ಜಾರ್ಖಂಡ್ | ಬುಡಕಟ್ಟು ಸಮುದಾಯದ ಪ್ರತಿಭಟನೆ : ಮಾಜಿ ಸಿಎಂ ಚಂಪೈ ಸೊರೇನ್‌ಗೆ ಗೃಹಬಂಧನ
ಚಂಪೈ ಸೊರೇನ್ | PTI
ಹೊಸದಿಲ್ಲಿ : ಜಾರ್ಖಂಡ್ ಸರಕಾರ ಬಹುಕೋಟಿ ವೆಚ್ಚದ ಆಸ್ಪತ್ರೆಯನ್ನು ನಿರ್ಮಿಸಲು ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವುದರ ವಿರುದ್ಧ ಬುಡಕಟ್ಟು ಸಮುದಾಯದ ಪ್ರತಿಭಟನೆ ಗಮನದಲ್ಲಿಟ್ಟುಕೊಂಡು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ತಪ್ಪಿಸಲು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಬುಡಕಟ್ಟು ಸಂಘಟನೆಗಳ ಪ್ರತಿಭಟನೆಗಳನ್ನು ಗಮನದಲ್ಲಿಟ್ಟುಕೊಂಡು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಚಂಪೈ ಸೊರೆನ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ" ಎಂದು ರಾಂಚಿ ನಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ರಾಮನ್ ತಿಳಿಸಿದ್ದಾರೆ.
ಬುಡಕಟ್ಟು ಜನರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದನ್ನು ವಿರೋಧಿಸಿ ರಾಂಚಿ ಕಡೆಗೆ ಪ್ರತಿಭಟನಾ ಮೆರವಣಿಗೆ ಮಾಡುತ್ತಿದ್ದ ಚಂಪೈ ಸೊರೇನ್ ಅವರ ಮಗ ಬಾಬುಲಾಲ್ ಸೊರೇನ್ ಹಾಗೂ ಅವರ ಬೆಂಬಲಿಗರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
"ಬುಡಕಟ್ಟು ಜನಾಂಗದ ಜನರು ಮತ್ತು ಅವರ ಪ್ರತಿಭಟನೆಯನ್ನು ಬೆಂಬಲಿಸಿದ್ದಕ್ಕಾಗಿ ನನ್ನನ್ನು ಗೃಹಬಂಧನದಲ್ಲಿರಿಸಲಾಗಿದೆ. ಈ ಕ್ರಮವು ಪ್ರಜಾಪ್ರಭುತ್ವ ವಿರೋಧಿ" ಎಂದು ಚಂಪೈ ಸೊರೇನ್ ಹೇಳಿದ್ದಾರೆ.