ಸರಕಾರಿ ಶಾಲೆಗಳ ಬಲವರ್ಧನೆ ರಾಷ್ಟ್ರೀಯ ಆಂದೋಲನವಾಗಬೇಕು

Update: 2026-08-22 11:53 IST

ದೇಶದಲ್ಲಿ ದೀಪ್ಕೆ ಮತ್ತು ಸಹಚರರು ಆರಂಭಿಸಿರುವ ಅಭಿಯಾನವು ಸರಕಾರಿ ಶಾಲೆಗಳ ಮೇಲಿನ ಅನುಕಂಪದ ಚಳವಳಿಯಾಗದೆ, ಸಂವಿಧಾನ ಮತ್ತು ಅಂತರ್‌ರಾಷ್ಟ್ರೀಯ ಕಾನೂನಿನನ್ವಯ ಪ್ರತಿಯೊಂದು ಮಗುವಿನ ಸಮಾನ ಶಿಕ್ಷಣದ ಮೂಲಭೂತ ಹಕ್ಕನ್ನಾಗಿಸುವ ಚಳವಳಿಯಾಗಬೇಕು. ಈ ಹಕ್ಕಿನ ಸಾಕಾರಕ್ಕಾಗಿ ಸಾರ್ವಜನಿಕ ಸಂಪನ್ಮೂಲ ಹೂಡಿಕೆ, ಪ್ರಜಾಸತ್ತಾತ್ಮಕ ಉತ್ತರದಾಯಿತ್ವ ಮತ್ತು ಸಂವಿಧಾನಾತ್ಮಕ ನ್ಯಾಯವನ್ನು ಮರಳಿ ಪಡೆಯುವ ರಾಷ್ಟ್ರೀಯ ಜನಾಂದೋಲನವಾಗಬೇಕು.

ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಕೇಂದ್ರೀಕರಣ ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ನಡೆಸಿದ ಹೋರಾಟವು ಈಗ ಸರಕಾರಿ ಶಾಲೆಗಳ ಬಲವರ್ಧನೆಯ ರಾಷ್ಟ್ರೀಯ ಅಭಿಯಾನವಾಗಿ ರೂಪಾಂತರಗೊಂಡಿರುವುದು ಅತ್ಯಂತ ಮಹತ್ವದ ಬೆಳವಣಿಗೆ.

ಸರಕಾರಿ ಶಾಲೆಗಳ ನೈಜ ಸ್ಥಿತಿಗೂ ಅಧಿಕೃತ ವರದಿಗಳ ಬಾಟಾ ಮಾದರಿಯ ಅಂಕಿ-ಅಂಶಗಳಿಗೂ ದೊಡ್ಡ ಅಂತರವಿದೆ. ಯುಡೈಸ್ 2024-25ರ ವರದಿ ಪ್ರಕಾರ ಸರಕಾರಿ ಶಾಲೆಗಳಲ್ಲಿ ಶೇ.99.4 ಕುಡಿಯುವ ನೀರು, ಶೇ.97.1 ಬಾಲಕಿಯರ ಶೌಚಾಲಯ, ಶೇ.95.5 ಬಾಲಕರ ಶೌಚಾಲಯ, ಶೇ.94.5 ವಿದ್ಯುತ್, ಶೇ.93.4 ಗ್ರಂಥಾಲಯ ಅಥವಾ ಓದುವ ಮೂಲೆ ಮತ್ತು ಶೇ.87.7 ವಿಶೇಷ ಅಗತ್ಯವಿರುವ ಮಕ್ಕಳಿಗೆ ರ್ಯಾಂಪ್‌ಗಳು ‘ಲಭ್ಯ’ ಇವೆ. ಈ ಅಂಕಿಗಳನ್ನು 2025ರ ಡಿಸೆಂಬರ್‌17ರಂದು ರಾಜ್ಯಸಭೆಯಲ್ಲಿ ಶಿಕ್ಷಣ ಸಚಿವರು ಮಂಡಿಸಿದ್ದಾರೆ. ಪ್ರಶ್ನೆಯು ಸೌಲಭ್ಯವಿದೆಯೇ ಎಂಬುದಷ್ಟೇ ಅಲ್ಲ; ಅದು ಕಾರ್ಯನಿರ್ವಹಣೆಯ ಸ್ಥಿತಿಯಲ್ಲಿದೆಯೇ, ಅಗತ್ಯಕ್ಕೆ ಸಾಕಷ್ಟಿದೆಯೇ, ಸುರಕ್ಷಿತವಾಗಿದೆಯೇ ಮತ್ತು ಮಕ್ಕಳು ನಿಜವಾಗಿ ಬಳಸಬಹುದೇ ಎಂಬುದಾಗಿದೆ.

ಯುಡೈಸ್‌ನ ಅಖಿಲ ಭಾರತ ಅಂಕಿಅಂಶಗಳೂ ಕೆಲವೊಂದು ವಿರೋಧಾಭಾಸವನ್ನು ಬಯಲಿಗೆಳೆಯುತ್ತವೆ. 2024-25ರಲ್ಲಿ ಎಲ್ಲಾ ವಿಧದ ಶಾಲೆಗಳನ್ನು ಒಟ್ಟಿಗೆ ಪರಿಗಣಿಸಿದಾಗ, ಶೇ.93.6 ಶಾಲೆಗಳಲ್ಲಿ ವಿದ್ಯುತ್, ಶೇ.99.3 ಕುಡಿಯುವ ನೀರು ಮತ್ತು ಶೇ.97.3 ಬಾಲಕಿಯರ ಶೌಚಾಲಯಗಳಿವೆ ಎಂದು ವರದಿ ಹೇಳುತ್ತದೆ. ಉಳಿದಂತೆ, ಕೇವಲ ಶೇ.64.7 ಶಾಲೆಗಳಲ್ಲಿ ಕಂಪ್ಯೂಟರ್, ಶೇ.63.5ರಲ್ಲಿ ಅಂತರ್ಜಾಲ, ಶೇ.83ರಲ್ಲಿ ಆಟದ ಮೈದಾನ ಮತ್ತು ಶೇ.54.9ರಲ್ಲಿ ಮಾತ್ರ ರ್ಯಾಂಪ್‌ನೊಂದಿಗೆ ಕೈಹಿಡಿಕೆಗಳಿವೆ ಎನ್ನುತ್ತದೆ. ಅಂದರೆ ಕಂಪ್ಯೂಟರ್‌ಇಲ್ಲದ ಶಾಲೆಗಳು ಶೇ.35.3, ಅಂತರ್ಜಾಲವಿಲ್ಲದವು ಶೇ.36.5, ಆಟದ ಮೈದಾನವಿಲ್ಲದವು ಶೇ.17 ಮತ್ತು ಅಂಗವಿಕಲ ಮಕ್ಕಳಿಗೆ ಸಮರ್ಪಕ ರ್ಯಾಂಪ್-ಕೈಹಿಡಿಕೆ ಇಲ್ಲದವು ಶೇ.45.1. ಡಿಜಿಟಲ್ ಶಿಕ್ಷಣ, ಕೃತಕ ಬುದ್ಧಿಮತ್ತೆ ಮತ್ತು ಸ್ಮಾರ್ಟ್ ತರಗತಿಗಳ ಘೋಷಣೆಗಳ ನಡುವೆ ದೇಶದ ಮೂರನೇ ಒಂದರಷ್ಟು ಶಾಲೆಗಳಲ್ಲಿ ಕಂಪ್ಯೂಟರ್ ಅಥವಾ ಅಂತರ್ಜಾಲವೇ ಇಲ್ಲವೆಂಬುದು ಕಟು ಸತ್ಯ. ಇದು ಎಲ್ಲಾ ಶಾಲೆಗಳ ಸರಾಸರಿ. ಸರಕಾರಿ, ಅನುದಾನಿತ, ಖಾಸಗಿ ಅನುದಾನರಹಿತ, ನಗರ ಮತ್ತು ಗ್ರಾಮೀಣ ಶಾಲೆಗಳನ್ನು ಬಿಡಿ ಬಿಡಿಯಾಗಿ ನೋಡಿದರೆ ಅಸಮಾನತೆ ಹಾಗೂ ತಾರತಮ್ಯದ ತೀವ್ರತೆ ಮತ್ತಷ್ಟು ಅನಾವರಣಗೊಳ್ಳುತ್ತದೆ (ಯುಡೈಸ್+ 2024-25).

ಸರಕಾರಿ ಶಾಲೆಯ ದಯನೀಯ ಸ್ಥಿತಿಯನ್ನು ತಿಳಿಸುವ ನಿರ್ಣಾಯಕ ಅಂಶ ಮಕ್ಕಳ ದಾಖಲಾತಿಯ ಕುಸಿತ. ರಾಜ್ಯಸಭೆಗೆ ನೀಡಿದ ಉತ್ತರದ ಪ್ರಕಾರ ಸರಕಾರಿ ಶಾಲೆಗಳಲ್ಲಿನ ದಾಖಲಾತಿ 2022-23ರ 13,62,04,917ರಿಂದ 2023-24ರಲ್ಲಿ 12,74,90,199ಕ್ಕೆ ಮತ್ತು 2024-25ರಲ್ಲಿ 12,15,89,911ಕ್ಕೆ ಇಳಿದಿದೆ. ಕೇವಲ ಎರಡು ವರ್ಷಗಳಲ್ಲಿ 1,46,15,006 ಮಕ್ಕಳು ಅಂದರೆ, ಸುಮಾರು ಶೇ.10.7 ಸರಕಾರಿ ಶಾಲಾ ದಾಖಲಾತಿಯಲ್ಲಿ ಕಡಿಮೆಯಾಗಿದ್ದಾರೆ. ದಾಖಲಾತಿಯ ಈ ಕುಸಿತ ಸಾರ್ವಜನಿಕ ವ್ಯವಸ್ಥೆಯ ಮೇಲಿನ ಜನಸಾಮಾನ್ಯರ ವಿಶ್ವಾಸ ಕ್ಷೀಣಿಸುತ್ತಿರುವ ಗಂಭೀರ ಎಚ್ಚರಿಕೆಯಾಗಿದೆ (ಲೋಕಸಭೆ ಪ್ರಶ್ನೆ, 2025).

‘‘ಮಕ್ಕಳು ದಾಖಲಾತಿ ಕಡಿಮೆಯಾದ್ದರಿಂದ ಸರಕಾರಿ ಶಾಲೆಗಳು ದುರ್ಬಲವಾದವು’’ ಎಂಬ ವಿವರಣೆ ಅರ್ಧಸತ್ಯ. ಅನೇಕ ಸಂದರ್ಭಗಳಲ್ಲಿ ಶಾಲೆಯನ್ನು ಮೊದಲು ದುರ್ಬಲ ಗೊಳಿಸಲಾಗುತ್ತದೆ. ಖಾಲಿ ಶಿಕ್ಷಕರ ಹುದ್ದೆಗಳನ್ನು ಸಕಾಲದಲ್ಲಿ ತುಂಬುವುದಿಲ್ಲ; ವಿಷಯವಾರು ಶಿಕ್ಷಕರನ್ನು ಒದಗಿಸುವುದಿಲ್ಲ; ಮೂಲ ಸೌಕರ್ಯಗಳಾದ, ಕಟ್ಟಡ, ತರಗತಿ ಕೋಣೆ, ಶೌಚಾಲಯ, ವಿದ್ಯುಚ್ಛಕ್ತಿ ಸಂಪರ್ಕ; ಕುಡಿಯುವ ನೀರಿನ ವ್ಯವಸ್ಥೆ ಶೋಚನೀಯ ಸ್ಥಿತಿಯಲ್ಲಿರುತ್ತವೆ; ಪೂರ್ವಪ್ರಾಥಮಿಕ ವಿಭಾಗವಿರುವುದಿಲ್ಲ, ಆಂಗ್ಲ ಭಾಷಾ ಕಲಿಕೆಗೆ ಅಗತ್ಯ ವ್ಯವಸ್ಥೆ ಇತ್ಯಾದಿಗಳು ಇರುವುದಿಲ್ಲ. ಇದರಿಂದ, ಪೋಷಕರು ಅನಿವಾರ್ಯವಾಗಿ ಸರಕಾರಿ ಶಾಲೆಗಳಿಂದ ದೂರ ಹೋಗುತ್ತಾರೆ. ಅಂತಿಮವಾಗಿ ದಾಖಲಾತಿ ಕಡಿಮೆಯಾಗಿದೆ ಎಂಬ ಕಾರಣ ನೀಡಿ ಶಾಲೆಯನ್ನು ವಿಲೀನ ಅಥವಾ ಮುಚ್ಚುವ ಪ್ರಸ್ತಾವ ಬರುತ್ತದೆ. ಹೀಗಾಗಿ, ಕಡಿಮೆ ದಾಖಲಾತಿ ಕೇವಲ ಸಂಕಷ್ಟದ ಕಾರಣವಲ್ಲ; ದೀರ್ಘಕಾಲದ ಸಾರ್ವಜನಿಕ ನಿರ್ಲಕ್ಷ್ಯದ ಪರಿಣಾಮವೂ ಹೌದು.

2026ರ ಮಾರ್ಚ್ 18ರಂದು ರಾಜ್ಯಸಭೆಗೆ ನೀಡಿದ ಉತ್ತರವು 2024-25ರಲ್ಲಿ 7,993 ಶೂನ್ಯ ದಾಖಲಾತಿ ಶಾಲೆಗಳಿದ್ದುದನ್ನು ಒಪ್ಪಿಕೊಂಡಿದೆ. ಆದರೆ ಕಳೆದ ಐದು ವರ್ಷಗಳಲ್ಲಿ ಕಡಿಮೆ ಅಥವಾ ಶೂನ್ಯ ದಾಖಲಾತಿಯಿಂದ ಎಷ್ಟು ಶಾಲೆಗಳನ್ನು ಮುಚ್ಚಲಾಯಿತು ಅಥವಾ ವಿಲೀನಗೊಳಿಸಲಾಯಿತು ಎಂಬ ನೇರ ಪ್ರಶ್ನೆಗೆ ಉತ್ತರ ನೀಡದೆ, ಅದು ರಾಜ್ಯಗಳ ಆಡಳಿತ ವ್ಯಾಪ್ತಿಯ ವಿಷಯವೆಂದು ಹೇಳಿದೆ. ಅದೇ ಉತ್ತರದಲ್ಲಿ ಆರ್‌ಟಿಇ ಕಾಯ್ದೆಯ ಸೆಕ್ಷನ್‌6 ಮತ್ತು 8ರಡಿ ನೆರೆಹೊರೆಯ ಶಾಲೆಯನ್ನು ಒದಗಿಸುವುದು ಸರಕಾರದ ಕರ್ತವ್ಯವೆಂದೂ ಒಪ್ಪಿಕೊಳ್ಳಲಾಗಿದೆ. (ರಾಜ್ಯಸಭೆ ಪ್ರಶ್ನೆ, 2026)

ಶಿಕ್ಷಕರ ಕುರಿತ ರಾಷ್ಟ್ರೀಯ ಅಂಕಿ ಅಂಶಗಳು ಇನ್ನೊಂದು ಆತಂಕಕಾರಿ ಅಂಶವನ್ನು ತಿಳಿಸುತ್ತದೆ. ಯುಡೈಸ್+ 2024-25 ಪ್ರಕಾರ ದೇಶದಲ್ಲಿ ಒಟ್ಟು ಶಿಕ್ಷಕರ ಸಂಖ್ಯೆ ಮೊದಲ ಬಾರಿಗೆ ಒಂದು ಕೋಟಿ ದಾಟಿದ್ದು, ಬುನಾದಿ, ಪೂರ್ವಸಿದ್ಧತಾ, ಮಧ್ಯಮ ಮತ್ತು ಪ್ರೌಢ ಹಂತಗಳ ಸರಾಸರಿ ವಿದ್ಯಾರ್ಥಿ-ಶಿಕ್ಷಕ ಅನುಪಾತ ಕ್ರಮವಾಗಿ 10:1, 13:1, 17:1 ಮತ್ತು 21:1 ಆಗಿದೆ. ಆದರೆ, ರಾಜ್ಯ ಅಥವಾ ದೇಶದ ಸರಾಸರಿ ಒಂದು ನಿರ್ದಿಷ್ಟ ಗ್ರಾಮದ ಶಾಲೆಗೆ ಶಿಕ್ಷಕರನ್ನು ಒದಗಿಸುವುದಿಲ್ಲ. ಒಂದು ನಗರ ಶಾಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಶಿಕ್ಷಕರಿದ್ದು, ಇನ್ನೊಂದು ಆದಿವಾಸಿ ಅಥವಾ ಗ್ರಾಮೀಣ ಶಾಲೆಯಲ್ಲಿ ಒಬ್ಬನೇ ಶಿಕ್ಷಕರಿದ್ದರೆ ರಾಷ್ಟ್ರೀಯ ಸರಾಸರಿ ಉತ್ತಮವಾಗಿದೆ ಎಂದು ಹೇಳುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಆರ್‌ಟಿಇ ಕಾಯ್ದೆಯ ಆಶಯದಂತೆ ಅನುಪಾತವನ್ನು ಶಾಲಾ ಹಂತದಲ್ಲಿಯೇ ಕಾಪಾಡಬೇಕೇ ಹೊರತು ರಾಜ್ಯ ಅಥವಾ ರಾಷ್ಟ್ರ ಮಟ್ಟದ ಸರಾಸರಿಯಿಂದಲ್ಲ. 2024-25ರಲ್ಲಿ ದೇಶದಲ್ಲಿ 1,04,125 ಏಕೋಪಾಧ್ಯಾಯ ಶಾಲೆಗಳಿದ್ದು, ಸುಮಾರು 33.77 ಲಕ್ಷ ಮಕ್ಕಳು ಅವುಗಳಲ್ಲಿ ಕಲಿಯುತ್ತಿದ್ದರು. ಒಂದರಿಂದ ಐದು ಅಥವಾ ಎಂಟನೇ ತರಗತಿಯವರೆಗಿನ ಎಲ್ಲ ಮಕ್ಕಳಿಗೆ ಎಲ್ಲ ವಿಷಯಗಳನ್ನು ಕಲಿಸುವುದರ ಜೊತೆಗೆ ಮಧ್ಯಾಹ್ನದ ಊಟ, ದಾಖಲೆ, ವಿದ್ಯಾರ್ಥಿವೇತನ, ಸಮೀಕ್ಷೆ, ಆನ್‌ಲೈನ್ ವರದಿ, ಚುನಾವಣಾ ಕಾರ್ಯ ಮತ್ತು ಶಾಲಾ ಆಡಳಿತವನ್ನು ಒಬ್ಬನೇ ಶಿಕ್ಷಕ ನಿರ್ವಹಿಸಬೇಕಾದರೆ ಅದು ಹೇಗೆ ಶಾಲೆಯಾಗುತ್ತದೆ ಮತ್ತು ಕಲಿಕೆ ಸಾಧ್ಯವೇ! ಒಬ್ಬ ಶಿಕ್ಷಕನ ಮೇಲೆ ಹೊರಿಸಲಾದ ಈ ಅಸಾಧ್ಯ ಕಲಿಕೇತರ ಕಾರ್ಯ ಅವನನ್ನು ಕಲಿಕೆಯಿಂದ ಪೂರ್ಣವಾಗಿ ವಿಮುಖಗೊಳಿಸುತ್ತದೆ. ಈ ಒಬ್ಬ ಶಿಕ್ಷಕ ರಜೆ, ತರಬೇತಿ ಅಥವಾ ಚುನಾವಣಾ ಕರ್ತವ್ಯಕ್ಕೆ ಹೋದ ದಿನ ಮಕ್ಕಳ ಅನುಭವದಲ್ಲಿ ಅದು ಶೂನ್ಯ-ಶಿಕ್ಷಕ ಶಾಲೆಯಾಗುತ್ತದೆ.

2025-26ರ ದತ್ತಾಂಶದ ಆಧಾರದಲ್ಲಿ 2026ರ ಜುಲೈ 20ರಂದು ಲೋಕಸಭೆಯಲ್ಲಿ ಶಿಕ್ಷಕರ ಖಾಲಿ ಹುದ್ದೆಗಳ ಕುರಿತು ನೇರವಾಗಿ ಪ್ರಶ್ನಿಸಲಾಯಿತು. ಆದರೆ ಕೇಂದ್ರ ಸರಕಾರವು ರಾಜ್ಯವಾರು ಮಂಜೂರಾದ ಹುದ್ದೆ, ಖಾಲಿ ಹುದ್ದೆ ಮತ್ತು ನೇಮಕಾತಿಯ ವಿವರಗಳನ್ನು ನೀಡಲಿಲ್ಲ; ಅವು ರಾಜ್ಯ ಸರಕಾರಗಳ ಬಳಿ ಇವೆ ಎಂದು ಹೇಳಿ, ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆಯನ್ನು ಮಾತ್ರ ಮಂಡಿಸಿತು. ಅದೇ ಉತ್ತರದಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಹಂತಗಳ ರಾಷ್ಟ್ರೀಯ ಅನುಪಾತ ಕ್ರಮವಾಗಿ 19,17,15 ಮತ್ತು 23 ಎಂದು ಹೇಳಲಾಗಿದೆ. ಖಾಲಿ ಹುದ್ದೆಗಳ ಪ್ರಶ್ನೆಗೆ ಸರಾಸರಿ ಅನುಪಾತದ ಉತ್ತರ ನೀಡುವುದು ಸಮಸ್ಯೆಯ ಸ್ವರೂಪವನ್ನೇ ಮರೆಮಾಡುತ್ತದೆ. ಶಿಕ್ಷಕರ ಕೊರತೆಯು ಸಂಖ್ಯೆಯ ಕೊರತೆಯಷ್ಟೇ ಅಲ್ಲ; ಅದು ಶಾಲಾವಾರು, ತರಗತಿವಾರು, ವಿಷಯವಾರು ಮತ್ತು ಪ್ರದೇಶವಾರು ಅಸಮಾನ ಹಂಚಿಕೆಯ ಸಮಸ್ಯೆ (ಲೋಕಸಭೆ ಪ್ರಶ್ನೆ, 2026).

ಸರಕಾರಿ ಶಾಲೆಯಿಂದ ಮಕ್ಕಳು ಹೊರಹೋಗುತ್ತಿರುವಾಗ ಖಾಸಗಿ ಶಿಕ್ಷಣದ ಅವಲಂಬನೆ ಸಹಜವಾಗಿ ಹೆಚ್ಚುತ್ತದೆ. ಇದನ್ನು ಸಂಪೂರ್ಣವಾಗಿ ‘‘ಪೋಷಕರ ಸ್ವತಂತ್ರ ಆಯ್ಕೆ’’ ಎಂದು ಬಿಂಬಿಸುವುದು ತಪ್ಪು. ಸರಕಾರಿ ಶಾಲೆಯಲ್ಲಿ ಶಿಕ್ಷಕ, ಪೂರ್ವಪ್ರಾಥಮಿಕ ವಿಭಾಗ, ಇಂಗ್ಲಿಷ್ ಕಲಿಕೆ, ವಿಜ್ಞಾನ ಪ್ರಯೋಗಾಲಯ ಅಥವಾ ಸುರಕ್ಷಿತ ಕಟ್ಟಡ ಇಲ್ಲದಿದ್ದರೆ ಖಾಸಗಿ ಶಾಲೆಗೆ ಹೋಗುವುದು ಆಯ್ಕೆಯಲ್ಲ. ಬದಲಿಗೆ, ಸಾರ್ವಜನಿಕ ವ್ಯವಸ್ಥೆಯ ವೈಫಲ್ಯದಿಂದ ಉಂಟಾದ ಬಲವಂತದ ಮಾರುಕಟ್ಟೆ ಅವಲಂಬನೆ. ಈ ಕುಟುಂಬಗಳಲ್ಲಿ ಅನೇಕರು ಮಕ್ಕಳ ಶುಲ್ಕ, ಪುಸ್ತಕ, ಸಮವಸ್ತ್ರ, ಸಾರಿಗೆ ಮತ್ತು ಕೋಚಿಂಗ್ ವೆಚ್ಚಕ್ಕಾಗಿ ಕುಟುಂಬದ ಆದಾಯದ ಹೆಚ್ಚಿನ ಪ್ರಮಾಣವನ್ನು ಖರ್ಚು ಮಾಡುತ್ತಾರೆ. ಹೀಗೆ ಸಂವಿಧಾನಾತ್ಮಕ ಹಕ್ಕಾಗಬೇಕಾದ ಶಿಕ್ಷಣವು ಕುಟುಂಬಗಳು ಮಾರುಕಟ್ಟೆಯಿಂದ ಖರೀದಿಸಬೇಕಾದ ಸರಕಾಗಿ ಪರಿವರ್ತನೆಯಾಗಿದೆ.

2025ರ ಡಿಸೆಂಬರ್ 17ರಂದು ರಾಜ್ಯಸಭೆಗೆ ನೀಡಿದ ಉತ್ತರದ ಪ್ರಕಾರ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಸಾರ್ವಜನಿಕ ಶಿಕ್ಷಣ ವೆಚ್ಚ 2021-22ರಲ್ಲಿ ಜಿಡಿಪಿಯ ಪ್ರಮಾಣ ಶೇ.4.12. ರಾಷ್ಟ್ರೀಯ ಶಿಕ್ಷಣ ನೀತಿ 1968ರಿಂದ ಪುನರಾವರ್ತಿಸುತ್ತಿರುವ ಮತ್ತು ಎನ್‌ಇಪಿ 2020 ಮತ್ತೊಮ್ಮೆ ದೃಢಪಡಿಸಿರುವ ಶೇ.6ರ ಗುರಿಗಿಂತ ಬಹಳ ಕಡಿಮೆ. ಅದರಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಶೇ.1.79 ಮತ್ತು ಪ್ರೌಢ ಶಿಕ್ಷಣಕ್ಕೆ ಶೇ.1.04 ಜಿಡಿಪಿ ಮಾತ್ರ. 2024-25ರ ಕೇಂದ್ರ ಶಿಕ್ಷಣ ಸಚಿವಾಲಯದ ರೂ. 1,21,118 ಕೋಟಿ ಬಜೆಟ್ ಒಟ್ಟು ಕೇಂದ್ರ ಬಜೆಟ್‌ನ ಕೇವಲ ಶೇ.2.51. ಇನ್ನೂ ಗಂಭೀರವಾಗಿ, ರೂ. 1,21,117.87 ಕೋಟಿಯ ಮೂಲ ಬಜೆಟ್ ಪರಿಷ್ಕೃತ ಹಂತದಲ್ಲಿ ರೂ. 1,14,186.32 ಕೋಟಿಗೆ ಇಳಿದು, ನೈಜ ವೆಚ್ಚ ರೂ. 1,10,477.28 ಕೋಟಿಗೆ ಸೀಮಿತವಾಗಿದೆ. ಮೂಲ ಹಂಚಿಕೆಗೆ ಹೋಲಿಸಿದರೆ ಸುಮಾರು ರೂ. 10,640 ಕೋಟಿ ಕಡಿಮೆ. ಶೇ.6 ಜಿಡಿಪಿ ಗುರಿಗೆ ಯಾವುದೇ ಸ್ಪಷ್ಟ ಕಾಲಮಿತಿ ಇದೆಯೇ ಎಂಬ ಪ್ರಶ್ನೆಗೆ ಸರಕಾರ ‘‘ಆದಷ್ಟು ಬೇಗ’’ ತಲುಪಲು ಕೇಂದ್ರ-ರಾಜ್ಯಗಳು ಪ್ರಯತ್ನಿಸುತ್ತಿವೆ ಎಂದಷ್ಟೇ ಹೇಳಿದೆ; ಕಾಲಬದ್ಧ ಮಾರ್ಗಸೂಚಿ ನೀಡಿಲ್ಲ.

ಈ ಪರಿಸ್ಥಿತಿಯಲ್ಲಿ ಆಯ್ದ 14,500 ಪಿಎಂಶ್ರೀ ಶಾಲೆಗಳನ್ನು ‘ಮಾದರಿ ಶಾಲೆ’ಗಳನ್ನಾಗಿ ಮಾಡುವುದು ದೇಶದ ಹತ್ತು ಲಕ್ಷಕ್ಕೂ ಹೆಚ್ಚು ಸರಕಾರಿ ಶಾಲೆಗಳ ಸಾರ್ವತ್ರಿಕ ಬಲವರ್ಧನೆಗೆ ಪರ್ಯಾಯವಾಗಲಾರದು. ಕೆಲವೇ ಶಾಲೆಗಳನ್ನು ಉತ್ತಮಗೊಳಿಸುವ ಕಾರ್ಯ ಸಾರ್ವಜನಿಕ ವ್ಯವಸ್ಥೆಯಲ್ಲಿನ ಉಳಿದ ಶಾಲೆಗಳಲ್ಲಿನ ಕೊರತೆಯನ್ನು ನೀಗಿಸುವುದಿಲ್ಲ. ಸಂವಿಧಾನವು ಕೆಲವು ಮಕ್ಕಳಿಗೆ ಮಾದರಿ ಶಾಲೆ ಮತ್ತು ಉಳಿದವರಿಗೆ ಕನಿಷ್ಠ ಶಾಲೆಯನ್ನು ಭರವಸೆ ನೀಡುವುದಿಲ್ಲ; ಪ್ರತಿಯೊಂದು ಮಗುವಿಗೂ ಸಮಾನ ಗುಣಮಟ್ಟದ ಶಿಕ್ಷಣವನ್ನು ಕೇಳುತ್ತದೆ. ಸಿಎಸ್‌ಅರ್, ಶಾಲಾ ದತ್ತು ಯೋಜನೆ, ಸ್ವಯಂಸೇವಕರು, ಅತಿಥಿ ಶಿಕ್ಷಕರು ಮತ್ತು ಕಾರ್ಪೊರೇಟ್‌‘ಪಾಲುದಾರಿಕೆ’ಗಳು ಹೆಚ್ಚುವರಿ ನೆರವಾಗಬಹುದು; ಆದರೆ ಶಿಕ್ಷಕರ ವೇತನ, ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ ಮತ್ತು ಸಮಾನ ಶಾಲಾ ವ್ಯವಸ್ಥೆಯನ್ನು ಒದಗಿಸುವ ಸರಕಾರದ ಮೂಲ ಹೊಣೆಗಾರಿಕೆಗೆ ಅವು ಪರ್ಯಾಯವಾಗಬಾರದು.

ಸಾರ್ವಜನಿಕ ಶಿಕ್ಷಣದ ಬಲವರ್ಧನೆಯ ಆಂದೋಲನದ ಭಾಗವಾಗಿ, ಮೊದಲಿಗೆ ಶಿಕ್ಷಣ ಹಕ್ಕು ಕಾಯ್ದೆ-2009ರ ಅನುಸೂಚಿಯ ಪ್ರಕಾರ ಪ್ರತಿಯೊಂದು ಶಾಲೆಯಲ್ಲಿಯೂ ಎಲ್ಲ ಋತುಗಳಲ್ಲೂ ಬಳಸಬಹುದಾದ ಸುರಕ್ಷಿತ ಶಾಲಾ ಕಟ್ಟಡ; ಪ್ರತಿಯೊಬ್ಬ ಶಿಕ್ಷಕರಿಗೂ ಕನಿಷ್ಠ ಒಂದು ತರಗತಿ ಕೊಠಡಿ; ಕಚೇರಿ-ದಾಸ್ತಾನು-ಮುಖ್ಯಶಿಕ್ಷಕರ ಸಂಯುಕ್ತ ಕೊಠಡಿ; ವಿಶೇಷ ಅಗತ್ಯವುಳ್ಳ ಮಕ್ಕಳೂ ಸುಲಭವಾಗಿ ಪ್ರವೇಶಿಸಬಹುದಾದ ತಡೆರಹಿತ ವ್ಯವಸ್ಥೆ (ರ್ಯಾಂಪ್ ಮುಂತಾದವು); ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳು; ಸುರಕ್ಷಿತ ಹಾಗೂ ಸಮರ್ಪಕ ಕುಡಿಯುವ ನೀರು; ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಅಡುಗೆಮನೆ; ಆಟದ ಮೈದಾನ; ಶಾಲೆಯ ರಕ್ಷಣೆಗೆ ಆವರಣಗೋಡೆ; ಪ್ರತಿಯೊಂದು ತರಗತಿಗೂ ಅಗತ್ಯವಾದ ಬೋಧನೆ-ಕಲಿಕಾ ಸಾಮಗ್ರಿಗಳು; ಗ್ರಂಥಾಲಯ ಹಾಗೂ ಮಕ್ಕಳಿಗೆ ಆಟಿಕೆಗಳು, ಕ್ರೀಡಾ ಸಾಮಗ್ರಿಗಳು ಕಡ್ಡಾಯವಾಗಿ ಇರಬೇಕು. ಇವು ಐಚ್ಛಿಕ ಸೌಲಭ್ಯಗಳಲ್ಲ; ಕಾಯ್ದೆಯ ಪ್ರಕರಣ 19ರೊಂದಿಗೆ ಓದಿಕೊಳ್ಳಬೇಕಾದ ಅನುಸೂಚಿಯಲ್ಲಿ ನಿಗದಿಪಡಿಸಿರುವ ಕನಿಷ್ಠ ಕಾನೂನುಬದ್ಧ ಮಾನದಂಡಗಳಾಗಿವೆ.

ಈ ಮಾನದಂಡದ ಅನ್ವಯ, ಪ್ರತಿ ಸರಕಾರಿ ಶಾಲೆಯ ಸಾಮಾಜಿಕ ಲೆಕ್ಕಪರಿಶೋಧನೆ ನಡೆಯಬೇಕು. ಶಿಕ್ಷಣ ಹಕ್ಕು ಕಾಯ್ದೆಯು ಹೇಳುವ ಮೂಲಭೂತ ಸೌಲಭ್ಯ ಕೇವಲ ‘ಲಭ್ಯ’ ಎನ್ನುವುದಕ್ಕಿಂತ ಅದು ಕಾರ್ಯನಿರ್ವಹಿಸುತ್ತಿದೆಯೇ, ಸುರಕ್ಷಿತವೇ, ಮಕ್ಕಳ ಸಂಖ್ಯೆಗೆ ಸಾಕಷ್ಟಿದೆಯೇ ಮತ್ತು ನಿಯಮಿತವಾಗಿ ಬಳಕೆಯಾಗುತ್ತಿದೆಯೇ ಎಂಬುದನ್ನು ಶಾಲಾಭಿವೃದ್ಧಿ ಸಮಿತಿ, ಪೋಷಕರು ಮತ್ತು ಸ್ಥಳೀಯ ಸಂಘ-ಸಂಸ್ಥೆಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಎರಡನೆಯದಾಗಿ, ಶೂನ್ಯ ಮತ್ತು ಏಕೋಪಾಧ್ಯಾಯ ಶಾಲೆಗಳಿಗೆ ಕಾಲಮಿತಿ ನಿಗದಿಪಡಿಸಿದ ತುರ್ತು ಶಿಕ್ಷಕ ನಿಯೋಜನೆ ಮತ್ತು ಖಾಲಿ ಹುದ್ದೆಗಳ ಶಾಶ್ವತ ನೇಮಕಾತಿ ನಡೆಸಬೇಕು. ಮೂರನೆಯದಾಗಿ, ಶಿಕ್ಷಕರ ಅನುಪಾತವನ್ನು ರಾಜ್ಯದ ಸರಾಸರಿಯಲ್ಲಿ ಅಲ್ಲ, ಶಾಲೆ-ತರಗತಿ-ವಿಷಯದ ಮಟ್ಟದಲ್ಲಿ ಪ್ರಕಟಿಸಬೇಕು. ನಾಲ್ಕನೆಯದಾಗಿ, ಶಾಲಾ ವಿಲೀನಕ್ಕೂ ಮೊದಲು ದೂರ, ಸಾರಿಗೆ, ಭೌಗೋಳಿಕ ದುರ್ಗಮತೆ, ಬಾಲಕಿಯರ ಸುರಕ್ಷತೆ, ಅಂಗವಿಕಲ ಮಕ್ಕಳ ಪ್ರವೇಶ ಮತ್ತು ಮಾತೃಭಾಷಾ ಶಿಕ್ಷಣದ ಪರಿಣಾಮವನ್ನು ಒಳಗೊಂಡ ಕಡ್ಡಾಯ ಹಕ್ಕು-ಪರಿಣಾಮ ಅಧ್ಯಯನ ನಡೆಯಬೇಕು. ಐದನೆಯದಾಗಿ, ಶಿಕ್ಷಣ ವೆಚ್ಚವನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಜಿಡಿಪಿಯ ಶೇ.6ಕ್ಕೆ ಏರಿಸಿ, ಅದರ ಬಹುಪಾಲನ್ನು ಸಾರ್ವತ್ರಿಕ ಸಾರ್ವಜನಿಕ ಶಾಲಾ ವ್ಯವಸ್ಥೆಗೆ ಮೀಸಲಿಡಬೇಕು.

ಹಳ್ಳಿಯ ಶಾಲೆಗೆ ಮೂಲಭೂತವಾಗಿರುವ ಇದಾವುದನ್ನು ಒದಗಿಸದೆ, ದ್ವಿಭಾಷಾ ಮಾಧ್ಯಮದ ಕೆಪಿಎಸ್ ಮಾದರಿ ಶಾಲೆ ಮಾಡಲು ಹೊರಟಿರುವುದು ಸಾರ್ವಜನಿಕ ಶಿಕ್ಷಣದ ಪುನರುಜ್ಜೀವನ ವಾಗುವುದಿಲ್ಲ. ದೇಶದಲ್ಲಿ ದೀಪ್ಕೆ ಮತ್ತು ಸಹಚರರು ಆರಂಭಿಸಿರುವ ಅಭಿಯಾನವು ಸರಕಾರಿ ಶಾಲೆಗಳ ಮೇಲಿನ ಅನುಕಂಪದ ಚಳವಳಿಯಾಗದೆ, ಸಂವಿಧಾನ ಮತ್ತು ಅಂತರ್‌ರಾಷ್ಟ್ರೀಯ ಕಾನೂನಿನನ್ವಯ ಪ್ರತಿಯೊಂದು ಮಗುವಿನ ಸಮಾನ ಶಿಕ್ಷಣದ ಮೂಲಭೂತ ಹಕ್ಕನ್ನಾಗಿಸುವ ಚಳವಳಿಯಾಗಬೇಕು. ಈ ಹಕ್ಕಿನ ಸಾಕಾರಕ್ಕಾಗಿ ಸಾರ್ವಜನಿಕ ಸಂಪನ್ಮೂಲ ಹೂಡಿಕೆ, ಪ್ರಜಾಸತ್ತಾತ್ಮಕ ಉತ್ತರದಾಯಿತ್ವ ಮತ್ತು ಸಂವಿಧಾನಾತ್ಮಕ ನ್ಯಾಯವನ್ನು ಮರಳಿ ಪಡೆಯುವ ರಾಷ್ಟ್ರೀಯ ಜನಾಂದೋಲನವಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಿರಂಜನಾರಾಧ್ಯ ವಿ.ಪಿ.

contributor

Similar News