ಚುನಾವಣಾ ಬಾಂಡ್ ಎಂಬ ಶತಮಾನದ ಅಕ್ರಮ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆರಂಭದಿಂದಲೂ ನೆಪ ಹೇಳುತ್ತ ಕಾಲಹರಣ ಮಾಡಿತು. ದತ್ತಾಂಶ ಕುರಿತು ಸುಳ್ಳು ಹೇಳಿತ್ತು ಎನ್ನುವುದು ಈಗ ಸಾಬೀತಾಗಿದೆ. ಬ್ಯಾಂಕ್ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕಿದೆ. ಹೀಗಾದಲ್ಲಿ ಭವಿಷ್ಯದಲ್ಲಿ ಬ್ಯಾಂಕ್ ಮತ್ತಿತರ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳನ್ನು ರಾಜಕೀಯಸ್ಥರು ದುರುಪಯೋಗ ಮಾಡಿಕೊಳ್ಳುವುದು ನಿಲ್ಲಬಹುದು. ಬಾಂಡ್‌ಗಳು ಅಸಾಂವಿಧಾನಿಕ ಎಂದಾಗಿರುವುದರಿಂದ, ಪಕ್ಷಗಳು ಹಣ ನೀಡಿದವರಿಗೆ ಹಿಂದಿರುಗಿಸಬೇಕು.

Update: 2024-03-29 04:08 GMT
Editor : Thouheed | Byline : ಋತ

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ‘ಬಂಧನದಿಂದ ರಕ್ಷಣೆ ನೀಡುವುದಿಲ್ಲ’ ಎಂದು ನ್ಯಾಯಾಲಯ ಹೇಳಿದ ಕೆಲವೇ ಗಂಟೆಗಳಲ್ಲಿ ಜಾರಿ ನಿರ್ದೇಶನಾಲಯ ಅವರ ಮನೆ ಬಾಗಿಲು ತಟ್ಟಿ ಅವರನ್ನು ಬಂಧಿಸುತ್ತದೆ. ಬಿಆರ್‌ಎಸ್‌ನ ಶಾಸಕಿ ಕೆ.ಕವಿತಾ ಕೂಡ ಇದೇ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಆದರೆ, ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಸಾಕ್ಷಿಯಾಗಿ ಬದಲಾದವರು ಅರಬಿಂದೋ ಫಾರ್ಮಾ ಅಧ್ಯಕ್ಷ ಪೆನಕಾ ಶರತ್‌ಚಂದ್ರ ರೆಡ್ಡಿ. ಈತನನ್ನು ಈ.ಡಿ. 2022ರ ನವೆಂಬರ್ 10ರಂದು ಬಂಧಿಸಿತ್ತು. ಆನಂತರ ನವೆಂಬರ್ 15ರಂದು ರೆಡ್ಡಿ 5 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿದರು. ಅದನ್ನು ಬಿಜೆಪಿ ನವೆಂಬರ್ 21ರಂದು ನಗದು ಮಾಡಿಕೊಂಡಿತು. ರೆಡ್ಡಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಈ.ಡಿ. ವಿರೋಧಿಸುವುದಿಲ್ಲ. ಜಾಮೀನು ಅವಧಿ ಮುಗಿದ ಬಳಿಕ ಪತ್ನಿಯ ಅನಾರೋಗ್ಯದ ನೆಪ ಹೂಡಿ, ಮತ್ತೆ ಜಾಮೀನು ಅರ್ಜಿ ಸಲ್ಲಿಸುತ್ತಾರೆ. ಜಾಮೀನು ಮಂಜೂರಾಗುತ್ತದೆ. ಒಂದು ತಿಂಗಳ ಬಳಿಕ ಅವರು ಮಾಫಿ ಸಾಕ್ಷಿ (ಅಪ್ರೂವರ್) ಆಗಿ ಬದಲಾಗುತ್ತಾರೆ. ಈ.ಡಿ. ಆರೋಪ ಕೈಬಿಡುತ್ತದೆ ಮತ್ತು ರೆಡ್ಡಿ ಸ್ವತಂತ್ರರಾಗುತ್ತಾರೆ.

ಕೃತಜ್ಞತಾಪೂರ್ವಕವಾಗಿ ನವೆಂಬರ್ 8, 2023ರಂದು 25 ಕೋಟಿ ರೂ. ಬಾಂಡ್ ಖರೀದಿಸುತ್ತಾರೆ ಮತ್ತು ನವೆಂಬರ್ 17ರಂದು ಬಿಜೆಪಿ ನಗದು ಮಾಡಿಕೊಳ್ಳುತ್ತದೆ. ಒಂದು ವರ್ಷದ ಅವಧಿಯಲ್ಲಿ ಆತ ಖರೀದಿಸಿದ ಒಟ್ಟು 52 ಕೋಟಿ ರೂ. ಮೌಲ್ಯದ ಬಾಂಡ್‌ಗಳಲ್ಲಿ ಬಿಜೆಪಿ ಪಾಲು 34.5 ಕೋಟಿ ರೂ., ಬಿಆರ್‌ಎಸ್ 15 ಕೋಟಿ ರೂ. ಮತ್ತು ತೆಲುಗು ದೇಶಂ ಪಕ್ಷಕ್ಕೆ 2.5 ಕೋಟಿ ರೂ. ಸಂದಾಯವಾಗಿದೆ.

ವ್ಯಂಗ್ಯವೆಂದರೆ, ಈತನ ಸಾಕ್ಷಿ ಆಧರಿಸಿ ಜನರಿಂದ ಆಯ್ಕೆಯಾದ ಮುಖ್ಯಮಂತ್ರಿಯನ್ನು ಈ.ಡಿ. ಬಂಧಿಸುತ್ತದೆ!

ಸಂವಿಧಾನದ 100ನೇ ವಿಧಿಯ ಉಲ್ಲಂಘನೆ ಎಂದು ಸುಪ್ರೀಂ ಕೋರ್ಟ್‌ನಿಂದ ಅಮಾನ್ಯಗೊಂಡ ಚುನಾವಣಾ ಬಾಂಡ್‌ಗಳು ಸೇರಿದಂತೆ ಚುನಾವಣೆಗಳ ಸುಧಾರಣೆಯಲ್ಲಿ ಎಡೆಬಿಡದೆ ಶ್ರಮಿಸುತ್ತಿರುವ ಸಂಸ್ಥೆ-ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್). 1999ರಲ್ಲಿ ಅಹಮದಾಬಾದಿನ ಭಾರತೀಯ ನಿರ್ವಹಣೆ ಸಂಸ್ಥೆ (ಐಐಎಂ)ಯ ಪ್ರಾಧ್ಯಾಪಕರ ಗುಂಪು ಆರಂಭಿಸಿದ ಎಡಿಆರ್‌ನ ಮೊದಲ ಸಭೆ ಪ್ರೊ. ತ್ರಿಲೋಚನ್‌ಶಾಸ್ತ್ರಿ ಅವರ ಕೊಠಡಿಯಲ್ಲಿ ನಡೆಯಿತು. ಅದೇ ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಅಪರಾಧ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನೆಲೆಯನ್ನು ಬಹಿರಂಗಗೊಳಿಸಬೇಕು ಎಂದು ದಿಲ್ಲಿ ಹೈಕೋರ್ಟಿಗೆ ಪಿಐಎಲ್ ಸಲ್ಲಿಕೆಯಾಯಿತು. 2002ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ 2003ರ ಬಳಿಕ ಎಲ್ಲ ಅಭ್ಯರ್ಥಿಗಳು ತಮ್ಮ ವಿವರ ಸಲ್ಲಿಸುವುದು ಕಡ್ಡಾಯವಾಯಿತು. ಎಡಿಆರ್‌ಗೆ ಬೆನ್ನೆಲುಬಾಗಿ ನಿಂತವರು ನ್ಯಾಯವಾದಿ ಪ್ರಶಾಂತ್ ಭೂಷಣ್.

2017ರಲ್ಲಿ ಅರುಣ್ ಜೇಟ್ಲಿ ಚುನಾವಣೆ ಬಾಂಡ್‌ಗೆ ಸಂಬಂಧಿಸಿದ ಹೊಸ ಮಸೂದೆ ತಂದಾಗ, ಎಡಿಆರ್ ದೂರು ದಾಖಲಿಸಿತು. ಒಂದು ಸಾವಿರ, ಹತ್ತು ಸಾವಿರ, ಒಂದು ಲಕ್ಷ, ಹತ್ತು ಲಕ್ಷ ಮತ್ತು ಒಂದು ಕೋಟಿ ರೂ. ಮೌಲ್ಯದ ಬಾಂಡ್‌ನೀಡಲಾಯಿತು. ಅನಾಮಧೇಯತೆ ಇವುಗಳ ಪ್ರಮುಖ ಲಕ್ಷಣ. ಬಾಂಡ್ ಖರೀದಿಸಿದ 15 ದಿನಗಳೊಳಗೆ ಅದನ್ನು ಸ್ವೀಕರಿಸಿದವರು ನಗದೀಕರಿಸಬೇಕು. ಜನಪ್ರಾತಿನಿಧ್ಯ ಕಾಯ್ದೆ 1951ರ ವಿಭಾಗ 29ಎ ಅಡಿ ನೋಂದಾಯಿಸಿಕೊಂಡ, ಇತ್ತೀಚೆಗೆ ನಡೆದ ಲೋಕಸಭೆ/ವಿಧಾನಸಭೆ ಚುನಾವಣೆಯಲ್ಲಿ ಶೇ.1ರಷ್ಟು ಮತ ಪಡೆದ ಎಲ್ಲ ಪಕ್ಷಗಳೂ ದೇಣಿಗೆ ಪಡೆಯಬಹುದು. ಪ್ರತೀವರ್ಷ ತಾವು ಎಷ್ಟು ದೇಣಿಗೆ ಪಡೆದಿದ್ದೇವೆ ಎಂಬ ವರದಿಯನ್ನು ಚುನಾವಣೆ ಆಯೋಗಕ್ಕೆ ಸಲ್ಲಿಸಬೇಕು. ಇಂಥ ದೇಣಿಗೆಗೆ ಆದಾಯ ತೆರಿಗೆ 80 ಜಿಜಿಸಿ ಮತ್ತು 80ಜಿಜಿಬಿಯಡಿ ವಿನಾಯಿತಿ ದೊರೆಯುತ್ತದೆ. ಕಂಪೆನಿ ಕಾಯ್ದೆ 1961ರ ನಿಯಮಗಳಡಿ ಇಂಥ ದೇಣಿಗೆಯನ್ನು ವಾರ್ಷಿಕ ಆದಾಯ-ನಷ್ಟ ವರದಿಯಲ್ಲಿ ಉಲ್ಲೇಖಿಸ ಬೇಕು ಎಂದಿಲ್ಲ.

ಕ್ರೋನಾಲಜಿ ಈ ರೀತಿ ಇದೆ:

ಬಾಂಡ್ ಮಾರಾಟ ಎಪ್ರಿಲ್ 2018ರಲ್ಲಿ ಆರಂಭವಾಗುತ್ತದೆ ಎಂದಿದ್ದರೂ, ಮಾರ್ಚ್ 2018ರಲ್ಲೇ ಮಾರಾಟ ಆರಂಭಗೊಂಡಿತ್ತು; ಆದರೆ ನಿರೀಕ್ಷಿಸಿದಷ್ಟು ಮೊತ್ತ ಸಂಗ್ರಹವಾಗದ ಕಾರಣ ಖರೀದಿ ಅವಧಿಯನ್ನು ಮೇ 2018ರವರೆಗೆ ವಿಸ್ತರಿಸಲಾಯಿತು. ಇದನ್ನು ವಿತ್ತ ಕಾರ್ಯದರ್ಶಿ ಗರ್ಗ್ ವಿರೋಧಿಸಿದ್ದರು. ಬಿಜೆಪಿ ಎಪ್ರಿಲ್-ಮೇ 2018ರಲ್ಲಿ 10 ಕೋಟಿ ರೂ. ಬಾಂಡ್‌ನಗದೀಕರಿಸಿಕೊಳ್ಳಲು ಹೋದಾಗ, ಅವಧಿ ಮುಗಿದಿರುವುದು ಗೊತ್ತಾಗಿದೆ. ವಿಷಯ ಹೈಕಮಾಂಡ್‌ಗೆ ರವಾನೆಯಾಗಿ, ಪ್ರಧಾನಿ ಕಾರ್ಯಾಲಯ ದಾರಿ ಹುಡುಕಲು ವಿತ್ತ ಸಚಿವಾಲಯಕ್ಕೆ ಆದೇಶಿಸುತ್ತದೆ. ಸಚಿವ ಅರುಣ್‌ಜೇಟ್ಲಿ ಬಾಂಡ್ ನಗದೀಕರಣಕ್ಕೆ 10 ದಿನಗಳ ‘ಹೆಚ್ಚುವರಿ ಅವಕಾಶ’ ಕೊಡುತ್ತಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯ ಮುನ್ನಾದಿನಗಳವು. ಅದೇ ರೀತಿ 2018ರಲ್ಲಿ ಬಾಂಡ್ ಅವಧಿಯನ್ನು 2 ಬಾರಿ ವಿಸ್ತರಿಸಲಾಗಿದೆ: ನವೆಂಬರ್ 2018ರಲ್ಲಿ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಗೆ ಮುನ್ನ ಹಾಗೂ ಡಿಸೆಂಬರ್ 2022ರಲ್ಲಿ ಗುಜರಾತ್ ಚುನಾವಣೆಗೆ ಮುನ್ನ. ಆರ್‌ಟಿಐ ಮೂಲಕ ಮಾಹಿತಿ ಪಡೆದುಕೊಂಡ ಹಫ್ಫಿಂಗ್ಟನ್ ಪೋಸ್ಟ್, ನವೆಂಬರ್ 2019ರಲ್ಲಿ ವರದಿ ಪ್ರಕಟಿಸಿತ್ತು.

ಮೋದಿ ಸರಕಾರ ಚುನಾವಣೆಯಲ್ಲಿ ಖರ್ಚು ಮಾಡಲು ಹಾಗೂ ಸರಕಾರಗಳನ್ನು ಕೆಡವಲು ಬಾಂಡ್‌ಗಳ ಹಣ ಬಳಸಿಕೊಂಡಿದೆ. ವಿತ್ತ ಕಾಯ್ದೆಗೆ ಹಲವು ತಿದ್ದುಪಡಿ ತಂದು, ಉದ್ಯಮಿ-ವ್ಯಾಪಾರಿಗಳು ದೇಣಿಗೆ ನೀಡುವುದನ್ನು ಸುಲಭಗೊಳಿಸಲಾಯಿತು. ಮೊದಲನೆಯದಾಗಿ, ಉದ್ಯಮ-ವ್ಯಾಪಾರಗಳು ಕಳೆದ ಮೂರು ವರ್ಷದ ಅಂದಾಜು ನಿವ್ವಳ ಲಾಭದಲ್ಲಿ ಶೇ.7.5ರಷ್ಟು ಕಾರ್ಪೊರೇಟ್ ವಂತಿಗೆ ಮಾತ್ರ ನೀಡಬಹುದು ಎಂಬ ನಿರ್ಬಂಧ ತೆಗೆದುಹಾಕಿತು. ಎರಡನೆಯದು-ಕಂಪೆನಿಗಳು ನೀಡಿದ ರಾಜಕೀಯ ದೇಣಿಗೆಯನ್ನು ವಾರ್ಷಿಕ ಪತ್ರದಲ್ಲಿ ಬಹಿರಂಗ ಗೊಳಿಸಬೇಕು ಎಂಬ ನಿಯಮ ತೆಗೆದುಹಾಕಿತು. ಮೂರನೆಯದಾಗಿ, ಕಳೆದ ವರ್ಷ ದೇಣಿಗೆ ಮಿತಿಯನ್ನು 20,000 ರೂ.ನಿಂದ 2,000 ರೂ.ಗೆ ಇಳಿಸಿ, ವ್ಯಕ್ತಿಗಳು/ಎನ್‌ಜಿಒಗಳು ಹಾಗೂ ಸಂಘಟನೆಗಳು ಬಾಂಡ್ ಖರೀದಿಸಲು ಅವಕಾಶ ಮಾಡಿಕೊಟ್ಟಿತು; ಐಟಿ ರಿಟರ್ನ್ಸ್ ಸಲ್ಲಿಸುವಾಗ, ದೇಣಿಗೆ ವಿವರ ನೀಡುವಿಕೆಗೆ ವಿನಾಯಿತಿ ನೀಡಿತು.

ವಸೂಲಿಗೆ ಈ.ಡಿ., ಐಟಿ ಹಾಗೂ ಸಿಬಿಐಯನ್ನು ಎಗ್ಗಿಲ್ಲದೆ ಬಳಸಿಕೊಳ್ಳಲಾಗಿದೆ. 33 ಕಂಪೆನಿಗಳು 751 ಕೋಟಿ ರೂ. ದೇಣಿಗೆ ನೀಡಿ 3.7 ಲಕ್ಷ ಕೋಟಿ ರೂ. ಗುತ್ತಿಗೆ ಕಾರ್ಯಾದೇಶ ಪಡೆದುಕೊಂಡಿವೆ. 41 ಕಂಪೆನಿ ಮೇಲೆ ಈ.ಡಿ., ಸಿಬಿಐ ಮತ್ತು ಐಟಿ ದಾಳಿ ನಡೆದಿದ್ದು, 2,471 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ(ಇದರಲ್ಲಿ ದಾಳಿ ನಂತರ ಸಂದಾಯವಾಗಿರುವುದು 698 ಕೋಟಿ ರೂ.). 49 ಪ್ರಕರಣಗಳಲ್ಲಿ ದೇಣಿಗೆ ನೀಡಿದ ಬಳಿಕ 62,000 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಗುತ್ತಿಗೆ ನೀಡಲಾಗಿದೆ ಹಾಗೂ 192 ಪ್ರಕರಣಗಳಲ್ಲಿ ದೇಣಿಗೆಗೆ ಮುನ್ನವೇ 551 ಕೋಟಿ ರೂ. ಯೋಜನೆಗಳ ಗುತ್ತಿಗೆ ನೀಡಲಾಗಿದೆ. ಮೂರು ವರ್ಷಗಳಲ್ಲಿ ಲಾಭವನ್ನೇ ಗಳಿಸದ 16 ಕಂಪೆನಿಗಳು 710 ಕೋಟಿ ರೂ. ನೀಡಿವೆ. ಇದನ್ನು ಹೇಗೆ ವಿವರಿಸುತ್ತೀರಿ?

ಎಡಿಆರ್ ಪ್ರಕಾರ, 2023ರಲ್ಲಿ 850 ಕೋಟಿ ರೂ. ಸಂಗ್ರಹಗೊಂಡಿದ್ದು, 1,265 ಮಂದಿ ದೇಣಿಗೆ ನೀಡಿದ್ದಾರೆ. ಬಿಜೆಪಿ 719.9 ಕೋಟಿ, ಕಾಂಗ್ರೆಸ್, ಆಪ್, ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ) 130.6 ಕೋಟಿ ರೂ. ನಗದು ಮಾಡಿ ಕೊಂಡಿವೆ. 2023ರ ಆರ್ಥಿಕ ವರ್ಷದ ಅಂತ್ಯದಲ್ಲಿ ಬಿಜೆಪಿ 6,566.11 ಕೋಟಿ ರೂ., ಕಾಂಗ್ರೆಸ್ 1,123.39 ಕೋಟಿ ರೂ. ಸಂಗ್ರಹಿಸಿವೆ.

ಚುನಾವಣೆ ಟ್ರಸ್ಟ್:

ಯುಪಿಎ-2ರ ಜನವರಿ 31,2013ರ ಕಾರ್ಯನೀತಿ ಅನ್ವಯ ಕಂಪೆನಿ ಕಾಯ್ದೆ 1956ರಡಿ ನೋಂದಾಯಿಸಿಕೊಂಡ ಉದ್ಯಮ-ವ್ಯಾಪಾರ ಚುನಾವಣೆ ಟ್ರಸ್ಟ್ ಸ್ಥಾಪಿಸಬಹುದು. ಇಂಥ ಟ್ರಸ್ಟ್‌ಗಳು ಐಟಿ ಕಾಯ್ದೆ 1961ರ ವಿಭಾಗ 17ಸಿಎ ದೇಣಿಗೆ ನೀಡಲು ಅವಕಾಶವಿದೆ. ಆದರೆ, ಈ ಟ್ರಸ್ಟ್‌ಗಳು 3 ವರ್ಷಕ್ಕೊಮ್ಮೆ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು, ಪ್ರಚಲಿತ ವರ್ಷದಲ್ಲಿ ಸಂಗ್ರಹಿಸಿದ ಮೊತ್ತದಲ್ಲಿ ಶೇ.95ರಷ್ಟನ್ನು ವಿತರಿಸಬೇಕು: ಸ್ವದೇಶಿ ದೇಣಿಗೆದಾರರು ಪ್ಯಾನ್ ಮತ್ತು ವಿದೇಶದವರು ಪಾಸ್‌ಪೋರ್ಟ್ ನೀಡಬೇಕಾಗುತ್ತದೆ ಎಂಬ ಶರತ್ತು ಇದೆ. 2013ರಲ್ಲಿ ಇಂಥ 3 ಟ್ರಸ್ಟ್‌ಗಳು ಇದ್ದವು; 2021-22ರಲ್ಲಿ 17ಕ್ಕೆ ಹೆಚ್ಚಿದವು. ಆದರೆ, ಇವುಗಳಲ್ಲಿ ಕೆಲವೊಂದು ಮಾತ್ರ ಪ್ರತೀ ವರ್ಷ ದೇಣಿಗೆ ನೀಡುತ್ತಿವೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಜನಹಿತ್ ಎಲೆಕ್ಟೊರಲ್ ಟ್ರಸ್ಟ್‌ಗೆ ವೇದಾಂತ ನೀಡಿದ 2.5 ಕೋಟಿ ರೂ. ಬಿಜೆಪಿಗೆ ಹೋಗಿದೆ. ಪ್ರೂಡೆಂಟ್ ಟ್ರಸ್ಟ್ (ಹಿಂದಿನ ಹೆಸರು-ಸತ್ಯ ಎಲೆಕ್ಟೊರಲ್ ಟ್ರಸ್ಟ್) 2013-14ರಿಂದ 1,891 ಕೋಟಿ ರೂ ಸಂಗ್ರಹಿಸಿದ್ದು, ಇದರಲ್ಲಿ ಸಿಂಹಪಾಲು ಬಿಜೆಪಿ(ಶೇ.75, 1,430 ಕೋಟಿ ರೂ.)ಗೆ ಹೋಗಿದೆ ಮತ್ತು ಕಾಂಗ್ರೆಸ್‌ಗೆ 160 ಕೋಟಿ ರೂ.(ಶೇ.8.4) ಸಂದಾಯವಾಗಿದೆ. ಕಳೆದ 9 ವರ್ಷದಲ್ಲಿ ಎಲೆಕ್ಟೊರಲ್ ಟ್ರಸ್ಟ್‌ಗಳ ಮೂಲಕ 2,269 ಕೋಟಿ ರೂ. ಹಂಚಿಕೆಯಾಗಿದೆ. ಎಪ್ರಿಲ್ 12, 2019ರಿಂದ ಫೆ.15, 2024ರ ಅವಧಿಯಲ್ಲಿ 26 ಪಕ್ಷಗಳು 12,769.08 ಕೋಟಿ ರೂ. ನಗದು ಮಾಡಿಕೊಂಡಿದ್ದು, ಬಿಜೆಪಿ ಪಾಲು ಶೇ.47.46(6,060.51 ಕೋಟಿ ರೂ.).

ತನಿಖೆ ವರದಿ:

ಕ್ವಿಂಟ್‌ನಲ್ಲಿದ್ದ ಪತ್ರಕರ್ತೆ ಪೂನಂ ಅಗರ್‌ವಾಲ್ 2018ರಲ್ಲಿ ತನಿಖಾ ವರದಿಯೊಂದಕ್ಕೆ ಕೆವೈಸಿ ವಿವರ, 1,000 ರೂ. ಚೆಕ್ ನೀಡಿ ಚುನಾವಣಾ ಬಾಂಡ್ ಖರೀದಿಸಿದ್ದರು. ಬಾಂಡ್‌ನ್ನು ಟ್ರೂತ್ ಲ್ಯಾಬ್‌ನಲ್ಲಿ ಅತಿನೇರಳೆ(ಯುವಿ) ಕಿರಣಗಳಡಿ ಪರಿಶೀಲಿಸಿದಾಗ, ವಿಶಿಷ್ಟ ಸಂಖ್ಯೆಯೊಂದು ಗೋಚರಿಸಿತು. 1,000 ರೂ.ಗಳ ಇನ್ನೊಂದು ಬಾಂಡ್ ಖರೀದಿಸಿ ಪರಿಶೀಲಿಸಿದಾಗ, ಬೇರೆಯದೇ ವಿಶಿಷ್ಟ ಸಂಖ್ಯೆ ಕಾಣಿಸಿತು. ಅಂದರೆ, ಪ್ರತಿಯೊಂದು ಬಾಂಡ್ ವಿಶಿಷ್ಟ ಸಂಖ್ಯೆಯನ್ನು ಹೊಂದಿತ್ತು. ಅವರ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ), ಈ ಸಂಖ್ಯೆಗಳನ್ನು ದಾಖಲಿಸಿಕೊಳ್ಳಲಾಗುತ್ತದೆ ಮತ್ತು ಲೆಕ್ಕಪತ್ರ ಪರಿಶೀಲನೆಯಲ್ಲಿ ಬಳಸಲಾಗುತ್ತದೆ ಎಂದಿತ್ತು. ವಿತ್ತ ಇಲಾಖೆ ಪ್ರತಿಕ್ರಿಯಿಸಿ, ಅದು ಗೋಪ್ಯ, ಸುರಕ್ಷಿತ ಸಂಖ್ಯೆ ಎಂದು ಹೇಳಿತ್ತು. ಇವೆರಡೂ ನಿಜ.

ದೊಡ್ಡಣ್ಣನಿಗೆ ಬೆದರಿ ಬಾಯಿ ಬಿಡದೆ, ನೌಟಂಕಿ ಆಡುತ್ತಿದ್ದ ಎಸ್‌ಬಿಐಗೆ ಸುಪ್ರೀಂ ಕೋರ್ಟ್ ಕಪಾಳಮೋಕ್ಷ ಮಾಡಿದ ಮೇಲೆಯೇ ಅದು ಬಾಂಡ್ ವಿವರ ನೀಡಿತು ಮತ್ತು ವಿವರಗಳನ್ನು ಚುನಾವಣೆ ಆಯೋಗ ಜಾಲತಾಣದಲ್ಲಿ ಪ್ರಕಟಿಸಿತು. ಬಾಂಡ್ ಹಗರಣ ಸ್ವತಂತ್ರ ಭಾರತದ ಅತ್ಯಂತ ದೊಡ್ಡ ವಸೂಲಿ ದಂಧೆಯಾಗಿದ್ದು, ಸರಕಾರ ಹಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ. ಬಾಂಡ್ ವಿಚಾರದಲ್ಲಿ ಯಾವುದೇ ತಪ್ಪು ಆಗಿಲ್ಲ ಎಂದು ಸರಕಾರ ಹೇಳುತ್ತಿದೆ. ಆದರೆ, ದೇಣಿಗೆ ನೀಡಿದ ಕಂಪೆನಿಗಳಿಗೆ ಅವು ಪಾವತಿಸಿದ ಮೊತ್ತಕ್ಕಿಂತ ಹಲವು ಪಟ್ಟು ಹೆಚ್ಚು ಮೊತ್ತದ ಗುತ್ತಿಗೆಗಳು ಸಿಕ್ಕಿವೆ. ಈ.ಡಿ.-ಸಿಬಿಐ-ಐಟಿ ದಾಳಿಗೆ ಒಳಗಾದ ಕಂಪೆನಿಗಳು ಆನಂತರ ದೇಣಿಗೆ ನೀಡಿರುವುದನ್ನು ನೋಡಿದರೆ, ದಾಳಿ ಮತ್ತು ದೇಣಿಗೆ ನಡುವೆ ಸಂಬಂಧವಿದೆ ಎನ್ನುವುದು ಖಾತ್ರಿ. ವ್ಯಕ್ತಿ-ಕಂಪೆನಿಗಳಿಗೆ ಅನುಕೂಲ ಮಾಡಿಕೊಡಲು ಬಾಂಡ್‌ಗಳು ಬಳಕೆಯಾದವು ಎಂದಾದರೆ ಅದು ಅಪರಾಧ. ತನಿಖಾ ಸಂಸ್ಥೆಗಳನ್ನು ಮುಂದೆ ಬಿಟ್ಟು, ಬೆದರಿಸಿ ಸುಲಿಗೆ ಮಾಡಿರುವುದು ಕೂಡ ಅಪರಾಧ. ವ್ಯಕ್ತಿ-ಕಂಪೆನಿ ಬಾಂಡ್ ಖರೀದಿಸಿದ ಬಳಿಕ ಈ.ಡಿ.-ಸಿಬಿಐ ತನಿಖೆ ಮುಂದುವರಿಸಲಿಲ್ಲ ಎಂದಾದರೆ, ಆ ಸಂಸ್ಥೆಯ ಸಂಬಂಧಿಸಿದ ಅಧಿಕಾರಿಗಳು ದೋಷಿಗಳು ಎನ್ನಬೇಕಾಗುತ್ತದೆ ಮತ್ತು ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆರಂಭದಿಂದಲೂ ನೆಪ ಹೇಳುತ್ತ ಕಾಲಹರಣ ಮಾಡಿತು. ದತ್ತಾಂಶ ಕುರಿತು ಸುಳ್ಳು ಹೇಳಿತ್ತು ಎನ್ನುವುದು ಈಗ ಸಾಬೀತಾಗಿದೆ. ಬ್ಯಾಂಕ್ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕಿದೆ. ಹೀಗಾದಲ್ಲಿ ಭವಿಷ್ಯದಲ್ಲಿ ಬ್ಯಾಂಕ್ ಮತ್ತಿತರ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳನ್ನು ರಾಜಕೀಯಸ್ಥರು ದುರುಪಯೋಗ ಮಾಡಿಕೊಳ್ಳುವುದು ನಿಲ್ಲಬಹುದು. ಬಾಂಡ್‌ಗಳು ಅಸಾಂವಿಧಾನಿಕ ಎಂದಾಗಿರುವುದರಿಂದ, ಪಕ್ಷಗಳು ಹಣ ನೀಡಿದವರಿಗೆ ಹಿಂದಿರುಗಿಸಬೇಕು.

ಬಾಂಡ್ ಮೂಲಕ ಎಲ್ಲ ಪಕ್ಷಗಳೂ ಹಣ ಸಂಗ್ರಹಿಸಿವೆ. ಎಲ್ಲರ ಸಂದೂಕಿನಲ್ಲಿ ಅಸ್ಥಿಪಂಜರಗಳು ತುಂಬಿಕೊಂಡಿವೆ. ಆದ್ದರಿಂದ, ರಾಜಕೀಯ ಪಕ್ಷಗಳಿಂದ ನ್ಯಾಯ ಸಿಗುವುದು ಕನಸು. ಉಳಿದಿರುವುದು ಒಂದೇ ದಾರಿ-ಬಾಂಡ್‌ಗಳು ಅಸಾಂವಿಧಾನಿಕ ಎಂದಿರುವ ಸುಪ್ರೀಂ ಕೋರ್ಟ್ ಈ ಸಂಬಂಧ ಸ್ವತಂತ್ರ ತನಿಖೆಗೆ ಮುಂದಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಋತ

contributor

Similar News