ರಕ್ಷಣಾ ಉತ್ಪಾದನೆ: ಪಾರದರ್ಶಕತೆಗೇಕೆ ಪದರುಗಳು?
DRDO ಅಭಿವೃದ್ಧಿಪಡಿಸಿದ ದೇಶೀ ತಂತ್ರಜ್ಞಾನಗಳು, ಶಸ್ತ್ರಾಸ್ತ್ರಗಳ ಮಾಹಿತಿ, ಅಲ್ಲಿನ ಸಿಬ್ಬಂದಿಯೆಲ್ಲ ಖಾಸಗಿ ವಲಯಕ್ಕೆ ಮತ್ತು ಆ ಮೂಲಕ ಅಲ್ಲಿ ಹೂಡಿಕೆ ಮಾಡಿರುವ ವಿದೇಶೀ ಕಂಪೆನಿಗಳಿಗೆ ಲಭ್ಯ ಆದರೆ, ಅದರಿಂದ ದೇಶದ ಭದ್ರತೆಗೆ ಅಪಾಯ ಇಲ್ಲವೆ? ಈ ಖಾಸಗೀಕರಣದ ‘ಲಾಭ’ ಪಡೆಯಲಿರುವವರಾದರೂ ಯಾರು? ದೇಶದ ಸಾರ್ವಭೌಮತೆ ಕಾಪಾಡಬೇಕಾದ ರಕ್ಷಣಾ ವಲಯವನ್ನು ಇದರಿಂದ ಖಾಸಗಿಯವರ ಲಾಭಕ್ಕೆ ರಹದಾರಿ ಮಾಡಿಕೊಟ್ಟಂತಾಗಲಿಲ್ಲವೆ? ಎಂಬೆಲ್ಲ ಪ್ರಶ್ನೆಗಳು ಏಳತೊಡಗಿವೆ.
2029ರ ಹೊತ್ತಿಗೆ ಭಾರತದ ರಕ್ಷಣಾ ಉತ್ಪಾದನೆಗಳು ವಾರ್ಷಿಕ 3 ಲಕ್ಷ ಕೋಟಿ ರೂ.ಗಳಿಗೂ, ರಕ್ಷಣಾ ಸಾಮಗ್ರಿಗಳ ರಫ್ತು 50,000 ಕೋಟಿ ರೂ.ಗಳಿಗೂ ತಲುಪಬೇಕೆಂದು ಭಾರತ ಸರಕಾರವು ಗುರಿ ನಿಗದಿಪಡಿಸಿಕೊಂಡಿದೆ. 2014ರ ತನಕ ಅಂಜಿಕೆ, ಹಿಂಜರಿಕೆಗಳಲ್ಲೇ ಉದಾರೀಕರಣದ ಹಾದಿಯನ್ನು ಮನಮೋಹನ್ ಸಿಂಗ್ ಸರಕಾರ ತುಳಿದಿತ್ತು. 2014ರಲ್ಲಿ ನರೇಂದ್ರ ಮೋದಿಯವರ ಸರಕಾರ ಅಧಿಕಾರ ಸ್ವೀಕರಿಸಿದಾಗ (2014-15) ರಕ್ಷಣಾ ಉತ್ಪಾದನೆಗಳು ಕೇವಲ 46,428 ಕೋಟಿ ರೂ. ಗಳದಾಗಿದ್ದರೆ, ಈಗ (2025-26) ಅದು 1.78 ಲಕ್ಷ ರೂ. ಗಳಿಗೆ ತಲುಪಿದೆ. ಅದೇ ಅವಧಿಯಲ್ಲಿ ರಕ್ಷಣಾ ಉತ್ಪಾದನೆಗಳ ರಫ್ತು 686 ಕೋಟಿ ರೂ.ಗಳಿಂದ 38,424 ಕೋಟಿ ರೂ.ಗಳಿಗೆ ನೆಗೆದಿದೆ.
ಮಹತ್ವದ ಬೆಳವಣಿಗೆಯೇನೆಂದರೆ, ದೇಶದೊಳಗೆ ರಕ್ಷಣಾ ಉತ್ಪಾದನೆಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಭಾರತ ಸರಕಾರವು ಇದೇ ಆಗಸ್ಟ್ 25ರಂದು ತಮ್ಮ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯು (DRDO) ದಶಕಗಳ ಕಾಲ ಶ್ರಮ ಹಾಕಿ ಅಭಿವೃದ್ಧಿಪಡಿಸಿರುವ ಕ್ಷಿಪಣಿ ತಂತ್ರಜ್ಞಾನಗಳನ್ನು ಹರಿವಾಣದಲ್ಲಿಟ್ಟು ಖಾಸಗಿಯವರ ಪದತಲಕ್ಕೆ ಅರ್ಪಿಸಲು ತೀರ್ಮಾನಿಸಿದೆ. ಈ ಬಗ್ಗೆ ಪ್ರಕಟಿಸಿರುವ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರು, ಈ ಕ್ರಮದಿಂದ ದೇಶದಲ್ಲಿ ಖಾಸಗಿ ವಲಯ ರಕ್ಷಣಾ ಉತ್ಪಾದನೆಯಲ್ಲಿ ತೊಡಗಿಕೊಳ್ಳಲು ಮತ್ತು ಶಸ್ತ್ರಾಸ್ತ್ರ ಆಮದಿನ ಅವಲಂಬನೆಯ ಮೇಲೆ ನಿಯಂತ್ರಣ ಹೊಂದಲು ಸಹಾಯ ಆಗಲಿದೆ ಎಂದಿದ್ದಾರೆ.
ಈ ಬೆಳವಣಿಗೆಯಿಂದಾಗಿ, ಸಾಂಪ್ರದಾಯಿಕ ಕ್ಷಿಪಣಿಗಳಾದ ಆಕಾಶ್ (ಶತ್ರು ವಿಮಾನಗಳಿಂದ ರಕ್ಷಣೆ), ಅಸ್ತ್ರ (ಏರ್ ಟು ಏರ್ ಮಿಸೈಲ್), ನಾಗ್ (ಟ್ಯಾಂಕ್ ನಿರೋಧಕ ಗೈಡೆಡ್ ಮಿಸೈಲ್), ರುದ್ರಂ (ವಿಕಿರಣ ನಿರೋಧಕ ಮಿಸೈಲ್), ಪ್ರಳಯ್ (ಸರ್ಫೇಸ್ ಟು ಸರ್ಫೇಸ್ ಮಿಸೈಲ್), ಕುಶ (ದೀರ್ಘ ವ್ಯಾಪ್ತಿಯ ಶತ್ರು ಹಡಗು ನಿರೋಧಕ ಮಿಸೈಲ್), ಇತ್ಯಾದಿಗಳೆಲ್ಲ ಖಾಸಗಿ ವಲಯದಲ್ಲಿ ಉತ್ಪಾದನೆ ಆಗಲಿವೆ ಎಂದು ಊಹಿಸಲಾಗಿದೆ. ಈ ತೀರ್ಮಾನ ಸಾಂಪ್ರದಾಯಿಕ ಮಿಸೈಲ್‌ಗಳಿಗೆ ಸೀಮಿತವಾಗಿದ್ದು ಸಟ್ಯೆಾಟೆಜಿಕ್, ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳಿಗೆ ಅನ್ವಯ ಆಗುವುದಿಲ್ಲ ಎಂದು ರಕ್ಷಣಾ ಇಲಾಖೆ ಹೇಳಿಕೊಂಡಿದೆ. ಯಾವುದು ಖಾಸಗಿ ಕೈಗೆ ಎಂಬ ಕುರಿತು ನಿರ್ದಿಷ್ಟ ಪಟ್ಟಿಯನ್ನೇನೂ ರಕ್ಷಣಾ ಇಲಾಖೆ ಈ ನಿಟ್ಟಿನಲ್ಲಿ ಇನ್ನೂ ಬಿಡುಗಡೆ ಮಾಡಿಲ್ಲ. ಜೊತೆಗೆ, ಅನ್ವಯವಾಗುವ ಅರ್ಹತೆಗಳು, ಸರ್ಟಿಫಿಕೇಷನ್‌ಗಳು ಮತ್ತು ನಿಯಂತ್ರಕ ಪ್ರಾಧಿಕಾರಗಳು ಹಾಕುವ ಚೌಕಟ್ಟಿಗೆ ಅನುಗುಣವಾಗಿಯೇ ಈ ವರ್ಗಾವಣೆ ನಡೆಯಲಿದೆ ಎಂದು ಅದು ಹೇಳಿಕೊಂಡಿದೆ.
ಇಲ್ಲಿಯ ತನಕ ರಕ್ಷಣಾ ಉತ್ಪಾದನೆಗಳನ್ನು ಸರಕಾರಿ ವಲಯದ ಆರ್ಡಿನೆನ್ಸ್ ಕಾರ್ಖಾನೆಗಳು (OFB), ಸಾರ್ವಜನಿಕ ವಲಯದ HAL, BEL, BDL, BEML, MIDHANI, MDL, GRSE, GSL, HSL ಇತ್ಯಾದಿ ಕಂಪೆನಿಗಳು ಸರಕಾರದ ನೇರ ಆದೇಶವನ್ನನುಸರಿಸಿ ನಿರ್ವಹಿಸುತ್ತಿದ್ದವು. ಅವರಿಗೆ DRDO ತಂತ್ರಜ್ಞಾನ ವರ್ಗಾವಣೆ ಮಾಡುತ್ತಿತ್ತು. ನಿರ್ದಿಷ್ಟ PSUಗೆ ಉತ್ಪಾದನಾ ಆದೇಶ ಸಿಗುತ್ತಿತ್ತು. ಸ್ಪರ್ಧಾತ್ಮಕ ಟೆಂಡರ್ ಆಗಲೀ, ಅರ್ಹತೆ ತಪಾಸಣೆಯಾಗಲೀ ಇರುತ್ತಿರಲಿಲ್ಲ.
ರಕ್ಷಣಾ ಉತ್ಪಾದನೆಯ ಖಾಸಗೀಕರಣ ಆರಂಭ ಆದದ್ದು 2001ರಷ್ಟು ಹಿಂದೆಯೇ. ಅದರ ರೂವಾರಿ ಅಂದಿನ ಪ್ರಧಾನಿ ವಾಜಪೇಯಿ. ಆ ವರ್ಷ ರಕ್ಷಣಾ ವಲಯವನ್ನು ಖಾಸಗಿಗೆ ತೆರೆಯಲಾಯಿತಲ್ಲದೇ ಶೇ. 26 ವಿದೇಶೀ ಹೂಡಿಕೆಗೆ ಅನುಮತಿ ನೀಡಲಾಯಿತು. 2016ರಲ್ಲಿ ಮೋದಿ ಸರಕಾರ ಇದನ್ನು ಶೇ. 49ಕ್ಕೆ ಏರಿಸಿತು; ಮತ್ತು 2020ರಲ್ಲಿ ಹೊಸ ರಕ್ಷಣಾ ಖರೀದಿ ನೀತಿ (DAP) ಜಾರಿಗೆ ತಂದು, ಈ ಪ್ರಮಾಣವನ್ನು ಶೇ. 74ಕ್ಕೆ ಏರಿಸಲಾಯಿತು. ಆಧುನಿಕ ತಂತ್ರಜ್ಞಾನಗಳ ಸಂದರ್ಭದಲ್ಲಿ ಸರಕಾರದ ಒಪ್ಪಿಗೆಯ ಮೇರೆಗೆ ಶೇ. 100 FDIಗೂ ಅವಕಾಶ ಈಗ ತೆರೆದಿದೆ. ಇದಲ್ಲದೆ, 2019ರಲ್ಲಿ ದೇಶದ ಶಸ್ತ್ರಾಸ್ತ್ರ ಕಾರ್ಖಾನೆಗಳು ಉತ್ಪಾದಿಸುವ ಶೇ. 40ರಷ್ಟು ಐಟಂಗಳನ್ನು (ಇವು ಸುಮಾರು 275 ಐಟಂಗಳು) ‘ನಾನ್-ಕೋರ್’ ಐಟಂಗಳೆಂದು ಘೋಷಿಸಿ, ಅವುಗಳನ್ನು ಸೇನೆಗೆ ಖಾಸಗಿಯಿಂದ ಖರೀದಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ಇನ್ನೊಂದೆಡೆ, ಸರಕಾರಿ ಮಾಲಕತ್ವದಲ್ಲಿರುವ ಸಾರ್ವಜನಿಕ ವಲಯದ ಘಟಕಗಳಲ್ಲಿ ಸರಕಾರದ ಹೂಡಿಕೆಯನ್ನು ಹಂತಹಂತವಾಗಿ ಹಿಂದೆಗೆದುಕೊಳ್ಳಲಾಗುತ್ತಿದೆ ಹಾಗೂ ಅವನ್ನು ಪರಾಭಾರೆ ಮಾಡಲು ಸತತ ಪ್ರಯತ್ನಗಳು ನಡೆದಿವೆ.
ವ್ಯಾಪಾರ ಚಿಂತನದ ಇಬ್ಬಂದಿತನ
ಈ ರಕ್ಷಣಾ ಉತ್ಪಾದನೆ ವಲಯದ ಮ್ಯಾಕ್ರೋ ಚಿತ್ರಣವನ್ನು ಗಮನಿಸದೆ ಈಗಿನ ಬೆಳವಣಿಗೆಗಳನ್ನು ಒಂದು ಪರ್ಸ್‌ಪೆಕ್ಟಿವ್‌ನಲ್ಲಿ ಇರಿಸುವುದು ಕಷ್ಟ. 2000ನೇ ಇಸವಿಯ ತನಕವೂ ವಾಜಪೇಯಿ-ಅಡ್ವಾಣಿ ನೇತೃತ್ವದ ಬಿಜೆಪಿಯು ಯುಪಿಎ ಸರಕಾರಗಳ ಉದಾರೀಕರಣ ನೀತಿಯನ್ನು ವಿರೋಧಿಸುತ್ತಲೇ ಬಂದಿದ್ದವು. ಎಡ-ಬಲಗಳೆರಡರ ಜಂಟಿ ವಿರೋಧದ ಕಾರಣಕ್ಕೆ ಡಾ. ಮನಮೋಹನ್ ಸಿಂಗ್ ಮತ್ತವರ ತಂಡವು ಉದಾರೀಕರಣದ ಪ್ರತಿಯೊಂದೂ ಹೆಜ್ಜೆಯನ್ನು ಕದ್ದುಮುಚ್ಚಿಯೇ ಇಡಬೇಕಾದ ಸ್ಥಿತಿ ಇತ್ತು.
ಗಮನಿಸಬೇಕಾದ ಸಂಗತಿ ಎಂದರೆ, ಉದಾರೀಕರಣದ ವಿರುದ್ಧ ಇದ್ದ ಬಿಜೆಪಿ, ಅಧಿಕಾರಕ್ಕೆ ಬಂದ ಪ್ರತೀ ಹಂತದಲ್ಲೂ ವ್ಯಾಪಾರದ ಪ್ರಶ್ನೆ ಬಂದಾಗ, ತನ್ನ ಯಾವತ್ತೂ ಸ್ವದೇಶಿ ಚೌಕಟ್ಟನ್ನು ಉಲ್ಲಂಘಿಸುವ ಇಬ್ಬಂದಿತನ ತೋರಿಸುವುದು ಕುತೂಹಲಕರ. 2014ರ ಬಳಿಕವಂತೂ ಯಾವುದೇ ಎಗ್ಗಿಲ್ಲದೆ ಖಾಸಗೀಕರಣ ಪ್ರಕ್ರಿಯೆಯಲ್ಲಿ ತೊಡಗಿರುವ ಮೋದಿಯವರ ಸರಕಾರವು ತನ್ನ ಈ ಮೂರನೇ ಆಡಳಿತಾವಧಿಯಲ್ಲಿ ISRO, DRDOದಂತಹ ದೇಶದ ಆಯಕಟ್ಟಿನ ವ್ಯವಸ್ಥೆಗಳನ್ನೇ ಶಿಥಿಲಗೊಳಿಸಿ, ಖಾಸಗಿಯವರಿಗೆ ಮಾರಾಟಕ್ಕಿಡಲು ಹೊರಟಿದೆ. ರಕ್ಷಣಾ ಉತ್ಪಾದನೆಗಳ ವ್ಯಾಪಾರಕ್ಕೆ ಹಾದಿ ತೆರೆದು ದೇಶದ ಖಾಸಗಿ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಮತ್ತು ಅದೇ ವೇಳೆಗೆ, ಕಳೆದ 80 ವರ್ಷಗಳಲ್ಲಿ ಇಂಚಿಂಚಾಗಿ ಕಟ್ಟಿ-ಬೆಳೆದು ನಿಂತಿರುವ ದೇಶದ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಶಿಥಿಲಗೊಳಿಸುವ ಕೆಲಸ ಏಕಕಾಲಕ್ಕೆ ನಡೆಯುತ್ತಿದೆ. ಇತ್ತೀಚೆಗೆ ಇಸ್ರೋದಿಂದ ವಿಜ್ಞಾನಿಗಳು ಖಾಸಗಿ ವಲಯಕ್ಕೆ ಗುಳೆ ಹೋದ ರೀತಿಯಲ್ಲೇ DRDOದಿಂದಲೂ ಖಾಸಗಿ ವಲಯಕ್ಕೆ ಉದ್ಯೋಗಿಗಳು ಗುಳೆ ಹೋಗುವ ದಿನಗಳು ದೂರವಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ವಿದೇಶಿ ಹೂಡಿಕೆ ಹೊಂದಿರುವ ಖಾಸಗಿ ರಕ್ಷಣಾ ಉತ್ಪಾದನೆ ಸಂಸ್ಥೆಗಳಿಗೆ ದೇಶದ ಆಯಕಟ್ಟಿನ ತಂತ್ರಜ್ಞಾನಗಳ ವರ್ಗಾವಣೆಯ ದೀರ್ಘಕಾಲಿಕ ಪರಿಣಾಮಗಳೇನು ಎಂಬುದಿನ್ನೂ ಸ್ಪಷ್ಟವಿಲ್ಲ. 200 ವರ್ಷಗಳಷ್ಟು ಹಳೆಯ 41 ಶಸ್ತ್ರಾಸ್ತ್ರ ಕಾರ್ಖಾನೆಗಳ ಮಂಡಳಿ (ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ -OFB) 70ಸಾವಿರಕ್ಕೂ ಮಿಕ್ಕಿ ಸಿಬ್ಬಂದಿಯನ್ನು ಹೊಂದಿರುವ ಸಂಸ್ಥೆ ಆಗಿತ್ತು. ಅದನ್ನು 2021ರಲ್ಲಿ ಖಾಸಗೀಕರಿಸಿ ಏಳು ಪ್ರತ್ಯೇಕ ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆ (DPSU)ಗಳೆಂದು ವಿಂಗಡಿಸಲಾಯಿತು. ಸಾಮರ್ಥ್ಯ ವೃದ್ಧಿ, ಉತ್ತರದಾಯಿತ್ವದ ಹೆಸರಲ್ಲಿ ನಡೆದ ಈ ಬದಲಾವಣೆಗಳಿಂದ ಆ ಎಲ್ಲ ಪ್ರತ್ಯೇಕ ಕಂಪೆನಿಗಳೂ ಇಂದು ರೋಗಗ್ರಸ್ಥ ಆಗತೊಡಗಿವೆ. ಈಗ ಹಿಂದಿರುಗಿ ನೋಡಿದರೆ, ಇದು ರಕ್ಷಣಾ ಉತ್ಪಾದನೆ ಕ್ಷೇತ್ರದ ಖಾಸಗೀಕರಣಕ್ಕೆ ನೆಲ ಹದನುಗೊಳಿಸುವ ಕೆಲಸವಾಗಿತ್ತೆಂದೇ ತೋರುತ್ತದೆ.
ಇಂದು ಅದಾನಿ, ಟಾಟಾ, ಲಾರ್ಸನ್ ಆಂಡ್ ಟೂಬ್ರೊ, ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್, ಭಾರತ್ ಫೋರ್ಜ್, ಗಾಡ್ರೆಜ್, JSW ಮತ್ತಿತರ ಕಾರ್ಪೊರೇಟ್ ದಿಗ್ಗಜರು ರಕ್ಷಣಾ ಕ್ಷೇತ್ರ ಪ್ರವೇಶಿಸಿದ್ದಾರೆ. iDEX, ADITI, TDF ಇತ್ಯಾದಿ ನವೋದ್ಯಮ ಹಾದಿಗಳು ಅಸಂಖ್ಯ ಸ್ಟಾರ್ಟಪ್‌ಗಳು ಮತ್ತು MSMEಗಳನ್ನು ರಕ್ಷಣಾ ಕ್ಷೇತ್ರದಲ್ಲಿ ಡ್ರೋನ್, ಎಐ, ರೊಬೊಟಿಕ್ಸ್ ಇತ್ಯಾದಿ ಉತ್ಪಾದನೆಗೆ ತೊಡಗಿಸಿವೆ. ಖಾಸಗಿ ರಂಗದ ಪಾಲು ರಕ್ಷಣಾ ಉತ್ಪಾದನೆಯಲ್ಲಿ ಕೇವಲ ಶೇ. 23 ಆದರೂ, ದೇಶದ ರಕ್ಷಣಾ ಉತ್ಪಾದನೆ ರಫ್ತಿನಲ್ಲಿ ಅವರ ಪಾಲು ಇಂದು ಶೇ. 64ರಷ್ಟಿದೆ!
ಇಂದು ಆಧುನಿಕ ಡೇಟಾಯುಗದಲ್ಲಿ, ಈ ರೀತಿ ಆಯಕಟ್ಟಿನ ಜಾಗದ ಖಾಸಗೀಕರಣಗಳು ಎಷ್ಟು ಅಪಾಯಕಾರಿ ಎಂಬುದಕ್ಕೆ ಇನ್ನೊಂದು ಉದಾಹರಣೆ iDEX (Innovations for Defence Excellence) ಯೋಜನೆ. 2018ರಲ್ಲಿ ಆರಂಭಗೊಂಡ ಈ ಯೋಜನೆಯ ಅಡಿಯಲ್ಲಿ ರಕ್ಷಣಾ ಸ್ಟಾರ್ಟ್ ಅಪ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ತೊಡಗಿಕೊಂಡಿರುವ ಕಂಪೆನಿಗಳು ತಮ್ಮ ಕರ್ತವ್ಯ ನಿರ್ವಹಣೆಗಾಗಿ ದೇಶದ ಅತ್ಯಂತ ಸೂಕ್ಷ್ಮ ಸೇನಾ ಮಾಹಿತಿಗಳನ್ನೆಲ್ಲ ತಮ್ಮಲ್ಲಿ ಹೊಂದಿವೆಯಂತೆ. ಆದರೆ, ಈ ಕಂಪೆನಿಗಳ ಅಲ್ಗಾರಿದಂಗಳು, ಸಾಫ್ಟ್‌ವೇರ್‌ಗಳ ಮೇಲಿನ ನಿಯಂತ್ರಣ ಯಾರದೆಂಬ ಸಂಗತಿಗಳು ಪಾರದರ್ಶಕವಾಗಿಲ್ಲ. ಡೇಟಾ ಸುರಕ್ಷತೆಗೆ ನಮ್ಮಲ್ಲಿನ್ನೂ ಕಾನೂನೇ ಜಾರಿಗೆ ಬಂದಿಲ್ಲ!
ಇಂತಹ ಸಂಗತಿಗಳೆಲ್ಲ ದೇಶದ ಭದ್ರತೆಗೆ ಅಪಾಯ ತಂದೊಡ್ಡ ಬಲ್ಲವು ಎಂಬ ಸಂಗತಿಗಳು ಯಾರನ್ನೂ ಕುಟುಕುತ್ತಿಲ್ಲ. DRDO ಅಭಿವೃದ್ಧಿಪಡಿಸಿದ ದೇಶೀ ತಂತ್ರಜ್ಞಾನಗಳು, ಶಸ್ತ್ರಾಸ್ತ್ರಗಳ ಮಾಹಿತಿ, ಅಲ್ಲಿನ ಸಿಬ್ಬಂದಿಯೆಲ್ಲ ಖಾಸಗಿ ವಲಯಕ್ಕೆ ಮತ್ತು ಆ ಮೂಲಕ ಅಲ್ಲಿ ಹೂಡಿಕೆ ಮಾಡಿರುವ ವಿದೇಶೀ ಕಂಪನಿಗಳಿಗೆ ಲಭ್ಯ ಆದರೆ, ಅದರಿಂದ ದೇಶದ ಭದ್ರತೆಗೆ ಅಪಾಯ ಇಲ್ಲವೆ? ಈ ಖಾಸಗೀ ಕರಣದ ‘ಲಾಭ’ ಪಡೆಯಲಿರುವವರಾದರೂ ಯಾರು? ದೇಶದ ಸಾರ್ವಭೌಮತೆ ಕಾಪಾಡಬೇಕಾದ ರಕ್ಷಣಾ ವಲಯವನ್ನು ಇದರಿಂದ ಖಾಸಗಿಯವರ ಲಾಭಕ್ಕೆ ರಹದಾರಿ ಮಾಡಿಕೊಟ್ಟಂತಾಗಲಿಲ್ಲವೆ? ಎಂಬೆಲ್ಲ ಪ್ರಶ್ನೆಗಳು ಏಳತೊಡಗಿವೆ.