ಅನುಮತಿಯಿಲ್ಲದೆ ಕಟ್ಟಡ, ಯಂತ್ರೋಪಕರಣಗಳ ಸ್ಥಾಪನೆ : ರಾಜಶ್ರೀ ಸಿಮೆಂಟ್ ಕಾರ್ಖಾನೆ ಕೆಡವಲು ಆಗ್ರಹ

Update: 2026-08-07 14:26 IST

ಕಲಬುರಗಿ: ಜಿಲ್ಲೆಯಲ್ಲಿ ಹಲವು ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಕೈಗಾರಿಕಾ ಅಭಿವೃದ್ಧಿಯ ಉದ್ದೇಶದಿಂದ ಸ್ಥಾಪನೆಯಾದ ಇವುಗಳ ವಿರುದ್ಧ ಪರಿಸರ, ಕಾನೂನು ಪಾಲನೆ ಹಾಗೂ ಸ್ಥಳೀಯ ಜನರ ಹಿತಾಸಕ್ತಿಗೆ ಮಾರಕವಾಗಿರುವ ಹಲವು ಆರೋಪಗಳು ಕೇಳಿಬರುತ್ತಿವೆ. ಆ ಸಾಲಿನಲ್ಲಿ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ 1980ರಲ್ಲಿ ಸ್ಥಾಪನೆಯಾದ ಅಲ್ಟ್ರಾಟೆಕ್ ಸಮೂಹದ ರಾಜಶ್ರೀ ಸಿಮೆಂಟ್ ಕಾರ್ಖಾನೆಯೂ ಒಂದಾಗಿದೆ.

ಈ ಕಾರ್ಖಾನೆಯು ಸ್ಥಳೀಯ ಆಡಳಿತದಿಂದ ಅಗತ್ಯ ಅನುಮತಿ ಪಡೆಯದೆ ಕೃಷಿ ಭೂಮಿಯನ್ನು ಕೃಷಿಯೇತರ ಜಮೀನಾಗಿ ಪರಿವರ್ತಿಸದೆ ಅಕ್ರಮ ಕಟ್ಟಡಗಳು ಹಾಗೂ ಯಂತ್ರೋಪಕರಣಗಳನ್ನು ಸ್ಥಾಪಿಸಿದೆ ಎಂಬ ಆರೋಪ ಕೇಳಿಬಂದಿದೆ. ಇದರ ಜೊತೆಗೆ ಕಟ್ಟಡ ಪರವಾನಗಿ ಪಡೆಯದಿರುವುದು, ಸ್ಥಳೀಯ ಸಂಸ್ಥೆಗಳಿಗೆ ಪಾವತಿಸಬೇಕಾದ ತೆರಿಗೆಗಳನ್ನು ವೈಜ್ಞಾನಿಕವಾಗಿ ಪಾವತಿಸದಿರುವುದು, ಕಡ್ಡಾಯವಾಗಿ ಶೇ.33ರಷ್ಟು ಅರಣ್ಯೀಕರಣ ಕಾರ್ಯ ಕೈಗೊಳ್ಳದಿರುವುದು, ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ನೀಡುವಲ್ಲಿ ಅನ್ಯಾಯ ಮಾಡಿರುವುದು ಹಾಗೂ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಮಳಖೇಡ, ಊಡಗಿ ಮತ್ತು ದಿಗ್ಗಾಂವ ಗ್ರಾಮಗಳ ಅಭಿವೃದ್ಧಿಗೆ ಅಗತ್ಯ ನೆರವು ನೀಡಿಲ್ಲ ಎನ್ನುವ ಆರೋಪಗಳು ಸಹ ಇವೆ.

ಅನುಮತಿಯಿಲ್ಲದೆ ಕಟ್ಟಡ, ಯಂತ್ರೋಪಕರಣಗಳ ಸ್ಥಾಪನೆ: 2010ರಲ್ಲಿ ರಾಜಶ್ರೀ ಸಿಮೆಂಟ್ ಕಾರ್ಖಾನೆಯ ಸ್ಥಾಪನೆಗೆ ಪರವಾನಗಿ ಹಾಗೂ 2011ರಲ್ಲಿ ಉತ್ಪಾದನಾ ಘಟಕದ ಸ್ಥಾಪನೆಗೆ, 1993ರ ಪಂಚಾಯತ್ ರಾಜ್ ಕಾಯ್ದೆಯಡಿ ನಾಲ್ಕನೇ ಯೋಜನೆ (ಸಿಮೆಂಟ್ ಉತ್ಪಾದನಾ ಘಟಕ) ಅನುಷ್ಠಾನಕ್ಕಾಗಿ ಅನುಮತಿ ಪಡೆದಿದ್ದಾರೆಯೇ? ಎನ್ನುವ ಕುರಿತು ಸಾಮಾಜಿಕ ಹೋರಾಟಗಾರ ಅಶೋಕ್ ಕುಮಾರ ಶೀಲವಂತ ಮಾಹಿತಿ ಕೇಳಿದ್ದರು. ಇದಕ್ಕೆ ಉತ್ತರಿಸಿದ ಮಳಖೇಡ ಗ್ರಾಪಂ ಪಿಡಿಒ, ಕಾರ್ಖಾನೆ ಸ್ಥಾಪನೆಗೆ ನೀಡಲಾದ ಅನುಮತಿ ಹಾಗೂ ನಾಲ್ಕನೇ ಯೋಜನೆಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಪಂಚಾಯತ್ನಲ್ಲಿ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ. ಭೂಸುಧಾರಣಾ ಕಾಯ್ದೆಯ 1961ರ ಕಲಂ 109(1)(ಎ)ರಡಿ ಸರಕಾರ ಹೊರಡಿಸಿರುವ ಅಧಿಸೂಚನೆ ಷರತ್ತುಗಳು ಉಲ್ಲಂಘನೆಯಾಗಿವೆ. ಕಾರ್ಖಾನೆ ಸ್ಥಳೀಯ ಪ್ರಾಧಿಕಾರಗಳಿಂದ ಅನುಮೋದನೆ ಪಡೆದಿಲ್ಲ. ಇನ್ನು, ಕಟ್ಟಡ ಅಥವಾ ಯಂತ್ರಗಳ ಸ್ಥಾಪನೆ ಕಾಮಗಾರಿಗಳ ಕುರಿತಾಗಿ ಮುಕ್ತಾಯ ಪ್ರಮಾಣ ಪತ್ರ ಪಡೆದಿಲ್ಲ ಎಂದು ಗ್ರಾಮಾಂತರ ಯೋಜನಾ ಇಲಾಖೆ ತಿಳಿಸಿದೆ ಎಂದು ತಿಳಿದುಬಂದಿದೆ.

ಪ್ರಕರಣ ತೀವ್ರ ರೂಪ ಪಡೆಯುತ್ತಿದ್ದಂತೆ ಗಂಭೀರತೆ ಅರಿತು 2011ರ ಸೆಪ್ಟೆಂಬರ್ 30ರಂದು ಮಳಖೇಡ ಗ್ರಾಪಂ ಪಿಡಿಒ ಅವರು ನೋಟಿಸ್ ಕೊಟ್ಟಿದ್ದರು. ಆಗ ಕಂಪನಿ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಪಂಚಾಯತ್ ಅಧ್ಯಕ್ಷ, ಪಿಡಿಒ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ರಾಷ್ಟ್ರಕೂಟ ಜನಸೇನಾ ಸಂಘ ಗಂಭೀರ ಆರೋಪ ಮಾಡಿತ್ತು.

ಇದೇ ಕಾರ್ಖಾನೆಯು ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಕಾನೂನುಬದ್ಧವಾಗಿ ಪರಿವರ್ತಿಸಿಕೊಳ್ಳದೆ, ಜಿಲ್ಲಾಡಳಿತದ ಅಗತ್ಯ ಅನುಮತಿ ಪಡೆಯದೆ ಕಟ್ಟಡ ನಿರ್ಮಿಸಿದೆ ಎಂದು ಅಶೋಕ ಕುಮಾರ ಆರೋಪಿಸಿದ್ದರು. ತದನಂತರ ಎಚ್ಚೆತ್ತ ಕಾರ್ಖಾನೆ, ಹಿಂಬಾಗಿಲಿನಿಂದ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಿಕೊಳ್ಳಲು ಹಾಗೂ ಅಗತ್ಯ ಅನುಮತಿಗಳನ್ನು ಪಡೆಯಲು ಪ್ರಯತ್ನಿಸಿದೆ. ಇದರ ಜೊತೆಗೆ, ಕಾರ್ಖಾನೆಯ ನಾಲ್ಕನೇ ಘಟಕ ಸ್ಥಾಪನೆಗೆ ಕಡ್ಡಾಯವಾಗಿರುವ ಸಾರ್ವಜನಿಕ ಆಕ್ಷೇಪಣೆ ಆಹ್ವಾನಿಸುವ ಪ್ರಕ್ರಿಯೆ ಅನುಸರಿಸದೆ ಪಂಚಾಯತ್ ಕಾಯ್ದೆ ಉಲ್ಲಂಘಿಸಿದೆ ಎನ್ನಲಾಗಿದೆ. ನಂತರ ದಿನಾಂಕವಿಲ್ಲದ ನಿರಾಪೇಕ್ಷಣಾ ಪ್ರಮಾಣ ಪತ್ರ ಪಡೆಯುವ ಮೂಲಕ ಮಳಖೇಡ, ಊಡಗಿ ಗ್ರಾಪಂ ಮತ್ತು ಕಾರ್ಖಾನೆ ಎಡವಟ್ಟಿನಲ್ಲಿ ಸಿಲುಕಿಕೊಂಡಿವೆ ಎನ್ನಲಾಗಿದೆ.

ಅನುಮತಿ ಪಡೆಯದ ಕಂಪೆನಿಗೆ 94.65 ಕೋಟಿ ರೂ. ದಂಡ!

ಮಡಿಕೇರಿ ಸಮೀಪದ ಕಡಗದಾಳು ಗ್ರಾಪಂ ವ್ಯಾಪ್ತಿಯಲ್ಲಿ ‘ಇಬ್ನಿ ಸ್ಪಾ ರೆಸಾರ್ಟ್’ ಎಂಬ ಕಂಪನಿ ಅನುಮತಿ ಪಡೆಯದೆ ಕಟ್ಟಡ ನಿರ್ಮಿಸಿತ್ತು. ಅನುಮತಿಯಿಲ್ಲದೆ ನಿರ್ಮಾಣ ನಡೆಸಿದ್ದ ಹಿನ್ನೆಲೆಯಲ್ಲಿ 27 ಕೋಟಿ ರೂ. ವೆಚ್ಚದ ರೆಸಾರ್ಟ್ಗೆ ಮೂರು ಪಟ್ಟು ದಂಡವಾಗಿ 81 ಕೋಟಿ ರೂ. ವಿಧಿಸಲಾಗಿದೆ. ಇದರ ಜೊತೆಗೆ ಮ್ಯೂಟೇಷನ್ ಶುಲ್ಕ 55.80 ಲಕ್ಷ ರೂ. ಹಾಗೂ ಭೂ ತೆರಿಗೆ 12.78 ಕೋಟಿ ರೂ. ಸೇರಿ ಒಟ್ಟು 94.65 ಕೋಟಿ ರೂ. ವಸೂಲಿಗೆ ಮಹಾಲೆಕ್ಕಪಾಲಕರ ಲೆಕ್ಕಪರಿಶೋಧನಾ ವರದಿ ಶಿಫಾರಸು ಮಾಡಿದೆ. ಇದೇ ರೀತಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿಯೂ ಪಂಚಾಯಿತಿ ಅನುಮತಿ ಪಡೆಯದೆ ಅನೇಕ ಕಂಪನಿಗಳು ಕಟ್ಟಡಗಳನ್ನು ನಿರ್ಮಿಸಿವೆ. ಅವುಗಳ ವಿರುದ್ಧವೂ ಸರ್ಕಾರ ಇದೇ ಮಾದರಿಯಲ್ಲಿ ಕ್ರಮ ಕೈಗೊಂಡು ದಂಡ ವಿಧಿಸಬೇಕು ಎಂದು ಇಲ್ಲಿನ ಹೋರಾಟಗಾರರ ಆಗ್ರಹ.

ಸಿಮೆಂಟ್ ಕಾರ್ಖಾನೆಗಳು ಸ್ಥಳೀಯ ಸಂಸ್ಥೆಗಳ ಅನುಮತಿ ಹಾಗೂ ಇತರೆ ನಿಯಮಗಳನ್ನು ಉಲ್ಲಂಘಿಸುತ್ತಿರುವ ಕುರಿತು ಅಧ್ಯಯನ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವಾಯುಮಾಲಿನ್ಯ, ಅರಣ್ಯೀಕರಣ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಈಗಾಗಲೇ ಕಾರ್ಖಾನೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

-ಇಕ್ರಮ್ ಶರೀಫ್

ಜಿಲ್ಲಾಧಿಕಾರಿ, ಕಲಬುರಗಿ

1961ರ ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1964ರ ಕರ್ನಾಟಕ ಭೂ ಕಂದಾಯ ಕಾಯ್ದೆ, 1993ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಹಾಗೂ 1961ರ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯನ್ನು ಉಲ್ಲಂಘಿಸಿರುವ ರಾಜಶ್ರೀ ಸಿಮೆಂಟ್ ಕಾರ್ಖಾನೆ ತೆರವುಗೊಳಿಸಿ, ರೈತರಿಗೆ ಅವರ ಭೂಮಿಯನ್ನು ಮರಳಿಸಬೇಕು.

-ಅಶೋಕ್ ಕುಮಾರ ಶೀಲವಂತ

ಸಾಮಾಜಿಕ ಹೋರಾಟಗಾರ, ಮಳಖೇಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ದಸ್ತಗೀರ ನದಾಫ್ ಯಳಸಂಗಿ

contributor

Similar News