಯವನ್ನು ಸರಕಾರಗಳಾಗಲಿ ಇತರ ಸಂಘಟನೆಗಳಾಗಲಿ ಗಂಭೀರವಾಗಿ ಪರಿಗಣಿಸಿಲ್ಲ. ಈಚೀಚೆಗಷ್ಟೇ ಈ ಸಮುದಾಯದ ಮಕ್ಕಳಿಗೆ ಅಕ್ಷರ ತಲಪುತ್ತಿದೆ.
‘‘ದಕ್ಷಿಣ ಕನ್ನಡ ಜೆಲ್ಲೆಯ ಬೆಳ್ತಂಗಡಿ ಸಮೀಪದ ಧರ್ಮಸ್ಥಳ ಮತ್ತು ಬೆಳ್ತಂಗಡಿ ನಡುವಿನ ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿ ಭೈರ ಸಮುದಾಯದ ಸುಮಾರು 100-120 ಮನೆಗಳಿವೆ. ಆ ಭಾಗದಲ್ಲಿ ನಾನು ವಾರಕ್ಕೂ ಹೆಚ್ಚು ಕಾಲ ಕ್ಷೇತ್ರ ಕಾರ್ಯವನ್ನು ಮಾಡಿದ್ದೇನೆ’’ ಎಂದು ಭೈರ ಸಮುದಾಯದ ಕುರಿತು ‘ಡಾ.ಬಿ.ಆರ್.ಅಂಬೇಡ್ಕರ್ ಸಂಸ್ಥೆ’ಗೆ ಸಂಶೋಧನ ಗ್ರಂಥ ಬರೆದುಕೊಟ್ಟ ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿಯವರು ದಾಖಲಿಸುತ್ತಾರೆ. ಈ ಸಂಶೋಧನೆಗೆ ನಾನೇ ಮಾರ್ಗದರ್ಶನ ನೀಡಿದ್ದೇನೆ.
ದಕ್ಷಿಣ ಕನ್ನಡದಲ್ಲಿ ನೆಲೆಸಿರುವ ಬೀಡಿ ಸುತ್ತುವ ಕಾರ್ಮಿಕರಲ್ಲಿ ಸಾಕಷ್ಟು ಜನ ಭೈರ ಸಮುದಾಯದವರಿದ್ದಾರೆ. ಸಾವಿರ ಬೀಡಿ ಸುತ್ತಿದರೆ ಇವರಿಗೆ ಇಂತಿಷ್ಟು ಎಂದು ಮಜೂರಿ ನೀಡಲಾಗುತ್ತದೆ. ಬೀಡಿ ಕಾರ್ಮಿಕರಿಗೆ ಒಂದು ಕಿಲೋ ಎಲೆಗೆ 400ಗ್ರಾಮ್ ತಂಬಾಕು, ಒಂದು ಉಂಡೆ ನೂಲನ್ನು ನೀಡುತ್ತಾರೆ. ವಾರದೊಳಗೆ 2,200 ಬೀಡಿ ಕಟ್ಟಿಕೊಡಬೇಕು. ಇಲ್ಲವಾದರೆ ಕಡಿಮೆಯಾದ ಬೀಡಿಗೆ ದಂಡ ವಿಧಿಸಲಾಗುತ್ತದೆ! ಒಬ್ಬ ಬೀಡಿ ಕಾರ್ಮಿಕ ದಿನವೊಂದಕ್ಕೆ ಒಂದು ಸಾವಿರ ಬೀಡಿ ಸುತ್ತಬಹುದಷ್ಟೆ, ಒಂದು ಸಾವಿರ ಬೀಡಿ ಸುತ್ತಿದರೆ ಸುಮಾರು ಇನ್ನೂರು ರೂಪಾಯಿ ಸಂಪಾದನೆ ಮಾಡಬಹುದಷ್ಟೆ. ಈ ಕಾರಣಕ್ಕೆ ಈ ಸಮುದಾಯ ಸಾಕಷ್ಟು ಹಸಿವು, ಬಡತನವನ್ನು ಅನುಭವಿಸುತ್ತಿದೆ. ಈಚೆಗೆ ಬೀಡಿ ಬಳಸುವ ಜನಸಮುದಾಯ ಕಡಿಮೆಯಾಗುತ್ತಿದ್ದು, ಬೀಡಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಭೈರ ಸಮುದಾಯದ ಅನೇಕ ಮಂದಿ ಹೆಣ್ಣುಮಕ್ಕಳು ಮತ್ತು ಮನೆಮಕ್ಕಳೆಲ್ಲಾ ಮನೆಯಲ್ಲೇ ಬೀಡಿ ಕಟ್ಟುತ್ತಿದ್ದವರಿಗೆ ಈಗ ಕೆಲಸ ಇಲ್ಲದಂತಾಗುತ್ತಿದೆ. ಇದರಿಂದಾಗಿ ಈಚೀಚೆಗೆ ಮನೆಯ ಬಳಿಯೇ ಕೋಳಿ, ಹಂದಿ ಸಾಕುವ ಉಪಕಸುಬು ಮಾಡುತ್ತಾರೆ. ಅನೇಕ ಮಂದಿ ಕೃಷಿಕೂಲಿಗೂ ಹೋಗುತ್ತಾರೆ. ಭೈರ ಸಮುದಾಯದವರು ಮಣ್ಣು ಕೆಲಸ ಮಾಡುವಲ್ಲಿ ನಿಸ್ಸೀಮರು, ಮಣ್ಣು ಕೆಲಸ ಮಾಡುವ ಭೈರರನ್ನು ‘ಮಣ್ಣು ಭೈರ’ ಎಂದು ಕರೆಯುತ್ತಾರೆ. ಇವರು ಬಾವಿ ಅಗೆಯುವ, ಮಣ್ಣು ಸಾಗಿಸುವ, ಬಾವಿ ತಳ ಸೋಸುವ, ತೆಂಗಿನ ಬುಡ ತೆಗೆದು ಹೊಸ ಮಣ್ಣು ಹಾಕುವ ಕೆಲಸ ಮಾಡುತ್ತಾರೆ. ಇನ್ನೂ ಕೆಲವರು ಬಿದಿರಿನ ಕೆಲಸ ಕೂಡ ಮಾಡುತ್ತಾರೆ. ಬಿದಿರಿನ ಮಂಕರಿ, ಬುಟ್ಟಿ ಮುಂತಾದ ಪರಿಕರಗಳನ್ನು ಮಾಡುವುದನ್ನು ಕಲಿತಿದ್ದಾರೆ.
ಭೈರರನ್ನು ಭೈರ, ಭೈರವ ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಇದು ಇವರ ಜಾತಿ ಸೂಚಕವಾದ ಹೆಸರು. ಇವರ ಕುಲದೈವ ಭೈರವನ ಆರಾಧನಾ ಸಂಪ್ರದಾಯದ ಮೂಲಕ ಈ ಹೆಸರು ಬಂತೆಂದು ಭೈರರು ಹೇಳುತ್ತಾರೆ. ತಮ್ಮನ್ನು ತಾವು ಕಾಲಭೈರವನ ಒಕ್ಕಲು ಎಂದು ಹೇಳಿಕೊಳ್ಳುತ್ತಾರೆ. ಅಂತೆಯೇ ಭೈರವ ಹೆಸರಿನ ಭೂತವನ್ನೂ ಆರಾಧಿಸುತ್ತಾರೆ. ಇವರು ಭೈರವನ ಆರಾಧಕರಾದ್ದರಿಂದ ಭೈರರನ್ನು ಶೈವ ಸಂಪ್ರದಾಯದವರು ಎಂದು ಕರೆಯಬಹುದು. ಭೈರರು ಶಿವನ ತ್ರಿಶೂಲವನ್ನು ತಮ್ಮ ಹಾಡಿಯ ಆವರಣದಲ್ಲಿ ಸ್ಥಾಪಿಸಿಕೊಂಡು ಪೂಜೆ ಮಾಡುತ್ತಾರೆ. ‘ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ-ಗಿರಿಜನ ಇತಿಹಾಸ’ ಎಂಬ ಕೃತಿಯಲ್ಲಿ ಪಿ. ಕಮಲಾಕ್ಷ ಅವರು ‘‘ಈ ರೀತಿಯ ತ್ರಿಶೂಲ ಸಂಕೇತವನ್ನು ಗಡಿ ಕಾಯುವ ಭೈರವನೆಂದು ಹೇಳುವರು. ಈ ವರ್ಗದ ಜನರು ಶಿವನ, ಕಾಲಭೈರವನ ದೈವಿಕ ಶಕ್ತಿಯನ್ನು ನಂಬಿ ಪೂಜೆ ಪುರಸ್ಕಾರ ಕೊಟ್ಟು ಆರಾಧನೆ ಮಾಡಿಕೊಂಡು ಬಂದ ಕಾರಣದಿಂದ ಇವರನ್ನು ‘ಭೈರವರು’ ಎಂಬುದಾಗಿಯೂ, ಕಡೆಗೆ ಭೈರರು ಎಂಬುದಾಗಿಯೂ ಕರೆಯತೊಡಗಿದರು ಎಂಬ ಹಿರಿಯರ ಮಾತಿದೆ’’ ಎಂದು ದಾಖಲಿಸಿದ್ದಾರೆ. ಮತ್ತೆ ಕೆಲವರು ಇವರು ಭೈರರಸನ ಪಾಳೆಗಾರರಾದ್ದರಿಂದ ಹೀಗೆ ಕರೆಯುತ್ತಾರೆ ಎಂತಲೂ ಹೇಳುತ್ತಾರೆ.
ಸಿ.ಡಿ. ಮಕ್ಲೇನ್ ಸಂಪಾದಿತ ‘ಗ್ಲೋಸರಿ ಆಫ್ ದಿ ಮದ್ರಾಸ್ ಪ್ರೆಸಿಡೆನ್ಸಿ’ ಎಂಬ ನಿಘಂಟುವಿನಲ್ಲಿ ‘ಭೈರ’ ಎಂಬ ಪದ ಭೇರಿಯಿಂದ ಬಂದದ್ದು, ಭೇರಿ ಎಂಬುದು ಯುದ್ಧ ಕಾಲದಲ್ಲಿ ಮತ್ತು ದೇವಾಲಯಗಳಲ್ಲಿ ಭಾರಿಸುವ ಚರ್ಮವಾದ್ಯವಾದ್ದರಿಂದ ಸೈನಿಕ ಭೈರರಲ್ಲಿ ಭೇರಿ ಹೊಡೆಯುವ ಮತ್ತು ಭೈರವ, ಮಾರಿ ದೇವಾಲಯಗಳಲ್ಲಿ ಪೂಜಾ ಕಾಲದಲ್ಲಿ ಬಾರಿಸುವ ಸಂಪ್ರದಾಯ ಈಗಲೂ ಇದೆ. ತಾವು ರೂಢಿಯಲ್ಲಿಟ್ಟುಕೊಂಡಿರುವ ಬಿಟ್ಟೆ ವಾದ್ಯಮೇಳದಲ್ಲಿ ತಮಟೆ, ಡೋಲು, ದಮಡಿ, ಭೇರಿ, ದುಡಿ, ಕರಟೆ, ಸನಾದಿ, ವಾಲಗ ಮುಂತಾದ ವಾದ್ಯಗಳನ್ನು ಬಳಸುವರು. ಈ ಭೇರಿ ವಾದನವು ಅವರ ವೃತ್ತಿ ಮತ್ತು ಸಂಪ್ರದಾಯಗಳಿಗೆ ಪೂರಕವಾಗಿದೆ ಎನ್ನುತ್ತಾರೆ.
ಭೈರರು ಪ್ರಮುಖವಾಗಿ ಶಿವ ಮತ್ತು ಅವನ ಬೇರೆಬೇರೆ ರೂಪಗಳಾದ ಭೈರವ, ವೀರಭದ್ರರೊಂದಿಗೆ ಶಕ್ತಿ ದೇವತೆಗಳಾದ ಮಾರಿ, ಚೌಡಿ, ಚಾಮುಂಡಿ ಮುಂತಾದ ಅವೈದಿಕ ದೈವಗಳನ್ನು ಪೂಜಿಸುತ್ತಾರೆ. ಭೈರರಲ್ಲಿ ಹಿಂದೆ ‘ಬೂದುಗ ಭೈರ’ ಎಂಬ ಒಂದು ವರ್ಗವು ಇದ್ದು ಇವರು ಕಾಳಾಮುಖಿ ಶೈವರನ್ನು ಹೋಲುವವರಾಗಿದ್ದರು. ಈ ಬೂದಿಗ ಭೈರರು ಭೈರವನ ಆರಾಧನೆಯಲ್ಲಿ ಬಲಿ ಕೊಡುವ ಸೇವೆಯನ್ನು ನಡೆಸುತ್ತಿದ್ದರು. ಮೈತುಂಬಾ ಭಸ್ಮವನ್ನು ಲೇಪಿಸಿಕೊಳ್ಳುವ ಆಚರಣೆ ಇದಾಗಿತ್ತು, ಈಗಲೂ ಭೈರರಲ್ಲಿ ಪ್ರಾಣಿ ಬಲಿಗಳು ಸಾಮಾನ್ಯವಾಗಿ ಆಚರಣೆಯಲ್ಲಿವೆ. ಮೂಲಭೂತವಾಗಿ ಶೈವರಾಗಿದ್ದ ಭೈರರು ಕಾಳಾಮುಖ ಪಂಥದ ಅನೇಕ ಆಚರಣೆಗಳನ್ನು ರೂಢಿಯಲ್ಲಿಟ್ಟುಕೊಂಡಿದ್ದಾರೆ ಎನ್ನುತ್ತಾರೆ.
ಭೈರ ಸಮುದಾಯ ಕರ್ನಾಟಕದಲ್ಲಿ ಎಸ್.ಸಿ. ಪಟ್ಟಿಯಲ್ಲಿದ್ದು ತನ್ನ ಪ್ರತ್ಯೇಕ ಅಸ್ಮಿತೆಗಾಗಿ ಅನೇಕ ವರ್ಷಗಳಿಂದಲೂ ಹೋರಾಡುತ್ತಿದೆ. ಅತ್ಯಂತ ಕಡಿಮೆ ಜನಸಂಖ್ಯೆಯ ಈ ಸಮುದಾಯವನ್ನು ಸರಕಾರಗಳಾಗಲಿ ಇತರ ಸಂಘಟನೆಗಳಾಗಲಿ ಗಂಭೀರವಾಗಿ ಪರಿಗಣಿಸಿಲ್ಲ. ಈಚೀಚೆಗಷ್ಟೇ ಈ ಸಮುದಾಯದ ಮಕ್ಕಳಿಗೆ ಅಕ್ಷರ ತಲುಪುತ್ತಿದೆ. ಯುವಕರು ಹೊಸ ಉದ್ಯೋಗಗಳತ್ತ ಆಕರ್ಷಿಸುತ್ತಿದ್ದಾರೆ. ಸಾಮಾಜಿಕವಾಗಿ ಅಸ್ಪಶ್ಯತೆಯನ್ನು ಹೋಗಲಾಡಿಸಿಕೊಂಡು ಈ ಸಮಾಜ ನಿಧಾನಕ್ಕೆ ಮುಖ್ಯವಾಹಿನಿಗೆ ಬರಲು ಹೆಣಗುತ್ತಿದೆ. ಆದರೆ ಸರಕಾರದ ಯಾವುದೇ ಸವಲತ್ತುಗಳು ಈ ಸಮಾಜಕ್ಕೆ ತಲುಪುತ್ತಿಲ್ಲ. ಎಸ್. ಸಿ. ಪಟ್ಟಿಯಲ್ಲಿರುವ ಬಲಿಷ್ಠ ಜಾತಿಗಳ ನಡುವೆ ಸ್ಪರ್ಧಿಸಲಾರದೆ ಈ ಸಮುದಾಯ ಸೊರಗುತ್ತಿದೆ. ಭೈರ ಸಮುದಾಯಕ್ಕೆ ನಿಜಕ್ಕೂ ಸರಕಾರ ಆರ್ಥಿಕ ಸೌಲಭ್ಯಗಳನ್ನು ಒದಗಿಸಬೇಕಿದೆ.
(ಅಂಕಣಕಾರರು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಹಿರಿಯ ವಕೀಲರು, ಚಿಂತಕರು)