×
Ad

ನೂರಹತ್ತು ವರ್ಷ ದಾಟಿದ ‘ಭಾರತದಲ್ಲಿ ಜಾತಿಗಳು’ ಪ್ರಬಂಧ : ಅಂಬೇಡ್ಕರ್ ಅವರ ಸಮಾಜಶಾಸ್ತ್ರೀಯ ಚಿಕಿತ್ಸೆ ಮತ್ತು ಸಮಕಾಲೀನ ಮುಖಾಮುಖಿ

Update: 2026-05-25 12:27 IST

ಡಾ. ಬಿ.ಆರ್. ಅಂಬೇಡ್ಕರ್ ಅವರು ‘ಭಾರತದಲ್ಲಿ ಜಾತಿಗಳು: ಅವುಗಳ ಕಾರ್ಯವಿಧಾನ, ಉಗಮ ಮತ್ತು ಬೆಳವಣಿಗೆ’ (Castes in India: Their Mechanism, Genesis and Development) ಎಂಬ ಮಹತ್ವದ ಸಂಶೋಧನಾ ಪ್ರಬಂಧವನ್ನು 1916ರ ಮೇ 9ರಂದು ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾನಿಲಯದ ಗೋಲ್ಡನ್ ವೈಸರ್‌ರ ಮಾನವ ಶಾಸ್ತ್ರೀಯ ಸಮ್ಮೇಳನದಲ್ಲಿ ಮಂಡಿಸಿ ಈಗ ಶತಮಾನದ ಮೇಲೆ ಹತ್ತು ವರ್ಷಗಳ ಕಾಲ ಸಂದಿದೆ.

ಆ ಬಳಿಕ ಅದು 1917ರ ಮೇ ತಿಂಗಳಿನಲ್ಲಿ Indian Antiquary ಪತ್ರಿಕೆಯ XLVI ಸಂಪುಟದಲ್ಲಿ ಮುದ್ರಣ ರೂಪದಲ್ಲಿ ಪ್ರಕಟವಾಯಿತು. ತಮ್ಮ ಇಪ್ಪತ್ತೈದರ ಹರೆಯದಲ್ಲೇ ಅಂಬೇಡ್ಕರ್ ಅವರು ಮಂಡಿಸಿದ ಈ ಪ್ರಬಂಧವು ಆ ಕಾಲಕ್ಕೂ ಈಗಲೂ ಕೇವಲ ಒಂದು ಶೈಕ್ಷಣಿಕ ದಾಖಲೆಯಾಗಿ ಉಳಿಯದೆ ಭಾರತೀಯ ಸಮಾಜದ ಅತ್ಯಂತ ಕ್ರೂರ, ಸಂಕೀರ್ಣ ಮತ್ತು ಅಮಾನುಷ ವ್ಯವಸ್ಥೆಯಾದ ‘ಜಾತಿ’ಯನ್ನು ಸಮಾಜಶಾಸ್ತ್ರೀಯ ಅವಲೋಕನಕ್ಕೆ ಒಳಪಡಿಸಿದ ಮೊದಲ ವೈಜ್ಞಾನಿಕ ವಿಶ್ಲೇಷಣೆಯಾಗಿದೆ.

ಶತಶತಮಾನಗಳಿಂದ ಪವಿತ್ರ ಧರ್ಮಗ್ರಂಥಗಳ ಮತ್ತು ದೈವಿಕ ಸಿದ್ಧಾಂತಗಳ ಮುಸುಕಿನಲ್ಲಿ ಮುಚ್ಚಿಡಲಾಗಿದ್ದ ಜಾತಿಯ ಆಂತರಿಕ ಕರಾಳತೆಯನ್ನು ಅಂಬೇಡ್ಕರ್ ಅವರು ಅಂದು ಜಗತ್ತಿನ ಬೌದ್ಧಿಕ ವೇದಿಕೆಯ ಎದುರು ಅತ್ಯಂತ ವಸ್ತುನಿಷ್ಠವಾಗಿ ಅನಾವರಣಗೊಳಿಸಿದರು. ಆ ಮೂಲಕ ಶೋಷಿತ ಸಮುದಾಯದ ವ್ಯಕ್ತಿಯೊಬ್ಬ ಕೇವಲ ನೋವನ್ನು ಅನುಭವಿಸುವ ಮೂಕಸಾಕ್ಷಿಯಾಗಿ ಮಾತ್ರ ಉಳಿಯದೆ, ಆ ನೋವಿನ ಹಿಂದಿರುವ ವ್ಯವಸ್ಥೆಯನ್ನು ಜಗತ್ತಿಗೆ ವಾಸ್ತವ ರೂಪದಲ್ಲಿ ಮತ್ತು ಬೌದ್ಧಿಕವಾಗಿ ವಿವರಿಸಬಲ್ಲ ವಿದ್ವಾಂಸನಾಗುತ್ತಾನೆ ಎಂಬುದನ್ನು ಅವರು ಸಾಬೀತುಪಡಿಸಿದರು.

ಅಂಬೇಡ್ಕರ್ ಅವರು ಈ ಪ್ರಬಂಧವನ್ನು ಬರೆಯುವ ಕಾಲಕ್ಕೆ ಭಾರತೀಯ ಸಮಾಜವನ್ನು ಅರ್ಥೈಸುವ ಪ್ರಕ್ರಿಯೆಯು ಪ್ರಮುಖವಾಗಿ ವಸಾಹತುಶಾಹಿ ಮಾನವಶಾಸ್ತ್ರಜ್ಞರು ಮತ್ತು ಭಾರತದ ಜಾತೀಯ ಮುಖ್ಯವಾಹಿನಿಯಲ್ಲಿದ್ದ ಸಾಂಪ್ರದಾಯಿಕ ಗಣ್ಯರ ಕೈಯಲ್ಲಿತ್ತು. ಹರ್ಬರ್ಟ್ ರಿಸ್ಲೆ, ಸೆನಾರ್ಟ್ ಮತ್ತು ನೆಸ್‌ಫೀಲ್ಡ್ ಅವರಂತಹ ಯೂರೋಪಿಯನ್ ಸಂಶೋಧಕರು ಜಾತಿಯನ್ನು ಮುಖ್ಯವಾಗಿ ‘ಜನಾಂಗೀಯ’ ಭಿನ್ನತೆ ಅಥವಾ ಶಾರೀರಿಕ ಮಾನದಂಡಗಳ ಆಧಾರದ ಮೇಲೆ ವಿವರಿಸಲು ಯತ್ನಿಸುತ್ತಿದ್ದರು. ಇನ್ನೊಂದೆಡೆ, ದೇಶೀಯ ವಿಶ್ಲೇಷಕರು ಇದನ್ನು ಶ್ರಮ ವಿಭಜನೆಯ ಒಂದು ಸೌಮ್ಯ ಹಾಗೂ ಪ್ರಾಚೀನ ಆರ್ಥಿಕ ಮಾದರಿ ಎಂದು ಜಗತ್ತಿಗೆ ಬಿಂಬಿಸುತ್ತಾ ಅದಕ್ಕೆ ಸಾಂಸ್ಕೃತಿಕ ಘನತೆಯನ್ನು ತರಲು ಯತ್ನಿಸುತ್ತಿದ್ದರು. ಈ ಎಲ್ಲ ಸಿದ್ಧಾಂತಗಳ ಮಿತಿಯನ್ನು ಅಂಬೇಡ್ಕರ್ ಸಮಗ್ರವಾಗಿ ಗುರುತಿಸಿದರು. ಈ ಸಿದ್ಧಾಂತಗಳು ಕೇವಲ ಮೇಲ್ಪದರದ ಲಕ್ಷಣಗಳನ್ನು ವಿವರಿಸುತ್ತಿದ್ದವೇ ಹೊರತು, ಜಾತಿ ವ್ಯವಸ್ಥೆಯು ತನ್ನ ಒಳಗಿನ ಶಕ್ತಿಯನ್ನು ಎಲ್ಲಿಂದ ಪಡೆದುಕೊಳ್ಳುತ್ತದೆ ಮತ್ತು ತಲೆಮಾರುಗಳಿಂದ ಹೇಗೆ ಮರುಉತ್ಪತ್ತಿಯಾಗುತ್ತಾ ಸಾಗುತ್ತದೆ ಎಂಬ ಆಂತರಿಕ ತರ್ಕವನ್ನು ತಲುಪುತ್ತಿರಲಿಲ್ಲ. ಈ ಬೌದ್ಧಿಕ ಶೂನ್ಯತೆಯನ್ನು ತುಂಬಲು ಅಂಬೇಡ್ಕರ್ ಅವರು ಯಾವುದೇ ಭಾವುಕತೆ ಅಥವಾ ಧಾರ್ಮಿಕ ಆಕ್ರೋಶಕ್ಕೆ ಒಳಗಾಗದೆ, ವಸ್ತುನಿಷ್ಠ ಮತ್ತು ಕಟ್ಟುನಿಟ್ಟಾದ ಶೈಕ್ಷಣಿಕ ಶಿಸ್ತಿನ ಮೂಲಕ ಈ ಪ್ರಬಂಧವನ್ನು ಸಿದ್ಧಪಡಿಸಿದರು.

ಈ ಪ್ರಬಂಧದಲ್ಲಿ ಅಂಬೇಡ್ಕರ್ ಅವರ ಅತ್ಯಂತ ಪ್ರಮುಖ ಸಮಾಜಶಾಸ್ತ್ರೀಯ ಕೊಡುಗೆಯೆಂದರೆ, ಅವರು ಜಾತಿಯ ಮೂಲವನ್ನು ಹುಡುಕುವ ತಾತ್ವಿಕ ಗೊಂದಲಕ್ಕಿಂತ ಹೆಚ್ಚಾಗಿ, ಜಾತಿಯು ದಿನನಿತ್ಯದ ಆಚರಣೆಯಲ್ಲಿ ಹೇಗೆ ಬದುಕಿ ಉಳಿಯುತ್ತದೆ? ಎಂಬ ಕಾರ್ಯವಿಧಾನವನ್ನು ವಿಶ್ಲೇಷಿಸಿದ್ದು. ಅವರ ಪ್ರಕಾರ, ಭಾರತೀಯ ಸಮಾಜವು ಮೂಲತಃ ಸಾಂಸ್ಕೃತಿಕವಾಗಿ ಒಂದೇ ಆಗಿದ್ದ ವಿವಿಧ ವರ್ಗಗಳ ಸಮೂಹವಾಗಿತ್ತು. ಆದರೆ, ಈ ವ್ಯವಸ್ಥೆಯಲ್ಲಿ ಜಾತಿಯ ಉಗಮಕ್ಕೆ ಕಾರಣವಾಗಿದ್ದು ‘ಜಾತಿಯ ಒಳಗಿನ ವಿವಾಹ’ ಪದ್ಧತಿ. ಒಂದು ಸಾಮಾಜಿಕ ವರ್ಗವು ತನ್ನ ವಿವಾಹದ ಹಕ್ಕುಗಳನ್ನು ತನ್ನದೇ ನಿಯಮಿತ ಸಮೂಹದೊಳಗೆ ಸೀಮಿತಗೊಳಿಸಿಕೊಂಡು, ಹೊರಗಿನವರೊಂದಿಗೆ ರಕ್ತಸಂಬಂಧ ಅಥವಾ ವಿವಾಹ ಸಂಬಂಧವನ್ನು ಕಟ್ಟುನಿಟ್ಟಾಗಿ ನಿಷೇಧಿಸಿದಾಗ ಅದು ‘ಜಾತಿ’ಯಾಗಿ ರೂಪಾಂತರಗೊಳ್ಳುತ್ತದೆ. ಅಂಬೇಡ್ಕರ್ ಅವರದೇ ಪ್ರಸಿದ್ಧ ಮಾತಿನಲ್ಲಿ ಹೇಳುವುದಾದರೆ, ‘‘ಜಾತಿ ಎಂದರೆ ಕೇವಲ ಮುಚ್ಚಿಡಲ್ಪಟ್ಟ (ಅಥವಾ ಬೇಲಿ ನಿರ್ಮಿಸಿಕೊಂಡ) ವರ್ಗ’’ (Caste is an enclosed class). ಈ ಮುಚ್ಚಿದ ಚೌಕಟ್ಟನ್ನು ಯಥಾವತ್ತಾಗಿ ಕಾಪಾಡಿಕೊಳ್ಳಲು ಸಮಾಜವು ಸ್ತ್ರೀಯರ ದೇಹ ಮತ್ತು ಅವರ ಲೈಂಗಿಕತೆಯ ಮೇಲೆ ತೀವ್ರ ನಿಯಂತ್ರಣವನ್ನು ಹೇರಬೇಕಾಯಿತು. ಗುಂಪಿನಲ್ಲಿ ಪುರುಷ ಅಥವಾ ಮಹಿಳೆಯ ಸಂಖ್ಯೆ ಹೆಚ್ಚು-ಕಡಿಮೆಯಾದಾಗ ಉಂಟಾಗುವ ಲೈಂಗಿಕ ಅಸಮತೋಲನವನ್ನು ನಿವಾರಿಸಲು ಸಮಾಜವು ಸತಿ ಪದ್ಧತಿ, ವಿಧವಾ ವಿವಾಹ ನಿಷೇಧ ಮತ್ತು ಬಾಲ್ಯ ವಿವಾಹದಂತಹ ಕ್ರೂರ ಪದ್ಧತಿಗಳನ್ನು ರೂಪಿಸಿತು. ಈ ವಿಶ್ಲೇಷಣೆಯ ಮೂಲಕ, ಅಂಬೇಡ್ಕರ್ ಅವರು ಭಾರತದಲ್ಲಿ ಜಾತಿ ವ್ಯವಸ್ಥೆಯ ರಕ್ಷಣೆ ಮತ್ತು ಸ್ತ್ರೀ ದಮನಕ್ಕೆ ಇರುವ ಅವಿನಾಭಾವ ಸಂಬಂಧವನ್ನು ಅಂದೇ ಜಗತ್ತಿಗೆ ಮನವರಿಕೆ ಮಾಡಿಕೊಟ್ಟರು.

ಜಾತಿಯನ್ನು ಆರ್ಥಿಕ ಅಥವಾ ನೈಸರ್ಗಿಕ ಅಗತ್ಯ ಎಂದು ಸಮರ್ಥಿಸಿಕೊಳ್ಳುವ ವಾದಗಳನ್ನು ಅಂಬೇಡ್ಕರ್ ತೀವ್ರವಾಗಿ ಖಂಡಿಸಿದರು. ಜಾತಿಯು ಕೇವಲ ಕೆಲಸದ ಆಧಾರದ ಮೇಲೆ ಮಾಡಲಾದ ವಿಭಜನೆಯಲ್ಲ; ಬದಲಾಗಿ ಅದು ‘ಕಾರ್ಮಿಕರ ವಿಭಜನೆ’. ಸಾಮಾನ್ಯ ಶ್ರಮ ವಿಭಜನೆಯು ವ್ಯಕ್ತಿಯ ಆಸಕ್ತಿ, ಕೌಶಲ್ಯ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮತ್ತು ಚಲನಶೀಲತೆಯನ್ನು ನೀಡುತ್ತದೆ. ಆದರೆ, ಭಾರತದ ಕಾರ್ಮಿಕರ ವಿಭಜನೆಯು ವ್ಯಕ್ತಿಯ ಹುಟ್ಟಿನ ಆಧಾರದ ಮೇಲೆ ಆತನ ವೃತ್ತಿಯನ್ನು ಮೊದಲೇ ನಿರ್ಧರಿಸಿಬಿಡುತ್ತದೆ. ಇದು ಸಮಾಜವನ್ನು ಆರ್ಥಿಕವಾಗಿ ಜಡವಾಗಿಸುತ್ತದೆ. ವ್ಯಕ್ತಿಗೆ ತನ್ನ ಸಾಮರ್ಥ್ಯಕ್ಕೆ ತಕ್ಕ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿಲ್ಲದಿದ್ದಾಗ ಸಮಾಜದಲ್ಲಿ ದಕ್ಷತೆ ಕುಂಠಿತಗೊಳ್ಳುತ್ತದೆ ಮತ್ತು ಬಡತನವು ಶಾಶ್ವತವಾಗುತ್ತದೆ. ಈ ವ್ಯವಸ್ಥೆಯು ಕೇವಲ ಕೀಳು ಜಾತಿಯವರನ್ನು ಮಾತ್ರವಲ್ಲ, ಮೇಲ್ಜಾತಿಯವರನ್ನೂ ಒಂದು ಚೌಕಟ್ಟಿನಲ್ಲಿ ಬಂಧಿಸಿ ಇಡುವ ಮೂಲಕ ಇಡೀ ಸಾಮಾಜಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ ಎಂದು ಅಂಬೇಡ್ಕರ್ ಅತ್ಯಂತ ಪ್ರಬುದ್ಧವಾಗಿ ತರ್ಕಿಸಿದರು.

ನೂರ ಹತ್ತು ವರ್ಷಗಳ ಹಿಂದೆ ಬರೆದ ಈ ಪ್ರಬಂಧವು ಇಂದಿನ 21ನೇ ಶತಮಾನದ ಸಮಕಾಲೀನ ಆಧುನಿಕ, ಡಿಜಿಟಲ್ ಭಾರತಕ್ಕೂ ಕನ್ನಡಿ ಹಿಡಿಯುವಂತಿದೆ. ಜಾಗತೀಕರಣ ಮತ್ತು ಸಂವಿಧಾನದ ಸಮಾನತೆಯ ಹಕ್ಕುಗಳ ಹೊರತಾಗಿಯೂ ಜಾತಿ ಇಂದಿಗೂ ಸಮಾಜದಲ್ಲಿ ವಿಭಿನ್ನ ರೂಪ ಪಡೆದುಕೊಂಡು ಬದುಕಿ ಉಳಿದಿದೆ. ಇಂದು ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತಿರುವ ‘ಮರ್ಯಾದೆಗೇಡು ಹತ್ಯೆ’ಗಳಿಗೆ ಅಂಬೇಡ್ಕರ್ ಅವರ ಅಂತರ್‌ವಿವಾಹ (Endogamy) ಸಿದ್ಧಾಂತವೇ ನೇರ ವಿವರಣೆ ನೀಡುತ್ತದೆ. ಪ್ರೀತಿ ಅಥವಾ ವಿವಾಹದ ಮೂಲಕ ಜಾತಿಯ ಗಡಿಗಳನ್ನು ದಾಟಲು ಯತ್ನಿಸುವ ಯುವ ಪ್ರೇಮಿಗಳನ್ನು ಇಂದಿಗೂ ಸಮಾಜವು ಕ್ರೂರವಾಗಿ ಶಿಕ್ಷಿಸುತ್ತಿದೆ. ಜಾತಿಯ ಪವಿತ್ರತೆಯನ್ನು ಕಾಪಾಡುವುದು ಇಂದಿಗೂ ಮಹಿಳೆಯರ ಆಯ್ಕೆಯ ಸ್ವಾತಂತ್ರ್ಯವನ್ನು ಹತ್ತಿಕ್ಕುವುದರ ಮೇಲೆಯೇ ನಿಂತಿದೆ ಎಂಬುದಕ್ಕೆ ಇತ್ತೀಚಿನ ಘಟನೆಗಳೇ ಸಾಕ್ಷಿ. ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇಂದು ಪ್ರತ್ಯೇಕ ಜಾತಿ ಆಧಾರಿತ ಆ್ಯಪ್‌ಗಳು ಸೃಷ್ಟಿಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಶಿಕ್ಷಣ ಮತ್ತು ತಂತ್ರಜ್ಞಾನಗಳು ಜಾತೀಯತೆಯನ್ನು ತಾವಾಗಿಯೇ ನಾಶಪಡಿಸುತ್ತವೆ ಎಂಬ ಲಿಬರಲ್ ಭ್ರಮೆಯನ್ನು ಇಂದಿನ ಕರಾಳ ವಾಸ್ತವ ಸುಳ್ಳು ಮಾಡಿದೆ. ಆಧುನಿಕ ಡಿಜಿಟಲ್ ವೇದಿಕೆಗಳಲ್ಲೂ ‘ಅಂತರ್‌ವಿವಾಹ’ದ ನಿಯಮವನ್ನು ತಂತ್ರಜ್ಞಾನದ ನೆರವಿನೊಂದಿಗೆ ಹೆಚ್ಚು ವ್ಯವಸ್ಥಿತವಾಗಿ ಪಾಲಿಸಿ ಪೋಷಿಸಿಕೊಂಡು ಬರಲಾಗುತ್ತಿದೆ.

ಅಂಬೇಡ್ಕರ್ ತಮ್ಮ ಪ್ರಬಂಧದಲ್ಲಿ ‘ಅನುಕರಣೆಯ ಸಿದ್ಧಾಂತ’ವನ್ನು ಮಂಡಿಸುತ್ತಾರೆ. ಇದರ ಪ್ರಕಾರ, ಮೇಲ್ವರ್ಗದ ಆಚರಣೆಗಳನ್ನು ಕೆಳವರ್ಗಗಳು ಸಾಮಾಜಿಕ ಗೌರವಕ್ಕಾಗಿ ಅನುಕರಿಸುತ್ತವೆ. ಇಂದು ರಾಜಕೀಯ ಲಾಭಕ್ಕಾಗಿ ಮತ್ತು ಮತಬ್ಯಾಂಕ್‌ಗಾಗಿ ಸಣ್ಣ ಸಣ್ಣ ಜಾತಿಗಳೂ ಸಹ ತಮ್ಮದೇ ಆದ ಸಾಂಸ್ಕೃತಿಕ ಅಸ್ಮಿತೆಗಳನ್ನು ತೀವ್ರವಾಗಿ ಜಾಗೃತಗೊಳಿಸಿಕೊಳ್ಳುತ್ತಿರುವುದನ್ನು ನೋಡಬಹುದು. ಜಾತಿರಹಿತ ಸಮಾಜದ ಕಡೆಗೆ ನಡೆಯುವ ಬದಲು, ಪ್ರತಿಯೊಂದು ಜಾತಿಯೂ ತನ್ನದೇ ಆದ ಸಂಘಟನೆ, ಮಠ ಮತ್ತು ರಾಜಕೀಯ ಪ್ರಭಾವವನ್ನು ವಿಸ್ತರಿಸಿಕೊಳ್ಳಲು ಯತ್ನಿಸುತ್ತಿರುವುದು ಅಂಬೇಡ್ಕರ್ ಅವರ ಅಂದಿನ ಆತಂಕವನ್ನು ನಿಜವಾಗಿಸಿದೆ. ಆಧುನಿಕ ಪ್ರಜಾಪ್ರಭುತ್ವದ ಒಳಗೆ ಜಾತಿ ವ್ಯವಸ್ಥೆಯು ಒಂದು ರಾಜಕೀಯ ಆಯುಧವಾಗಿ ಮಾರ್ಪಟ್ಟಿರುವುದು ಈ ಭಾರತದಲ್ಲಿ ಜಾತಿಗಳು ಪ್ರಬಂಧದ ಮರು ಓದಿನ ಅಗತ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಅಂಬೇಡ್ಕರ್ ಅವರು ಈ ಪ್ರಬಂಧದ ಮೂಲಕ ನಮಗೆ ನೀಡಿದ ಸಂದೇಶ ಅತ್ಯಂತ ಸ್ಪಷ್ಟವಾಗಿದೆ: ಜಾತಿ ಎಂಬುದು ಯಾವುದೋ ಒಂದು ದಿನ ಹಠಾತ್ತನೆ ಆಕಾಶದಿಂದ ಉದುರಿ ಬಿದ್ದ ವ್ಯವಸ್ಥೆಯಲ್ಲ; ಅದು ದಿನನಿತ್ಯದ ಸಾಮಾಜಿಕ ಆಚರಣೆಗಳ ಮೂಲಕ, ಮದುವೆಯ ನಿಯಮಗಳ ಮೂಲಕ ಎಲ್ಲರೂ ಜೀವಂತವಾಗಿಟ್ಟಿರುವ ಒಂದು ಕೃತಕ ರಚನೆ. ಇದನ್ನು ಕೇವಲ ಮೇಲ್ಪದರದ ರಾಜಕೀಯ ಭಾಷಣಗಳಿಂದ ಅಥವಾ ಕೇವಲ ಆರ್ಥಿಕ ಸುಧಾರಣೆಗಳಿಂದ ಅಳಿಸಲು ಸಾಧ್ಯವಿಲ್ಲ. ಜಾತಿ ವ್ಯವಸ್ಥೆಯನ್ನು ಮುರಿಯಬೇಕಾದರೆ ಅದರ ಜೀವಾಳವಾದ ಅಂತರ್‌ವಿವಾಹದ ಗತಿರೋಧವನ್ನು ಮುರಿಯಬೇಕು. ಸಮಾಜದಲ್ಲಿ ಅಂತರ್ಜಾತಿ ಮತ್ತು ಅಂತರ್‌ಧರ್ಮೀಯ ವಿವಾಹಗಳು ಕೇವಲ ವೈಯಕ್ತಿಕ ಆಯ್ಕೆಯಾಗಿ ಉಳಿಯದೆ, ಅದೊಂದು ಸಾಮಾಜಿಕ ಪ್ರಗತಿಯ ಮಾನದಂಡವಾಗಬೇಕಿದೆ. ‘ಭಾರತದಲ್ಲಿ ಜಾತಿಗಳು’ ಕೃತಿಯ ನೂರು ವರ್ಷಗಳ ಈ ನೆನಪು ನಮಗೆ ಕೇವಲ ಭಾಷಣಕ್ಕೆ ವಸ್ತುವಾಗಬಾರದು. ಬದಲಾಗಿ, ಸಮಾಜವನ್ನು ಕಾಡುತ್ತಿರುವ ಜಾತಿಯ ಹೊಸ ರೂಪಗಳನ್ನು ಗುರುತಿಸಲು, ಶಿಕ್ಷಣ ಮತ್ತು ಸಾರ್ವಜನಿಕ ವಲಯದಲ್ಲಿ ವೈಚಾರಿಕತೆಯನ್ನು ಬೆಳೆಸಲು ಮತ್ತು ಅಂಬೇಡ್ಕರ್ ಅವರ ವೈಜ್ಞಾನಿಕ ದೃಷ್ಟಿಕೋನವನ್ನು ಇಂದಿನ ಪೀಳಿಗೆಗೆ ದಾಟಿಸಲು ನಮಗೆ ಪ್ರೇರಣೆಯಾಗಬೇಕಿದೆ. ಸಮಾಜದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ತನ್ನ ಆಲೋಚನೆ ಮತ್ತು ನಡವಳಿಕೆಯಲ್ಲಿ ಜಾತಿಯ ಗಡಿಗಳನ್ನು ಮೀರಿದಾಗ ಮಾತ್ರ ಈ ಶ್ರೇಷ್ಠ ಪ್ರಬಂಧಕ್ಕೆ ನಿಜವಾದ ಗೌರವ ಸಿಗಲು ಸಾಧ್ಯ.

ಈ ಹಿನ್ನೆಲೆಯಲ್ಲಿ, ಪ್ರಸ್ತುತ ಯುವಪೀಳಿಗೆಗೆ ಈ ಐತಿಹಾಸಿಕ ಕೃತಿಯನ್ನು ತಲುಪಿಸಿ, ಅವರಲ್ಲಿ ಜಾತಿಯ ನೈಜ ಮುಖಗಳ ಕುರಿತು ಜಾಗೃತಿ ಮೂಡಿಸಲು ವ್ಯವಸ್ಥಿತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮೊದಲಿಗೆ, ಉನ್ನತ ಶಿಕ್ಷಣದ ಪಠ್ಯಕ್ರಮಗಳಲ್ಲಿ ಈ ಪ್ರಬಂಧವನ್ನು ಕೇವಲ ಇತಿಹಾಸದ ಒಂದು ಭಾಗವಾಗಿ ನೋಡದೆ, ಸಮಕಾಲೀನ ಸಮಾಜಶಾಸ್ತ್ರೀಯ ಅಧ್ಯಯನದ ಕಡ್ಡಾಯ ಪಠ್ಯವನ್ನಾಗಿಸಬೇಕು; ಆ ಮೂಲಕ ಜಾತಿ ಮತ್ತು ಸ್ತ್ರೀ ದಮನಕ್ಕಿರುವ ಸೂಕ್ಷ್ಮ ಸಂಬಂಧವನ್ನು ಯುವಮನಸ್ಸುಗಳು ಗ್ರಹಿಸುವಂತೆ ಮಾಡಬೇಕು. ತಂತ್ರಜ್ಞಾನದ ಇಂದಿನ ಯುಗದಲ್ಲಿ ಯುವಜನರನ್ನು ತಲುಪಲು ಈ ಪುಸ್ತಕದ ಸಾರವನ್ನು ಒಳಗೊಂಡ ಆಡಿಯೊ ಬುಕ್‌ಗಳು, ಅನಿಮೇಟೆಡ್ ವೀಡಿಯೊಗಳು ಮತ್ತು ಡಿಜಿಟಲ್ ಪಾಡ್‌ಕಾಸ್ಟ್ ಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ವ್ಯಾಪಕವಾಗಿ ರೂಪಿಸಬೇಕಾಗಿದೆ. ಕೇವಲ ಬೌದ್ಧಿಕ ಚರ್ಚೆಗಳಿಗೆ ಸೀಮಿತವಾಗದಂತೆ, ಕಾಲೇಜು ರಂಗಭೂಮಿ, ಬೀದಿ ನಾಟಕ ಮತ್ತು ಸಾಮಾಜಿಕ ಮಾಧ್ಯಮಗಳ ರೀಲ್ಸ್‌ಗಳ ಮೂಲಕ ‘ಅಂತರ್‌ವಿವಾಹ’ ಮತ್ತು ‘ಮರ್ಯಾದಾಗೇಡು ಹತ್ಯೆ’ಗಳ ಹಿಂದಿರುವ ಸಾಂಸ್ಥಿಕ ಹಿಂಸೆಯನ್ನು ಕಲಾತ್ಮಕವಾಗಿ ಬಿಂಬಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಯುವಸಮೂಹವು ತಮ್ಮ ದೈನಂದಿನ ಜೀವನದಲ್ಲಿ, ಮ್ಯಾಟ್ರಿಮೋನಿಯಲ್ ಸೈಟ್‌ಗಳ ಆಯ್ಕೆಯಲ್ಲಿ ಮತ್ತು ಸಾಮಾಜಿಕ ಒಡನಾಟದಲ್ಲಿ ಜಾತಿಯ ಗಡಿಗಳನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸುವಂತಹ ‘ವೈಚಾರಿಕ ಚಳವಳಿ’ಯನ್ನು ಯುವ ಸಂಘಟನೆಗಳ ಮೂಲಕ ಮುನ್ನಡೆಸಬೇಕು. ಹಾಗೆ ಆದಾಗ ಮಾತ್ರ, ಅಂಬೇಡ್ಕರ್ ಅವರು ಅಂದು ಬಿತ್ತಿದ ವೈಜ್ಞಾನಿಕ ದರ್ಶನವು ಇಂದಿನ ಯುವ ಪೀಳಿಗೆಯ ಆಲೋಚನಾ ಶಕ್ತಿಯಾಗಿ ಮಾರ್ಪಟ್ಟು, ಜಾತಿರಹಿತ ಪ್ರಜಾಪ್ರಭುತ್ವ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಪ್ರಸನ್ನಕುಮಾರ್ ಕೆರಗೋಡು

contributor

Similar News