ಲಂಬಾಣಿ ಕಸೂತಿ ಕಲೆಗೆ ರಾಜ್ಯಮಟ್ಟದ ಗೌರವ : ಕೌಶಲ್ಯ ಕರ್ನಾಟಕ ಪ್ರಶಸ್ತಿಗೆ ಸಂಡೂರಿನ ಸೋನಿಯಾ ಗಾಂಧಿ ಸ್ವಸಹಾಯ ಗುಂಪು ಆಯ್ಕೆ
►ಮಹಿಳೆಯರ ಕೌಶಲ್ಯಕ್ಕೆ ಸಂದ ಮನ್ನಣೆ ►ಕಸೂತಿ ಕಲೆಯ ಮೂಲಕ ಉದ್ಯೋಗ ಸೃಷ್ಟಿ, ಆರ್ಥಿಕ ಸ್ವಾವಲಂಬನೆಗೆ ಹೊಸ ಮುನ್ನುಡಿ
ಸಂಡೂರು/ಬಳ್ಳಾರಿ: ಗ್ರಾಮೀಣ ಮಹಿಳೆಯರ ಪರಿಶ್ರಮ, ಸಂಘಟನಾ ಶಕ್ತಿ ಹಾಗೂ ಸಾಂಪ್ರದಾಯಿಕ ಕಲೆಯ ಮೇಲಿನ ಅಭಿಮಾನಕ್ಕೆ ಇದೀಗ ರಾಜ್ಯಮಟ್ಟದ ಮನ್ನಣೆ ದೊರೆತಿದೆ.
ಲಂಬಾಣಿ ಕಸೂತಿ ಕಲೆಯನ್ನು ಜೀವನೋಪಾಯದ ಸಾಧನವನ್ನಾಗಿಸಿಕೊಂಡು, ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಂಡೂರು ತಾಲೂಕಿನ ಸುಶೀಲಾನಗರ ಗ್ರಾಮದ ಸೋನಿಯಾ ಗಾಂಧಿ ಸ್ವಸಹಾಯ ಗುಂಪು 2026-27ನೇ ಸಾಲಿನ ಪ್ರತಿಷ್ಠಿತ ‘ಕೌಶಲ್ಯ ಕರ್ನಾಟಕ ಪ್ರಶಸ್ತಿ’ಗೆ ಆಯ್ಕೆಯಾಗಿದೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM) ಅಡಿಯಲ್ಲಿ ಬಳ್ಳಾರಿ ಜಿಲ್ಲೆಯಿಂದ ಕೃಷಿಯೇತರ ಜೀವನೋಪಾಯ ವಿಭಾಗದಲ್ಲಿ ಈ ಗುಂಪು ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂಡೂರು ತಾಲೂಕಿನ ಹೆಮ್ಮೆಗೆ ಮತ್ತೊಂದು ಗರಿ ಮೂಡಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ವಸಹಾಯ ಗುಂಪುಗಳ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ನ.೫ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕೌಶಲ್ಯ ಸಮಿಟ್ ಕಾರ್ಯಕ್ರಮದ ಅಂಗವಾಗಿ ಪ್ರಶಸ್ತಿ ಪ್ರದಾನಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲೆಯಿಂದ ಕೃಷಿ ಹಾಗೂ ಕೃಷಿಯೇತರ ಜೀವನೋಪಾಯ ವಿಭಾಗಗಳಲ್ಲಿ ತಲಾ ಒಂದು ಅತ್ಯುತ್ತಮ ಸ್ವಸಹಾಯ ಗುಂಪನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಸೋನಿಯಾ ಗಾಂಧಿ ಸ್ವಸಹಾಯ ಗುಂಪು ಕೃಷಿಯೇತರ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಸಾಂಪ್ರದಾಯಿಕ ಕಲೆಗೆ ಆಧುನಿಕ ಸ್ಪರ್ಶ: ಮಾರುಕಟ್ಟೆಯಲ್ಲಿ ಲಂಬಾಣಿ ಉತ್ಪನ್ನಗಳ ಮೆರುಗು
ಲಂಬಾಣಿ ಸಮುದಾಯದ ಸಾಂಪ್ರದಾಯಿಕ ಕಸೂತಿ ಕಲೆಗೆ ತನ್ನದೇ ಆದ ಸಾಂಸ್ಕೃತಿಕ ಮಹತ್ವ ಮತ್ತು ವೈಶಿಷ್ಟ್ಯವಿದೆ. ಈ ಕಲೆಯನ್ನು ಇಂದಿನ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ರೂಪಿಸಿ, ವಿವಿಧ ವಿನ್ಯಾಸಗಳ ಉತ್ಪನ್ನಗಳನ್ನು ತಯಾರಿಸುವ ಮೂಲಕ ಸೋನಿಯಾ ಗಾಂಧಿ ಸ್ವಸಹಾಯ ಗುಂಪಿನ ಮಹಿಳೆಯರು ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ.
ಜಿಲ್ಲೆ, ರಾಜ್ಯ ಹಾಗೂ ಅಂತರ್‌ರಾರಾಜ್ಯ ಮಟ್ಟಗಳಲ್ಲಿ ನಡೆಯುವ ಸರಸ್ ಮೇಳಗಳಲ್ಲಿ ಭಾಗವಹಿಸಿ, ತಮ್ಮ ಕೈಯಿಂದ ತಯಾರಿಸಿದ ಉತ್ತಮ ಗುಣಮಟ್ಟದ ಲಂಬಾಣಿ ಕಸೂತಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಗುಂಪಿಗೆ ವ್ಯಾಪಾರ ವಹಿವಾಟಿನ ಅವಕಾಶಗಳು ವಿಸ್ತರಿಸುವುದರ ಜೊತೆಗೆ ಸ್ಥಳೀಯ ಕಲೆಗೆ ವ್ಯಾಪಕ ಪ್ರಚಾರ ದೊರೆಯುತ್ತಿದೆ. ವಿಶೇಷವೆಂದರೆ, ತಮ್ಮ ಗುಂಪಿನ ಸದಸ್ಯೆಯರಿಗೆ ಮಾತ್ರವಲ್ಲದೆ ಇತರ ಸ್ವಸಹಾಯ ಗುಂಪುಗಳ ಮಹಿಳೆಯರಿಗೂ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಸಾಮೂಹಿಕ ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ.
ಭಾಗ್ಯಬಾಯಿ ಅವರ ಸಂಘಟನಾ ಶಕ್ತಿ : ಗ್ರಾಮದಲ್ಲಿ ಕಸೂತಿ ಕೇಂದ್ರ ಸ್ಥಾಪನೆಯ ಕನಸು
ಈ ಸಾಧನೆಯ ಹಿಂದೆ ಸ್ವಸಹಾಯ ಗುಂಪಿನ ಸದಸ್ಯೆ ಭಾಗ್ಯಬಾಯಿ ಅವರ ನಿರಂತರ ಪರಿಶ್ರಮ ಮತ್ತು ಸಂಘಟನಾ ಸಾಮರ್ಥ್ಯ ಪ್ರಮುಖವಾಗಿದೆ. ಮಹಿಳೆಯರನ್ನು ಒಗ್ಗೂಡಿಸಿ ಅವರಲ್ಲಿರುವ ಸಾಂಪ್ರದಾಯಿಕ ಕೌಶಲ್ಯಕ್ಕೆ ಉದ್ಯೋಗದ ರೂಪ ನೀಡುವಲ್ಲಿ ಅವರು ವಿಶೇಷ ಆಸಕ್ತಿ ವಹಿಸಿದ್ದಾರೆ. ಕೇವಲ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟಕ್ಕೆ ಸೀಮಿತವಾಗದೆ, ಗ್ರಾಮದ ಇನ್ನಷ್ಟು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಆಶಯ ಅವರದ್ದಾಗಿದೆ.
ಈ ನಿಟ್ಟಿನಲ್ಲಿ ಸುಶೀಲಾನಗರದಲ್ಲಿಯೇ ಪ್ರತ್ಯೇಕ ಲಂಬಾಣಿ ಕಸೂತಿ ಕೇಂದ್ರ ಸ್ಥಾಪಿಸಿ, ಮಹಿಳೆಯರಿಗೆ ನಿರಂತರ ಉದ್ಯೋಗ ಹಾಗೂ ಆದಾಯದ ಮೂಲ ಕಲ್ಪಿಸುವ ಗುರಿಯನ್ನು ಅವರು ಹೊಂದಿದ್ದಾರೆ. ಕುಟುಂಬದ ಸದಸ್ಯರು, ಕಿತ್ತೂರು ರಾಣಿ ಚೆನ್ನಮ್ಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಪದಾಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಹಕಾರ ಈ ಸಾಧನೆಗೆ ಬೆನ್ನೆಲುಬಾಗಿದೆ ಎಂದು ಭಾಗ್ಯಬಾಯಿ ತಿಳಿಸಿದ್ದಾರೆ.