ದಕ್ಷಿಣ ಭಾರತವೇಕೆ ಬಿಜೆಪಿಯನ್ನು ತಿರಸ್ಕರಿಸುತ್ತಿದೆ?

ಉತ್ತರದ ದೇಶದಲ್ಲಿ ನೆಲೆಸಿರುವ ನನ್ನಂಥ ಭಾರತೀಯರು ಬದಲಾವಣೆ ಸಾಧ್ಯವಿದೆ ಎಂದು ನಂಬಲು ಇಷ್ಟಪಡುತ್ತೇವೆ. ಜೂನ್ 4ರ ಫಲಿತಾಂಶ ನನ್ನನ್ನು ಮೂರ್ಖನಂತೆ ಬಿಂಬಿಸುವ ಸಾಧ್ಯತೆಗಳಿವೆ. ಇದಕ್ಕೆ ಕಾರಣವೇನೆಂದರೆ, ನನ್ನ ಊರಿನ ಮತದಾರನೊಬ್ಬನಿಗೆ ಕೇರಳದ ಆರೋಗ್ಯ ಕೇಂದ್ರದಲ್ಲಿ ಕಾಲಿಡುವ ಅವಕಾಶ ಇರುವುದಿಲ್ಲ; ಮತ್ತು ಉತ್ತರ ಪ್ರದೇಶದಲ್ಲಿ 5 ವರ್ಷಕ್ಕೆ ಮುನ್ನವೇ ಸಾಯುವ 60 ಮಕ್ಕಳು(1,000ದಲ್ಲಿ) ಮತ ಚಲಾವಣೆ ಮಾಡುವುದಿಲ್ಲ. ಇದು ದುರಂತ.

Update: 2024-04-19 06:03 GMT
Editor : Thouheed | Byline : ಋತ

ಆ್ಯಂಡಿ ಮುಖರ್ಜಿ ಬ್ಲೂಮ್‌ಬರ್ಗ್ ಒಪಿನಿಯನ್‌ನ ಅಂಕಣಕಾರ. ಈ ಹಿಂದೆ ರಾಯ್ಟರ್, ದ ಸ್ಟ್ರೇಟ್ಸ್ ಟೈಮ್ಸ್ ಮತ್ತು ಬ್ಲೂಮ್‌ಬರ್ಗ್ ನ್ಯೂಸ್‌ನಲ್ಲಿ ಕೆಲಸ ಮಾಡಿದ್ದರು. ‘ಉತ್ತರದ ದೇಶದಲ್ಲಿ ಬೆಳೆದ ನನ್ನಂಥವರು ಈಗಲೂ ಬದಲಾವಣೆ ಸಾಧ್ಯವಿದೆ ಎಂದು ನಂಬಿದ್ದೇವೆ. ಜೂನ್ 4ರ ಫಲಿತಾಂಶ ನನ್ನನ್ನು ಮೂರ್ಖನಂತೆ ಕಾಣಿಸುವ ಸಾಧ್ಯತೆ ಇದೆ’ ಎನ್ನುತ್ತಾರೆ. ದಕ್ಷಿಣದ ರಾಜ್ಯಗಳ ಸಾಮರ್ಥ್ಯ, ಶಿಕ್ಷಣ-ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಯನ್ನು ಉತ್ತರದ ರಾಜ್ಯಗಳೊಡನೆ ತುಲನೆ ಮಾಡಿ, ದಕ್ಷಿಣದ ರಾಜ್ಯಗಳು ಏಕೆ ಬಿಜೆಪಿಯನ್ನು ತಿರಸ್ಕರಿಸುತ್ತಿವೆ ಎಂದು ವಿವರಿಸಿದ್ದಾರೆ. ಅವರ ಲೇಖನ(ವೈ ಇಂಡಿಯಾಸ್ ಸೌತ್ ರಿಜೆಕ್ಟ್ಸ್‌ಮೋದಿ-ಆ್ಯಂಡ್ ವೈ ಇಟ್ ಮ್ಯಾಟರ್ಸ್)ದ ಪ್ರಮುಖ ಅಂಶಗಳು ಇಂತಿವೆ:

ಭಾರತ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆಗೆ ಹೋಗಲಿದೆ. ಹಿಂದೂ ರಾಷ್ಟ್ರೀಯವಾದಿ ಪ್ರಧಾನಿ ಉತ್ತರದ ಮೇಲೆ ವಶೀಕರಣ ಪ್ರಭಾವ ಹೊಂದಿರುವುದರಿಂದ, ಅವರೇ ಮತ್ತೊಮ್ಮೆ ಗೆಲ್ಲುತ್ತಾರೆ ಎಂದು ಪರಿಣತರು ಹೇಳುತ್ತಾರೆ. ದಕ್ಷಿಣದ ರಾಜ್ಯಗಳು ಈ ನಾಯಕ ಮತ್ತು ಪಕ್ಷವನ್ನು ತಿರಸ್ಕರಿಸುತ್ತಿರುವುದರಿಂದ, ಫಲಿತಾಂಶದ ಮೇಲೆ ಹೆಚ್ಚೇನೂ ಪರಿಣಾಮ ಬೀರುವುದಿಲ್ಲ ಎನ್ನುತ್ತಾರೆ. ಅದು ಸರಿಯಲ್ಲ. ದಕ್ಷಿಣದ ಉದಾರವಾದಿ ಮತ್ತು ಯಶಸ್ವಿ ರಾಜ್ಯಗಳು ಉತ್ತರದ ಬಡತನ ತುಂಬಿರುವ ರಾಜ್ಯಗಳು ಹಾಗೂ ಬಹುಸಂಖ್ಯಾತ ನಾಯಕನಿಂದ ದೂರವಾಗುತ್ತಿವೆ. ಅಮೆರಿಕದಲ್ಲಿ ಜನಿಸಿದ ಮಕ್ಕಳಿಗೆ ಹೋಲಿಸಿದರೆ, ಕೇರಳದಲ್ಲಿ ಜನಿಸಿದ 5 ವರ್ಷದೊಳಗಿನ ಮಕ್ಕಳು ಬದುಕುವ ಸಾಧ್ಯತೆ ಹೆಚ್ಚು. ಉತ್ತರಪ್ರದೇಶದಲ್ಲಿ ಜನಿಸುವ ಮಕ್ಕಳ ಸ್ಥಿತಿ ಅಫ್ಘಾನಿಸ್ತಾನದ ಮಕ್ಕಳಿಗಿಂತ ಕೆಟ್ಟದ್ದಾಗಿರುತ್ತದೆ.

ಉತ್ತರ ಭಾರತದ ಮೇಲೆ ಹೆಚ್ಚು ಗಮನ ಬೀಳುವುದು ಸಂಖ್ಯೆಗಳಿಂದ. ಅತ್ಯಂತ ಹೆಚ್ಚು ಸಂಸದರನ್ನು ಆಯ್ಕೆ ಮಾಡುವ ಉತ್ತರ ಪ್ರದೇಶವನ್ನು ನಿಯಂತ್ರಿಸುವವರು(ಬ್ರೆಝಿಲ್‌ಗಿಂತ ಹೆಚ್ಚು ಜನಸಂಖ್ಯೆಯಿರುವ ಮತ್ತು ಕೆಳಸಹರಾಕ್ಕಿಂತ ಹೆಚ್ಚು ಬಡವರು ಇರುವ) ಒಕ್ಕೂಟದ ಆಡಳಿತವನ್ನು ಹಿಡಿಯುತ್ತಾರೆ; ಯುಪಿ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳು ಪ್ರಧಾನಿ ಅವರಿಗೆ ಮೂರನೇ ಅವಧಿಯನ್ನು ನೀಡಲಿವೆ ಎಂಬ ಭಾವನೆ ದಟ್ಟವಾಗಿದೆ. ಪಕ್ಷಗಳ ನಾಯಕರನ್ನು ಸೆರೆಮನೆಗೆ ಕಳಿಸಿ ಹಾಗೂ ಆದಾಯಮೂಲವನ್ನು ಉಸಿರುಗಟ್ಟಿಸುವ ಮೂಲಕ ಚುನಾವಣೆಯನ್ನು ಗೆದ್ದು ಜಾತ್ಯತೀತ ಸಂವಿಧಾನವನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳ ಒಕ್ಕೂಟ ದೂರಿದೆ. ಪ್ರಧಾನಿ ಈ ಆರೋಪವನ್ನು ತಳ್ಳಿ ಹಾಕಿದ್ದರೂ, ಹಿಂದೂ ರಾಷ್ಟ್ರ ಎನ್ನುವುದು ಉತ್ತರ ರಾಜ್ಯಗಳಲ್ಲಿ ಕೆಲಸ ಮಾಡಲಿದೆ. ‘ಹಿಂದೂ ರಾಷ್ಟ್ರ’ದ ಕಲ್ಪನೆ ದಕ್ಷಿಣದಲ್ಲಿ ತೀವ್ರ ಆತಂಕ ಸೃಷ್ಟಿಸುತ್ತದೆ. ಉತ್ತರ ಮತ್ತು ದಕ್ಷಿಣವನ್ನು ಪ್ರತ್ಯೇಕಿಸುವ 675 ಕಿ.ಮೀ. ಉದ್ದದ ಪರ್ವತ ಶ್ರೇಣಿಯು ಕೇವಲ ಭೌಗೋಳಿಕವಾದುದಲ್ಲ. 10 ವರ್ಷಗಳ ಮೋದಿ ಅವರ ಆಡಳಿತವು ಆಳವಾದ ಕಂದರವನ್ನು ಸೃಷ್ಟಿಸಿದೆ. ದಕ್ಷಿಣದ ಆದ್ಯತೆಯಾದ ಆರ್ಥಿಕ ಸಮೃದ್ಧಿ ಮತ್ತು ಸಾಮಾಜಿಕ ಪ್ರಗತಿಗೆ ಉತ್ತರದಲ್ಲಿ ಜಾಗವೇ ಇಲ್ಲ.

ಇದು ಹೇಗಾಯಿತು? ಶೂನ್ಯ ಭರವಸೆ ಸ್ಥಿತಿಯನ್ನು ಮೋದಿ ಸೃಷ್ಟಿಸಲಿಲ್ಲ. ಬದಲಾಗಿ, ಜನರ ಭೌತಿಕ ಜೀವನದಲ್ಲಿನ ರಂಧ್ರಗಳನ್ನು ಧಾರ್ಮಿಕ ಉದ್ರೇಕದಿಂದ ತುಂಬಿದರು. ಹಿಂದೂಗಳಲ್ಲದವರು, ವಿಶೇಷವಾಗಿ, ಮುಸ್ಲಿಮರಿಗೆ ಹಿಂಸೆ ಕೊಡುವುದರಲ್ಲಿ ಇದು ಅಭಿವ್ಯಕ್ತಗೊಳ್ಳುತ್ತದೆ. 5 ವರ್ಷಗಳ ಮತ್ತೊಂದು ಅವಕಾಶವು 1.4 ಶತಕೋಟಿ ಜನರಿರುವ ರಾಷ್ಟ್ರದ ಒಕ್ಕೂಟ ನೇಯ್ಗೆಯನ್ನು ದುರ್ಬಲಗೊಳಿಸುತ್ತದೆ; ಬಹುತ್ವ, ಮುಕ್ತ ಮಾರುಕಟ್ಟೆ, ಪ್ರಜಾಪ್ರಭುತ್ವದ ಭವಿಷ್ಯವನ್ನು ಅತಂತ್ರಗೊಳಿಸುತ್ತದೆ. ದಕ್ಷಿಣದಲ್ಲಿ ವಿದೇಶಿ ಹೂಡಿಕೆದಾರರಿಗೆ ಅಗತ್ಯವಾದ ಆಧುನಿಕತೆ, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ, ಮುಕ್ತತೆ ಮತ್ತು ಸಹಿಷ್ಣುತೆ ಇದೆ. ದಶಕಗಳ ಕಾಲ ನಡೆದ ಸಾಮಾಜಿಕ ಸುಧಾರಣೆ ಚಳವಳಿಗಳಿಂದ ಹಿಂದೂಯಿಸಂ, ಇಸ್ಲಾಮ್ ಮತ್ತು ಕ್ರಿಶ್ಚಿಯಾನಿಟಿಯಲ್ಲಿ ನಾಗರಿಕ ಪ್ರಜ್ಞೆ ಅರಳಿದೆ. ತಮಿಳುನಾಡಿನಲ್ಲಿ ಬಡತನ ದರ ಶೇ.2 ಇದ್ದು, ಅವರಿಗೆ ಮೋದಿನಾಮಿಕ್ಸ್ ಬೇಡ. ಏಕೆಂದರೆ, ಮೋದಿ 12 ವರ್ಷ ಮುಖ್ಯಮಂತ್ರಿಯಾಗಿದ್ದ ಗುಜರಾತಿನಲ್ಲಿ ಬಡತನ ಪ್ರಮಾಣ ಶೇ.12 ಇತ್ತು. ಉತ್ತರದ ರಾಜ್ಯಗಳಿಗೆ ಬಹುಕಾಲದಿಂದ ಅಭಿವೃದ್ಧಿಯನ್ನು ನಿರಾಕರಿಸುತ್ತಿರುವುದರಿಂದ, ಅವು ಪ್ರಗತಿಯಲ್ಲಿ ನಂಬಿಕೆ ಕಳೆದುಕೊಂಡಿವೆ. ಬಹುಸಂಖ್ಯಾತ ಸಮುದಾಯವು ಧಾರ್ಮಿಕ ಅಸ್ಮಿತೆಯ ಆಕ್ರಮಣಕಾರಿ ಅಭಿವ್ಯಕ್ತಿಯೇ ನಾಗರಿಕತೆಯ ಗುರಿ ಎಂಬ ನಿರ್ಧಾರಕ್ಕೆ ಬಂದಿವೆ. 16ನೇ ಶತಮಾನದ ಮಸೀದಿಯೊಂದನ್ನು 1992ರಲ್ಲಿ ಉರುಳಿಸಿ ಕಟ್ಟಿದ ದೇವಾಲಯವನ್ನು ಪ್ರಧಾನಿ ಉದ್ಘಾಟಿಸಿದಾಗ, ಅವರನ್ನು ವಿಮೋಚಕ ಎನ್ನಲಾಯಿತು; ಮೊಗಲರ ಕಾಲದಲ್ಲಿ ನಡೆದ ಮುಸ್ಲಿಮ್ ಆಕ್ರಮಣಗಳ ವಿರುದ್ಧ ಸೇಡು ತೀರಿಸಿಕೊಂಡು, ತಮ್ಮ ಘನತೆಯನ್ನು ಮರುಸ್ಥಾಪಿಸಲು ಬಂದಿದ್ದಾರೆ ಎಂದು ಭಾವಿಸಲಾಯಿತು. ಇದರೊಟ್ಟಿಗೆ ಬಡವರಿಗೆ ಉಚಿತ ಪಡಿತರ ಮತ್ತು ಬ್ಯಾಂಕ್ ಖಾತೆಗೆ ಸ್ವಲ್ಪ ನಗದು ಬೋನಸ್. ಉತ್ತರದ ಪ್ರಜೆ ‘ಲಾಭಾರ್ಥಿ’ಯಾಗಿ ತೃಪ್ತನಾಗುತ್ತಾನೆ.

ದಕ್ಷಿಣಕ್ಕೆ ಇಸ್ಲಾಮ್, ಸಮುದ್ರ ಮುಖೇನ ವಾಣಿಜ್ಯದ ಮೂಲಕ ಆಗಮಿಸಿತು: ಆಕ್ರಮಣದ ಮೂಲಕ ಅಲ್ಲ. ನೂರು ವರ್ಷಕ್ಕೂ ಅಧಿಕ ಕಾಲ ಬದಿಗೊತ್ತಲ್ಪಟ್ಟವರ ಪೂಜೆಯ ಹಕ್ಕನ್ನು ಪ್ರತಿಪಾದಿಸಿದ ಬಳಿಕ ಅವರಿಗೆ ಇನ್ನೊಂದು ದೇವಾಲಯದ ಬಗ್ಗೆ ಅಷ್ಟೊಂದು ಉಬ್ಬರ ಏಕೆ ಎನ್ನುವುದು ಅರ್ಥವಾಗುವುದಿಲ್ಲ. 1925ರಲ್ಲಿ ತಮಿಳುನಾಡು ಪೆರಿಯಾರ್ ನೇತೃತ್ವದಲ್ಲಿ ಹಿಂದೂ ಧರ್ಮದ ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಸವಾಲು ಎಸೆದು, ಸಮಾಜದ ಪ್ರಜಾಪ್ರಭುತ್ವೀಕರಣವನ್ನು ಆರಂಭಿಸಿತು. 1947ರಲ್ಲಿ ದೇಶ ಸ್ವಾತಂತ್ರ್ಯ ಗಳಿಸಿದ ಬಳಿಕ ಭೂಮಿಯ ಹಂಚಿಕೆ ನಾಟಕೀಯವಾಗಿ ನಡೆಯುವುದಿಲ್ಲ ಎಂದು ತಮಿಳುನಾಡು ಬಹುಬೇಗ ಗ್ರಹಿಸಿತು. ಪೆರಿಯಾರ್ ಅವರ ಆತ್ಮಸಮ್ಮಾನ ಚಳವಳಿಯು ಶಿಕ್ಷಣ, ಆರೋಗ್ಯ, ಕೃಷಿಯೇತರ ಉದ್ಯೋಗ ಸೃಷ್ಟಿಗೆ ಗಮನ ಹರಿಸಿತು. ಅವು ಆಧುನಿಕೀಕರಣಗೊಳ್ಳುತ್ತಿರುವ ಜಗತ್ತಿನಲ್ಲಿ ಸಾಮಾಜಿಕ ನ್ಯಾಯದ ಮಾರ್ಗಗಳು ಎಂದು ಸರಿಯಾಗಿಯೇ ಗ್ರಹಿಸಿತು. ಇದೇ ‘ದ್ರಾವಿಡಿಯನ್ ಮಾದರಿ’. ದ್ರಾವಿಡಿಯನ್ ಕಾರ್ಯನೀತಿ ಮತ್ತು ರಾಜಕಾರಣಿಗಳಲ್ಲಿ ಭಾಷೆ ಮುಖ್ಯವಾಗಿದ್ದರೂ, ಆರ್ಥಿಕ ಮಾದರಿಗಳು ಸಾಮಾನ್ಯ ವಿವೇಕವನ್ನು ಆಧರಿಸಿದ್ದವು. ಉತ್ತರದ ರಾಜ್ಯಗಳು ಈ ಅವಕಾಶವನ್ನು ತಪ್ಪಿಸಿಕೊಂಡವು: ಏಕೆಂದರೆ, ಅಲ್ಲಿನ ನಾಯಕರ ಬಳಿ ನಗರೀಕೃತ, ಬಂಡವಾಳಶಾಹಿ ಆರ್ಥಿಕತೆಯಲ್ಲಿ ಒಳಗೊಳ್ಳುವಿಕೆಯ ಯೋಜನೆಗಳೇ ಇರಲಿಲ್ಲ. ತಮಿಳುನಾಡಿನ 18-23 ವರ್ಷದ ಯುವಜನರಲ್ಲಿ ಶೇ.47ರಷ್ಟು ಮಂದಿ ಉನ್ನತ ಶಿಕ್ಷಣ ಪಡೆಯುತ್ತಿದ್ದರೆ, ಬಿಹಾರದಲ್ಲಿ ಈ ಪ್ರಮಾಣ ಶೇ.17.

ಮಧ್ಯಪ್ರದೇಶ ಜಿಲ್ಲಾ ಆಸ್ಪತ್ರೆಗಳಲ್ಲಿನ ಶೇ.25ರಷ್ಟು ಹಾಸಿಗೆಗಳನ್ನು ಹಣ ಪಾವತಿಸುವವರಿಗೆ ಮೀಸಲಿಡಲು ನಿರ್ಧರಿಸಿತು. ಇದರಿಂದ ಆದಿವಾಸಿ ಮತ್ತು ನಗರ ಪ್ರದೇಶದ ಬಡವರು ಆರೋಗ್ಯ ಸೇವೆಯಿಂದ ವಂಚಿತರಾದರು. 1990ರಲ್ಲಿ ತಮಿಳುನಾಡು ಸಾರ್ವಜನಿಕ ಆರೋಗ್ಯದ ವೆಚ್ಚವನ್ನು ಕಡಿತಗೊಳಿಸಿತು. ಆಗಿನ ರಾಜ್ಯ ಆರೋಗ್ಯ ಕಾರ್ಯದರ್ಶಿ ಪೂರ್ಣಲಿಂಗಂ, ಗುಣಮಟ್ಟದ ಔಷಧಗಳ ಖರೀದಿಯನ್ನು ಕೇಂದ್ರೀಕರಣಗೊಳಿಸಿದರು. ಇದರಿಂದ ವೆಚ್ಚ ಕಡಿಮೆಯಾಗಿ, ಔಷಧಗಳ ಲಭ್ಯತೆ ಹೆಚ್ಚಿತು. ಉತ್ತರ ಪ್ರದೇಶ ಆರೋಗ್ಯ ಕ್ಷೇತ್ರಕ್ಕೆ ಅಧಿಕ ಅನುದಾನ ನೀಡಿದರೂ, ತಮಿಳುನಾಡಿನ ಜನ ಆರೋಗ್ಯ ಸೇವೆಗಳಿಗೆ ತಮ್ಮ ಜೇಬಿನಿಂದ ತೆರುವ ಮೊತ್ತ ಉತ್ತರ ಪ್ರದೇಶಕ್ಕಿಂತ ಶೇ. 24ರಷ್ಟು ಕಡಿಮೆಯಿದೆ. ‘ಉತ್ತರ ಭಾರತವನ್ನು ಶಿಕ್ಷಣ-ಆರೋಗ್ಯ ಕ್ಷೇತ್ರದ ಬಗ್ಗೆ ಕಾಳಜಿ ಇರುವವರು ಆಳಬೇಕು’ ಎಂದು ಪೂರ್ಣಲಿಂಗಂ ಹೇಳುತ್ತಾರೆ.

ಶಿಕ್ಷಣ ಮತ್ತು ಆರೋಗ್ಯ ಪರಸ್ಪರ ತಳಕು ಹಾಕಿಕೊಂಡಿವೆ ಎನ್ನುವುದಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಕೇರಳಕ್ಕಿಂತ ಬೇರೆ ಉದಾಹರಣೆ ಬೇಡ. ಉಷ್ಣವಲಯದ ಮಕ್ಕಳ ತಜ್ಞ ಡಾ.ಅಂಥೋಣಿ ಕೊಲ್ಲನ್ನೂರ್, ಯೂನಿಸೆಫ್ ಅಧಿಕಾರಿಯಾಗಿ ಪೋಲಿಯೊ ನಿವಾರಣೆ, ಮಗುವಿನ ರಕ್ಷಣೆ ಮತ್ತು ಸುರಕ್ಷಿತ ತಾಯ್ತನ ಮತ್ತಿತರ ಪ್ರಮುಖ ಆಂದೋಲನಗಳಲ್ಲಿ ಪಾಲ್ಗೊಂಡವರು. ‘ಉತ್ತರ ರಾಜ್ಯಗಳ ಹೆಣ್ಣುಮಕ್ಕಳು ಸಾರ್ವಜನಿಕ ಸಭೆಗಳಲ್ಲಿ ಬಾಯಿ ತೆರೆಯುವುದಿಲ್ಲ. ಆದರೆ, ಕೇರಳದಲ್ಲಿ ವಾಸ್ತವಾಂಶ ತಿಳಿದುಕೊಂಡು ಪಾಲ್ಗೊಳ್ಳುತ್ತಾರೆ; ಉತ್ತರದಾಯಿತ್ವ ಕೇಳುತ್ತಾರೆ. ಮತದಾರರು ಅನಕ್ಷರಸ್ಥರಾಗಿದ್ದಾಗ, ಅಧಿಕಾರಿಗಳು ಸುಳ್ಳು ಹೇಳುತ್ತಾರೆ; ವಾಸ್ತವಾಂಶ ಮುಚ್ಚಿಡಲು ಪ್ರಯತ್ನಿಸುತ್ತಾರೆ. ಉತ್ತರಪ್ರದೇಶದಲ್ಲಿ ಪೋಲಿಯೊ ಪೀಡಿತರ ಸಂಖ್ಯೆ ಮತ್ತು ಕೋವಿಡ್ ಸಾವು ಹಾಗೂ ಆಮ್ಲಜನಕದ ಕೊರತೆ ಬಗ್ಗೆ ಸುಳ್ಳು ಹೇಳಿದಂತೆ’ ಎಂದು ಅವರು ಹೇಳುತ್ತಾರೆ.

ಡಾ.ಕೊಲ್ಲನ್ನೂರ್ ತಮ್ಮ ಮನೆ ಸಮೀಪ ಇರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಮೀನುಗಾರ ಸಮುದಾಯದ ಅಗತ್ಯಗಳಿಗೆ ಮೀಸಲಾದ ಈ ಕೇಂದ್ರದಲ್ಲಿ ವೈದ್ಯರು, ಶುಶ್ರೂಷಕಿಯರು, ಆಧುನಿಕ ರೋಗಪತ್ತೆ ಪ್ರಯೋಗಾಲಯವಲ್ಲದೆ ದಂತ ಚಿಕಿತ್ಸೆ ವಿಭಾಗ ಕೂಡ ಇದ್ದಿತ್ತು. ಉತ್ತರಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿರುವ ಎಲ್ಲ ಸೇವೆಗಳು ಕೇರಳದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಇರುತ್ತವೆ(ಇತ್ತೀಚೆಗೆ ಈ.ಡಿ.ಯಿಂದ ಬಂಧಿತರಾದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇರಳದ ಮಾದರಿಯನ್ನು ಅನುಸರಿಸಲು ಪ್ರಯತ್ನಿಸಿದ್ದರು).

ದಕ್ಷಿಣದಲ್ಲಿ ಆತಂಕ ಮತ್ತು ಸಿಟ್ಟು ಮನೆ ಮಾಡಿದೆ. ಮಾಜಿ ಹೂಡಿಕೆ ಬ್ಯಾಂಕರ್ ಪಿ. ತ್ಯಾಗರಾಜನ್, ತಮಿಳುನಾಡಿನ ಮಾಹಿತಿ ತಂತ್ರಜ್ಞಾನ ಸಚಿವ. ಸಂಪನ್ಮೂಲ ಹಂಚಿಕೆಯಲ್ಲಿ ತಾರತಮ್ಯ ವಿರುದ್ಧದ ಗಟ್ಟಿ ಧ್ವನಿ. ದಕ್ಷಿಣದ ಐದು ರಾಜ್ಯಗಳಿಗಿಂತ ಉತ್ತರಪ್ರದೇಶ ಹೆಚ್ಚು ತೆರಿಗೆ ಪಾಲು ಪಡೆದುಕೊಳ್ಳುತ್ತದೆ. ಉತ್ತರ ರಾಜ್ಯಗಳಿಗೆ ನೀಡುವ ಪಾಲು ಅಲ್ಲಿನ ಜನರ ಜೀವನಮಟ್ಟವನ್ನು ಹೆಚ್ಚಿಸುತ್ತಿಲ್ಲ ಎನ್ನುವುದು ಅವರ ದೂರು. ಅವರ ಅಂದಾಜಿನ ಪ್ರಕಾರ, ತಮಿಳುನಾಡಿಗೆ ಹೋಲಿಸಿದರೆ, ಉತ್ತರಪ್ರದೇಶದ ಬೆಳವಣಿಗೆ ದರ ಶೇ.2 ಇದೆ. ಎರಡೂ ರಾಜ್ಯಗಳ ತಲಾದಾಯ ಸಮಗೊಳ್ಳಲು 64 ವರ್ಷ ಬೇಕಾಗುತ್ತದೆ!

ಆರ್ಥಿಕ ಸ್ಥಿತಿ ಇಂತಿರಲಿ, ಉತ್ತರ ಭಾರತ ಸಾಮಾಜಿಕವಾಗಿ ದಕ್ಷಿಣ ರಾಜ್ಯಗಳನ್ನು ತಲುಪಲು ಪ್ರಯತ್ನಿಸಬಹುದು. ಉತ್ತರದ ರಾಜ್ಯಗಳು ದಕ್ಷಿಣಕ್ಕೆ ಅಧಿಕ ಪ್ರಮಾಣದಲ್ಲಿ ಕಾರ್ಮಿಕರನ್ನು ರವಾನಿಸುವುದರಿಂದ, ಬಂದವರು ಭಾಷೆ, ಜಾತಿ ಮತ್ತು ಲಿಂಗ ಸಂಬಂಧಿ ತಾರತಮ್ಯ ಮನೋಭಾವ ತೊರೆಯುವರೇ? ಅರ್ಜುನ್ ಯಾದವ್ ಕುಟುಂಬವನ್ನು ಬಿಹಾರದ ಗ್ರಾಮವೊಂದರಲ್ಲಿ ಬಿಟ್ಟು ಚೆನ್ನೈನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಭತ್ತದ ಕಟಾವಿಗೆ ತೆರಳಿದ್ದ ಅವರಿಗೆ ಪತ್ನಿ ಕೆಲಸಕ್ಕೆ ವಾಪಸಾಗಬಾರದೆಂದು ಹೇಳಿದಳು. ಬಿಹಾರದವರ ಮೇಲೆ ಚೆನ್ನೈಯಲ್ಲಿ ಹಲ್ಲೆ ನಡೆದಿದೆ ಎಂಬ ಸುದ್ದಿ ವೈರಲ್ ಆಗಿತ್ತು. ಮುಖ್ಯಮಂತ್ರಿ ಸ್ಟಾಲಿನ್ ಈ ಸಂಬಂಧ ಹೇಳಿಕೆ ನೀಡಬೇಕಾಗಿ ಬಂದಿತು. ಸುಳ್ಳು ಸುದ್ದಿ ಹರಡಿದ ಯುಟ್ಯೂಬರ್‌ನನ್ನು ಬಂಧಿಸಲಾಯಿತು. ಯಾದವ್ ಮತ್ತೆ ಕೆಲಸಕ್ಕೆ ವಾಪಸಾದರು.

ಪಶ್ಚಿಮ ಏಶ್ಯಕ್ಕೆ ಕಾರ್ಮಿಕರನ್ನು ಪೂರೈಸುತ್ತಿದ್ದ ಕೇರಳ, ಕೋವಿಡ್ ಬಳಿಕ ವಿದೇಶಕ್ಕೆ ತೆರಳುವವರ ಪ್ರಮಾಣ ಹೆಚ್ಚಿರುವುದರಿಂದ, ಸಮಸ್ಯೆಗೆ ಸಿಲುಕಿದೆ. ಸಂಪೂರ್ಣ ಸಾಕ್ಷರತೆ ಹಾಗೂ ಮಹಿಳಾ ಸಬಲೀಕರಣದಿಂದ ಫಲವತ್ತತೆ ದರ ಕುಸಿದಿರುವುದರಿಂದ, ವಯೋಮಾನ ಮೀರುತ್ತಿರುವ ಕಾರ್ಮಿಕ ಶಕ್ತಿಯನ್ನು ಮರುದುಂಬುವ ಸವಾಲು ಎದುರಿಸುತ್ತಿದೆ. ಇದಕ್ಕಾಗಿ ಉತ್ತರ ರಾಜ್ಯಗಳ ಕಾರ್ಮಿಕರನ್ನು ಆಧರಿಸಿದ್ದು, ಅವರಿಗೆ ಸುರಕ್ಷಿತ ವಾತಾವರಣ ನಿರ್ಮಿಸುತ್ತಿದೆ. ಬಿಹಾರದ ಅನಕ್ಷರಸ್ಥ ಮುಸ್ಲಿಮ್ ಕಾರ್ಮಿಕರ ಪುತ್ರ ಮುಹಮ್ಮದ್ ದಿಲ್ಷಾದ್, ಸ್ಥಳೀಯ ಭಾಷೆಯಲ್ಲಿ ಪರಿಣತಿ ಗಳಿಸಿ 2019ರಲ್ಲಿ ಹೈಸ್ಕೂಲ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ. ಉತ್ತರದಲ್ಲಿ ಇಂತಹ ಲಕ್ಷಾಂತರ ದಿಲ್ಷಾದ್‌ಗಳಿದ್ದಾರೆ. ಅವರ ಬದುಕು ಅವರ ಪೋಷಕರಿಗಿಂತ ಭಿನ್ನವಾಗಿರುವುದಿಲ್ಲ.

ಬೆಂಗಳೂರು ದೇಶದ ತಂತ್ರಜ್ಞಾನ ಶಕ್ತಿ ಕೇಂದ್ರ. ಹಳ್ಳಿಯನ್ನು ತೊರೆದು, ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಮಾಡಿದ ಯುವತಿಯನ್ನು ಭೇಟಿಯಾದೆ. ವಿಮಾನಕ್ಕೆ ವಿದ್ಯುತ್ ಪೂರೈಕೆ ಮಾಡುವ ಭಾರೀ ಸವಾಲಿಗೆ ಒಡ್ಡಿಕೊಂಡಿದ್ದಳು. ಇದೇ ಹೊತ್ತಿನಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ‘ಮಹಿಳೆಯರು ಸ್ವಾತಂತ್ರ್ಯವನ್ನು ನಿರ್ವಹಿಸಲಾರರು. ಅವರಿಗೆ ರಕ್ಷಣೆ ಅಗತ್ಯವಿದೆ’ ಎಂದು ಹೇಳಿದ್ದರು.

ಮಹಿಳೆಯರು ಎದುರಿಸುವ ಅಡೆತಡೆಗಳನ್ನು ಕಾಂಗ್ರೆಸ್ ಅರ್ಥ ಮಾಡಿಕೊಂಡಿದೆ. 2023ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿತು. ಪ್ರಧಾನಿ ‘ಉಚಿತಗಳು’ ಸಮರ್ಪಕ ಸಾರ್ವಜನಿಕ ನೀತಿಯಲ್ಲ ಎನ್ನುತ್ತಾರೆ. ಆದರೆ, ಚಲನಶೀಲತೆಯನ್ನು ನೀಡುವುದು ವ್ಯರ್ಥವಲ್ಲ: ದೇಶದ ಪೂರ್ಣಾವಧಿ ಕೆಲಸದಲ್ಲಿ ತೊಡಗಿಲ್ಲದ 4ರಲ್ಲಿ 3 ಮಹಿಳೆಯರಿಗೆ ಹೊರಗೆ ಬರಲು ನೆರವಾಗುತ್ತದೆ.

ಕೇರಳ-ತಮಿಳುನಾಡಿನ ಜನರು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ. ದಕ್ಷಿಣದ ಇತರ ರಾಜ್ಯಗಳಲ್ಲಿ ಬಿಜೆಪಿ ಗೆಲುವು ನಿಯಮಿತವಾಗಿರಲಿದೆ. ಇದು ಚುನಾವಣೆ ಪರಿಣತರ ಭವಿಷ್ಯವಾಣಿಗೆ ಗೊತ್ತಾಗಿಲ್ಲ. ಗೊತ್ತಿದ್ದರೂ, ದಕ್ಷಿಣ ಅವರಿಗೆ ನಗಣ್ಯ. ಉತ್ತರಪ್ರದೇಶಕ್ಕೆ ಬಿಹಾರವನ್ನು ಸೇರಿಸಿದರೆ (80+40), ತಮಿಳುನಾಡು+ಕೇರಳ(59 ಸಂಸದರು)ಕ್ಕಿಂತ ದುಪ್ಪಟ್ಟು ಸಂಸದರು ಸಿಗುತ್ತಾರೆ. ಹೊಸ ಜನಗಣತಿ ಬಳಿಕ ದಕ್ಷಿಣ ರಾಜ್ಯಗಳ ಧ್ವನಿ ಇನ್ನಷ್ಟು ಕ್ಷೀಣಿಸಲಿದೆ.

ಒಕ್ಕೂಟ ಸರಕಾರವು ದಕ್ಷಿಣ ರಾಜ್ಯಗಳ ಪ್ರಗತಿಗೆ ಅಡ್ಡಗಾಲು ಹಾಕುತ್ತಿದೆ. ಆದರೆ, ಕೇರಳದ ಮಾರ್ಕಿಸ್ಟ್ ಸರಕಾರ ಬಾಗಲು ಸಿದ್ಧವಿಲ್ಲ. ಕೋವಿಡ್ ನಿರ್ವಹಣೆಯಲ್ಲಿ ಜಾಗತಿಕವಾಗಿ ಪ್ರಶಂಸೆಗೆ ಪಾತ್ರವಾದ ರಾಜ್ಯ ‘ವೈದ್ಯಕೀಯ ಕೇಂದ್ರ’ವನ್ನು ‘ಉತ್ತಮ ಆರೋಗ್ಯದ ದೇಗುಲ’ ಎಂದು ಕರೆಯಲು ನಿರಾಕರಿಸಿದೆ. ರಾಜ್ಯದ ಆರೋಗ್ಯ ಸಚಿವರು, ‘ಕೇಂದ್ರ ಎಂದೇಕೆ ಬೇಡ? ದೇಗುಲವೇ ಏಕೆ ಬೇಕು?’ ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕ ಬರ ಪರಿಹಾರ ನೀಡದೆ ಇರುವುದನ್ನು ಪ್ರಶ್ನಿಸಿ ಮತ್ತು ರಾಜ್ಯದ ಶಾಸನಗಳನ್ನು ಸಂವಿಧಾನಕ್ಕೆ ವಿರೋಧವಾಗಿ ತಡೆಯಲಾಗಿದೆ ಎಂದು ಕೇರಳ, ಕೇಂದ್ರ ಸರಕಾರವನ್ನು ಸುಪ್ರೀಂ ಕೋರ್ಟಿಗೆ ಎಳೆದಿವೆ.

ಆದರೆ, ಮೋದಿ ವಿರೋಧದ ಮೂಲ ತಾಣ ತಮಿಳುನಾಡು. ದೇಶದ ಇಲೆಕ್ಟ್ರಾನಿಕ್ಸ್ ರಫ್ತಿನಲ್ಲಿ ಶೇ.30 ಪಾಲು ಹೊಂದಿದೆ. ತಮಿಳುನಾಡು ವ್ಯಕ್ತಿಗೆ ತನಗಿಷ್ಟವಾದುದನ್ನು ತಿನ್ನುವ, ಧರಿಸುವ, ಪ್ರಾರ್ಥಿಸುವ ಮತ್ತು ಪ್ರೇಮಿಸುವ ಸ್ವಾತಂತ್ರ್ಯ ನೀಡುತ್ತದೆ. ಉತ್ತರದ ರಾಜ್ಯಗಳು ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಜಾತಿ ಏಣಿಯಲ್ಲಿ ಕೆಳಹಂತದ ಗುಂಪುಗಳನ್ನು ಹತ್ತಿಕ್ಕುವ ತೀರ ಪ್ರಾಚೀನ ಸಾಮಾಜಿಕ ಶ್ರೇಣೀಕರಣದ ನಂಬಿಕೆಗಳಲ್ಲಿ ಮುಳುಗಿವೆ. ಆದರೆ, ಲವ್ ಜಿಹಾದ್ ಇಲ್ಲವೇ ಚರ್ಚ್ ಮೇಲೆ ದಾಳಿ ನಡೆಸುವ ಗುಂಪುಗಳಿರುವ ರಾಜ್ಯಗಳಲ್ಲಿ ಯಾರು ಹೂಡಿಕೆ ಮಾಡುತ್ತಾರೆ? ಸರಳ ಸತ್ಯವೇನೆಂದರೆ, ಶೇ.80ರಷ್ಟಿರುವ ಹಿಂದೂಗಳಿಗೆ ಶೇ.14ರಷ್ಟು ಇರುವ ಮುಸ್ಲಿಮರಿಂದ ರಕ್ಷಣೆ ಅಗತ್ಯವಿಲ್ಲ. ಬೇಕಿರುವುದು ಕೆಟ್ಟ ರಸ್ತೆ, ದುರ್ಬಲ ಆರೋಗ್ಯ ಸೇವೆ ವ್ಯವಸ್ಥೆ, ಅಧಿಕ ನಿರುದ್ಯೋಗ ಮತ್ತು ಬಡತನದಿಂದ ರಕ್ಷಣೆ ಬೇಕಿದೆ.

ಉತ್ತರದ ದೇಶದಲ್ಲಿ ನೆಲೆಸಿರುವ ನನ್ನಂಥ ಭಾರತೀಯರು ಬದಲಾವಣೆ ಸಾಧ್ಯವಿದೆ ಎಂದು ನಂಬಲು ಇಷ್ಟಪಡುತ್ತೇವೆ. ಜೂನ್ 4ರ ಫಲಿತಾಂಶ ನನ್ನನ್ನು ಮೂರ್ಖನಂತೆ ಬಿಂಬಿಸುವ ಸಾಧ್ಯತೆಗಳಿವೆ. ಇದಕ್ಕೆ ಕಾರಣವೇನೆಂದರೆ, ನನ್ನ ಊರಿನ ಮತದಾರನೊಬ್ಬನಿಗೆ ಕೇರಳದ ಆರೋಗ್ಯ ಕೇಂದ್ರದಲ್ಲಿ ಕಾಲಿಡುವ ಅವಕಾಶ ಇರುವುದಿಲ್ಲ; ಮತ್ತು ಉತ್ತರ ಪ್ರದೇಶದಲ್ಲಿ 5 ವರ್ಷಕ್ಕೆ ಮುನ್ನವೇ ಸಾಯುವ 60 ಮಕ್ಕಳು(1,000ದಲ್ಲಿ) ಮತ ಚಲಾವಣೆ ಮಾಡುವುದಿಲ್ಲ. ಇದು ದುರಂತ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಋತ

contributor

Similar News