ಸಿದ್ದು ಅಹಿಂದ, ಹರಿಪ್ರಸಾದ್ ಏನು?
ಕೆಪಿಸಿಸಿ ಅಧ್ಯಕ್ಷ ಬಳಿಕ ಬಿಕೆ. ಹರಿಪ್ರಸಾದ್ ಮಾಧ್ಯಮದವರಿಗೆ ಔತಣಕೂಟ ಆಯೋಜಿಸಿದ್ದರು. ಅಲ್ಲಿ ಪತ್ರಕರ್ತರೊಬ್ಬರು ‘ಸಿದ್ದರಾಮಯ್ಯ ಅವರದು ಅಹಿಂದ ರಾಜಕೀಯ. ಅದರಲ್ಲಿ ಅವರು ಯಶಸ್ವಿಯೂ ಆಗಿ ಈಗ ರಾಜಕೀಯದಿಂದ ನಿರ್ಗಮನದ ಹಾದಿಯಲ್ಲಿದ್ದಾರೆ. ನಿಮ್ಮದು ಯಾವ ರೀತಿಯ ರಾಜಕೀಯ?’ ಎಂಬರ್ಥದ ಪ್ರಶ್ನೆ ಕೇಳಿದರು. ಪ್ರಶ್ನೆ ಉತ್ಸಾಹ ಮತ್ತು ಉದ್ವೇಗದಿಂದ ಕೂಡಿತ್ತು ಮಾತ್ರವಲ್ಲ, ಉದ್ದವಾಗಿ ಕೂಡ ಇತ್ತು. ಹರಿಪ್ರಸಾದ್ ತಣ್ಣಗೆ ಎರಡೇ ಪದಗಳಲ್ಲಿ ‘ಸಾಮಾಜಿಕ ನ್ಯಾಯ’ ಎಂದರು.
ಪ್ರಶ್ನೆ ಕೇಳಿದವರಿಗೆ ಹರಿಪ್ರಸಾದ್ ಅವರ ರಾಜಕೀಯ ಪರಿಭಾಷೆ ಏನು? ಯಾವ ನಿರೂಪಣೆಯ ಮೂಲಕ ರಾಜಕೀಯದ ಏಣಿ ಏರಲುಹೊರಟಿದ್ದಾರೆ? ಎನ್ನುವುದನ್ನು ತಿಳಿಯುವ ಉತ್ಸಾಹದ ಜೊತೆಗೆ ಹರಿಪ್ರಸಾದ್ ಅವರನ್ನು Brand ಮಾಡುವ, ಅಹಿಂದದ ಉತ್ತರಾಧಿಕಾರಿ ಪಟ್ಟವನ್ನು ಹರಿಪ್ರಸಾದ್ ತಲೆಗೆ ಕಟ್ಟುವ, ಹರಿಪ್ರಸಾದ್ ಮತ್ತು ಸಿದ್ದರಾಮಯ್ಯ ಅವರನ್ನು ಒಂದೇ ತಕ್ಕಡಿಗೆ ಹಾಕಿ ತೂಗುವ ಅಥವಾ ಸಿದ್ದರಾಮಯ್ಯ ಎದುರು ಹರಿಪ್ರಸಾದ್ ಅವರನ್ನು ಕುಸ್ತಿಗಿಳಿಸುವ ಉದ್ದೇಶಗಳು ಇದ್ದವೇನೋ? ಆದರೆ ಹರಿಪ್ರಸಾದ್ ಸಾಮಾಜಿಕ ನ್ಯಾಯ ಎಂಬ ರಕ್ಷಣಾ ಕವಚ ಹಿಡಿದು ಪತ್ರಕರ್ತ ಬಯಸಿದ ರೀತಿ Brand ಆಗಲು ಅವಕಾಶ ಕೊಡಲಿಲ್ಲ.
ಸ್ವಲ್ಪಹೊತ್ತಿನ ಬಳಿಕ ಮತ್ಯಾವುದೋ ಪ್ರಶ್ನೆಗೆ ಉತ್ತರಿಸುತ್ತಾ ‘ಸಾಮಾಜಿಕ ನ್ಯಾಯ ಎನ್ನುವುದು ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಕಾಂಗ್ರೆಸ್ ಸಿದ್ಧ್ದಾಂತವೇ ನನ್ನ ಸಿದ್ದಾಂತ’ ಎಂದು ಉತ್ತರಿಸಿದರು. ಜೊತೆಗೆ ಕಾಂಗ್ರೆಸ್ ಎಲ್ಲರನ್ನೂ ಒಳಗೊಳ್ಳುವ, ಎಲ್ಲಾ ಜಾತಿ, ಜನಾಂಗದ ಬಡವರ ಪರ ಮಿಡಿಯುವ ಪಕ್ಷ ಎಂದು ವಿವರಿಸಿದರು. ಆ ಮೂಲಕ ತನ್ನದು ಕಾಂಗ್ರೆಸ್ Brand , ಸಾಮಾಜಿಕ ನ್ಯಾಯದ Brand ಎನ್ನುವುದನ್ನು ಸ್ಪಷ್ಟಪಡಿಸಿದರು.
ಹರಿಪ್ರಸಾದ್ ಅವರಿಗೆ ಅವರ ಪಕ್ಷದ ಸಿದ್ಧಾಂತದ ಬಗ್ಗೆ ಸ್ಪಷ್ಟತೆ ಇದೆ ಎನ್ನುವುದರಲ್ಲಿ ಯಾರಿಗೂ ಅನುಮಾನವಿಲ್ಲ. ಆದರೆ ಅದು ಸೇನಾನಿಯಾಗಿ ಅವರಲ್ಲಿ ಮಾತ್ರ ಇದ್ದರೆ ಸಾಲದು, ಅವರ ಪಕ್ಷದ ಬೇರೆ ನಾಯಕರು ಮತ್ತು ಕಾಲಾಳುಗಳಿಗೂ ತಿಳಿದಿರಬೇಕು. ವಾಸ್ತವ ಏನೆಂದರೆ ಬಹುಪಾಲು ಕಾಂಗ್ರೆಸಿಗರಿಗೆ ಇದರ ಗಂಧ-ಗಾಳಿಯೇ ಗೊತ್ತಿಲ್ಲ. ಹರಿಪ್ರಸಾದ್ ಅಂತಹ ತಿಳಿವಳಿಕೆ ಇಲ್ಲದವರ ಜೊತೆ ಸೇರಿಕೊಂಡೇ ಕಾಂಗ್ರೆಸ್ ಎಂಬ ಜಡ್ಡುಗಟ್ಟಿರುವ ಬಂಡಿಯನ್ನು ಸಾಮಾಜಿಕ ಸ್ಪಷ್ಟತೆಯತ್ತ ಕೊಂಡೊಯ್ಯಬೇಕಿದೆ. ಅದು ಅತ್ಯಂತ ಸವಾಲಿನ ಕೆಲಸ. ಅದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದರ ಮೇಲೆ ಅವರ ಸೋಲು-ಗೆಲುವು ನಿರ್ಧಾರವಾಗುತ್ತದೆ.
ಸದ್ಯಕ್ಕೆ ಸಾಮಾಜಿಕ ನ್ಯಾಯದ ರಥ ಸ್ಥಗಿತಗೊಂಡಿರುವುದು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯಲ್ಲಿ. ಕೆಪಿಸಿಸಿಯ ಮುಂಚೂಣಿ ಘಟಕಗಳಲ್ಲಿ ಒಕ್ಕಲಿಗರದೇ ಪ್ರಾಬಲ್ಯ. ಕೆಪಿಸಿಸಿ ಕಚೇರಿಯ ಸಿಬ್ಬಂದಿಯಲ್ಲೂ ಒಕ್ಕಲಿಗರಿಗೇ ಅಗ್ರ ಪಾಲು. ಪಕ್ಷದಲ್ಲಿ ಮಾತ್ರವಲ್ಲ, ಕಾಂಗ್ರೆಸ್ ಸರಕಾರದ ಇತ್ತೀಚಿನ ನೇಮಕಾತಿಗಳಲ್ಲೂ ಒಕ್ಕಲಿಗ ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ಹುಡುಕಿಕೊಂಡು ಬರುತ್ತಿದೆ. ರಾಜಕೀಯ ನೇಮಕಾತಿಗಳಲ್ಲೂ ಒಕ್ಕಲಿಗ ಓಲೈಕೆ ನಾಗಾಲೋಟದಿಂದ ಸಾಗಿದೆ. ಒಕ್ಕಲಿಗ ಸಮುದಾಯದ ನಿವೃತ್ತ ಅಧಿಕಾರಿಗಳನ್ನು ಕೂಡ ಹುಡುಕಿ ಅವರಿಗೆ ಬೇರೆ ಬೇರೆ ರೀತಿಯ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ.
ಇದರ ಬಗ್ಗೆ ಪಕ್ಷದ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ. ‘ಮತ ಹಾಕಲು ಅಹಿಂದ ವರ್ಗ, ಅಧಿಕಾರ ಅನುಭವಿಸುವುದು ಮಾತ್ರ ಒಕ್ಕಲಿಗರು’ ಎಂದು ಗೊಣಗುತ್ತಿರುತ್ತಾರೆ. ‘ಬಹಿರಂಗವಾಗಿ ಮಾತನಾಡಿ’ ಎಂದರೆ ‘ಪಕ್ಷದಲ್ಲಿ ಅಂತಹ ಪರಿಸ್ಥಿತಿ ಇಲ್ಲ’ ಎಂಬ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಹರಿಪ್ರಸಾದ್ ಪಕ್ಷದೊಳಗಿರುವ ಈ ಅಬಲರಿಗೆ ದನಿಯಾಗಬೇಕಾಗಿದೆ.
ನೇಮಕಾತಿ ಮಾತ್ರವಲ್ಲ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ) ವರದಿ ಜಾರಿ ಮಾಡುವ ಹಾಗೂ ಅನುದಾನ ಹಂಚಿಕೆ ಮಾಡುವ ವಿಷಯಗಳಲ್ಲೂ ವ್ಯತ್ಯಾಸಗಳಾಗಬಹುದು. ಹೇಗೂ ಸರಕಾರ ಮತ್ತು ಪಕ್ಷದ ನಡುವೆ ಸಮನ್ವಯ ಸಾಧಿಸಲು ರಾಜಕೀಯ ವ್ಯವಹಾರಗಳ ಸಮಿತಿ ರಚಿಸುತ್ತಿರುವುದರಿಂದ ಆ ಮೂಲಕವಾದರೂ ಜಾತಿ ಸಮೀಕ್ಷೆ ಜಾರಿಗೆ ಒತ್ತಡ ಹೇರಬೇಕಾಗಿದೆ. ಅನುದಾನ ಹಂಚಿಕೆಯಲ್ಲಿ ಅನ್ಯಾಯಗಳಾಗದಂತೆ ನೋಡಿಕೊಳ್ಳಬೇಕಿದೆ.
ಇದು ಕರ್ನಾಟಕ ಕಾಂಗ್ರೆಸ್ ಪರಿಸ್ಥಿತಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲೂ ರಾಹುಲ್ ಗಾಂಧಿಗಿರುವ ಸ್ಪಷ್ಟತೆ ಬೇರೆ ನಾಯಕರಿಗಿಲ್ಲ. ರಾಹುಲ್ ಗಾಂಧಿ ಕೂಡ ‘ಚುನಾವಣೆ ಗೆಲ್ಲುವುದು ಮುಖ್ಯವಲ್ಲ, ಸೈದ್ಧಾಂತಿಕವಾಗಿ ಸ್ಪಷ್ಟವಾಗಿರುವುದು ಮುಖ್ಯ, ಆರೆಸ್ಸೆಸ್ ಅನ್ನು ಒಪ್ಪುವವರು ಕಾಂಗ್ರೆಸ್ ಅನ್ನು ಬಿಟ್ಟು ಹೋಗಬಹುದು’ ಎನ್ನುತ್ತಾರೆ. ಇಲ್ಲಿ ಹರಿಪ್ರಸಾದ್ ಆರೆಸ್ಸೆಸ್ ಅನ್ನು ಒಪ್ಪಿಕೊಳ್ಳುವವರನ್ನು ಉಚ್ಚಾಟನೆ ಮಾಡಲಾಗುವುದೆಂದು ಹೇಳುತ್ತಾರೆ. ಏನೇ ಸ್ಪಷ್ಟತೆ, ಬದ್ಧತೆ ಮತ್ತು ಅಧಿಕಾರ ಇದ್ದರೂ ಕೆಲವೊಂದು ವಿಷಯದಲ್ಲಿ ರಾಹುಲ್ ಗಾಂಧಿ ಅಸಹಾಯಕರಾಗಿ ಕಾಣುತ್ತಾರೆ. ಹರಿಪ್ರಸಾದ್ ಕೂಡ ಎಷ್ಟೇ ಸ್ಪಷ್ಟತೆ, ಬದ್ಧತೆ ಮತ್ತು ಅಧಿಕಾರ ಇದ್ದರೂ ವಾಸ್ತವದಲ್ಲಿ ಎಲ್ಲವನ್ನೂ ಒಂದೇ ಏಟಿಗೆ ಸಾಧಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿಯೇ ಕಾಯುತ್ತಿದ್ದಾರೆ ಎಂದರೆ ಹರಿಪ್ರಸಾದ್ ಕೂಡ ಕಾಯಬೇಕಾಗುತ್ತದೆ. ಕಾಯುವುದು ಮಾತ್ರ ಮುಖ್ಯವಲ್ಲ, ಕಾದು ಏನು ಮಾಡುತ್ತೇವೆ ಎನ್ನುವುದು ಮುಖ್ಯ. ಹರಿಪ್ರಸಾದ್ ಅದನ್ನು ಮಾಡಿ ತೋರಿಸಬೇಕಾಗಿದೆ. ಕಡೆಯ ಪಕ್ಷ ಸಾಮಾಜಿಕ ನ್ಯಾಯದ ರಥವನ್ನು ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗಾದರೂ ಎಳೆಯಬೇಕಾಗಿದೆ.
ಹರಿಪ್ರಸಾದ್‌ಗೆ ಮಂತ್ರಿ ಸ್ಥಾನ!
ಇದೆಲ್ಲದರ ನಡುವೆ ಬಿ.ಕೆ. ಹರಿಪ್ರಸಾದ್‌ಮಂತ್ರಿಯಾಗುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಜೊತೆಯಲ್ಲೇ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷಗಾದಿ ಮತ್ತು ಮಂತ್ರಿ ಸ್ಥಾನಗಳೆರಡನ್ನೂ ಕೊಡಲಿಲ್ಲ, ಹರಿಪ್ರಸಾದ್ ಅವರಿಗೇಕೆ ಎರಡು ಹುದ್ದೆ ಕೊಡಬೇಕು ಎನ್ನುವ ವಾದವೂ ಕೇಳಿಬರುತ್ತಿದೆ. ಆದರೆ ಇವರಿಬ್ಬರ ವಿಷಯಗಳು ಸಂಪೂರ್ಣವಾಗಿ ಭಿನ್ನವಾಗಿವೆ.
ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷಗಾದಿ ಮತ್ತು ಮಂತ್ರಿ ಸ್ಥಾನಗಳೆರಡಕ್ಕೂ ಬೇಡಿಕೆ ಇಟ್ಟಿದ್ದರು. ಎರಡೂ ಸಿಗುವುದಿಲ್ಲ ಎಂದಾದಾಗ ಮಂತ್ರಿ ಸ್ಥಾನವೊಂದನ್ನು ಮಾತ್ರವೇ ಆಯ್ಕೆ ಮಾಡಿಕೊಂಡರು. ಸತೀಶ್ ಪ್ರಕರಣ ಅವರು ಕೇಳುವುದು ಮತ್ತು ಹೈಕಮಾಂಡ್ ಕೊಡುವುದರ ಮೇಲೆ ನಿರ್ಧಾರವಾಗುವಂಥದ್ದು. ಹರಿಪ್ರಸಾದ್ ವಿಷಯ ಬೇರೆ. ಹರಿಪ್ರಸಾದ್ ಪಕ್ಷ ಸೋಲುವ ಪರಿಸ್ಥಿತಿ ಇದೆ ಎಂದು ಗೊತ್ತಿದ್ದರೂ ಹೈಕಮಾಂಡ್ ಹೇಳಿದ ತಕ್ಷಣ ಮರು ಮಾತನಾಡದೆ ಬೇರೆ ಬೇರೆ ರಾಜ್ಯಗಳಿಗೆ ಉಸ್ತುವಾರಿಯಾಗಿ ಹೋಗಿ ಕೆಲಸ ಮಾಡಿದ್ದಾರೆ. ಪಕ್ಷ ಹೇಳಿದ ಕಾರಣಕ್ಕಾಗಿಯೇ ಉಪರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಾರೆ. ಸೋಲುವುದು ಮಾತ್ರವಲ್ಲ, ತಮ್ಮದಲ್ಲದ ಸೋಲನ್ನು ಒಪ್ಪಿಕೊಂಡಿದ್ದಾರೆ. ನಾಲ್ಕು ದಶಕಗಳಿಂದ ರಾಷ್ಟ್ರ ರಾಜಕೀಯದಲ್ಲೇ ಇದ್ದರೂ ಸೋನಿಯಾ ಗಾಂಧಿ ಹೇಳಿದರೆಂಬ ಒಂದೇ ಒಂದು ಕಾರಣಕ್ಕೆ ರಾಜ್ಯಕ್ಕೆ ಮರಳಿದರು. ಅವರ ಪಕ್ಷ ನಿಷ್ಠೆ ಪ್ರಶ್ನಾತೀತ. ಅವರು ಹೈಕಮಾಂಡಿನ ನಂಬಿಕಸ್ಥ ಆಜ್ಞಾಪಾಲಕ.
ಹರಿಪ್ರಸಾದ್ ಹೈಕಮಾಂಡ್ ಮುಂದೆ ಯಾವ ಬೇಡಿಕೆಯನ್ನೂ ಇಟ್ಟಿಲ್ಲ. ‘ಬೆದರಿಕೆಯ’ನ್ನೂ ಹಾಕಿಲ್ಲ. ಹೈಕಮಾಂಡ್ ನಾಯಕರೇ ಖುದ್ದಾಗಿ ಕೆಪಿಸಿಸಿ ಅಧ್ಯಕ್ಷಗಾದಿಯನ್ನು ಕೊಟ್ಟಿದ್ದಾರೆ. ಮುಂದೆ ಹರಿಪ್ರಸಾದ್ ಅವರನ್ನು ಮಂತ್ರಿ ಮಾಡುವ ಬಗ್ಗೆ ಹೈಕಮಾಂಡ್ ನಿಲುವೇನು ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಕೆಪಿಸಿಸಿಯ ಪದವಿ ಇದ್ದರೂ ಮಂತ್ರಿಯಾಗಲು ಹರಿಪ್ರಸಾದ್ ಬೇರೆಲ್ಲರಿಗಿಂತ ನೂರು ಪಟ್ಟು ಅರ್ಹರು.
► ಪಿಚ್ಚರ್ ಬಾಕಿ ಹೈ!
ಮೊದಲಿಗೆ ರಾಮಲಿಂಗಾರೆಡ್ಡಿ ತಮಗೆ ಬೆಂಗಳೂರು ಅಭಿವೃದ್ಧಿ ಖಾತೆಯೇ ಬೇಕು ಎಂದು ಪಟ್ಟು ಹಿಡಿದು ಅದಕ್ಕಾಗಿ ರಾಜೀನಾಮೆಯನ್ನು ಕೊಟ್ಟು ಪಕ್ಷ ಮತ್ತು ಸರಕಾರವನ್ನು ಮುಜುಗರಕ್ಕೆ ಈಡುಮಾಡಿದ್ದರು. ಹೋಗಲಿ, ಬೆಂಗಳೂರು ಅಭಿವೃದ್ಧಿ ಖಾತೆ ಪಡೆದ ಕೃಷ್ಣ ಬೈರೇಗೌಡರಾದರೂ ಖುಷಿಯಾಗಿದ್ದಾರಾ ಎಂದರೆ ಅದೂ ಇಲ್ಲ. ಅವರು ಬಿಡಿಎ ಮತ್ತು ಬಿಎಂಆರ್ ಡಿಎ ಹೊರತುಪಡಿಸಿ ಕೊಡುವುದಾದರೆ ಬೆಂಗಳೂರು ಅಭಿವೃದ್ಧಿ ಖಾತೆಯೇ ಬೇಡ ಎಂದು ವಾರಗಟ್ಟಲೆ ಅಧಿಕಾರವನ್ನೇ ಸ್ವೀಕರಿಸಿರಲಿಲ್ಲ. ನಡುವೆ ಕೆ.ಎಚ್. ಮುನಿಯಪ್ಪ ಕೂಡ ತಮ್ಮ ಹಿರಿತನಕ್ಕೆ ತಕ್ಕಂತಹ ಖಾತೆ ಕೊಡದೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಗೆ ಸೀಮಿತಗೊಳಿಸಿದ್ದಾರೆ ಎಂದು ಬೇಸರ ಮಾಡಿಕೊಂಡಿದ್ದರು. ಈಗ ಹೊಸ ಖಾತೆ ಖ್ಯಾತೆ ಶುರುವಾಗಿದೆ. ಬೃಹತ್ ಕೈಗಾರಿಕೆ ಖಾತೆಯಿಂದ ಬಂಡವಾಳ ಹೂಡಿಕೆಯನ್ನು ತೆಗೆದು ಅದಕ್ಕೆ ಪ್ರತ್ಯೇಕ ಖಾತೆ ಮಾಡಲು ಹೊರಟಿರುವುದರಿಂದ ಮತ್ತೊಬ್ಬ ಹಿರಿಯ ಸಚಿವ ಎಂ.ಬಿ. ಪಾಟೀಲ್ ಸಿಟ್ಟಾಗಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಂದಿನಂತೆ ‘ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಲಾಗುವುದು’ ಎನ್ನುವ ಸಿದ್ಧ್ದ ಸಮಾಧಾನ ಲಭಿಸಿದೆ.
ಮುಖ್ಯಮಂತ್ರಿಯನ್ನು ಬಿಟ್ಟರೆ ಮಂತ್ರಿ ಮಂಡಲದಲ್ಲಿ ಇರುವುದೇ ಹದಿಮೂರು ಮಂದಿ. ಅದರ ಪೈಕಿ ನಾಲ್ವರಿಗೆ ಅಸಮಾಧಾನ ಇದೆ. ಇದರ ಬಗ್ಗೆ ಕಾಂಗ್ರೆಸ್ ನಾಯಕರು ‘ಇದು ಟ್ರೈಲರ್, ಪಿಚ್ಚರ್ ಅಭಿ ಬಾಕಿ ಹೈ’ ಎಂದು ಹೇಳುತ್ತಿದ್ದಾರೆ. ಜೊತೆಗೆ ಪರಿಸ್ಥಿತಿ ಹೀಗೆಯಾದರೆ ಸಚಿವರನ್ನು ಸಮಾಧಾನ ಪಡಿಸಲೆಂದೇ ಒಂದು ಪ್ರತ್ಯೇಕ ಖಾತೆಯನ್ನು ಮಾಡಬೇಕಾಗಬಹುದು ಎಂದು ಗೇಲಿ ಮಾಡುತ್ತಿದ್ದಾರೆ.
ಆಫ್ ದಿ ರೆಕಾರ್ಡ್!
ಹಿರಿಯೂರು ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಿ ಎಂಬ ಎಚ್.ಡಿ. ಕುಮಾರಸ್ವಾಮಿ ಬೇಡಿಕೆ ಬಿಜೆಪಿ ಪಾಲಿಗೆ ಸೆಕೆಂಡ್ ಟೆಸ್ಟ್ ಡೋಸ್. ಬಿಜೆಪಿಯ ನಿಯತ್ತನ್ನು ಪರೀಕ್ಷೆಗೆ ಒಡ್ಡಲೆಂದೇ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕಿತ್ತು. ಅದು ಮೊದಲ ಟೆಸ್ಟ್ ಡೋಸ್. ಚುನಾವಣೆಯಲ್ಲಿ ಸೋತರೂ ‘ಬಿಜೆಪಿ ಹೈಕಮಾಂಡಿಗೆ ನಿಮ್ಮ ರಾಜ್ಯ ನಾಯಕರು ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಲಿಲ್ಲ’ ಎಂಬ ಸಂದೇಶ ರವಾನಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದರು. ಅನುಕಂಪ ಗಿಟ್ಟಿಸಿದ್ದರು. ಈಗ ಹಿರಿಯೂರು ಟಿಕೆಟ್ ಕೇಳಿಬಿಡೋಣ. ಬೇಕಿದ್ದರೆ ಬಿಜೆಪಿಯ ರಾಷ್ಟ್ರೀಯ ನಾಯಕರು ನಿರಾಕರಿಸಲಿ. ಅದು ಮುಂದೊಂದು ದಿನ ಬೇರೆ ವಿಷಯದಲ್ಲಿ ಚೌಕಾಸಿ ಮಾಡಲು ಸಹಾಯಕ್ಕೆ ಬರುತ್ತದೆ. ಜೊತೆಗೆ ನಾವು ಮೋದಿ ಮತ್ತು ಅಮಿತ್ ಶಾ ಮಾತನ್ನು ಮೀರಿಲ್ಲ ಎನ್ನುವ ಅಭಿಪ್ರಾಯ ಮೂಡುತ್ತದೆ. ಒಂದೊಮ್ಮೆ ಟೆಕೆಟ್ ಕೊಟ್ಟು ಜೆಡಿಎಸ್ ಗೆದ್ದರೆ ಅದಕ್ಕೆ ತಮ್ಮ ಶಕ್ತಿ ಕಾರಣ ಎಂದು ಹೇಳಿಕೊಳ್ಳಬಹುದು. ಸೋತರೆ ರಾಜ್ಯ ಬಿಜೆಪಿ ನಾಯಕರ ಅಸಹಕಾರ ಕಾರಣ ಎಂದು ದೂರಬಹುದು. ಯಾವುದಾದರೂ ನಮಗೇ ಲಾಭ ಎನ್ನುವ ಲೆಕ್ಕಾಚಾರ ಕುಮಾರಸ್ವಾಮಿ ಅವರದಾಗಿರಬಹುದು. ಆದರೆ ರಾಜ್ಯ ಬಿಜೆಪಿ ನಾಯಕರ ಪಾಲಿಗೆ ಜಿಡಿಎಸ್ ಬಿಸಿ ತುಪ್ಪ- ಉಗಿಯುವಂತಿಲ್ಲ, ನುಂಗುವಂತಿಲ್ಲ.